ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಆಡು ಮಲ್ಲೇಶ್ವರದಿಂದ ಪಶ್ಚಿಮಕ್ಕೆ ಸಾಗುವ ದಾರಿಗೆ,ಅರಣ್ಯ ಇಲಾಖೆಯವರು ವಾಹನ ಸಂಚರಕ್ಕಾಗಿಯೇ ನಿರ್ಮಿಸಿಕೊಂಡಿರುವ ರಸ್ತೆ.ಇಲ್ಲಿಂದ ನೇರವಾಗಿ ಈರಜ್ಜನಹಟ್ಟಿ ಫಾರೆಸ್ಟ್ ಗೆ ಒಂದೇ ದಾರಿ.ಮುಂದೆ ಸಾಗುವ ಎಡ ಬಲಕ್ಕೆ ಅನೇಕ ಕಾಲುದಾರಿಗಳು,ಕಾಡಿನ ಒಳ ಸಂಚಾರಕ್ಕೂ ಕರೆದೊಯ್ಯುತ್ತವೆ.
ಕಾಡುಗಳ್ಳರಿಗಂತೂ ಅನುಕೂಲದ ದಾರಿಗಳಿವು.ಇವುಗಳನ್ನು ಬಳಸಿಯೂ ಸಹ ಆಸಕ್ತ ವಿಹಾರಿಗಳು,ದುರ್ಗಮ ಚಾರಣಗಳನ್ನು ಕೈಗೊಳ್ಳಬಹುದು.ಈ ಭಾಗದಲ್ಲಿ ಕವಳೆ,ಕಾರೆ, ಸೀತಾಫಲಗಳಂತೂ ಯಥೇಚ್ಛವಾಗಿ ಸಿಗುತ್ತವೆ. ಬಾಯಾಡುವವರಿಗೆ ಕಾಡಣ್ಣುಗಳ ಸುಗ್ಗಿಯ ಬಾಗಿಲು ಈ ರಸ್ತೆ.
ಎರಡೂ ಬದಿಯ ಗುಡ್ಡ ಸಾಲುಗಳ ಮಧ್ಯೆ ನಡೆದು ಹೋಗುವ ಹಾದಿಯಿದು,ಸದ್ಯ ಕಾಂಕ್ರೀಟ್ ರಸ್ತೆ ಆಗಿಲ್ಲದಿರುವುದೇ ಇಲ್ಲಿನ ವಿಶೇಷ,ಹಾಗೂ ಖುಷಿಯ ವಿಚಾರ.ಇಷ್ಟೊಂದು ದೀರ್ಘ ದಾರಿಯ ಹೆಜ್ಜೆಗಳನ್ನ, ಸಾಮಾನ್ಯ ವಿಹಾರಿಗಳಿಂದ ಮಾಡಲಾಗುವುದಿಲ್ಲ.
ಜೋಗಿಮಟ್ಟಿ ತನಿಖಾ ಠಾಣೆಯಿಂದ,ಸರಿ ಸುಮಾರು ಹತ್ತು ಮೈಲುಗಳ ಮುಂದಕ್ಕೂ ಈ ಹಾದಿ ಸಾಗುತ್ತದೆ.ಜೋಗಿ ಜಾಡು, ಹಾಗೂ ಮತ್ತಿತರ ತಂಡಗಳು ಮಾತ್ರ ಇಲ್ಲಿನ ದಾರಿಗಳಿಗೆ ಮನಸ್ಸು ಮಾಡುತ್ತವೆ. ಮೇಲಿಂದ ಚಿತ್ತೆಕಲ್ಲು, ದವಳಪ್ಪನ ಗುಡ್ಡದ ಅರಣ್ಯಕ್ಕೂ,ಕೆಳಗಿನ ಜೋಗಿಗುಡ್ಡದ ಹಾಸಿಗೂ ಹೊಂದಿಕೊಂಡಂತೆ, ಬಾಲಂಬಾವಿ ಕಾಡಿಗೂ ಮೂರು ಗುಡ್ಡಗಳ ಅಂತರವಿದ್ದು,ಇಳಿಜಾರಿನ ತಗ್ಗುರಸ್ತೆ ಒಮ್ಮೆಲೆ ದುತ್ತೆಂದು ಎದುರಾಗುತ್ತದೆ.ಬಯಲ ಗಾಳಿಯ ತಳ್ಳುವಿಕೆಗೆ,ಬೇಡವೆಂದರೂ ಹೆಜ್ಜೆಗಳು ನಿಲುಕದೆ ಓಡುತ್ತಿರುತ್ತವೆ.
