ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಘೋಷಿಸಿರುವ 5300 ಕೋಟಿ ರೂ ಅನುದಾನವನ್ನು ಇನ್ನೊಂದುವರೆ ತಿಂಗಳಲ್ಲಿ ಮೊದಲ ಕಂತು ಬಿಡುಗಡೆಯಾಗಲಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ವಿ.ಸೋಮಣ್ಣ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬುಧವಾರ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಚೊತೆ ಚರ್ಚಿಸಲಾಗಿದೆ. ಮೂರು ಕಂತುಗಳಲ್ಲಿ ಹಣ ನೀಡುವ ಭರವಸೆಯನ್ನು ಅವರು ನೀಡಿದ್ದಾರೆ.
ರಾಜ್ಯ ಸರ್ಕಾರಕ್ಕೆ ಕೆಲ ತಾಂತ್ರಿಕ ಮಾಹಿತಿ ಪೂರೈಕೆ ಮಾಡುವಂತೆ ಸೂಚಿಸಲಾಗಿದೆ. ಅವರಿಂದ ಮಾಹಿತಿ ಪೂರೈಕೆಯಾದ ತಕ್ಷಣವೇ ಕೇಂದ್ರದ ಅನುದಾನ ಲಭ್ಯವಾಗಲಿದೆ. ಒಂದುವರೆ ತಿಂಗಳಲ್ಲಿ ಮೊದಲ ಕಂತು ಬಿಡುಗಡೆಯಾಗಲಿದೆ ಎಂದು ಸೋಮಣ್ಣ ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಬರ ಪರಿಸ್ಥಿತಿ ನಮಗೆ ಗೊತ್ತಿದೆ. ವಾಣಿ ವಿಲಾಸ ಸಾಗರ ಹೊರತು ಪಡಿಸಿ ಇತರೆ ಜಲಾಶಯ ಮೂಲಗಳಿಲ್ಲ. ಅದೂ ಕೂಡಾ ತುಂಬುವುದು ಕಷ್ಟವಾಗಿತ್ತು. ಭದ್ರಾ ಮೇಲ್ದಂಡೆಯಡಿ ಭರ್ತಿ ಮಾಡಲಾಗುತ್ತಿದೆ. ನಾನೂ ಕೂಡಾ ರೈತನ ಮಗನಾಗಿದ್ದು ಕೇಂದ್ರದ ಅನುದಾನ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ.
ಸಂಸದ ಗೋವಿಂದ ಕಾರಜೋಳ ಅವರು ನೀರಾವರಿ ವಿಚಾರದಲ್ಲಿ ತಜ್ಞರಷ್ಟೇ ಅನುಭವವಿದೆ. ಅವರ ಮುಂದಾಳತ್ವದಲ್ಲಿ ಅನುದಾನ ಹರಿದು ಬರಲಿದೆ ಎಂದರು.
ಇದಕ್ಕೂ ಮೊದಲು ಮನವಿ ಸಲ್ಲಿಸಿ ಮಾತನಾಡಿದ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಸಹಕಾರ ಧೋರಣೆಯಿಂದಾಗಿ ಕುಂಟುತ್ತಾ ಸಾಗಿದ್ದು ಈ ಭಾಗದ ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ.
ಕೇಂದ್ರ ಸರ್ಕಾರದ ಅನುದಾನ ಕಾಯ್ದುಕೊಂಡು ರಾಜ್ಯ ಕೈ ಚೆಲ್ಲಿ ಕುಳಿತಿದೆ . ಕೇಂದ್ರ ಸರ್ಕಾರ ಕೂಡಾ ಘೋಷಿತ 5300 ಕೋಟಿ ರು ಅನುದಾನ ಬಿಡುಗಡೆ ಮಾಡುವಲ್ಲಿ ಉದಾಸೀನ ತೋರಿದೆ ಎಂದು ದೂರಿದರು.
