ಚಂದ್ರವಳ್ಳಿ ನ್ಯೂಸ್, ಹೊಸದುರ್ಗ :
ತಾಲೂಕಿನ ತರಳಬಾಳು ಶಾಖಾಮಠದ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಸಂದೇಶಗಳನ್ನು ಬಿತ್ತರಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತಾಲೂಕಿನ ಸಾಣೇಹಳ್ಳಿಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯ ಬರ್ಬರ ಹತ್ಯೆ, ಗುಟ್ಟು ಬಿಡದ ಸ್ವಾಮೀಜಿ, ಪೊಲೀಸರು ಹಾಗೂ ಶಾಸಕ ಬಿ.ಜಿ. ಗೋವಿಂದಪ್ಪ ಈ ಘಟನೆಯಲ್ಲಿ ಸ್ವಾಮೀಜಿ ಹಾಗೂ ಶಿಕ್ಷಕರ ಕೈವಾಡವಿದೆ.
ಸೂಕ್ತ ತನಿಖೆಯಾಗಬೇಕು ತಪ್ಪಿದ್ದಲ್ಲಿ ಮಠಕ್ಕೆ ಬೀಗ ಹಾಕಲಾಗುವುದು. ಈ ರೀತಿಯ ಸಂದೇಶಗಳು ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಘಟನೆ ವಿವರ: ಅಕ್ಟೋಬರ್ ೪ ರಂದು ಸಂಜೆ ೪.೩೦ ಕ್ಕೆ ತಾಲೂಕಿನ ಪಾಳೇದಹಳ್ಳಿ, ಶೆಟ್ಟಿಹಳ್ಳಿ ಗ್ರಾಮದ ನಡುವೆ ಯಳಗಮ್ಮ ದೇವಾಲಯದ ಸಮೀಪ ಸಾಣೇಹಳ್ಳಿ ಗುರುಪಾದೇಶ್ವರ ಪ್ರೌಢಶಾಲೆಯಲ್ಲಿ ಹತ್ತನೆ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ, ವಿದ್ಯಾರ್ಥಿ ಪವನ್ ಬೈಕ್ ನಲ್ಲಿ ಬಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದ. ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ವಿಚಾರವಾಗಿ ಕೆಲವರು ಮಠಕ್ಕೆ ಹಾಗೂ ಸಮಾಜದ ಬಗ್ಗೆ ವ್ಯರ್ಥ ಆರೋಪ ಮಾಡುತ್ತಿದ್ದಾರೆ. ಸುಳ್ಳು ಸುದ್ದಿ ಪ್ರಚಾರ ಮಾಡಿ, ಸಮುದಾಯದ ನಡುವೆ ದ್ವೇಷ ಮೂಡುವಂತೆ ಮಾಡುತ್ತಿದ್ದಾರೆ.
ಅವಹೇಳನಕಾರಿ ಸಂದೇಶಗಳನ್ನು ಪ್ರಚಾರ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.