ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೆಲದ ಮಾತು-54
ಬಿ.ಎಲ್.ವೇಣು ಅವರ ಚಾರಿತ್ರಿಕ ಕಾದಂಬರಿ ಗಂಡುಗಲಿ ಮದಕರಿ ನಾಯಕ, ಹಾಗೂ ತ.ರಾ.ಸು ಅವರ ದುರ್ಗಾಸ್ತಮಾನದಲ್ಲಿ ಕಂಡುಬರುವಂತೆ ಮದಕರಿಯ ಅಂಗರಕ್ಷಕ ಗುದುಗತ್ತಿ, ಹಾಗೂ ಅವರ ಅತ್ಯಂತ ಪ್ರೀತಿ ಪಾತ್ರವಾದ ಖಾಸ ಬೇಡರ ಪಡೆ(ಇಂದಿಗೆ ಆತ್ಮಹುತಿ ದಳವೆಂದೇ ಪರಿಭಾವಿಸಬಹುದು) ಯುದ್ಧರಂಗದಲ್ಲಿನ, ವೀರ ಪರಾಕ್ರಮಗಳ ಬೀಬತ್ಸ, ರೋಚಕತೆಗಳು, ಕಾದಂಬರಿ ಕಾರರು ಕಾಲ್ಪನಿಕವಾಗಿ ಬರೆದುಕೊಂಡಿದ್ದಾರೆಂಬ ಊಹಾಪೋಹಗಳು,ಪುಸ್ತಕಗಳು ಮುದ್ರಣಗೊಂಡಂದಿನಿಂದ ಇಲ್ಲಿಯವರೆಗೂ ಹರಿದಾಡುತ್ತಲೇ ಇವೆ.
1799 ರಲ್ಲಿ ಲಂಡನ್ ನಲ್ಲಿ ಮುದ್ರಣಗೊಂಡ, “ಹಿಸ್ಟಾರಿಕಲ್ ಸ್ಕೆಚ್ ಆಫ್ ಸೌತ್ ಇಂಡಿಯಾ”ದ ಹಿಸ್ಟರಿ ಆಫ್ ಮೈಸೂರ್ ನಲ್ಲಿ,ಕೊಲೆನಲ್ ಮಾರ್ಕ್ಸ್ ಎಲ್ಕ್ಸ್ ಅವರು ಬರೆದಿರುವ ಪ್ರಕಾರ,ವಾಸ್ತವದ ಘಟನೆಗಳನ್ನು ಅವರು ಅಂದೇ ಬರೆದಿದ್ದು,ಆಂಗ್ಲ ಭಾಷೆಯಲ್ಲಿ ಪ್ರಕಟಗೊಂಡಿವೆ.ಆಂಗ್ಲ ಇತಿಹಾಸಕಾರರು ದಾಖಲಿಸಿದ ವಿಚಾರಗಳು, ಬಿ ಎಲ್ ವೇಣು,ತ ರಾ ಸು, ಟಿ.ಗಿರಿಜ ಅವರ ಚಾರಿತ್ರಿಕ ಕಾದಂಬರಿಗಳ ಬರಹಗಳು, ಸತ್ಯಕ್ಕೆ ಹತ್ತಿರವಾಗಿವೆ ಎಂದೂ ವಿಶ್ಲೇಶಕರಿಂದ ಬಿಂಬಿಸಲ್ಪಟ್ಟಿವೆ.