ಕೇಂದ್ರ ಸರ್ಕಾರದಲ್ಲಿ ಸೋಮಣ್ಣ ಜಲಶಕ್ತಿ ರಾಜ್ಯ ಸಚಿವರಾಗಿ ನಿಯೋಜನೆ ಗೊಳ್ಳುತ್ತಿದ್ದಂತೆ ಈ ಭಾಗದ ರೈತರಲ್ಲಿ ಆಶಾದಾಯಕ ಭಾವನೆ ಮೂಡಿತ್ತು. ಭದ್ರಾ ಮೇಲ್ದಂಡೆಗೆ ಕೇಂದ್ರ ತಕ್ಷಣವೇ ಅನುದಾನ ಬಿಡುಗಡೆ ಮಾಡುತ್ತದೆ, ಆಪದ್ಭಾಂಧವರಾಗಿ ಸೋಮಣ್ಣ ಬಂದಿರುವುದು ನಮ್ಮ ಅದೃಷ್ಟವೆಂದೇ ರೈತಾಪಿ ಸಮುದಾಯ ನಂಬಿತ್ತು. ಆದರೆ ಅದು ಹುಸಿಯಾದಂತೆ ಕಾಣಿಸುತ್ತಿದೆ ಎಂದುೂ ನೇರವಾಗಿ ಆರೋಪಿಸಿದರು.
ಭದ್ರಾ ಮೇಲ್ದಂಡೆ ಯೋಜನೆಯಡಿ ತುಮಕೂರು ಶಾಖಾ ಕಾಲುವೆ ಮೂಲಕ 85 ಸಾವಿರ ಹೆಕ್ಟೇರು ಪ್ರದೇಶಕ್ಕೆ ನೀರುಣಿಸಲಾಗುತ್ತಿದೆ. ಸುಮಾರು 131 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ.
ಯೋಜನಾ ವ್ಯಾಪ್ತಿಗೆ ತುಮಕೂರು ಜಿಲ್ಲೆಯ ಶಿರಾ, ಚಿಕ್ಕನಾಯಕನಹಳ್ಳಿ, ಪಾವಗಡ ತಾಲೂಕು ಸೇರಿದೆ.ಹಾಗಾಗಿ ಭದ್ರಾ ಕಾಮಗಾರಿ ಪೂರ್ಣಗೊಳಿಸುವಲ್ಲಿ ಸಚಿವರಾಗಿಯಷ್ಟೇ ಅಲ್ಲ ಸಂಸದರಾಗಿಯೂ ತಾವು ತಮ್ಮ ಕರ್ತವ್ಯ ನಿಭಾಯಿಸಬೇಕಾಗಿದೆ.
ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗುವ ನಿಟ್ಟಿನಲ್ಲಿ ದೆಹಲಿಗೆ ಕಡತ ಹೊತ್ತೊಯ್ದು ಎಲ್ಲ ಕ್ಲಿಯರೆನ್ಸ್ ಮಾಡಿಸಿದ ಹಿಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಾಲಿ ಸಂಸದರಾಗಿ ಲೋಕಸಭೆ ಪ್ರವೇಶಿಸಿದ್ದಾರೆ.
ಕರ್ನಾಟಕದ ಪರವಾಗಿ ಬಹುದೊಡ್ಡ ಶಕ್ತಿಯೇ ಸಂಸತ್ ನಲ್ಲಿ ಪಾಲು ಪಡೆದಿದೆ. ಆದರೆ ಈ ನೆಲದ ಸ್ವಾಭಿಮಾನ, ರೈತರ ಭವಿಷ್ಯದ ಬದುಕಿನ ಪ್ರಶ್ನೆಯಾಗಿರುವ ಭದ್ರಾ ಮೇಲ್ದಂಡೆ ವಿಚಾರದಲ್ಲಿ ಜನ ಪ್ರತಿನಿಧಿಗಳು ಏರಿದ ದನಿಯಲ್ಲಿ ಕೇಂದ್ರದ ಮುಂದೆ ದನಿ ಎತ್ತಿ ಅನುದಾನ ತರುವಲ್ಲಿ ವಿಫಲರಾಗಿರುವುದು ನೋವಿನ ಸಂಗತಿ ಎಂದರು.
