ಕೆರೆಗಳ ಒತ್ತುವರಿ, ಹಸಿರು ನ್ಯಾಯ ಮಂಡಳಿಯಿಂದ ಸ್ವಯಂ ಪ್ರೇರಿತ ದೂರು ದಾಖಲು

News Desk

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಬೆಂಗಳೂರು ರಾಜಧಾನಿಯಲ್ಲಿ ಕೆರೆಗಳು ಮತ್ತು ರಾಜ ಕಾಲುವೆಗಳ ಒತ್ತುವರಿ ನಿರಂತರ ನಡೆದಿದೆ. ಬೆಂಗಳೂರಿನ ಎರಡು ಕೆರೆಗಳ ಒತ್ತುವರಿ ಮತ್ತು ಕೆರೆಗೆ ನೀರು ಹರಿದು ಬರುವ ರಾಜಕಾಲುವೆ ಮುಚ್ಚಿರುವ ಬಗ್ಗೆ ಲೋಕಾಯುಕ್ತ ವರದಿ ಕುರಿತು ಬಿಬಿಎಂಪಿ ಮತ್ತಿತರ ಅಧಿಕಾರಿಗಳಿಂದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಪ್ರತಿಕ್ರಿಯೆ ಕೇಳಿದ್ದು ಇಕ್ಕಟ್ಟಿನಲ್ಲಿ ಬಿಬಿಎಂಪಿ ಸಿಲುಕಿದೆ.

ಬಿಬಿಎಂಪಿ ಮುಖ್ಯ ಆಯುಕ್ತರು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿಗಳು ಮತ್ತು ಬೆಂಗಳೂರಿನ ಜಿಲ್ಲಾಧಿಕಾರಿ ಅವರನ್ನು ಪ್ರತಿವಾದಿಗಳು ಮತ್ತು ಕಕ್ಷಿದಾರರನ್ನಾಗಿ ಹಸಿರು ಮಂಡಳಿ ಸೂಚಿಸಿತು.

ಜಿಲ್ಲಾಧಿಕಾರಿ ವರ ವಕೀಲರು ನೋಟಿಸ್ ಸ್ವೀಕರಿಸಿದ್ದು, ಉತ್ತರ ಸಲ್ಲಿಸಲು ಸಮಯ ಕೇಳಿದ್ದಾರೆ. ಮುಂದಿನ ವಿಚಾರಣೆಯ (ನವೆಂಬರ್ 5) ಒಂದು ವಾರಕ್ಕೂ ಮುನ್ನಾ ಚೆನ್ನೈನಲ್ಲಿರುವ ನ್ಯಾಯಮಂಡಳಿಯ ದಕ್ಷಿಣ ವಲಯ ಪೀಠದ ಮುಂದೆ ತಮ್ಮ ಪ್ರತಿಕ್ರಿಯೆಯ ಅಫಿಡವಿಟ್ ಮೂಲಕ ಸಲ್ಲಿಸಲು ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ನ್ಯಾಯ ಪೀಠ ಆದೇಶಿಸಿದೆ. 

ಏನಿದು ಪ್ರಕರಣ-
ಬೆಂಗಳೂರಿನ ವಿಭೂತಿಪುರ ಮತ್ತು ದೊಡ್ಡನೆಕುಂದಿ ಕೆರೆಗಳಲ್ಲಿನ ಹಲವು ಸಮಸ್ಯೆಗಳ ಕುರಿತು ಲೋಕಾಯುಕ್ತ ತನಿಖೆಗೆ ಸಂಬಂಧಿಸಿದ ಪತ್ರಿಕೆಯೊಂದರ ವರದಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ದೂರನ್ನಾಗಿ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದೆ.

ವಿಭೂತಿಪುರ ಕೆರೆಯಲ್ಲಿನ ಪ್ರವೇಶ ದ್ವಾರ ವಿರೂಪಗೊಳಿಸಲಾಗಿದೆ, ತಂತಿ ಬೇಲಿ ಧ್ವಂಸಗೊಳಿಸಲಾಗಿದೆ, ಕೆರೆ ಜಾಗದಲ್ಲಿ ಅಕ್ರಮ ಕಟ್ಟಡ ತಲೆ ಎತ್ತಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆಂದು ವರದಿಯಲ್ಲಿ ಹೇಳಲಾಗಿದೆ ಎಂದು ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಅವರನ್ನೊಳಗೊಂಡ ಪೀಠ ಇತ್ತೀಚಿನ ಆದೇಶದಲ್ಲಿ ತಿಳಿಸಿದೆ.

ಕೆರೆ, ರಾಜ ಕಾಲುವೆಗಳ ಒತ್ತುವರಿಯಿಂದಾಗಿ ಮಳೆಗಾಲದಲ್ಲೇ ಕೆರೆಯ ನೀರಿನ ಮಟ್ಟ ಆತಂಕಕಾರಿಯಾಗಿ ಕಡಿಮೆಯಾಗಿದೆ. ಹೊರಹರಿವಿನ ಮಾರ್ಗವನ್ನು ನಿರ್ಬಂಧಿಸಲಾಗಿದೆ. ಅತಿಕ್ರಮಣ ಮತ್ತು ಸೌಲಭ್ಯಗಳ ದುರುಪಯೋಗ ಕಂಡುಬಂದಿದೆ. ಇದಲ್ಲದೆ ದೊಡ್ಡನೆಕುಂದಿ ಕೆರೆಯು ಇದೇ ರೀತಿಯ ಸಮಸ್ಯೆ ಎದುರಿಸುತ್ತಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹೇಳಿದೆ.

ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ ಮತ್ತು ಪರಿಸರ (ರಕ್ಷಣೆ) ಕಾಯ್ದೆಯ ನಿಬಂಧನೆ ಪಾಲನೆಗೆ ಸಂಬಂಧಿಸಿದಂತೆ ಗಣನೀಯ ಸಮಸ್ಯೆಗಳನ್ನು ಎತ್ತುತ್ತದೆ ಎಂದು ನ್ಯಾಯಾಂಗ ಸದಸ್ಯರಾದ ನ್ಯಾಯಮೂರ್ತಿ ಅರುಣ್ ಕುಮಾರ್ ತ್ಯಾಗಿ ಮತ್ತು ತಜ್ಞ ಸದಸ್ಯ ಎ ಸೆಂಥಿಲ್ ವೇಲ್ ಅವರನ್ನೊಳಗೊಂಡ ಪೀಠ ಹೇಳಿದೆ.

- Advertisement -  - Advertisement -  - Advertisement - 
Share This Article
error: Content is protected !!
";