ಹಿರೇ ಮದಕರಿ ನಾಯಕ ಹಾಗು ಪಟ್ಟದನಾಗತಿ ಓಬಳವ್ವೆಗೆ,ಒಬ್ಬನೇ ಪುತ್ರ ಕಸ್ತೂರಿ ರಂಗಪ್ಪ ನಾಯಕ. ಹಿರೇಮದಕರಿ ಮಾಯಕೊಂಡ ಯುದ್ಧದಲ್ಲಿ ತೀರಿಕೊಂಡಾಗ,ದುರ್ಗದ ಪಾಳೆಯ ಪಟ್ಟಿನ ಮೇಲೆ, ಅನೇಕ ಪಾಳೆಗಾರರ ಕುತಂತ್ರಗಳು ಜರುಗುತ್ತವೆ. ಆಗ ಓಬಳವ್ವನಾಗತಿ ತನ್ನ ಪುತ್ರನಾದ ಕಸ್ತೂರಿ ರಂಗಪ್ಪನಾಯಕನಿಗೆ ಪಟ್ಟ ಕಟ್ಟಿ ವೈರಿಗಳ ಸದ್ದಡಗಿಸುತ್ತಾಳೆ.
ಅನೇಕ ಯುದ್ಧಗಳು ಜರುಗಿ, ಪಟ್ಟವಾದ ಅಲ್ಪಕಾಲದಲ್ಲಿಯೇ ಕಸ್ತೂರಿ ರಂಗಪ್ಪನಾಯಕನೂ ಅನಾರೋಗ್ಯದಿಂದ ಸಾವನ್ನಪ್ಪುತ್ತಾನೆ,ಬರಿದಾದ ಸಿಂಹಾಸನಕ್ಕೆ ಮತ್ತೆ ವಾರಸುದಾರನಿಗಾಗಿ ಹಿರೇಮದಕರಿಯ ಸಹೋದರ, ಕಾಟಪ್ಪನಾಯಕನ ಮಗ ದೊಡ್ಡ ಮದಕರಿಯನ್ನ,ದತ್ತು ಪಡೆದು ಅರಮನೆಗೆ ಕರೆತರುತ್ತಾಳೆ.ಅವನ ಬೆಳವಣಿಗೆಗಳು ಅಷ್ಟಾಗಿ ಓಬಳವ್ವನಿಗೆ ಹಿಡಿಸದ ಕಾರಣ,ದೊಡ್ಡ ಮದಕರಿ,ಅರಮನೆಯಲ್ಲಿ ಸಾಕು ಮಗನಾಗಿಯೇ ಉಳಿಯುತ್ತಾನೆ.ಅರಸು ಪಟ್ಟದ ಕಗ್ಗಂಟು ಕಗ್ಗಂಟಾಗಿಯೇ ಉಳಿಯುತ್ತದೆ.
ಒಂದು ಹೆಣ್ಣಾಗಿ ಪಟ್ಟಕ್ಕೆ ಅಧಿಪತಿಯನ್ನು ತರುವುದು, ಅಷ್ಟು ಸುಲಭದ ಕೆಲಸವಲ್ಲವೆಂದು ಅರಿತ ಮುಕ್ಸಧ್ಧಿ ಓಬಳವ್ವ ನಾಗತಿ,ತನ್ನ ತವರಿನ ಸಹೋದರರಾದ ಆನೆಗುಂದಿಯ ನೀಲಪ್ಪ ನರಸಪ್ಪ ನಾಯಕರನ್ನು ಧಿಕ್ಕರಿಸಿ,ಹಿರೇ ಮದಕರಿಯ ಕಿರಿಯ ಸಹೋದರ ಜಂಪಣ್ಣ ನಾಯಕನನ್ನು ಬದಿಗಿರಿಸಿದಾಗ,ಸಂಬಂಧಿಗಳ ದ್ವೇಷ,ಅಸೂಯೆ, ವಿರೋದಗಳು ಒಳಗೊಳಗೇ ತಾರಕಕ್ಕೋಗುತ್ತವೆ.ಚಾಣಾಕ್ಷೆ, ತಂತ್ರಗಾರಿಕೆಯ ಚತುರೆ, ಓಬಳವ್ವನಾಗತಿ,ಹಿರೇ ಮದಕರಿ ನಾಯಕರು ಕನಸಲ್ಲಿ ಬಂದು ಹೇಳಿದಂತೆ, ಜೇನುಕಲ್ಲು ದುರ್ಗದಲ್ಲಿ ನಾನು ಹುಟ್ಟಿ ಬೆಳೆಯುತ್ತಿರುವೆ.
