ಮೈಸೂರು ದಸರಾದಲ್ಲಿ ರಾಜಕೀಯ ಬಣ್ಣಗಳು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೈಸೂರು ದಸರಾ ಉದ್ಘಾಟನೆ ಮತ್ತು ಕವಿಗೋಷ್ಠಿಯ ರಾಜಕೀಯ ಬಣ್ಣಗಳು……
ದಸರಾ ಉದ್ಘಾಟನೆ ಸಂದರ್ಭದಲ್ಲಿ ಅದನ್ನು ಉದ್ಘಾಟಿಸಿದ ಖ್ಯಾತ ಸಾಹಿತಿ ಸನ್ಮಾನ್ಯ ಶ್ರೀ ಹಂ. ಪಾ. ನಾಗರಾಜಯ್ಯನವರು ಈಗಿನ ಸರ್ಕಾರ ಮತ್ತು ಮುಖ್ಯಮಂತ್ರಿಗಳ ಪರವಾಗಿ ಆ ಸಮಾರಂಭದಲ್ಲಿ ಮಾತನಾಡಿದ ಬಗ್ಗೆ ಒಂದಷ್ಟು ಟೀಕೆಗಳು, ಹಾಗೆಯೇ ದಸರಾ ಕವಿಗೋಷ್ಠಿಯ ಕವಿಗಳ ಆಯ್ಕೆಯಲ್ಲಿ ಸ್ವಜನ ಪಕ್ಷಪಾತ ಮತ್ತು ತಾರತಮ್ಯದ ಬಗ್ಗೆ ಒಂದಷ್ಟು ಚರ್ಚೆಗಳು ನಡೆಯುತ್ತಿವೆ……

ಇದು ಹೊಸದೇನು ಅಲ್ಲ. ನಿರಂತರವಾಗಿ ಈ ತಾರತಮ್ಯಗಳು ಈ ಸಮಾಜದಲ್ಲಿ ನಡೆಯುತ್ತಲೇ ಇದೆ. ಈಗಲೂ ನಡೆದಿದೆ. ಇದು ಕೇವಲ ಸರ್ಕಾರದ ಮಟ್ಟದಲ್ಲಿ ಮಾತ್ರವಲ್ಲ ಇಡೀ ಭಾರತೀಯ ಸಮಾಜದಲ್ಲಿ ಈ ಮನಸ್ಥಿತಿ ಮತ್ತು ಸಂಸ್ಕೃತಿ ಆ ರೀತಿಯಲ್ಲಿಯೇ ಇದೆ….

ವಿಶಾಲ ಮನೋಭಾವ, ಸಮಗ್ರ ಚಿಂತನೆ, ಸ್ಥಿತಪ್ರಜ್ಞತೆಯ ಕೊರತೆ ಒಂದು ಕಡೆಯಾದರೆ, ಸ್ವಾರ್ಥ, ಅಸೂಯೆ, ಪ್ರಚಾರದ – ಜನಪ್ರಿಯತೆಯ ಹುಚ್ಚು ಇನ್ನೊಂದು ಕಡೆಯಾದರೇ, ಅನ್ಯಾಯಗಳನ್ನು ಪ್ರಶ್ನಿಸುವ ಮನೋಭಾವ, ರಾಜಕೀಯ ಅವಕಾಶವಾದಿತನ, ಪ್ರಸಿದ್ಧಿಯೇ ಯಶಸ್ಸು ಎಂಬ ಭ್ರಮೆ ಮಗದೊಂದು ಕಡೆ ಸೇರಿ ಈ ರೀತಿಯ ವಿವಾದಗಳು ಸೃಷ್ಠಿಯಾಗಿದೆ……

ಪಂಥಗಳಾಚೆಯ ಜಗತ್ತನ್ನು ನೋಡದೆ ಸಂಕುಚಿತ ಮನೋಭಾವದಿಂದ ತಮಗೂ, ತಾವು ನಂಬಿದ ಸಾಮಾನ್ಯ ಜನರಿಗೂ ವಂಚಿಸಿದ ಎಡ ಬಲ ಪಂಥೀಯರು……..

