ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಿತ್ತೂರು ಉತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ವಿಜಯ ಜ್ಯೋತಿ ಯಾತ್ರೆಯು ಬುಧವಾರ ಚಿತ್ರದುರ್ಗ ನಗರ ತಲುಪಿತು.
ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ಸಮೀಪ ಕಿತ್ತೂರು ಚೆನ್ನಾಜಿಯವರ ವಿಜಯ ಜ್ಯೋತಿ ಯಾತ್ರೆಯನ್ನು ಹರಿಹರ ವಚನಾನಂದ ಸ್ವಾಮೀಜಿಗಳು, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ತಹಶೀಲ್ದಾರ್ ಡಾ.ನಾಗವೇಣಿ ಸ್ವಾಗತಿಸಿ, ಪೂಜೆ ಸಲ್ಲಿಸಿದರು.
ನಗರದ ಬಿ.ಡಿ.ರಸ್ತೆಯ ಮೂಲಕ ಕಲಾ ತಂಡಗಳೊಂದಿಗೆ ಸಾಗಿದ ವಿಜಯ ಜ್ಯೋತಿ ಯಾತ್ರೆಗೆ ತರಾಸು ರಂಗಮಂದಿರದ ಮುಂಭಾಗದಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಸ್ವಾಗತಿಸಿ, ರಥದಲ್ಲಿದ್ದ ರಾಣಿ ಚನ್ನಮ್ಮ ಪುತ್ಥಳಿಗೆ ಹಾರ ಅರ್ಪಿಸಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ನಂತರ ಯಾತ್ರೆಯು ನಗರದ ಪ್ರವಾಸಿ ಮಂದಿರ, ಗಾಂಧಿ ವೃತ್ತದ ಮೂಲಕ ಮುರುಘಾ ರಾಜೇಂದ್ರ ಮಠದ ವರೆಗೂ ಸಂಚರಿಸಿತು.
ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿ ಅ.23 ರಿಂದ 25 ರವರೆಗೆ ನಡೆಯಲಿರುವ ಕಿತ್ತೂರು ಉತ್ಸವ ಪ್ರಯುಕ್ತ ರಾಜ್ಯದಾದ್ಯಂತ ಸಂಚರಿಸುವ ಈ ವಿಜಯ ಜ್ಯೋತಿ ಯಾತ್ರೆ ತುಮಕೂರಿನಿಂದ ಚಿತ್ರದುರ್ಗ ಜಿಲ್ಲೆಗೆ ತಲುಪಿದ್ದು, ಜಿಲ್ಲೆಯಿಂದ ದಾವಣಗೆರೆ ಜಿಲ್ಲೆಗೆ ಬಿಳ್ಕೊಡಲಾಯಿತು.
ಈ ಸಂದರ್ಭದಲ್ಲಿ ವಚನಾನಂದ ಸ್ವಾಮೀಜಿ, ಮಡಿವಾಳ ಮಾಚಿದೇವ ಸ್ವಾಮೀಜಿ, ಬಸವ ಕುಮಾರಸ್ವಾಮೀಜಿ, ಸೇರಿದಂತೆ ವಿವಿಧ ಸ್ವಾಮೀಜಿಗಳು, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ತಹಶೀಲ್ದಾರ್ ಡಾ.ನಾಗವೇಣಿ,
ಸಮಾಜದ ಶಿವಪ್ರಕಾಶ್, ಪರಮೇಶ್ವರಪ್ಪ, ಗುತ್ತಿನಾಡು ಪ್ರಕಾಶ್, ಮಂಜುನಾಥ್, ಉಮಾ ರಮೇಶ್, ಶೈಲಾ ಕಲ್ಲೇಶ್, ಸವಿತಾ, ಮೋಕ್ಷಾ ರುದ್ರಸ್ವಾಮಿ ಹಾಗೂ ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಇದ್ದರು.