ಗುಜರಾತಿನ ಪೋರಬಂದರ್ ನ ಸಾಮಾನ್ಯ ಶಿಶು ಗಾಂಧಿ..

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗಾಂಧಿ……ಗುಜರಾತಿನ ಪೋರಬಂದರ್ ನ ಸಾಮಾನ್ಯ ಶಿಶು, ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿ, ಇಂಗ್ಲೇಂಡಿನಲ್ಲಿ ಕಾನೂನು ಶಿಕ್ಷಣ ಪಡೆಯಲು ಹೊರಟ ಕನಸುಗಣ್ಣಿನ ಯುವಕ, ಅಲ್ಲಿ ಬ್ಯಾರಿಸ್ಟರ್ ಪದವಿ ಪಡೆದು ಹಿಂತಿರುಗಿದ ಕುಟುಂಬದ ಹೆಮ್ಮೆಯ ಪುತ್ರ, ಆಕಸ್ಮಿಕವಾಗಿ ದೊರೆತ ಅವಕಾಶದಿಂದ ದಕ್ಷಿಣ ಆಫ್ರಿಕಾದಲ್ಲಿ ವಾದ ಮಂಡಿಸಲು ಹೊರಟ ವಕೀಲ,

 ವಕೀಲಿ ವೃತ್ತಿಯಲ್ಲಿ ಅನಿವಾರ್ಯವಾಗಿ ತಮ್ಮ ಕಕ್ಷೀದಾರರನ್ನು ಸಮರ್ಥಿಸಲು ಸುಳ್ಳು ಹೇಳಬೇಕಾದ ಮುಜುಗರ ತಪ್ಪಿಸಿಕೊಳ್ಳಲು ಆತ್ಮವಿಮರ್ಶೆ ಮಾಡಿಕೊಂಡು ಆ ವೃತ್ತಿಯ ಬಗ್ಗೆ ನಿರಾಸಕ್ತಿ ಬೆಳೆಸಿಕೊಂಡ ಅದರಿಂದ ಮುಕ್ತನಾದ ಪ್ರಾಮಾಣಿಕ,

 ದಕ್ಷಿಣ ಆಫ್ರಿಕಾದಲ್ಲಿ ಆದ ಅನಿರೀಕ್ಷಿತ, ಅವಮಾನಕರ ಘಟನೆಗಳಿಂದ ಸ್ವಾಭಿಮಾನ ಜಾಗೃತವಾಗಿ ಮೂಲಭೂತ ಅವಶ್ಯಕತೆಗಳಿಗಾಗಿ, ಹಕ್ಕುಗಳಿಗಾಗಿ ಪ್ರತಿಭಟನೆ ಮಾಡಿದ ಬಂಡಾಯಗಾರ,

 ಅದಕ್ಕಾಗಿ ಆಗಿನ ಆಡಳಿತದೊಂದಿಗೆ ಪತ್ರ ವ್ಯವಹಾರ, ಕಾನೂನು ಸಮರ, ಚರ್ಚೆ, ಪತ್ರಿಕಾ ಲೇಖನ, ಮುಷ್ಕರ ರೂಪಿಸಿದ ಮಾನವೀಯ ಕಾಳಜಿಯ ಶ್ರಮಜೀವಿ,

 ತನ್ನ ಆ ಹೋರಾಟದಲ್ಲಿ ಸ್ವಲ್ಪ ಮಟ್ಟಿನ ಯಶಸ್ಸು ಪಡೆದು ಸಾರ್ವಜನಿಕ ವಲಯದಲ್ಲಿ ಜನಪ್ರಿಯರಾಗಿ ಪ್ರಸಿದ್ಧರಾದ ಚಳವಳಿಗಾರರ,

 ಆ ಜನಪ್ರಿಯತೆ, ಸಂವಹನ ಕಲೆ, ಬ್ರಿಟಿಷ್ ಆಡಳಿತದೊಂದಿಗೆ ಸಂಪರ್ಕ ಸಾಧಿಸಿದ ವಿಧಾನ ಎಲ್ಲದರಗಳಿಂದ ಭಾರತದ ಆಗಿನ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಭರವಸೆ ಮೂಡಿಸಿ ಇಲ್ಲಿನ ಚಳುವಳಿಯಲ್ಲಿ ಭಾಗವಹಿಸಲು ಆಹ್ವಾನ ಪಡೆದ ನಾಯಕ,

