ದೇವರಳ್ಳದ ಜಾಡಿನಿಂದ ಜೋಗಿ ಗದ್ದಿಗೆಗೆ ಹೆಜ್ಜೆ ತುಳಿಯುವುದಿಲ್ಲ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೆಲದ ಮಾತು-52
 ಬಿರುಸಾದ ನಡಿಗೆಯಲ್ಲಿ ಎದೆ ಎತ್ತರಕ್ಕಿದ್ದ ಬಾದೆ ಹುಲ್ಲು ಸಹ, ಗಾಳಿಯ ಜೊತೆ ಸೇರಿ ದಾರಿಗೆ ಸರಿಯುತ್ತಿತ್ತು. ಮುಂದಿನ ಹೆಜ್ಜೆಗಳಲ್ಲಿದ್ದ ಶ್ರೀನಿವಾಸ್ ಅದೇಕೋ? ಥಟ್ಟನೆ ನಿಂತ. ಎಲ್ಲರೂ ನಿಶ್ಯಬ್ದ! ಕೈ ಸನ್ನೆಯಿಂದಲೇ, ಯಾರೂ ಸದ್ದು ಮಾಡಬೇಡಿ ಅಂತ ತಿಳಿಸುತ್ತಲೇ, ಸ್ವಲ್ಪ ಹಿಂದೆ ಸರಿದು ನೋಡುವವರಿಗೂ ಅವಕಾಶ ಕೊಟ್ಟ. ಒಂದಡಿ ಅಗಲದ ಕಾಲುದಾರಿಯಲ್ಲಿ, ಬೆಳೆದು ನಿಂತಿರುವ ಬಾದೆಯ ಜೊತೆ ಜಾಡು ಸ್ವಲ್ಪ ಅಸ್ಪಷ್ಟವೇ. ದಪ್ಪನೆಯ ತೊಲೆಯಂತಹ, ಹಾವೊಂದು ದಾರಿಗೆ ಅಡ್ಡವಾಗಿ ಮಲಗಿದೆ.

ಉರುಮಂಜಿನ ಬಣ್ಣದಲ್ಲಿರುವ ಅದು, ಅಷ್ಟು ದಪ್ಪಗಿದ್ದರೂ ಹೆಬ್ಬಾವಂತೂ ಅಲ್ಲ, ಮಂಡ್ಲದ ಹಾವುಗಳಿಗೂ ಹೋಲಿಕೆಯಾಗುತ್ತಿಲ್ಲ, ಉಸಿರಾಟಕ್ಕೆ ದೇಹ ಸಂಕುಚಿಸಿ ಹಿಗ್ಗುತ್ತಿದೆ. ತಲೆ ಯಾವ ಕಡೆ, ಬಾಲ ಯಾವ ಕಡೆ ಅನ್ನುವುದು ಗೊತ್ತಾಗುತ್ತಿಲ್ಲ, ಆ ದಪ್ಪ ಇದೆ! ಅಂದ್ರೆ ಎಷ್ಟು ಉದ್ದ ಇರಬಹುದು? ನಮ್ಮೆಲ್ಲರಿಗೂ  ಆ ಜಾಡು ಬಿಟ್ಟರೆ, ಪಕ್ಕದ ಸೀಗೆ, ಪರಿಗೆ, ಪೆಳೆಗಳಲ್ಲಂತೂ ತೂರಲಾಗುವುದಿಲ್ಲ.

