ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಹನಿಟ್ರ್ಯಾಪ್ ಮಾಡಿಸಿದ್ದ ಮುನಿರತ್ನ-ಸಂತ್ರಸ್ತೆ ಮಹಿಳೆ ಆರೋಪ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಸಚಿವ, ಹಾಲಿ ಬಿಜೆಪಿ ಶಾಸಕ ಮುನಿರತ್ನ ಅವರು ಕರ್ನಾಟಕ ರಾಜ್ಯದ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಹನಿಟ್ರ್ಯಾಪ್ ಮಾಡಿದ್ದಾರೆ, ನನಗೆ ಜೀವ ಭದ್ರತೆ ನೀಡುವುದಾದರೆ ಆ ಖಾಸಗಿ ವಿಡಿಯೋಗಳನ್ನು ಬಿಡುಗಡೆ ಮಾಡುವುದಾಗಿ ಸಂತ್ರಸ್ತ ಮಹಿಳೆ ತಿಳಿಸಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಸಂತ್ರಸ್ತ ಮಹಿಳೆ ಮತ್ತಷ್ಟು ಗಂಭೀರ ಸ್ವರೂಪದ ಮಾಹಿತಿಯನ್ನು ಮಾಧ್ಯಮಗಳಿಗೆ  ನೀಡಿದ್ದಾರೆ.

ಸರ್ಕಾರ ನನಗೆ ಸೂಕ್ತ ಭದ್ರತೆ ಒದಗಿಸಿದರೆ ನಾನು ಆ ಮಾಜಿ ಮುಖ್ಯಮಂತ್ರಿಗಳ ಹೆಸರನ್ನು ಹಾಗೂ ಸಂಬಂಧಿತ ವಿಡಿಯೋವನ್ನೂ ಹಂಚಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ಇಬ್ಬರು ಮಾಜಿ ಸಿಎಂಗಳಿಗೆ ಹನಿಟ್ರ್ಯಾಪ್ ಮಾಡಿ, ಟಾರ್ಚರ್ ನೀಡಿ ಮುನಿರತ್ನ ಅವರು ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಮುನಿರತ್ನ ಬಳಿ ಯಾವುದೇ ಮಾಧ್ಯಮಗಳ ಬಳಿಯೂ ಇಲ್ಲದಂತಹ ಅತ್ಯಾಧುನಿಕ ಕ್ಯಾಮರಾಗಳಿವೆ ಎಂದು ಸಂತ್ರಸ್ತ ಮಹಿಳೆ ದೂರಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಮುನಿರತ್ನ ನಮ್ಮಂಥವರ ಅಸಹಾಯಕತೆಯ ಲಾಭ ಪಡೆದು ಮಾಜಿ ಸಿಎಂ, ಸಚಿವರು, ಶಾಸಕರು, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಹನಿಟ್ರ್ಯಾಪ್ ಮಾಡಿಸಿದ್ದಾರೆ ಎಂದು ಆರೋಪಿಸಿದರು.

ಇದೇ ಸಂದರ್ಭದಲ್ಲಿ ನನ್ನ ಹಾಗೂ ಮುನಿರತ್ನ ಅವರ ಬ್ರೈನ್ ಮ್ಯಾಪಿಂಗ್ ಮಾಡಿಸಲಿ ಎಂದು ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹಾಗೂ ಆರ್.ಅಶೋಕ್ ಅವರಿಗೆ ಸಂತ್ರಸ್ತ ಮಹಿಳೆ ಸವಾಲು ಹಾಕಿದರು.

ಮುನಿರತ್ನ ಅವರು ಹನಿಟ್ರ್ಯಾಪ್ ಮಾಡುವುದಕ್ಕೆ ಬೇರೆ ಬೇರೆ ಐದಾರು ಮಹಿಳೆಯರನ್ನು ಬಳಸಿಕೊಂಡಿದ್ದು ಇದರಲ್ಲಿ ಯಾವುದೇ ಸಿನಿಮಾ ನಟಿಯರಿಲ್ಲ.

ಹನಿಟ್ರ್ಯಾಪ್‌ಗೆ ಬಳಸಿಕೊಳ್ಳಲಾದ ಐದಾರು ಸಂತ್ರಸ್ತ ಮಹಿಳೆಯರು ಹೆದರಿಕೊಂಡು ಮೌನವಾಗಿದ್ದಾರೆ. ಅವರೂ ಕೂಡ ಬಂದು ದೂರು ನೀಡಿದರೆ ಸತ್ಯ ಹೊರಬರಲಿದೆ ಎಂದು ಸಂತ್ರಸ್ತೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಮನವಿ ಮಾಡಿ ಕೇವಲ 10 ನಿಮಿಷ ನಿಮ್ಮ ಅಪಾಯಿಂಟ್‌ಮೆಂಟ್ ಬೇಕಿದೆ, ನಿಮ್ಮೊಂದಿಗೆ ಮಾತಾಡಬೇಕು ಎಂದು ಸಂತ್ರಸ್ತೆ ಮನವಿ ಮಾಡಿದರು.

 

- Advertisement -  - Advertisement -  - Advertisement - 
Share This Article
error: Content is protected !!
";