 ಭಾರತಕ್ಕೆ ಬಂದು ನೇರ ಹೋರಾಟದಲ್ಲಿ ಭಾಗಿಯಾಗದೆ ಇಡೀ ಭಾರತವನ್ನು ದ್ವಿತೀಯ ದರ್ಜೆ ರೈಲಿನಲ್ಲಿ ಪ್ರಯಾಣಿಸಿ ಇಲ್ಲಿನ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಜನಜೀವನ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ ಅಧ್ಯಯನಕಾರ,

 ಭಾರತದ ಶಕ್ತಿ ಸಾಮರ್ಥ್ಯ, ದೌರ್ಬಲ್ಯ, ಸಾಮಾಜಿಕ ರಚನೆಯ ವಿಭಜನಾತ್ಮಕ ಗುಣ, ಇಲ್ಲಿನ ಮೌಲ್ಯಗಳು, ಜಾತಿ, ಧರ್ಮ, ಆರ್ಥಿಕ ಅಸಮಾನತೆ ಎಲ್ಲವನ್ನು ಅಭ್ಯಸಿಸಿ ಸ್ವಾತಂತ್ರ ಚಳುವಳಿಯ ರೂಪರೇಷೆಗಳನ್ನು ಮನಸ್ಸಿನಲ್ಲಿ ಸ್ಪಷ್ಟ ಪಡಿಸಿಕೊಂಡ ಯೋಚನಾಕಾರ,

 ಸ್ಪಷ್ಟವಾದ ಗುರಿಯೊಂದಿಗೆ ಭಾರತದ ಸ್ವಾತಂತ್ರ್ಯ ಚಳುವಳಿಯ ಮುಂಚೂಣಿಯಲ್ಲಿ ನಿಂತು ಮಾರ್ಗದರ್ಶನ ಮಾಡುತ್ತಾ ಬೆಳೆದ ದೂರದೃಷ್ಟಿಯ ಹರಿಕಾರ,

 ತಮ್ಮ ಹೋರಾಟದ ಅನುಭವದಲ್ಲೇ ಸತ್ಯ, ಅಹಿಂಸೆ, ಸರಳತೆ, ಸತ್ಯಾಗ್ರಹ, ಪ್ರಾಮಾಣಿಕತೆ ಇವುಗಳನ್ನೇ ಸ್ವಾತಂತ್ರ್ಯ ಹೋರಾಟದ ಪ್ರಮುಖ ಅಸ್ತ್ರಗಳಾಗಿ ಉಪಯೋಗಿಸಿದ ಮಾನವತಾವಾದಿ,

 ಅನೇಕ ಸಂಘರ್ಷ, ಆರೋಪ ಪ್ರತ್ಯಾರೋಪ, ವಾದ ವಿವಾದ, ಘರ್ಷಣೆ, ಸೋಲು ಗೆಲುವು, ಆಸೆ ನಿರಾಶಗಳ ನಡುವೆಯೂ ಭಾರತದ ಸ್ವಾತಂತ್ರ್ಯ ಚಳುವಳಿಯನ್ನು ಕ್ರಮಬದ್ಧಗೊಳಿಸಿ ಯಶಸ್ವಿಯಾದ ಮಹಾಪುರುಷ,

 ಸ್ವಾತಂತ್ರ್ಯ ಗಳಿಸಿದ ಕೆಲವೇ ತಿಂಗಳುಗಳಲ್ಲಿ ಹಂತಕನ ಗುಂಡಿಗೆ ಬಲಿಯಾದ ಮಹಾತ್ಮ, ನನ್ನ ಜೀವನವೇ ನನ್ನ ಸಂದೇಶ ಎಂದು ಸಾರಿದ ಧೀಮಂತ ವ್ಯಕ್ತಿತ್ವ, ಯಾವುದೇ ಅಧಿಕಾರ ಹಣ ಅಂತಸ್ತುಗಳಿಗೆ ಶರಣಾಗದ, ಆಮಿಷಕ್ಕೊಳ್ಳಲಾಗದ ತ್ಯಾಗಜೀವಿ, ಸೂಟು ಬೂಟಿನಿಂದ ಬರಿಮೈ ಫಕೀರನಾಗಿ ಬದಲಾದ ಸರಳ ಜೀವಿ,

