ಸಿಎಂ ಆಪ್ತ ಸಚಿವ ಹೆಚ್.ಸಿ.ಮಹದೇವಪ್ಪರನ್ನು ದಿಢೀರ್ ಭೇಟಿ ಮಾಡಿದ ಸಚಿವ ಸತೀಶ್ ಜಾರಕಿಹೊಳಿ

News Desk

ಚಂದ್ರವಳ್ಳಿ ನ್ಯೂಸ್, ಮೈಸೂರು:
ವಾಲ್ಮೀಕಿ-ಮುಡಾ ಹಗರಣ ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿರುವ ಬೆನ್ನಲ್ಲೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಮೈಸೂರಿಗೆ ದಿಢೀರ್ ಆಗಮಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಅವರನ್ನು ಭೇಟಿ ಗೌಪ್ಯವಾಗಿ ಚರ್ಚಿಸಿರುವುದು ರಾಜಕೀಯದಲ್ಲಿ ತಲ್ಲಣ ಮೂಡಿಸಿದೆ.

 ಇತ್ತೀಚಿಗಷ್ಟೇ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೇಂದ್ರ ಗೃಹ ಸಚಿವ ಜಿ.ಪರಮೇಶ್ವರ್ ಅವರನ್ನು ಸತೀಶ್ ಜಾರಕಿಹೊಳಿ ಭೇಟಿ ಮಾಡಿ ಚರ್ಚಿಸಿದ್ದರು.

ದೆಹಲಿ ಭೇಟಿ ನಂತರ ರಾಜ್ಯ ನಾಯಕರುಗಳನ್ನು ಭೇಟಿ ಮಾಡುತ್ತಿದ್ದು ಮಂಗಳವಾರ ಮೈಸೂರಿನಲ್ಲಿ ಮಹದೇವಪ್ಪ, ಶಾಸಕ ಹರೀಶ್ ಗೌಡ ಸೇರಿ ಹಲವರನ್ನು ಸತೀಶ್ ಜಾರಕಿಹೊಳಿ ಭೇಟಿ ಮಾಡಿರುವುದು ಹುಬ್ಬೇರುವಂತೆ ಮಾಡಿದೆ.

ಸತೀಶ್ ಜಾರಕಿಹೊಳಿ ಮಾಧ್ಯಮದವರೊಂದಿಗೆ ಮಾತನಾಡಿ, ಸಿಎಂ ಆಗಲು ಯಾರಿಗೆ ತಾನೆ ಇಷ್ಟ ಇರಲ್ಲ. ನನ್ನ ಮಗಳು ಆಸೆ ಪಡುವುದರಲ್ಲಿ ತಪ್ಪೇನಿದೆ. ಕಳೆದ ಐದು ವರ್ಷದಿಂದ ಎಲ್ಲರೂ ಸಿಎಂ ಆಗಬೇಕು ಅಂತಿದ್ದಾರೆ. ಸದ್ಯಕ್ಕೆ ಸಿಎಂ ಇದ್ದಾರೆ, ಯಾವುದೇ ಬದಲಾವಣೆ ಇಲ್ಲ ಎಂದು ಸಚಿವರು ಸ್ಪಷ್ಟ ಪಡಿಸಿದರು.

ಇಂದು ಸಚಿವ ಮಹದೇವಪ್ಪ ಅವರನ್ನ ಭೇಟಿ ಮಾಡುತ್ತೇನೆ. ಮೈಸೂರು ಭಾಗದ ಶಾಸಕರನ್ನು ಭೇಟಿ ಮಾಡುತ್ತೇನೆ. ನಿನ್ನೆ ಹಲವು ಸಚಿವರು ಮತ್ತು ಶಾಸಕರು  ಭೇಟಿ ಮಾಡಿದ್ದಾರೆ. ನಾನು ಸಚಿವನಾಗಿರುವ ಕಾರಣಕ್ಕೆ ಭೇಟಿ ಆಗುತ್ತಾರೆ. ಹಲವರು ನನ್ನನ್ನ ಭೇಟಿ ಮಾಡಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಸಿದ್ದರಾಮಯ್ಯನವರೇ ನಮ್ಮ ಮುಖ್ಯಮಂತ್ರಿ. 5 ವರ್ಷ ಇರುತ್ತಾರೋ 3 ವರ್ಷ ಇರುತ್ತಾರೋ ಅದು ನನಗೆ ಗೊತ್ತಿಲ್ಲ. ಅದನ್ನ ನೀವು ಹೈಕಮಾಂಡ್ ಗೆ ಕೇಳಿ. ಆದರೆ ಸಿದ್ದರಾಮಯ್ಯ ಅವರೇ ನಮ್ಮ ಸಿಎಂ ಅದರಲ್ಲಿ ಬೇರೆ ಯಾವುದೇ ಪ್ರಶ್ನೆ, ಬದಲಾವಣೆ ಪ್ರಶ್ನೆಯೇ ಉದ್ಭವಿಸಿಲ್ಲ. ಅಂತ ಚರ್ಚೆಗಳೂ ನಡೆದಿಲ್ಲ.

ಪಕ್ಷಗಳು, ಮಾಧ್ಯಮಗಳು ಚರ್ಚೆ ಮಾಡುತ್ತಿವೆ. ವಿಪಕ್ಷ ನಾಯಕರು ಪ್ರೀತಿಯಿಂದ ನಮ್ಮ ಹೆಸರು ಹೇಳುತಿದ್ದಾರೆ. ಆದರೆ ನಮ್ಮಲ್ಲಿ ಅಂತ ಬೆಳವಣಿಗೆ ನಡೆದಿಲ್ಲ. ನಾನು ಈ ವಿಚಾರವನ್ನ ಹಲವು ಬಾರಿ ಸ್ಪಷ್ಟ ಪಡಿಸಿದ್ದೇನೆ. ಅವರವರ ಬೆಂಬಲಿಗರು ಅವರ ನಾಯಕರಿಗೆ ಮುಂದಿನ ಸಿಎಂ ಎಂದು ಜೈಕಾರ ಹಾಕುವುದು ಸರ್ವ ಸಾಮಾನ್ಯ. ಅದನ್ನೇ ಇಟ್ಟುಕೊಂಡು ಏನೋ ಬದಲಾವಣೆ ಆಗುತ್ತದೆ ಎಂದು ಹೇಳುವುದು ಸರಿಯಲ್ಲ ಎಂದು ಸಚಿವರು ತಿಳಿಸಿದರು.

ಸಚಿವ ಡಿಕೆ ಶಿವಕುಮಾರ್ ವಿಚಾರ, ಮತ್ತೊಬ್ಬರ ವಿಚಾರ ನನಗೆ ಹೇಳಲು ಆಗುವುದಿಲ್ಲ. ರಾಜಕಾರಣಿಗಳು ಸೇರಿದಾಗ ರಾಜಕಾರಣದ ಬಗ್ಗೆ ಚರ್ಚೆ ಮಾಡುತ್ತೇವೆ. ಅದರಲ್ಲಿ ವಿಶೇಷವೇನೂ ಇಲ್ಲ. ಇವತ್ತಿನ ಮೈಸೂರು ಭೇಟಿಯಲ್ಲಿ ಮಹತ್ತರ ವಿಚಾರವಿಲ್ಲ. ಇಡೀ ದಿನ ಮೈಸೂರಲ್ಲಿ ಓಡಾಡಿಕೊಂಡು ದಸರಾ ನೋಡುತ್ತೇನೆ ಅಷ್ಟೇ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟ ಪಡಿಸಿದರು.

- Advertisement -  - Advertisement - 
Share This Article
error: Content is protected !!
";