ಹೆಚ್ಚು ಹಿಂದೆ ಏನೂ ಬೇಡ. 1983 ರ ರಾಮಕೃಷ್ಣ ಹೆಗಡೆ ಸರ್ಕಾರದಿಂದ ಈಗಿನ ಸಿದ್ದರಾಮಯ್ಯ ಸರ್ಕಾರದ ವರೆಗಿನ ಅವಧಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು, ವಿವಿಧ ಆಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರು, ಇತರ ಅನೇಕ ರಾಜ್ಯ ಸರ್ಕಾರಗಳ ಪ್ರಶಸ್ತಿಗಳು, ಪ್ರಾಧಿಕಾರಗಳು ಮುಂತಾದ ಸರ್ಕಾರ ನೇಮಿಸಿರುವ ವ್ಯಕ್ತಿಗಳು, ದಸರಾ ಉದ್ಘಾಟನೆ ಮತ್ತು ಕವಿಗೋಷ್ಠಿಗಳ ಪಟ್ಟಿಯನ್ನೊಮ್ಮೆ ನೋಡಿ. ಎಲ್ಲವೂ ಅರ್ಥವಾಗುತ್ತದೆ. ನೇರವಾಗಿ ಪಂಥಗಳ ಪರಿಧಿಯೊಳಗೆ ಬರೆಯುವವರ ಆತ್ಮವಂಚನೆ……

ಅಂದಾಜು ಶೇಕಡಾ 30% ಮಾತ್ರ ನಿಜವಾದ ಪ್ರತಿಭಾವಂತರಿಗೆ ಸಿಕ್ಕಿದೆ. ಉಳಿದದ್ದು ಬಹುತೇಕ ಈ ಪಂಥೀಯ ಮನೋಭಾವದ ಬರಹಗಾರರು ಮತ್ತು ಹೋರಾಟಗಾರರ ಲಾಬಿಗೆ ದೊರೆತಿದೆ…..

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಸಂಘ ಪರಿವಾರದ ಹಿಂದುತ್ವದ ಉಗ್ರ ಪ್ರತಿಪಾದಕರು ತಮ್ಮ ಬರಹಗಳ ಛಾಯಾ ಪ್ರತಿಗಳು, ಹೋರಾಟಗಳ ಛಾಯಾ ಚಿತ್ರಗಳು, ವಿರೋಧಿ ಪಂಥದ ಜನರನ್ನು ಬಾಯಿಗೆ ಬಂದಂತೆ ಟೀಕಿಸಿರುವ ಬರಹಗಳ ಫೈಲ್ ತೆಗೆದುಕೊಂಡು ಅಧಿಕಾರಸ್ಥರ ಮನೆ ಬಾಗಿಲಲ್ಲಿ ನಿಲ್ಲುತ್ತಾರೆ. ಎಷ್ಟು ಸಾಧ್ಯವೋ ಅಷ್ಟು ಕೆಳಮಟ್ಟಕ್ಕೆ ಇಳಿದು ಪ್ರಶಸ್ತಿಗಾಗಿ ಅಂಗಲಾಚುತ್ತಾರೆ. ದೇಶಪ್ರೇಮ, ಹಿಂದುತ್ವದ ಬಗ್ಗೆ ಪುಂಖಾನುಪುಂಖವಾಗಿ ಬರೆಯುವ ಇವರು ಅಧಿಕಾರ ಪ್ರಶಸ್ತಿಗಳ ಮುಂದೆ ಹೀನಾಯವಾಗಿ ಶರಣಾಗುತ್ತಾರೆ. ಯಾವ ಮೌಲ್ಯಗಳು ಆಗ ಇವರಿಗೆ ಮುಖ್ಯವಾಗುವುದಿಲ್ಲ…..

