ಮನನೊಂದು ಪತ್ನಿ ನಿವೇಶನ ವಾಪಾಸ್ ನೀಡಿದ್ದಾರೆ-ಮುಖ್ಯಮಂತ್ರಿ ಸಿದ್ದರಾಮಯ್ಯ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಡಾದವರು ಕೊಟ್ಟ ನಿವೇಶನವನ್ನು ತೆಗೆದುಕೊಂಡಿದ್ದೆ ಈಗ ದೊಡ್ಡ ವಿವಾದವಾಗಿದೆ. ಇದರಿಂದ ಮನನೊಂದು ನನ್ನ ಪತ್ನಿ ನಿವೇಶನವನ್ನು ವಾಪಾಸ್ಸು ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಮುಡಾ ವಿಚಾರದಲ್ಲಿ ಯಾವ ಆಧಾರದ ಮೇಲೆ ಹಣದ ಅಕ್ರಮ ವರ್ಗಾವಣೆಯ ಕೇಸ್‌ದಾಖಲಿಸಲಾಗಿದೆ ಎಂಬುದು ನನಗೆ ಗೊತ್ತಾಗಿಲ್ಲ. ಮುಡಾದವರು ಕೊಟ್ಟ ಬದಲಿ ನಿವೇಶನ ಪಡೆದಿರುವುದು ತಪ್ಪು ಎನ್ನುತ್ತಿದ್ದಾರೆ. ಇಲ್ಲಿ ಎಲ್ಲಿಯೂ ಹಣದ ಅಕ್ರಮ ವರ್ಗಾವಣೆ ಪ್ರಶ್ನೆ ಬರುವುದಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಇಡೀ ಪ್ರಕರಣದಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದು ಸಿಎಂ ಸಮರ್ಥಿಸಿಕೊಂಡಿದ್ದಾರೆ. ಬಿ.ಎಸ್.‌ಯಡಿಯೂರಪ್ಪ ಅವರು ಅಕ್ರಮವಾಗಿ ಡಿನೋಟಿಫೈ ಮಾಡಿದ್ದರು, ಆದರೆ ಇಲ್ಲಿ ಇಡೀ ಪ್ರಕರಣದಲ್ಲಿ ನನ್ನ ಪಾತ್ರವೇ ಇಲ್ಲ.

ನಾನೇನಾದರೂ ಮುಡಾಗೆ ಆದೇಶ ಮಾಡಿದ್ದೇನಾ? ಸೂಚನೆ ನೀಡಿದ್ದೇನಾ? ವಿನಾಕಾರಣ ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ತಪ್ಪೇ ಮಾಡದಿರುವ ನಾನು ರಾಜೀನಾಮೆ ಯಾಕೆ ನೀಡಬೇಕು? ಎಂದು ಸಿಎಂ ಪ್ರಶ್ನಿಸಿದ್ದಾರೆ.

ನನ್ನ ವಿರುದ್ಧ ನಡೆಯುತ್ತಿರುವ ರಾಜಕೀಯ ಷಡ್ಯಂತ್ರದಿಂದ ನೊಂದಿರುವ ನನ್ನ ಪತ್ನಿ ಮುಡಾ ನೀಡಿರುವ 14 ನಿವೇಶನಗಳನ್ನು ಹಿಂದಿರುಗಿಸುವ ನಿರ್ಧಾರ ಕೈಗೊಂಡು, ನನಗೂ ಆಶ್ಚರ್ಯ ಉಂಟು ಮಾಡಿದ್ದಾರೆ.

ನನ್ನ ನಾಲ್ಕು ದಶಕಗಳ ಸುದೀರ್ಘ ರಾಜಕಾರಣದಲ್ಲಿ ಎಂದೂ ಕೂಡಾ ಮಧ್ಯೆಪ್ರವೇಶಿಸದೆ ಕುಟುಂಬಕ್ಕಷ್ಟೇ ಸೀಮಿತವಾಗಿದ್ದ ನನ್ನ ಪತ್ನಿ ನನ್ನ ವಿರುದ್ಧದ ದ್ವೇಷದ ರಾಜಕಾರಣಕ್ಕೆ ಬಲಿಯಾಗಿ ಮಾನಸಿಕವಾಗಿ ಹಿಂಸೆ ಅನುಭವಿಸುವಂತಾಗಿರುವುದಕ್ಕೆ ನನಗೆ ವಿಷಾದ ಇದೆ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತ ಪಡಿಸಿದ್ದಾರೆ.

ಹೀಗಿದ್ದರೂ ನಿವೇಶನಗಳನ್ನು ಹಿಂದಿರುಗಿಸಿದ ನನ್ನ ಪತ್ನಿಯ ನಿರ್ಧಾರವನ್ನು ನಾನು ಗೌರವಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

 

- Advertisement -  - Advertisement -  - Advertisement - 
Share This Article
error: Content is protected !!
";