 ಸ್ವಾತಂತ್ರ್ಯ ನಂತರ ದೇಶದ ಉದ್ದಗಲಕ್ಕೂ ಮಹಾತ್ಮನಾಗಿ, ರಾಷ್ಟ್ರಪಿತನಾಗಿ ಅಜರಾಮಜರಾದ ಆದರ್ಶ ವ್ಯಕ್ತಿ, 80ರ ದಶಕದ ಆರಂಭದಲ್ಲಿ ಗಾಂಧಿ ನಿಜವಾಗಲೂ ರಾಷ್ಟ್ರಪಿತನೇ, ಮಹಾತ್ಮನೇ ಎಂಬ ಹಿಂದಿನ ಚರ್ಚೆಯ ವಿಷಯ ಮತ್ತೆ ಮುನ್ನೆಲೆಗೆ ಬಂದ ಚರ್ಚಾಸ್ಪದ ವ್ಯಕ್ತಿ,

 90ರ ದಶಕದ ಅಂತ್ಯದ ವೇಳೆಗೆ ಗಾಂಧಿ ಮಹಾತ್ಮನಲ್ಲ, ದೇಶ ವಿಭಜನೆಯ ದ್ರೋಹಿ ಎಂಬುದಾಗಿ ನಿಧಾನವಾಗಿ ಜನಮಾನಸದಲ್ಲಿ ಬೇರೂರ ತೊಡಗಿದ ವ್ಯಕ್ತಿ,

 ನಿಧಾನವಾಗಿ ಯುವ ಜನತೆಯಲ್ಲಿ ಗಾಂಧಿ ತಾತನನ್ನು ಒಬ್ಬ ಹೇಡಿಯಂತೆ  ಚಿತ್ರಿಸಿ ಹಾಸ್ಯಾಸ್ಪದ ವ್ಯಕ್ತಿಯಾದ ಗಾಂಧಿ,

 ಹಾಗೆಯೇ ತದನಂತರದಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆತದ್ದು ಗಾಂಧಿಯ ಅಹಿಂಸೆಯಿಂದಲೂ ಅಲ್ಲ, ಸತ್ಯಾಗ್ರಹದಿಂದಲೂ ಅಲ್ಲ, ಹೋರಾಟದಿಂದಲೂ ಅಲ್ಲ. ಅದೆಲ್ಲವೂ ಕಪಟ ನಾಟಕ. ಅವರೊಬ್ಬ ಬ್ರಿಟಿಷ್ ಏಜೆಂಟ್. ಶಸ್ತ್ರ ಮತ್ತು ಶಾಸ್ತ್ರದ ಬಲದಿಂದಲೇ ಸ್ವಾತಂತ್ರ್ಯ ಗಳಿಸಿದ್ದು ಎಂಬುದಾಗಿ ಚರ್ಚೆಗಳು ಸಾಮಾಜಿಕ ಜಾಲತಾಣಗಳ ಮುಖಾಂತರ, ಸಂಘ ಸಂಸ್ಥೆಗಳ ಮುಖಾಂತರ, ಕೆಲವು ಪತ್ರಿಕೆಗಳ ಮುಖಾಂತರ ಹರಡತೊಡಗಿ ಖಳನಾಯಕನಾದ ವ್ಯಕ್ತಿ,

 ಗಾಂಧಿ ಒಬ್ಬ ಸನಾತನ ಧರ್ಮ ವ್ಯವಸ್ಥೆಯ ಪ್ರತಿಪಾದಕ, ವರ್ಣಾಶ್ರಮ ಧರ್ಮದಲ್ಲಿ ನಂಬಿಕೆ ಇದ್ದ ವ್ಯಕ್ತಿ, ಸ್ತ್ರೀ ಸ್ವಾತಂತ್ರ್ಯದ ವಿರೋಧಿ ಮುಂತಾದ ಗುಣ ವಿಶೇಷಗಳೊಂದಿಗೆ ಮಹಾತ್ಮನಲ್ಲ ದುರಾತ್ಮ ಎಂಬುದಾಗಿ ಬಿಂಬಿತವಾದ ವ್ಯಕ್ತಿ,