ದುರ್ಗದಲ್ಲಿ ನಾನು ಮಾಡಬೇಕಾಗಿರುವ ಕೆಲಸಗಳು ಬೇಕಾದಷ್ಟಿವೆ, ನನ್ನನ್ನು ಕರೆತಂದು ಪಟ್ಟಕ್ಕೆ ಕೂರಿಸು ಎಂಬುದಾಗಿ ಹೇಳಿದರೆಂದು,ಅರಸು ಪರಿವಾರಕ್ಕೆ ಒಪ್ಪಿಸಿ, ಜೇನುಕಲ್ಲು ದುರ್ಗದ ತೊದಲು ಭರಮಣ್ಣನಾಯಕ ಹಾಗು ಚಿಕ್ಕಸಿದ್ದವ್ವನಾಗತಿಯ ಪುತ್ರ,12 ವರ್ಷ ಪ್ರಾಯದ ಬಾಲಕನನ್ನು ಕರೆತಂದು ಸಿಂಹಾಸದ ಮೇಲೆ ಕೂರಿಸಿ, ಮದಕರಿಯ ಹೆಸರಲ್ಲಿ ಪಟ್ಟಕಟ್ಟಿ,ದತ್ತು ಮಗ ದೊಡ್ಡ ಮದಕರಿಯನ್ನ ಪೌಜು ದೊರೆಯಾಗಿಸಿ, ಇಬ್ಬರನ್ನೂ ಕುಂತ ದೊರೆ,ನಿಂತ ದೊರೆಯನ್ನಾಗಿ ಮಾಡುತ್ತಾಳೆ.ಬಾಲಕನನ್ನು ಪಟ್ಟಕ್ಕೆ ಕೂರಿಸಿ,ಗಂಡಾಗಿ ಕತ್ತಿ ಹಿಡಿದು ಎದುರಾದ ವೈರಿಗಳನ್ನು ಸದ್ದಡಗಿಸಿದ್ದು,ಈ ರಾಜಮಾತೆ,
ವೀರನಾಗತಿ,ಮಹಾ ಮಾತೋಶ್ರೀ,ಗಂಡೋಬಳವ್ವನಾಗತಿಯೇ.ಸಮರಕಲೆ ಅಭ್ಯಾಸಕ್ಕಾಗಿ,ಪಟ್ಟದ ಪಾಳೆಗಾರ ಮದಕರಿಯನ್ನ, ತಾಯಿ ಓಬಳವ್ವ ಕೇರಳ ರಾಜ್ಯದ ಕಡೆ ಕಳುಹಿಸಿದ್ದರೆಂದು ಪ್ರತೀತಿ. ದೊರೆ ಮದಕರಿ,ಪೌಜು ದೊರೆ ದೊಡ್ಡ ಮದಕರಿ, ಪ್ರಧಾನಿ ಪರಶುರಾಮ ನಾಯಕನನ್ನ ಜೊತೆಗಿಟ್ಟುಕೊಂಡೇ, ರಾಯದುರ್ಗದ ಯುದ್ಧವನ್ನು ಗೆದ್ದ,ಗಂಡೋಬಳವ್ವ ಬಹುಕಾಲ ಬದುಕಲಿಲ್ಲದ್ದು ವಿಶಾದದ ಸಂಗತಿ.