ಸೀನುನೇ ಹಿಂದಕ್ಕೆ ಸರಿದು ಎಲ್ಲರೊಂದಿಗೆ ನಿರ್ಧರಿಸಿದ. ಅದಕ್ಕೆ ತಿವುದ್ರೆ,ಅದು ಯಾವ ಕಡೆಗಾದರೂ ಬರಬಹುದು, ಸುತ್ತ ಓಡುವುದಕ್ಕೆ ಎಲ್ಲೂ ಜಾಗ ಇಲ್ಲ, ಇರುವುದು ಒಂದೇ ದಾರಿ, ಅದರ ಮೇಲಿಂದ ಎತ್ತರಕ್ಕೆ ದಾಟಿ, ಐದಡಿ ಮುಂದಕ್ಕೆ ಜಿಗಿಯಬೇಕು, ಸದ್ದು ಮಾಡಿದ್ರೆ ತೊಂದ್ರೆನೇ. ಮಾತಾಯ್ತು, ಮೊದಲ ಪ್ರಯತ್ನ ಶ್ರೀನಿವಾಸನೇ, ನಂತರ ಒಬ್ಬೊಬ್ಬರೇ ಹಿಂದಕ್ಕೆ ಸರಿದು ಎತ್ತರದಿಂದ ಮುಂದಕ್ಕೆ ಜಿಗಿದಿದ್ದಾಯಿತು, ಹಾವಂತೂ ಉಸಿರಾಡುತ್ತಿದೆ ಮಿಸುಕಾಡುತ್ತಿಲ್ಲ, ಏನೋ ತಿಂದು ಮಲಗಿದೆ ಅನ್ನುವ ತೀರ್ಮಾನಕ್ಕೆ ಗುಂಪು ಬಂತು.

ಯಾರೂ ಹೆಚ್ಚಾಗಿ ಓಡಾಡದ ಕಾರಣ,ಈ ದೂರಕ್ಕೆ ದನ ಕರಗಳು ಸಹ ಬರುವುದಿಲ್ಲ.ಪ್ರತಿ ದಿನ ನೋಡುವ ಕಾಡಿಗಿಂತಲೂ, ಇಲ್ಲಿನ ವಿಶೇಷತೆಗಳೇ ಬೇರೆ.ಮುಂದೆ ನಡೆಯುತ್ತಿದ್ದವ ಥಟ್ಟನೆ ನಿಂತು, ಮತ್ತೇ ನಮ್ಮತ್ತ ನೋಡಿದ, ನಾವೆಲ್ಲರೂ ಆತ ನಿಂತ ಕಡೆಯೇ ಕಣ್ಣರಳಿಸಿದೆವು.

ಸ್ವಲ್ಪ ದೂರದಲ್ಲೊಂದು, ನಾನೆಂದೂ ಈ ಕಾಡಿನಲ್ಲಾಗಲಿ,ಟಿವಿ ಗಳಲ್ಲಿ ತೋರಿಸುವ ದಟ್ಟಾರಣ್ಯಗಳಲ್ಲಾಗಲಿ ಎಂದು ಕಾಣದಂತಹದನ್ನ, ಆ ಕ್ಷಣ ನೇರವಾಗಿ ನೋಡುತ್ತಿರುವುದೇ ಆಶ್ಚರ್ಯ.ಒಂದು ಮರದ ಕೊಂಬೆಗೆ,ದೊಡ್ಡ ಗುಡಾಣದಂತಹ ಬಿಳಿ ಬಣ್ಣದ,ದುಂಡಾಕಾರದ ಗೂಡೊಂದು ನೇತಾಡುತ್ತಿದೆ.

ಹೆಜ್ಜೇನಂತೂ ಅಲ್ಲವೇ ಅಲ್ಲ! ಅದೇ ಮೊದಲು ಮತ್ತು ಅದೇ ಕೊನೆ,ಮತ್ತೆಲ್ಲಿಯೂ ನಾನು ಇಲ್ಲಿಯವರೆಗೂ ಸಹ ಅಂತಹದ್ದನ್ನು ಕಂಡಿಲ್ಲ.ಅದು ಏನೂ ಅಂತ ಯಾರಿಗೂ ಅರ್ಥವಾಗುತ್ತಿಲ್ಲ?ಎಲ್ಲವೂ ಕೈ ಸನ್ನೆ ಬಾಯಿ ಸನ್ನೆಯಲ್ಲೇ,ಯಾರೂ ಶಬ್ದ ಮಾಡುವುದು ಬೇಡ ಅನ್ನುವ,ತೀರ್ಮಾನಕ್ಕೆ ಗುಂಪು ಬಂತು.ನಾನಂತೂ ಗುಡಾಣದ ಗೂಡನ್ನೇ ನೋಡುತ್ತಲೇ ಇದ್ದೆ.ಅಷ್ಟು ಸುಂದರವಾದ ಗೂಡದು,ಅದೇನೆಂದು ಯಾರಿಗೂ ಅರ್ಥವಾಗದೆ,ಆ ಸಂದರ್ಭ ಎಲ್ಲರಿಗೂ ವಿಸ್ಮಯವೇ!ಅದನ್ನು ದಾಟಿಯೇ ನಾವುಗಳು ಮುಂದಕ್ಕೆ ಹೋಗಬೇಕು.