ಇದೇ ದಾರಿಯಲ್ಲಿ ತಿರುಗಿ ಬರುವಾಗ ಎದೆಗಡರುವ ರಸ್ತೆ,ಹತ್ತುವುದೇ ಒಂದು ಹರಸಾಹಸ.ಹಾಗಾಗಿ ಬಹಳ ಮಂದಿ ಈ ಜಾಗಕ್ಕೆ ಚಾರಣ ಕೈಗೊಳ್ಳುವುದಿಲ್ಲ.ಸಾಹಸಿ ನಡಿಗೆಯವರಿಗೆ ಮಾತ್ರ ಇದೊಂದು ಯಶಸ್ವಿ ಹೆಜ್ಜೆಗಳು.ಇತ್ತೀಚೆಗೆ ಈ ರಸ್ತೆಗೆ ಆಡು ಮಲ್ಲೇಶ್ವರದಿಂದ ಗೇಟ್ ಮಾಡಿ ಬೀಗ ಹಾಕಲಾಗಿದೆ.
ಮುಂದೆ ಇಳಿಜಾರಿನ ತಗ್ಗಿಗಿಳಿದ ದಾರಿಗೆ,ಅಡ್ಡವಾಗಿ ದಕ್ಷಿಣದಿಂದ ಉತ್ತರಕ್ಕೆ ಹರಿಯುವ ದೊಡ್ಡ ಹಳ್ಳವೊಂದು ಎದುರಾಗುತ್ತದೆ,ಇಲ್ಲಿಗೆ ಬಹುತೇಕ ಹಳ್ಳಿಗಳು ಸಮೀಪ ಇರುವುದರಿಂದ ಹೊಲ,ಗದ್ದೆಗಳು,ಅಡಿಕೆ ತೋಟಗಳು,ಅರಣ್ಯಕ್ಕೆ ಹೊಂದಿಕೊಂಡಂತೆ ಇಕ್ಕೆಲಗಳಲ್ಲಿ ಕಾಣಸಿಗುತ್ತವೆ.
ಜೋಗಿಮಟ್ಟಿ ಅಭಯಾರಣ್ಯಕ್ಕೆ ಹಾಸಿಕೊಂಡಿರುವ ಕಾಡೇ ಆಗಿರುವುದರಿಂದ,ಸುತ್ತಲಿನ ಗುಡ್ಡಗಾಡು ಪ್ರದೇಶಗಳಿಗೆ ಬಿದ್ದ ಮಳೆ ನೀರು,ಈ ಹಳ್ಳದ ಮೂಲಕವೇ ಹಾದು ಅನೇಕ ಕೆರೆ,ಹೊಂಡಗಳ ಒಡಲು ತುಂಬಿಸಿ ಈ ಭಾಗದ ರೈತನ ಬದುಕನ್ನು ಹಸನಾಗಿಸಿದೆ.ಈ ಹಳ್ಳದಿಂದ ದಕ್ಷಿಣಕ್ಕೆ ಕುರಿ, ಮೇಕೆ,ದನ ಕರುಗಳು ಅಲೆದಾಡಿ ಜಾಡಾಗಿರುವುದರಿಂದ, ಮುಳ್ಳು ಗಂಟೆಗಳು ಸರಿದು ದಾರಿಗಳಾಗಿವೆ.
ಇಲ್ಲಿಂದ ಅರಣ್ಯದ ಪ್ರಸಿದ್ಧ ಕೇಂದ್ರ ಬಿಂದು,ಬಾಲಂಬಾವಿಗೂ ಸಹ ಹೋಗಬಹುದು. ಈ ಸ್ಥಳಕ್ಕೆ ಹಳ್ಳದ ದಾರಿಯಲ್ಲಿಯೇ ನಡೆಯಬೇಕಾಗಿರುವುದರಿಂದ,ಬಾಲಂಬಾವಿ ನೋಡುವವರಿಗೆ ಬೇಸಿಗೆಯೇ ಉತ್ತಮ. ಇಲ್ಲೊಂದು ದಾರಿಯ ಮಧ್ಯದಲ್ಲಿ ಒಂಟಿ ಸಮಾಧಿ ಇದೆ.ಸುತ್ತಲೂ ಕಾಡನ್ನು ಕಡಿದು ಇದನ್ನ ಮಾಡಿಟ್ಟಿದ್ದಾರೆ.
