ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮಾದಿಗ ದಂಡೋರ, ಮಾದಿಗ ಮೀಸಲಾತಿ ಹೋರಾಟ ಸಮಿತಿ, ಮಹಾನಾಯಕ ದಲಿತ ಸೇನೆ, ಅಂಬೇಡ್ಕರ್ ಸ್ವಾಭಿಮಾನಿ ಸೇನೆ, ಕರ್ನಾಟಕ ಭೀಮ್ ಸೇನೆ, ದಲಿತ ಸಂಘರ್ಷ ಸಮಿತಿ (ಪರಿವರ್ತನಾ ವಾದ), ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ), ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಹಾಗೂ ಹಿರಿಯೂರು ತಾಲ್ಲೂಕು ಎಲ್ಲಾ ಗ್ರಾಮಗಳ ಡಾ.ಬಿ.ಆರ್. ಅಂಬೇಡ್ಕರ್ ಸಂಘಗಳ ನೇತೃತ್ವದಲ್ಲಿ ಒಳ ಮೀಸಲಾತಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಪಟ್ರೇಹಳ್ಳಿ ಗ್ರಾಮದಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ 120 ಬೃಹತ್ ಪಾದಯಾತ್ರೆಯನ್ನು ಅಕ್ಟೋಬರ್-3 ರಿಂದ ಆಯೋಜಿಸಲಾಗಿದೆ ಎಂದು ದಲಿತ ಸಂಘಟನೆಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿವೆ.
ಒಡನಾಡಿಗಳೇ, ಪರಿಶಿಷ್ಟಜಾತಿಯಲ್ಲಿ ಸೂಕ್ತ ಪ್ರಮಾಣದಲ್ಲಿ ಮೀಸಲಾತಿ ಸಿಗದೆ ವಂಚಿತ ಆಗುತ್ತಿರುವ ಸಮುದಾಯಗಳಿಗೆ ಅವಕಾಶ ಕಲ್ಪಿಸಲು ಕರ್ನಾಟಕದಲ್ಲಿ ಮಾದಿಗ ದಂಡೋರ ಹೋರಾಟ ಸಮಿತಿಯು 1999ರಲ್ಲಿ ಮೊಟ್ಟ ಮೊದಲ ಬಾರಿಗೆ ಒಳಮೀಸಲಾತಿಗೆ ಬೇಡಿಕೆ ಇಟ್ಟು ಹೋರಾಟ ಆರಂಭಿಸಿತು.
ಈ ಹೋರಾಟದಲ್ಲಿ 9ಕ್ಕೂ ಹೆಚ್ಚು ಮಾದಿಗ ಮೀಸಲಾತಿ ಹೋರಾಟಗಾರರ ಸಾವು ನೋವುಗಳು ಸಂಭವಿಸಿದವು. ಈ ಹೋರಾಟಕ್ಕೆ ಮಣಿದು 2003ರಲ್ಲಿ ಎಸ್.ಎಂ. ಕೃಷ್ಣ ಅವರ ಕಾಂಗ್ರೆಸ್ ಸರ್ಕಾರವು ಎಸ್.ಸಿ./ಎಸ್.ಟಿ. ಆಯೋಗವನ್ನು ರಚಿಸಿತು. ಮುಂದೆ 2005ರಲ್ಲಿ ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರವು ಒಳಮೀಸಲಾತಿ ವಿಚಾರವಾಗಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರ ನೇತೃತ್ವದಲ್ಲಿ ಪ್ರತ್ಯೇಕ ಆಯೋಗವನ್ನೇ ರಚಿಸಿತು.
ತದ ನಂತರ ಬಂದ ಯಡಿಯೂರಪ್ಪನವರ ಬಿಜೆಪಿ ಸರ್ಕಾರವು ಆಯೋಗಕ್ಕೆ ವಿಶೇಷ ಅನುದಾನ ನೀಡಿತು. ಈ ಆಯೋಗವು ಸುಮಾರು 6 ವರ್ಷಗಳ ಕಾಲ ಶೈಕ್ಷಣಿಕ, ಔದ್ಯೋಗಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆ ನಡೆಸಿ ಪರಿಶಿಷ್ಟ ಜಾತಿಗಳ 101 ಜಾತಿಗಳನ್ನು ನಾಲ್ಕು ವರ್ಗೀಕರಣ ಮಾಡಿ ಶೇ 15% ರಷ್ಟು ಮೀಸಲಾತಿಯಲ್ಲಿ ಮಾದಿಗ ಸಂಬಂಧಿತ ಜಾತಿಗಳಿಗೆ ಶೇ.6%, ಹೊಲೆಯ ಸಂಬಂಧಿತ ಜಾತಿಗಳಿಗೆ ಶೇ5%, ಸ್ಪರ್ಶ ಜಾತಿಗಳಿಗೆ ಶೇ 3% ಹಾಗೂ ಇತರೆ ಜಾತಿಗಳಿಗೆ ಶೇ1% ರಷ್ಟು ವರ್ಗಿಕರಣ ಮಾಡಿ 2012ರಲ್ಲಿ ಡಿ.ವಿ. ಸದಾನಂದಗೌಡ ನೇತೃತ್ವದ ಸರ್ಕಾರಕ್ಕೆ ವರದಿ ನೀಡಲಾಗಿತ್ತು,
ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಕೊನೆಯ ಅವಧಿಯಲ್ಲಿ ಎಸ್.ಸಿ. ಮೀಸಲು ಪ್ರಮಾಣವನ್ನು ಶೇ 15% ರಿಂದ ಶೇ 17% ಕ್ಕೆ ಹೆಚ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತು ಜೊತೆಗೆ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಕೈ ಬಿಟ್ಟಿತು.
ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ 7 ನ್ಯಾಯಾಧೀಶರನ್ನು ಒಳಗೊಂಡ ಸಂವಿಧಾನ ಪೀಠವು ಪರಿಶಿಷ್ಟರ ಮೀಸಲಾತಿ ವರ್ಗಿಕರಣಕ್ಕಾಗಿ ವಿವಿಧ ರಾಜ್ಯಗಳ ಆಯೋಗಗಳ ವರದಿಗಳು ಮತ್ತು ಕೋರ್ಟ್‌ಗಳ ಹಲವು ತೀರ್ಪುಗಳನ್ನು ಪರಾಮರ್ಶಿಸಿ ದಿನಾಂಕ 01-08-2024ರಂದು ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಸಂವಿಧಾನ ಬದ್ದವೆಂದು ಒಪ್ಪಿಗೆ ನೀಡಿ ರಾಜ್ಯ ಸರ್ಕಾರಗಳು ಒಳ ಮೀಸಲಾತಿ ಜಾರಿಮಾಡಲು ಅಧಿಕಾರವಿದೆಯೆಂದು ಐತಿಹಾಸಿಕ ತೀರ್ಪು ನೀಡಿತು.
ಚುನಾವಣೆಗೂ ಮುನ್ನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಒಳ ಮೀಸಲಾತಿ ಜಾರಿ ಮಾಡುತ್ತೇವೆಂದು ಹೇಳಿಕೊಂಡು ಬಂದಿದ್ದ ಸಿದ್ದರಾಮಯ್ಯ ಇಷ್ಟು ದಿನ ಕಳೆದರೂ ಒಳಮೀಸಲಾತಿ ವಿಚಾರವಾಗಿ ಜಾಣ ಮೌನ ತಳೆದಿರುವುದು ಆಶ್ಚರ್ಯ ತಂದಿದೆ.
ಅಹಿಂದ ನಾಯಕ ಎಂದು ಕರೆಸಿಕೊಳ್ಳುತ್ತಿರುವ ಮುಖ್ಯಮಂತ್ರಿಗಳು ಕಾಲ ಮಿತಿಯಿಲ್ಲದೇ ಕುಂಟುನೆಪ ಹೇಳದೆ, ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರೆಂಟಿಗಳ ಜೊತೆ 6ನೇ ಗ್ಯಾರೆಂಟಿಯಾದ ಒಳಮೀಸಲಾತಿಯನ್ನು ಶೀಘ್ರ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿ ಒಳಮೀಸಲು ಹೋರಾಟಗಾರ ದಿವಂಗತ ಪಟ್ರೇಹಳ್ಳಿ ರಾಮಯ್ಯನವರ ಸ್ವಗ್ರಾಮ ಪಟ್ರೇಹಳ್ಳಿಯಿಂದ ದಿನಾಂಕ 03-10-2024ರಿಂದ ದಿನಾಂಕ 04-10-2024ರವರೆಗೆ ಕಾಲ್ನಡಿಗೆ ಮುಖಾಂತರ ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಛೇರಿಯವರೆಗೂ ತಾಲ್ಲೂಕಿನ ಎಲ್ಲಾ ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಪಾದಯಾತ್ರೆ ಹೋರಾಟ ಹಮ್ಮಿಕೊಂಡಿದ್ದು ಹಿರಿಯೂರು ತಾಲ್ಲೂಕಿನ ಎಲ್ಲಾ ಗ್ರಾಮಗಳ ಮಾದಿಗ ಸಮುದಾಯದ ರಾಜಕೀಯ ಮುಖಂಡರು / ಹೋರಾಟಗಾರರು / ಮಹಿಳೆಯರು / ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಪಾಲ್ಗೊಂಡು ಈ ಹೋರಾಟವನ್ನು ಯಶಸ್ವಿ ಮಾಡಿಕೊಡಬೇಕೆಂದು ದಲಿತ ಸಂಘಟನೆಗಳು ಕೇಳಿಕೊಂಡಿವೆ.