ಆ ಗೂಡಿನ ಕೆಲವು ಭಾಗಗಳಲ್ಲಿ ರಂದ್ರಗಳು ಕಾಣುತ್ತಿವೆ,ನಿಶ್ಯಬ್ದವಾಗಿ ಮುಂದ್ಹೋಗಿದ್ರೆ ಹೋಗಿಬಿಡಬಹುದಿತ್ತಿನೋ, ಏನಿದು ಅನ್ನುವ ಕುತೂಹಲಕ್ಕಾಗಿ,ಸ್ವಲ್ಪ ಹೊತ್ತು ನಿಂತಿದ್ದೇ ತಪ್ಪಾಯ್ತು. ಆ ಗುಡಾಣದ ಗೂಡಿಂದ, ಒಂದು ದಪ್ಪಗಿನ ದುಂಡಾದ, ಬುವ್ವಾಡಿಯನ್ನೋಲುವ,ಚೆಂದದ ರೆಕ್ಕೆಯ ಹುಳುವೊಂದು ಹೊರ ಬಂತು.

ಕ್ಷಣ ಕಾಲ ನಾವಿರುವಲ್ಲಿಗೆ ತಲೆ ಮೇಲೆ ಬಂದು,ಹಾರಾಡಿ ಮತ್ತೆ ಗೂಡೊಳಗೆ ಹೋಯಿತು. ಒಂದೆರಡು ಕ್ಷಣಗಳಾಗಿರಬಹುದು, ಗೂಡಿನ ಎಲ್ಲರಂಧ್ರಗಳಿಂದ, ಒಮ್ಮೆಲೇ ಬಹುತೇಕ ಹುಳುಗಳು ಹೊರಬಂದವು. ಅಲ್ಲಿಯವರೆಗೆ ಸುಮ್ಮನಿದ್ದ ಶ್ರೀನಿವಾಸ್ ಒಂದೇ ಬಾರಿಗೆ ಕೂಗಿಕೊಂಡ.

ಅಣ್ಣಾ ಓಡೀ ಇವು “ಕಾಡು ಕಡಜೀರಿಗೆ”(ಕಟ್ಜೀರಿಗೆ) ಎರಡು ಮೂರು ಕಡಿದರೆ ಬದುಕೋದೇ ಕಷ್ಟ ಅಂದ, ಶ್ರೀನಿವಾಸ್ ಮಾತಿನ್ನೂ ಮುಗಿದಿರಲಿಲ್ಲ, ಆ ಹುಳುಗಳೆಲ್ಲ ಆಗ್ಲೇ, ನಮ್ಮ ಮೇಲೆ ದಾಳಿಗೆ ನುಗ್ಗಿದ್ವು, ನಾನಂತೂ ಹಿಂದಿದ್ದೆ, ನನ್ನ ಜೊತೆ ಇನ್ನಿಬ್ಬರು, ಬಂದ ದಾರಿಗೆ ಸುಂಕ ಇಲ್ಲ ಅಂತ, ಕೈಗೆ ಸಿಕ್ಕ ಹಸಿರೆಲೆ ಮುರ್ಕೊಂಡು,

