ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಫೇಸ್‌ಲೆಸ್, ಸಂಪರ್ಕ ರಹಿತ ಹಾಗೂ ಆನ್ಲೈನ್ ಮೂಲಕ ಬಿಬಿಎಂಪಿ ಇ-ಖಾತಾ ವಿತರಣಾ ವ್ಯವಸ್ಥೆಯನ್ನು ಪರೀಕ್ಷಾರ್ಥವಾಗಿ ಇಂದಿನಿಂದ ಆರಂಭಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ಮಾಲಿಕರಿಗೆ ಪೇಪರ್ ಲೆಸ್ ಹಾಗೂ ಆನ್ಲೈನ್ ಮೂಲಕ ಇ – ಖಾತಾ ವಿತರಣಾ ವ್ಯವಸ್ಥೆಯನ್ನು ಬಿಬಿಎಂಪಿ ಪರೀಕ್ಷಾರ್ಥವಾಗಿ ಪ್ರಾರಂಭಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ನಗರಾಭಿವೃದ್ದಿ ಸಚಿವ ಡಿ.ಕೆ.ಶಿವಕುಮಾರ್ ನಿರ್ದೇಶನದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಅಕ್ಟೋಬರ್ 1 ರಿಂದ ಸಂಪರ್ಕ ರಹಿತವಾಗಿ ಆನ್ಲೈನ್ ಮೂಲಕ ಇ-ಖಾತಾ ವಿತರಣಾ ವ್ಯವಸ್ಥೆ ಆರಂಭಿಸಿದೆ.
ಈ ಕುರಿತು ಹಲವು ಮಾನದಂಡಗಳನ್ನು ಸಿದ್ದಪಡಿಸಿಕೊಳ್ಳಲಾಗಿದೆ. ಪಾಲಿಕೆಯಲ್ಲಿ ಲಭ್ಯವಿರುವ ದಾಖಲೆಯ ಆಧಾರದಲ್ಲಿ ಕರಡು ಇ ಖಾತೆಗಳನ್ನು ಆನ್ಲೈನ್ನಲ್ಲಿ ಇರಿಸಲಾಗಿರುತ್ತದೆ. ಇದರಿಂದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ, ತಮ್ಮ ಸ್ವತ್ತಿನ ಕರಡು ಇ -ಖಾತಾವನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ ದಾಖಲೆಗಳು ಹೊಂದಿಕೆಯಾಗದಿದ್ದರೆ ನಿಯಮಾವಳಿಗಳಂತೆ ಅಂತಿಮ ಇ – ಖಾತಾ ಪಡೆಯಲು ವೈಯಕ್ತಿಕವಾಗಿ ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿ ಭೇಟಿ ಮಾಡಬೇಕು. ಇ – ಖಾತಾ ವಿತರಿಸದಂತೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ.
ಕರಡು ಇ – ಖಾತಾ ರಚಿಸಿದ 7 ದಿನಗಳವರೆಗೆ ಆಕ್ಷೇಪಣೆಗೆ ಅವಧಿ ನಿಗದಿಪಡಿಸಲಾಗಿದೆ. ನಂತರ ಸಹಾಯಕ ಕಂದಾಯ ಅಧಿಕಾರಿಗಳು ಆಕ್ಷೇಪಣೆಯ ವಿಚಾರಣೆ ಕೈಗೊಂಡು ಆದ್ಯತಾನುಸಾರ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಬಿಬಿಎಂಪಿ ಸೇರ್ಪಡೆಗೆ ಮೊದಲು ಗ್ರಾಮ ಪಂಚಾಯಿತಿಯ ಇ -ಸ್ವತ್ತು ತಂತ್ರಾಂಶದಲ್ಲಿ ಇ-ಖಾತಾ ಹೊಂದಿದ್ದ ಮಲ್ಲಸಂದ್ರ ಮತ್ತು ಮನವರ್ತೆ ಕಾವಲ್ ಗ್ರಾಮಗಳಲ್ಲಿನ ಸುಮಾರು 2,500 ಸ್ವತ್ತುಗಳಿಗೆ ಪಾಲಿಕೆಯು ಸ್ವಯಂಚಾಲಿತವಾಗಿ ಸ್ವಯಂಘೋಷಿತ ಆಸ್ತಿ ತೆರಿಗೆ (ಎಸ್‌ಎಎಸ್) ಅರ್ಜಿ ಸಂಖ್ಯೆ ಹಾಗೂ ಇ – ಖಾತಾಗಳನ್ನು ಸೃಷ್ಟಿಸಲಾಗಿತ್ತು. ಈಗ ಅದೇ ಮಾದರಿಯಲ್ಲಿ ಬಿಬಿಎಂಪಿಯ 8 ವಲಯಗಳಲ್ಲಿ ಹೊಸ ವ್ಯವಸ್ಥೆ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಒಂದೆರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ 2,500 ಆಸ್ತಿಗಳನ್ನು ಇ-ಖಾತಾ ಮಾಡಿದ್ದ ಬಿಬಿಎಂಪಿಯು ಲಕ್ಷಾಂತರ ಆಸ್ತಿ ಖಾತೆಗಳನ್ನು ಈಗಾಗಲೇ ಡಿಜಿಟಲೀಕರಣ ಮಾಡಲಾಗಿದೆ. ಇದೀಗ ಸಂಪರ್ಕರಹಿತ ಆನ್‌ಲೈನ್ ಡಿಜಿಟಲ್ ವ್ಯವಸ್ಥೆ ಜಾರಿಗೆ ಮುಂದಾಗಿದ್ದೇವೆ.
ಬೃಹತ್ ಸ್ವರೂಪದಲ್ಲಿ ಇ-ಖಾತಾ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಆಗಿರುವುದರಿಂದ ಪರೀಕ್ಷಾರ್ಥವಾಗಿ ಪ್ರಾರಂಭಿಸುವ ಮೂಲಕ ಧಾರಣೆಗಳನ್ನು ಅಳವಡಿಸಿಕೊಳ್ಳಲಾಗುವುದು. ಆದ್ದರಿಂದ ಬಿಬಿಎಂಪಿ ಅತ್ಯಮೂಲ್ಯ ಸೇವೆ ನೀಡಲು ನಾಗರಿಕರು ಕೂಡ ಸಹಕರಿಸಬೇಕು ಎಂದಿದ್ದಾರೆ.
ಸಾರ್ವಜನಿಕರು ತಮ್ಮ ಸ್ವತ್ತಿನ ಇ-ಖಾತಾ ಕರಡು ಪ್ರತಿಯನ್ನು ಡೌನ್‌ಲೋಡ್‌ಮಾಡಲು ಈ ಕೆಳಗಿನ ವೆಬ್‌ವಿಳಾಸಕ್ಕೆ ಭೇಟಿ ನೀಡಬಹುದಾಗಿದೆ. bbmpeaasthi.karnataka.gov.in