ಭದ್ರಾ ಮೇಲ್ದಂಡೆಗೆ 5300 ಕೋಟಿ ಅನುದಾನದ ನೆರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಹ ಚಿತ್ರದುರ್ಗ ನೆಲದಲ್ಲಿಯೇ ನಿಂತು ಘೋಷಣೆ ಮಾಡಿದ್ದರು. 2023-24 ಸಾಲಿನ ಬಜೆಟ್ ನಲ್ಲಿ ಇದು ನಮೂದಾಗಿದೆ. ಬಿಜೆಪಿಯವರೇ ಕೇಂದ್ರದ ಮುಂದೆ ಭದ್ರಾ ಮೇಲ್ದಂಡೆ ಕಡತ ಒಯ್ದು ಹೊಸ ಕೂಸು ಹುಟ್ಟಿಸಿ, ರಾಷ್ಟ್ರೀಯ ಯೋಜನೆ ನಾಮಕರಣ ಮಾಡಿ ಕುಲಾವಿ ತೊಡಿಸಿದ್ದರು.
ಈ ಕೂಸನ್ನು ಲಾಲನೆ ಪಾಲನೆ ಮಾಡುವುದ ಬಿಟ್ಟು ಕತ್ತು ಹಿಸುಕಲು ಮುಂದಾಗುವುದು ಎಷ್ಟರ ಮಟ್ಟಿಗೆ ಸರಿ. ತಕ್ಷಣವೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಮುಂದೆ ಚರ್ಚಿಸಿ 5300 ಕೋಟಿ ರು ಅನುದಾನ ಬಿಡುಗಡೆ ಮಾಡಿಸಿ ತಮ್ಮ ಪಾಲಿನ ಜವಾಬ್ದಾರಿ ಮೆರೆಯಬೇಕೆಂದು ಸಚಿವ ಸೋಮಣ್ಣ ಅವರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.
ಸಂಸದ ಗೋವಿಂದ ಕಾರಜೋಳ, ಶಾಸಕರಾದ ಎಂ.ಚಂದ್ರಪ್ಪ, ಕೆ.ಎಸ್.ನವೀನ್, ನೀರಾವರಿ ಅನುಷ್ಛಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ರೈತ ಸಂಘದ ರಾಜ್ಯ ಉಪಾಧ್ಯಕ್ಷೆ ಕೆ.ಪಿ.ಭೂತಯ್ಯ, ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಾಜಿ ಅಧ್ಯಕ್ಷಬಸ್ತಿಹಳ್ಳಿ ಸುರೇಶ್ ಬಾಬು,
ಸರ್ವೋದಯ ಕರ್ನಾಟಕದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ, ರೈತ ಸಂಘದ ಹುಣಿಸೆಕಟ್ಟೆ ಕಾಂತರಾಜ್, ಸಜ್ಜನಕೆರೆ ರೇವಣ್ಣ, ಓಂಕಾರಪ್ಪ, ಹುಣಿಸೆಕಟ್ಟೆ ಮಹಂತೇಶ್,ಕೆಂಚಪ್ಪ ಕಳ್ಳಿರೊಪ್ಪ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಜಿ.ಬಿ.ಶೇಖರ್,ಲಿಂಗಾವರಟ್ಟಿ ಕುಬೇರರೆಡ್ಡಿ, ಬಾಳೆಕಾಯಿ ತಿಪ್ಪೇಸ್ವಾಮಿ, ಡಿ.ಎಸ್.ಹಳ್ಳಿ ಕೃಷ್ಣಾರೆಡ್ಡಿ, ಲಕ್ಷ್ಮಣರೆಡ್ಡಿ,ನಗರಸಭೆ ಮಾಜಿ ಸದಸ್ಯ ಜಿ.ಎನ್.ಲಿಂಗರಾಜ್, ಅಪ್ಪಣ್ಣರೆಡ್ಡಿ,ಲಕ್ಷ್ಮಿನಾರಾಯಣರೆಡ್ಡಿ, ರಜನಿ ಶಂಕರ್ ಈ ವೇಳೆ ಉಪಸ್ಥಿತರಿದ್ದರು.