ತಲೆ ಮೇಲೆ ಸುತ್ತ ತಿರುಗಿಸುತ್ತಲೇ, ಹಿಂದಕ್ಕೆ ಓಡಿದ್ದೇ ಓಡಿದ್ದು, ಸದ್ಯ ನಮ್ಕಡೆ ಆ ಹುಳುಗಳು ಬರಲಿಲ್ಲ. ಕಡಜೀರಿಗೆ ದಾಳಿಗೆ ಸಿಕ್ಕು ಕಡಿಸ್ಕೊಂಡಿದ್ದು, ಶ್ರೀನಿವಾಸ್ ಮತ್ತು ರಮೇಶ್. ಅವುಗಳ ದಾಳಿ ಎಷ್ಟು ಭೀಕರವಾಗಿತ್ತು ಅಂದ್ರೆ,ರಮೇಶ್ ತಲೆಗೆ ಕಡಿದದ್ದು ಒಂದೇ ಹುಳ, ಅಣ್ಣಾ, ಉರಿ ತಡ್ಕೊಳಕಾಗಲ್ಲ ಅಂತ ಅಬ್ಬರಿಸಿದ್ದ, ತಲೆಸುತ್ತು, ಸುಸ್ತಾಗ್ತದೆ ಅಂತಿದ್ದ.

ಶ್ರೀನಿವಾಸ್ ಗೆ ನಾಲ್ಕರಿಂದ ಐದು ಹುಳುಗಳು ಬಟ್ಟೆಯ ಮೇಲೆನೇ ಕಡಿದಿವೆ, ಅದೆಂತಾ ಹುಳುಗಳೋ! ಏನೋ? ಚೇಳಿನ ಕೊಂಡಿಯಂತಹ ವಿಷದ ಮುಳ್ಳುಗಳು, ಮೈಗೆಲ್ಲಾ ಬೆಂಕಿ ಇಟ್ಟಂಗೆ, ಕಡಿದ ಭಾಗಗಳಲ್ಲಿ ತಕ್ಷಣಕ್ಕೆ ಊತ ಬಂದಿವೆ, ಗರಡಿ ಮನೆ ಹುರಿಯಾಳು, ತಾಲೀಮಿನ ಜೊತೆಗಿದ್ದವ, ಶಕ್ತಿ ಮೀರಿ ತಡ್ಕೊಂಡು, ಚಾರಣವನ್ನು ಅರ್ಧಕ್ಕೆ ಬಿಟ್ಟು, ಒಂದು ಕಡೆ ರಸ್ತೆಗೆ ಬಂದು ಸುಧಾರಿಸ್ಕೊಂಡ್ವಿ, ಇವರಿಬ್ಬರದಂತೂ ಹೇಳತೀರದ  ಉರಿಯಾತನೆ, ಹೇಗೋ ಏನೋ ಎಲ್ಲರೂ ಮನೆ ಸೇರಿದ್ವಿ. ದಿನಪೂರ್ತಿ ಉರಿ ತಡ್ಕೊಳ್ಳೋಕೆ ಆಗದೆ, ಶ್ರೀನಿವಾಸ್ ಹಾಗೂ ರಮೇಶ್ ಆಸ್ಪತ್ರೆಗೆ ಅಡ್ಮಿಟ್ ಆಗಿ, ಟ್ರೀಟ್ಮೆಂಟ್ ತಗೊಂಡು ಮನೆ ಸೇರಿದ್ರು .

ಮತ್ತ್ಯಾವತ್ತೂ ದೇವರಳ್ಳದ ಜಾಡಿನಿಂದ, ಜೋಗಿ ಗದ್ದಿಗೆಗೆ, ಹೆಜ್ಜೆ  ತುಳಿಯುವುದಿಲ್ಲಾಂತ, ನಾನು ಕೈ ಮುಗಿದಿದ್ದೇನೆ.ಆ ಹುಳುಗಳೇನಾದ್ರು ಅಂದು ನನಗೇ ಕಡಿದಿದ್ರೇ”ವೈಕುಂಠಕ್ಕೆ ದಾರಿ ಯಾವುದಯ್ಯಾ” ಅಷ್ಟೇ.
ಮುಂದುವರೆಯುವುದು…….
ಲೇಖನ:ಕುಮಾರ್ ಬಡಪ್ಪ, ಚಿತ್ರದುರ್ಗ.

 

 

 

- Advertisement -  - Advertisement -  - Advertisement - 
Share This Article
error: Content is protected !!
";