ಅದೇ ರೀತಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿದಾಗ ಎಡಪಂಥೀಯ ಮನೋಭಾವದ ಮತ್ತು ಬುದ್ದಿಜೀವಿಗಳ ವಲಯದ ಬರಹಗಾರ ವ್ಯಕ್ತಿಗಳ ವರ್ತನೆ ಮತ್ತೆ ಇದೇ ರೀತಿ ಇರುತ್ತದೆ. ಬಿಜೆಪಿ ಮತ್ತು ಹಿಂದುತ್ವ ವಿರೋಧಿ ಚಟುವಟಿಕೆಗಳು ಪ್ರಾಮುಖ್ಯತೆ ಪಡೆದು ಎಲ್ಲಾ ಪ್ರಶಸ್ತಿಗಳು ಇವರ ಪಾಲಿಗೆ ಸೇರುತ್ತದೆ. ಆ ಪಂಥದ ಪ್ರಭಾವಶಾಲಿಗಳು ಯಾರನ್ನು ಸೇರಿಸಬೇಕು, ಯಾರನ್ನು ಸೇರಿಸಬಾರದು ಎಂಬುದನ್ನು ಈ ಪಂಥೀಯರೇ ನಿರ್ಧರಿಸುತ್ತಾರೆ…..

ಇನ್ನೂ ಕೆಲವರಿದ್ದಾರೆ. ನಾವು ಯಾವ ಪಂಥಕ್ಕೂ ಸೇರುವುದಿಲ್ಲ. ನಮ್ಮದು ಸಮನ್ವಯದ ಹಾದಿ ಎಂದು ಹೇಳಿಕೊಳ್ಳುತ್ತಾ, ಹಾಗೆಯೇ ಎಚ್ಚರಿಕೆಯಿಂದ ಬರೆಯುತ್ತಾ ಎರಡೂ ಕಡೆಯ ಅವಕಾಶಗಳನ್ನು ಪಡೆಯಲು ಹವಣಿಸುತ್ತಾರೆ. ಒಂದು ವೇಳೆ ಅಧಿಕಾರ ಸಿಕ್ಕರೆ ಅದನ್ನು ಕೊಟ್ಟ ಪಂಥವನ್ನು ಬಾಯಿ ತುಂಬಾ ಹೊಗಳುತ್ತಾರೆ. ಆ ಸರ್ಕಾರದ ಎಲ್ಲಾ ಕಾರ್ಯಕ್ರಮಗಳು ಅತ್ಯುತ್ತಮ ಇವರ ಪಾಲಿಗೆ. ಸಮರ್ಥನೆ ಎಲ್ಲಾ ಮಿತಿಗಳನ್ನು ಮೀರುತ್ತದೆ……

ಮನುಷ್ಯ ಒಳ್ಳೆಯವನು ಎಂದು ತೋರಿಸುವುದಲ್ಲ, ಆತ ಆಂತರ್ಯದಲ್ಲಿ ಒಳ್ಳೆಯವನಾಗಿರಬೇಕು.
ಒಳ್ಳೆಯತನ ಬರಹಗಳಲ್ಲಿ, ಹೋರಾಟದಲ್ಲಿ, ಪಂಥ ಸಿದ್ದಾಂತಗಳಲ್ಲಿ ಇರುವುದಿಲ್ಲ. ಅದು ನಮ್ಮ ವ್ಯಕ್ತಿತ್ವದಲ್ಲಿ ಅಡಕವಾಗಿರಬೇಕು. ವ್ಯಕ್ತಿತ್ವ ರೂಪಗೊಳ್ಳುವುದೇ ಆತನಲ್ಲಿರುವ ಮಾನವೀಯ ಮೌಲ್ಯಗಳ ಮುಖಾಂತರ…..

