ಒಳ ಮೀಸಲಾತಿ ಅನುಷ್ಠಾನ ವಿಳಂಬ ಮಾಡಿದರೆ ಸಿಎಂ ಮನೆಗೆ ಪಾದಯಾತ್ರೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಒಳ ಮೀಸಲಾತಿಯನ್ನು ಅನುಷ್ಠಾನಗೊಳಿಸಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯದಿದ್ದರೆ ರಾಜ್ಯದ ಮುಖ್ಯಮಂತ್ರಿ ನಿವಾಸಕ್ಕೆ ಪಾದಯಾತ್ರೆ ಹೊರಡುವುದಾಗಿ ಮಾದಿಗ ಮುಖಂಡ ಪಾವಗಡ ಶ್ರೀರಾಮ್ ಎಚ್ಚರಿಸಿದರು.

ಹಿರಿಯೂರು ತಾಲ್ಲೂಕು ಸಮಿತಿ ದಲಿತಪರ ಸಂಘಟನೆಗಳ ಒಕ್ಕೂಟ ಪಟ್ರೆಹಳ್ಳಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಆಗಮಿಸಿದ ಪಾದಯಾತ್ರೆಯನ್ನುದ್ದೇಶಿಸಿ ಮಾತನಾಡಿದ ಪಾವಗಡ ಶ್ರೀರಾಮ್ ಮೂವತ್ತು ವರ್ಷಗಳಿಂದಲೂ ಎಲ್ಲಾ ಪಕ್ಷಗಳು ಮಾದಿಗರಿಗೆ ಮೋಸ ಮಾಡಿಕೊಂಡು ಬರುತ್ತಿವೆ.

ಒಳ ಮೀಸಲಾತಿಯನ್ನು ಜಾರಿಗೊಳಿಸುವತನಕ ನಮ್ಮ ಹೋರಾಟ ನಿಲ್ಲುವುದಿಲ್ಲ. ಎಲ್ಲಾ ಪಕ್ಷಗಳು ಮಾದಿಗರನ್ನು ಕೇವಲ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿವೆ.

ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಬದಲು ಪರಿಶಿಷ್ಟ ಜಾತಿಯಲ್ಲಿನ ಎಲ್ಲಾ ಉಪ ಜಾತಿಗಳ ಮೇಲೆ ನಿಜವಾಗಿಯೂ ಕಾಳಜಿಯಿದ್ದರೆ ಮೊದಲು ಒಳ ಮೀಸಲಾತಿಯನ್ನು ಜಾರಿಗೊಳಿಸಿ ದಲಿತ ವಿರೋಧಿಯಲ್ಲ ಎನ್ನುವುದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.

ಹಿರಿಯೂರು ತಾಲ್ಲೂಕಿನ ಕೋಡಿಹಳ್ಳಿ ಮಠದಿಂದ ೨೦೦೩ ರಲ್ಲಿ ಒಳ ಮೀಸಲಾತಿಗಾಗಿ ಮೊದಲು ಪಾದಯಾತ್ರೆ ಆರಂಭವಾಯಿತು. ಒಳ ಮೀಸಲಾತಿ ಜಾರಿಗೊಳಿಸದಿದ್ದರೆ  ಪರಿಶಿಷ್ಟ ಜಾತಿಯಲ್ಲಿ ೧೦೧ ಉಪ ಜಾತಿಗಳು ಒಗ್ಗಟ್ಟಾಗಿ ಹೋರಾಟ ಮಾಡುತ್ತೇವೆ.

ನಮ್ಮ ನಮ್ಮಲ್ಲೆ ಒಡಕು ಮೂಡಿಸುವ ದುರಾಲೋಚನೆಯಿಟ್ಟುಕೊಂಡಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಲ್ಲಿಕಾರ್ಜುನಖರ್ಗೆಯವರ ಕಡೆ ಕೈತೋರಿಸುತ್ತಿರುವುದು ಯಾವ ನ್ಯಾಯ? ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮೀಸಲಾತಿಯನ್ನು ಕೊಟ್ಟಿದ್ದರೂ ಸಮಪಾಲು ಹಂಚಿಕೆಯಾಗಿಲ್ಲ.

ದಲಿತರನ್ನು ಕೇವಲ ಮತ ಬ್ಯಾಂಕನ್ನಾಗಿ ಬಳಸಿಕೊಳ್ಳುವುದನ್ನು ಬಿಟ್ಟು ಒಳ ಮೀಸಲಾತಿ ಜಾರಿಗೊಳಿಸಿ. ಇಲ್ಲವಾದಲ್ಲಿ ಕುರ್ಚಿ ಖಾಲಿ ಮಾಡಿ ಎಂದು ಪಾವಗಡ ಶ್ರೀರಾಮ್ ಮುಖ್ಯಮಂತ್ರಿಗೆ ಗಡುವು ನೀಡಿದರು.

ಸಾಮಾಜಿಕ ನ್ಯಾಯ, ಭದ್ರತೆ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೆ ದಲಿತ ವಿರೋಧಿ ಎನ್ನುವ ಕಳಂಕ ಅಂಟಿಸಿಕೊಳ್ಳಬೇಡಿ. ಸುಪ್ರೀಂಕೋರ್ಟ್ ತೀರ್ಪಿನನ್ವಯ ಮೊದಲು ಒಳ ಮೀಸಲಾತಿ ಜಾರಿಗೊಳಿಸಿ. ಇಲ್ಲವಾದಲ್ಲಿ ನಿಮ್ಮ ನಿವಾಸಕ್ಕೂ ಮುತ್ತಿಗೆ ಹಾಕುತ್ತೇವೆಂದು ಬೆದರಿಕೆ ಹಾಕಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ.ಪ್ರಕಾಶ್‌ಮೂರ್ತಿ, ಗುರುಸ್ವಾಮಿ, ಹುಲ್ಲೂರುಕುಮಾರಸ್ವಾಮಿ, ಹರಿರಾಮ್, ಲಕ್ಷ್ಮಿ, ಕೋಡಿಹಳ್ಳಿ ಸಂತೋಷ್, ಕೆ.ಟಿ.ಶಿವಕುಮಾರ್ ಸೇರಿದಂತೆ ನೂರಾರು ಮಾದಿಗರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

 

 

 

 

- Advertisement -  - Advertisement -  - Advertisement - 
Share This Article
error: Content is protected !!
";