 ದೇಶದಾದ್ಯಂತ ಪ್ರತಿಷ್ಠಾಪಿಸಲಾಗಿದ್ದ ಗಾಂಧಿಯ ಪ್ರತಿಮೆಗಳು ನಿಧಾನವಾಗಿ ಮರೆಯಾಗುತ್ತಾ, ಇತರರ ಪ್ರತಿಮೆಗಳು ಹೆಚ್ಚಾಗುತ್ತಾ ಜನರ ಮನಸ್ಸಿನಲ್ಲೂ ಮರೆಯಾಗುತ್ತಿರುವ ವ್ಯಕ್ತಿ,

 ವಿಶ್ವದ ಐದನೇ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತದಲ್ಲಿ, ಅದೇ ವೇಗದಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ, ನಾಶವಾಗುತ್ತಿರುವ ಸಂದರ್ಭದಲ್ಲಿ ಗಾಂಧಿ, ಗಾಂಧಿಯ ಮೌಲ್ಯಗಳು, ವ್ಯಕ್ತಿತ್ವ, ವಿಚಾರಗಳು ಸಹ ನಿಧಾನವಾಗಿ ಇಲ್ಲವಾಗುತ್ತಿರುವ ಸಂದರ್ಭದಲ್ಲಿ ಭಾರತ, ಭಾರತೀಯತೆ, ಭಾರತೀಯರು ಎತ್ತ ಸಾಗುತ್ತಿದ್ದಾರೆ. ಇವುಗಳಿಗೆ ಒಂದಕ್ಕೊಂದು ಸಂಬಂಧ ಇದೆಯೇ ಎಂಬುದನ್ನು ನಿಮ್ಮ ವಿವೇಚನೆಗೆ ಬಿಡುತ್ತಾ,……

 ಗಾಂಧಿಯನ್ನು ಮರೆತ ಭಾರತಕ್ಕೆ ಉತ್ತಮ ಆರೋಗ್ಯಕರ ಭವಿಷ್ಯ ಇಲ್ಲ ಎಂದು ನನ್ನ ವೈಯಕ್ತಿಕ ಷರಾ ಬರೆಯುತ್ತಾ…..

 ಗಾಂಧಿ ನೈತಿಕವಾಗಿ ಈ ಜಗತ್ತಿಗೇ ಮಾದರಿ. ದುರಾದೃಷ್ಟವಶಾತ್ ಅವರನ್ನು ಅರ್ಥಮಾಡಿಕೊಳ್ಳುವ ನೈತಿಕ ಮನಸ್ಥಿತಿಯೇ ನಮ್ಮ ಬಹುತೇಕರಲ್ಲಿ ಇಲ್ಲವಾಗಿ ಕುರುಡು ಮನಸ್ಸಿನ ನಮಗೆ ಗಾಂಧಿಯೇ ಅನೈತಿಕವಾಗಿ ಕಾಣುವ ಮನೋಭಾವ ಬೆಳೆದಿದೆ,

 ಗಾಂಧಿ ತತ್ವ ಅರಿವಾಗಲು ಮೊದಲು ನಾವು ನಾಗರಿಕರಾಗಬೇಕು, ಗೌತಮ ಬುದ್ಧರ ಪರಿಚಯವಾಗಬೇಕು, ಬಸವಣ್ಣನವರು ಅರ್ಥವಾಗಬೇಕುಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಓದಬೇಕು, ಸ್ವಾಮಿ ವಿವೇಕಾನಂದರನ್ನು ಅಧ್ಯಯನ ಮಾಡಬೇಕು,ಮನಸ್ಸನ್ನು ವಿಶಾಲಗೊಳಿಸಿಕೊಳ್ಳಬೇಕು ಮತ್ತು ಶುದ್ಧೀಕರಣ ಮಾಡಿಕೊಳ್ಳಬೇಕು, ಆಗ ಮಾತ್ರ ದೈವಿಕ ಗುಣದ ಗಾಂಧಿ ಸಿಗುತ್ತಾರೆ. ಆ ವ್ಯಕ್ತಿತ್ವ ನಮಗಿದೆಯೇ………….
ಲೇಖನ:ವಿವೇಕಾನಂದ. ಎಚ್. ಕೆ. 9844013068………

 

- Advertisement -  - Advertisement -  - Advertisement - 
Share This Article
error: Content is protected !!
";