ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರು ರೈಲ್ವೆ ನಿಲ್ದಾಣವನ್ನು ಏರ್‌ಪೋರ್ಟ್ ಮಾದರಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಿಸಲು ಕೇಂದ್ರ ರೈಲ್ವೆ ಸಚಿವಾಲಯವು ೮೮.೪೧ ಕೋಟಿ ರೂ.ಅನುದಾನ ಬಿಡುಗಡೆ ಮಾಡಿದೆ ಎಂದು ಕೇಂದ್ರ ರೈಲ್ವೆ ಜಲಶಕ್ತಿ ಖಾತೆ ರಾಜ್ಯ ಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ.
ಬೆಂಗಳೂರಿನಂತೆ ತುಮಕೂರು ಕೂಡ ಅತಿವೇಗವಾಗಿ ಬೆಳೆಯುತ್ತಿದ್ದು, ಸಾಮಾನ್ಯ ರೈಲ್ವೆ ಪ್ರಯಾಣಿಕರಿಗೂ ವಿಶ್ವ ದರ್ಜೆಯ ಸೌಲಭ್ಯಗಳು ಸಿಗಬೇಕೆಂಬ ಭವಿಷ್ಯದ ಸಾರಿಗೆ ವ್ಯವಸ್ಥೆಯನ್ನು ಮನಗಂಡು ತುಮಕೂರು ರೈಲ್ವೆ ನಿಲ್ದಾಣವನ್ನು ಸಿದ್ದಗಂಗಾ ಮಠದ ಮಾದರಿಯ ವಾಸ್ತುಶಿಲ್ಪದ ವಿನ್ಯಾಸದಲ್ಲಿ ನಿರ್ಮಿಸಲಾಗುವುದು.
ಬಹುಮಹಡಿ ಕಟ್ಟಡ, ಸುಸಜ್ಜಿತ ಪಾಕಿಂಗ್ ವ್ಯವಸ್ಥೆ, ಆಗಮನ-ನಿರ್ಗಮನಕ್ಕೆ ಪ್ರತ್ಯೇಕ ದ್ವಾರಗಳು, ಏರ್‌ಕಾನ್‌ಕೋರ್ಸ್, ದಿವ್ಯಾಂಗ ಸ್ನೇಹಿ ಲಿಫ್ಟ್-ಎಸ್ಕಲೇಟರ್‌ಗಳು, ರಿಟೇಲ್, ವಾಣಿಜ್ಯ ಕಟ್ಟಡಗಳನ್ನು ನೂತನ ನಿಲ್ದಾಣ ಒಳಗೊಂಡಿರುತ್ತದೆ.
ತುಮಕೂರು ನಗರದ ಕೇಂದ್ರ ಬಿಂದುವಾಗಿ ನಿಲ್ದಾಣ ಅಭಿವೃದ್ದಿ ಹೊಂದಲಿದ್ದು, ರೈಲ್ವೆ ಸಚಿವಾಲಯದಿಂದ ಅನುದಾನ ಬಿಡುಗಡೆಗೆ ಸಹಕರಿಸಿದ ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಕ್ಷೇತ್ರದ ಸಂಸದ ವಿ.ಸೋಮಣ್ಣ ಕೃತಜ್ಞತೆ ಸಲ್ಲಿಸಿದ್ದಾರೆ.