ಹಿರಿಯ ನಾಗರೀಕರ ಮಾಸಾಶನ ಹೆಚ್ಚಿಸಲು ಕ್ರಮ– ಮುಖ್ಯಮಂತ್ರಿ ಸಿದ್ದರಾಮಯ್ಯ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಸುಮಾರು 50 ಲಕ್ಷಕ್ಕೂ ಹೆಚ್ಚು ಹಿರಿಯ ನಾಗರಿಕರಿಗೆ ಸರ್ಕಾರ ಮಾಸಾಶನವನ್ನು ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಮಾಸಾಶನದ ಮೊತ್ತವನ್ನು ಹೆಚ್ಚಿಸಲು ಕ್ರಮವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲಿಕರಣ ನಿರ್ದೇಶನಾಲಯದ ವತಿಯಿಂದ ಹಮ್ಮಿಕೊಳ್ಳಲಾದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ – 2024ನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಹಿರಿಯರಿಗೆ ಗೌರವ ಕೊಡುವುದನ್ನು ನಾವು ಕಲಿಯಬೇಕು.

ವರ್ಷ ವಿಶ್ವ ಸಂಸ್ಥೆಯು ತನ್ನ ಘೋಷ ವಾಕ್ಯ ಘನತೆಯ ಬಾಳಿನೊಂದಿಗೆ ವಯೋಪಕ್ವತೆ : ವಿಶ್ವದಾದ್ಯಂತ ಹಿರಿಯ ಜೀವಿಗಳಿಗೆ ಆರೈಕೆ ಮತ್ತು ಬೆಂಬಲ ವ್ಯವಸ್ಥೆಗಳನ್ನು ಸದೃಢಗೊಳಿಸುವುದರ ಮಹತ್ವಎಂಬುದಾಗಿದೆ.

ವೃದ್ಧಾಪ್ಯ ಸಹಜ ಪ್ರಕ್ರಿಯೆ. ಹಿರಿಯ ನಾಗರಿಕರು ತಮ್ಮ ಜೀವನದಲ್ಲಿ ಪರಿಪಕ್ವತೆಯನ್ನು ಹೊಂದಿರುತ್ತಾರೆ. ಅವರ ಮಾರ್ಗದರ್ಶನದಿಂದ ನಾವು ಮುನ್ನಡೆಯಬೇಕು. ಸಮಾಜದಲ್ಲಿನ ಮೌಢ್ಯ ಕಂದಾಚಾರಗಳಿಗೆ ನಾವು ಕಿವಿಗೊಡದೆ, ವೈಚಾರಿಕ, ವೈಜ್ಞಾನಿಕ ಆಲೋಚನೆಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಹುಟ್ಟು ಸಾವು ನಡುವಿನ ಬದುಕನ್ನು ನಾವು ಸಾರ್ಥಕ ರೀತಿಯಲ್ಲಿ ಕಳೆಯಬೇಕು. ಇತರರಿಗೆ ಸಹಾಯಹಸ್ತ ನೀಡಿ ಒಳ್ಳೆಯ ಆಲೋಚನೆ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ನಾಗರಿಕರು ವೃದ್ಧಾಶ್ರಮಗಳನ್ನು ಸೇರುತ್ತಿದ್ದಾರೆ.

ಅವರ ಬಾಳಿನ ಸಂಧ್ಯಾಕಾಲದಲ್ಲಿ ಒಳ್ಳೆಯ ಜೀವನವನ್ನು ಕೊಡುವುದು ತಮ್ಮ ಆದ್ಯ ಕರ್ತವ್ಯ. ಕುವೆಂಪು ಅವರು ನೀಡಿದ ವಿಶ್ವಮಾನವ ಸಂದೇಶವನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವಕಾಶ ವಂಚಿತರಿಗೆ ಶಕ್ತಿ ತುಂಬುವ, ಸಮಸಮಾಜ ನಿರ್ಮಾಣದ ಗುರಿ ನಮ್ಮದಾಗಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್  ಮಾತನಾಡಿ, ಹಿರಿಯರನ್ನು ಕಡೆಗಣಿಸುವ ನಡತೆಯನ್ನು ನಾವು ಬೆಳೆಸಿಕೊಳ್ಳಬಾರದು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವ್ಯಾಪ್ತಿಯ ವೃದ್ಧಾಶ್ರಮಗಳಲ್ಲಿ ಸುಮಾರು 2820 ಹಿರಿಯ ನಾಗರೀಕರು ಕರ್ನಾಟಕದಲ್ಲಿ ವಾಸಿಸುತ್ತಿದ್ದಾರೆ.

ಸುಮಾರು 50 ಲಕ್ಷಕ್ಕೂ ಹೆಚ್ಚು ಹಿರಿಯ ನಾಗರಿಕರಿಗೆ ವಾರ್ಷಿಕ ಸುಮಾರು 7 ಸಾವಿರ ಕೋಟಿ ರೂ ವೃದ್ದಾಪ್ಯ ವೇತನವನ್ನು ಸರ್ಕಾರ ನೀಡುತ್ತಿದೆ. ಇವರಿಗೆ ಸಹಾಯವಾಣಿಯನ್ನು ಸಹ ಸ್ಥಾಪಿಸಲಾಗಿದೆ.  ಮಾಸಾಶನ ಮೊತ್ತವನ್ನು ಹೆಚ್ಚಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಕಲೆ, ಸಾಹಿತ್ಯ, ಸಮಾಜ ಸೇವೆ, ಕ್ರೀಡೆ, ಮುಂತಾದ ಕ್ಷೇತ್ರಗಳಲ್ಲಿ ಸೇವೆ ಮಾಡಿದ ಹಿರಿಯ ನಾಗರಿಕರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ವಿಜೇತರಿಗೆ ತಲಾ ಒಂದು ಲಕ್ಷ ರೂ ನಗದು, ನೆನಪಿನ ಕಾಣಿಕೆ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಅಲ್ಲದೇ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಇಲಾಖೆ ನಿರ್ಮಾಣದ ಸಾಕ್ಷ್ಯಚಿತ್ರ, ಕೈಪಿಡಿ, ಮಹಿಳೆಯರಿಗೆ ಪೌಷ್ಟಿಕಾಂಶ ಕಿಟ್ಗಳನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಸದಸ್ಯರಾದ ಪ್ರಕಾಶ್ ರಾಥೋಡ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಡಾ. ಶಮ್ಲಾ ಇಕ್ಬಾಲ್, ಆಯುಕ್ತರಾದ ದಾಸ್ ಸೂರ್ಯವಂಶಿ, ನಿರ್ದೇಶಕರಾದ ರಾಘವೇಂದ್ರ ಟಿ ಸೇರಿದಂತೆ ಗಣ್ಯರು, ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

- Advertisement -  - Advertisement - 
Share This Article
error: Content is protected !!
";