ಇದಕ್ಕೆ ಒಂದು ಉದಾಹರಣೆ ಹೀಗಿದೆ. ನೀವು ಒಂದು ದೊಡ್ಡ ಲಾರಿಯನ್ನು ಸುಲಭವಾಗಿ ಚಲಾಯಿಸುವುದು ಕಲಿತರೆ ನಂತರ ಬಸ್ಸು ಕಾರು ಟೆಂಪೋ ಟ್ರಾವೆಲರ್ ಮುಂತಾದ ವಾಹನಗಳನ್ನು ಚಲಾಯಿಸುವುದು ಕಷ್ಟವಾಗುವುದಿಲ್ಲ. ಕೇವಲ ಕಾರು ಚಲಾಯಿಸುವುದು ಮಾತ್ರ ಕಲಿತಿದ್ದರೆ ಇತರೆ ವಾಹನ ಓಡಿಸುವುದು ತುಂಬಾ ಕಷ್ಟ. ಹಾಗೆಯೇ ಮಾನವೀಯ ಮೌಲ್ಯಗಳೆಂಬ ಪ್ರೀತಿ ಕರುಣೆ ತ್ಯಾಗ ಸಹನೆ ಸಹಕಾರ ಕ್ಷಮಾಗುಣ ಮುಂತಾದ ಗುಣಗಳು ನಿಮ್ಮ ಅರಿವಿನಲ್ಲಿ ಅಡಕವಾಗಿದ್ದರೆ ನೀವು ನಾಗರಿಕ ಸಮಾಜದ ಒಳ್ಳೆಯ ಸದಸ್ಯರಾಗಬಹುದು. ಕೇವಲ ಎಡ ಅಥವಾ ಬಲಪಂಥದ ಉಗ್ರ ಪ್ರತಿಪಾದಕರಾಗಿದ್ದರೆ ಮಾನವೀಯ ಮೌಲ್ಯಗಳ ವಿರುದ್ಧ ಚಿಂತನೆಗಳಾದ ದ್ವೇಷ ಅಸೂಯೆ ಹಿಂಸೆ ಆಕ್ರಮಣವೇ ಮನಸ್ಸಿನಲ್ಲಿ ತುಂಬಿಕೊಂಡು ತಮ್ಮ ಪಂಥಗಳ ಶ್ರೇಷ್ಠತೆಯ ವ್ಯಸನಕ್ಕೆ ಬಿದ್ದು ಇನ್ನೊಂದನ್ನು ದ್ವೇಷಿಸುತ್ತಾ, ಜೀವನದ ಅಪೂರ್ವ ಅನುಭವದಿಂದ ವಂಚಿತರಾಗಿ, ಸಂಕುಚಿತ ಮನೋಭಾವದವರಾಗಿಯೇ ಉಳಿಯುತ್ತೀರಿ……

ಎಡ ಬಲ ಪಂಥೀಯರ ಕ್ರೌರ್ಯ, ಹಿಂಸಾ ಪ್ರವೃತ್ತಿ, ದ್ರೋಹ, ಹಠಮಾರಿ ಧೋರಣೆ ಸ್ವತಃ ಅವರಿಗೂ ಅಪಾಯವಲ್ಲದೆ, ದೇಶ ಮತ್ತು ಮುಖ್ಯವಾಗಿ ಇಲ್ಲಿನ ಶೋಷಿತ ವರ್ಗಕ್ಕೆ ಇದು ಒಂದು ಶಾಪವಾಗಿದೆ. ಮಾನವೀಯ ಮೌಲ್ಯಗಳ ಅಗಾಧತೆಯ ಮುಂದೆ ಈ ಎಡ ಬಲ ಪಂಥಗಳ ಸೈದ್ಧಾಂತಿಕತೆ ಎಂಬುದು ಸಣ್ಣ ಚಿಂತನೆಗಳು ಮಾತ್ರ…