ಹಳ್ಳದ ದಾರಿಯಿಂದ ಇಲ್ಲಿಗೆ ತಲುಪಲಿಕ್ಕೆ,ದಾರಿ ಮಾರ್ಗದ ಕಲ್ಲುಗಳಿಗೆ ಬಣ್ಣ ಬಳಿದು ಗುರುತಾಗಿಸಿದ್ದಾರೆ.ಒಂಟಿ ಯಾಗಿರುವ ಇದು ಇತ್ತೀಚಿನದಂತೆ ಕಾಣುತ್ತದೆ. ಅಲ್ಲೊಂದು ಕಲ್ಲಿನ ಮೇಲೆ ಬಣ್ಣದಿಂದ ದಪ್ಪ ಅಕ್ಷರಗಳಲ್ಲಿ ಚನ್ನಬಸಪ್ಪನ ಸಮಾಧಿ ಅನ್ನುವ ಬರಹವಿದೆ.ಇದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ಆದರೂ ಆ ಸಮಾಧಿಯನ್ನು ಸುರಕ್ಷಿತವಾಗಿ ರಕ್ಷಿಸಿಟ್ಟಿದ್ದಾರೆ. ಸುತ್ತಲ ಹಳ್ಳಿಗಳ ಯಾರೋ ಒಬ್ಬ ಮಹಾನುಭಾವನ ಸಮಾಧಿಯೇ ಇರಬೇಕು ಅನಿಸುತ್ತದೆ. ಬಾಲಂಬಾವಿಯಿಂದ ಹಾದು, ಇದರ ಪಕ್ಕದಲ್ಲಿಯೇ ಹಳ್ಳ ಹೋಗಿರುವುದರಿಂದ,ಇದಕ್ಕೆ ನಮ್ಮ ಜೋಗಿ ಜಾಡು ಕೊಟ್ಟ ಹೆಸರು ಸಮಾಧಿ ಹಳ್ಳ ಅಂತಲೇ.ಅಂದೋಂದು ದಿನ ಬಾಲಂಬಾವಿಗೆ ಹೊರಟ ನಾವು,ಜಾಡು ತಪ್ಪಿ ಈ ಭಾಗದ ಕಾಡನಲ್ಲಿ,ದಾರಿಗಾಗಿ ಅಲೆದಾಗ ಸಿಕ್ಕ ಸಮಾಧಿಯಿದು.
ಎಂತಹ ಸಂದರ್ಭದಲ್ಲಿಯೂ ಹೆದರದವನು,ಆ ದಿನ ಸ್ವಲ್ಪ ಬೆದರಿ ಬೆವರಿದ್ದೆ! ಬೆಳಗಿನ ಜಾವ 4:30 ರ ಅವಧಿಗೆ ಕಾಡಿಗಿಳಿಯುವ ನಾವು ಬಾಲಂಬಾವಿ ಹುಡುಕುತ್ತಾ, ಮಧ್ಯಾಹ್ನ ಹನ್ನೊಂದು ಗಂಟೆಗೂ ದಾರಿ ಸಿಗದೇ, ಮಧ್ಯ ಕಾಡಲ್ಲಿ ಕುಳಿತಾಗ ಹೀಗೆ ಅನ್ನಿಸಿದ್ದಂತೂ ಸತ್ಯ.ಆ ದಿನದ ಘಟನೆಯನ್ನ ಹಿಂದಿಗೂ ಒಮ್ಮೊಮ್ಮೆ ಮೆಲುಕಾಕಿ,ತಮಾಷೆಯಲ್ಲಿ ನಕ್ಕುಬಿಡುತ್ತೇವೆ,ಹೇಳ್ಬೇಕಂದ್ರೆ ಅದು ತಮಾಷೆ ವಿಷಯವೇ ಅಲ್ಲ.
ಮುಂದುವರೆಯುವುದು…..
ಲೇಖನ-ಕುಮಾರ್ ಬಡಪ್ಪ