ಇವರಿಬ್ಬರ ದ್ವೇಷ ಅಸೂಯೆಗಳು ಯಾವ ಮಟ್ಟ ಮುಟ್ಟಿದೆ ಎಂದರೆ ಅವರು ಅಧಿಕಾರಕ್ಕೆ ಬಂದರೆ ಆಡಳಿತ ವ್ಯವಸ್ಥೆಯಷ್ಟೇ ಅಲ್ಲ ಇತಿಹಾಸವನ್ನೇ ಬದಲಾಯಿಸುತ್ತಾರೆ, ಇವರು ಅಧಿಕಾರಕ್ಕೆ ಬಂದರೆ ಅವರ ಎಲ್ಲಾ ಯೋಜನೆಗಳಿಗೆ ವಿರುದ್ಧ ಯೋಜನೆ ರೂಪಿಸುತ್ತಾರೆ. ಎರಡೂ ಕಡೆಯ ಬಲಾಢ್ಯರು ಹೇಗೋ ಉಳಿಯುತ್ತಾರೆ. ನಿಜವಾದ ಹೊಡೆತ ಬೀಳುವುದು ಎರಡೂ ಸಂದರ್ಭದಲ್ಲಿ ದುರ್ಬಲರಿಗೆ ಮತ್ತು ಸಾಮಾನ್ಯರಿಗೆ ಮಾತ್ರ….

ಪಂಥಗಳಾಚೆಯ ಮನಸ್ಸುಗಳನ್ನು ಹುಡುಕುವ ಪ್ರಯತ್ನವೇ ಮನಸ್ಸುಗಳ ಅಂತರಂಗದ ಚಳವಳಿ. ಈ ಎರಡೂ ಪಂಥಗಳವರಿಗೆ ಸಮಸ್ಯೆಗಳೇ ಅವರ ಜೀವನಾಧಾರ. ಒಂದು ಒಳ್ಳೆಯ ವಾತಾವರಣ ಸೃಷ್ಟಿಸಿ, ಕೊಡು – ತೆಗೆದುಕೊಳ್ಳುವಿಕೆಯ ಸಹಕಾರಿ ತತ್ವದ ಆಧಾರದ ಮೇಲೆ ಸಮಸ್ಯೆ ಬಗೆಹರಿಸಲು ಇವರು ಬಿಡುವುದಿಲ್ಲ….

ಜನಸಾಮಾನ್ಯರೇ,
ದಯವಿಟ್ಟು ಈ ದ್ವೇಷ ಅಸೂಯೆಗಳ ಗೋಡೆ ಒಡೆದು ಮಾನವೀಯ ಮೌಲ್ಯಗಳ ಪುನರುಜ್ಜೀವನ ಮಾಡೋಣ. ಸಮಸ್ಯೆಗಳನ್ನು ಜೀವಂತವಾಗಿ ಇಡುವುದಕ್ಕಿಂತ ಯಾವುದೋ ಒಂದು ಹಂತದಲ್ಲಿ ಅದನ್ನು ಸೌಹಾರ್ದಯುತವಾಗಿ ಪರಿಹರಿಸಲು ಪ್ರಯತ್ನಿಸೋಣ. ಬದುಕೇನು ಶಾಶ್ವತವಲ್ಲ….

ಹೆಚ್ಚೆಂದರೆ ಶೇಕಡಾ 20 ರಿಂದ 30 ರಷ್ಟು ಜನ ಮಾತ್ರ ಈ ಪಂಥಗಳ ಬಲೆಯೊಳಗೆ ಸಿಲುಕಿದ್ದಾರೆ. ಉಳಿದ ಜನಸಾಮಾನ್ಯರಿಗೆ ಜೀವನಾವಶ್ಯಕವೇ ಮುಖ್ಯ. ಆ ಜನಸಾಮಾನ್ಯರು ಸಾಮೂಹಿಕವಾಗಿ ಒಂದೇ ರೀತಿಯ ಮನೋಭಾವದ ಸಮೂಹ ಪ್ರಜ್ಞೆಗೆ ಮರಳಿದರೆ ಈ ಪಂಥಗಳವರ ಆಟ ನಡೆಯುವುದಿಲ್ಲ. ಅದು ಕಷ್ಟ ಆದರೆ ಅಸಾಧ್ಯವಲ್ಲ……..
ಲೇಖನ:ವಿವೇಕಾನಂದ. ಎಚ್. ಕೆ. 9844013068……..

- Advertisement -  - Advertisement - 
Share This Article
error: Content is protected !!
";