ತಾಯಿಯ ಅಗಲಿಕೆಯಿಂದ ವಿಚಲಿತನಾಗದೆ,ಮದಕರಿ ರಣಕಲಿಯಾಗಿ ಎದುರಿಸಿದ ಯುದ್ಧಗಳು ಅನೇಕ. ಗಂಡೋಬಳವ್ವನಿಂದ ಕರಗತ ಮಾಡಿಕೊಂಡ ರಾಜಪ್ರಭುತ್ವದ ರಾಜಕೀಯ,ವ್ಯವಹಾರಗಳ ಕುಶಲತೆ,ಯುದ್ಧ ತಂತ್ರಗಳನ್ನ,ತ ರಾ ಸು ಅವರು ದುರ್ಗಾಸ್ತಮಾನದಲ್ಲಿ ಅಪರೂಪವಾಗಿ ಚಿತ್ರಿಸಿದ್ದಾರೆ.1765 ರಲ್ಲಿ ಹೈದರಾಲಿ ನವಾಬನೊಂದಿಗೆ ಸ್ನೇಹ ಬಯಸಿ ಬದನೂರು, ಬಂಕಾಪುರ,ನಿಡುಗಲ್ಲು, ನಿಜಗಲ್ಲು ದುರ್ಗ ಗೆದ್ದು, ಗೆಳೆತನದ ಕಾಣಿಕೆಯಾಗಿ ಅರ್ಪಿಸಿ ಆಪ್ತನಾಗಿ,
ಸ್ನೇಹದ ಕುರುಹಾಗಿ 77 ಪಾಳೇಗಾರರ ಗಂಡನೆಂಬ ಬಿರುದನ್ನು,ಹೈದರಾಲಿಯ ಕೈಯಿಂದಲೇ ಕಾಲಿಗೆ ತೊಡಿಸಿಕೊಳ್ಳುತ್ತಾನೆಂದು ಪ್ರತೀತಿ.1769 ರಲ್ಲಿ ಮರಾಠರ ದೊರೆ ಪೇಶ್ವೆ ಮಾಧವರಾಯನ ಸ್ನೇಹ ಬಯಸಿ,ಹೈದರಾಲಿಯ ವಶದಲ್ಲಿದ್ದ, ಸೇವನದುರ್ಗ,ಉತ್ತರೆದುರ್ಗ, ಬಾಣವರಗಳನ್ನು ಗೆದ್ದು ಮರಾಠರಿಗೆ ಹತ್ತಿರವಾಗುತ್ತಾನೆ.ಬಿ ಎಲ್ ವೇಣುರವರು ಗುರುತಿಸುವ ಹಾಗೆ,ಪಂಚಮಹಾ ಶಕ್ತಿಗಳೇ ಮದಕರಿಯ ಶಕ್ತಿಗಳು. ಕಲ್ಲುಕುಟಿಕ,ಕಮ್ಮಾರ, ಚಮ್ಮಾರ,ಕೃಷಿಕ,ಸೈನಿಕ.
ಈ ಅಸಾಧ್ಯ ಕೋಟೆಯನ್ನ ಪಾಳೆಗಾರರ ಅಣತಿಯಂತೆ ಕಟ್ಟಿದವರು ಭೋವಿಗಳು,ಕತ್ತಿ,ಗುರಾಣಿ, ಭರ್ಚಿ,ಬಾಣಗಳು,ಇನ್ನಿತರೇ ಯುದ್ಧ ಸಾಮಗ್ರಿಗಳನ್ನು ಮಾಡಿಕೊಟ್ಟವರು ಕಮ್ಮಾರರು,ಯುದ್ಧಕ್ಕೆ ಬೇಕಾಗುವ ಜಲ ಚೀಲ, ಶಿರಸ್ತ್ರಾಣ,ಕವಚಗಳು, ಉದ್ದನೆಯ ಯುದ್ಧ ಪಾದರಕ್ಷೆಗಳನ್ನ ಮಾಡಿಕೊಟ್ಟವರು ಚಮ್ಮಾರರು,ಇನ್ನು ಕೃಷಿಕನೆಂದರೆ ಅನ್ನದಾತರು, ಮದಕರಿ ರೈತರನ್ನ ದೈವಸ್ಥಾನದಲ್ಲಿಟ್ಟು ನೋಡುತ್ತಿದ್ದರೆಂದು ಪ್ರತಿತಿ. ಯುದ್ಧಗಳನ್ನ ವಿರಾವೇಶದಲ್ಲಿ ಹೋರಾಡಿ,ಗೆಲ್ಲಿಸಿ, ಜಯಮಾಲೆ ಕೊರಳಿಗೆ ಕೊಡುವವರು ಸೈನಿಕರೇ,ಇವರೇ ನನ್ನ ಪಂಚ ಮಹಾ ಶಕ್ತಿಗಳು ಎಂದ ಮದಕರಿಗೆ ಅಸಾಧ್ಯವಾದುದು ಯಾವುದು ಎದುರಾಗಲಿಲ್ಲ,
12 ನೇ ವಯಸ್ಸಿಗೇ ಸಿಂಹಾಸನವೇರಿ, ಸಹೋದರ ದೊಡ್ಡ ಮದಕರಿಯೊಂದಿಗೆ 25 ವರ್ಷಗಳ ಕಾಲ ವಿಶ್ರಮಿಸದೆ, ವೈರಿಗಳನ್ನು ಸದೆಬಡೆದು 37ನೇ ವಯಸ್ಸಿಗೆ ತನ್ನ ದೊರೆತನವನ್ನು ಮುಗಿಸುತ್ತಾರೆ. ಮದಕರಿಯನ್ನು ಗೆಲ್ಲಲೇ ಬೇಕೆಂಬ ಹಟದಿಂದ, ಹೈದರಾಲಿ ಚಿತ್ರದುರ್ಗದ ಮೇಲೆ ಮಾಡಿದ,1762/ 1774/ 1777 ರ,ಈ ಮೂರು ಯುದ್ಧಗಳೂ ಮಣ್ಣುಮುಕ್ಕುತ್ತವೆ.ನೇರ ಯುದ್ಧ ಮಾಡಿ ಗೆಲ್ಲಲಾಗದು ಎಂದು ಅರಿತ ಹೈದರಾಲಿ, ಪ್ರಧಾನಿ ಕಳ್ಳಿ ನರಸಪ್ಪನಂತಹ ನೆಲಹೀನನನ್ನು ಬಳಸಿಯೇ, ಮದಕರಿಯ ವಿರುದ್ಧ ಷಡ್ಯಂತ್ರ ಮಾಡಿ 1779 ರಲ್ಲಿ ಯುದ್ಧ ಗೆದ್ದದ್ದು.
ಮದಕರಿ ಪಟ್ಟಕ್ಕೆ ಬಂದ ಮೇಲೆ, ಪ್ರಧಾನಿ ಪಟ್ಟವನ್ನು ಕಳೆದುಕೊಂಡ ಕಳ್ಳಿ ನರಸಪ್ಪ,ಅರಮನೆಯ ಶತ್ರುಗಳ ಅಸಮಾಧಾನವನ್ನ ವ್ಯವಸ್ಥಿತವಾಗಿ ಬಳಸಿಕೊಂಡು,ಹೈದರಾಲಿಗೆ ಆಪ್ತನಾಗಿ,ಸೈನ್ಯದಲ್ಲಿದ್ದ ಮುಸ್ಲಿಂ ಸಿಪಾಯಿಗಳನ್ನ ಮೊಹರಂ ಹಬ್ಬವೆಂದು ಕೆಳ ದುರ್ಗಕ್ಕೆ ಕರೆಸಿ,ನವಾಬರನ್ನು ಪರಿಚಯಿಸಿ, ಪಿತೂರಿಯಿಂದ ಮದ್ದು ಗುಂಡುಗಳಿಗೆ ತೈಲ ಸುರಿಸಿ,ಯುದ್ಧದ ಸಂದರ್ಭದಲ್ಲಿ ಸೈನ್ಯದಲ್ಲಿಯೇ ಕಾಣದಂತೆ ಮಾಡಿದ್ದು,ಇದೇ ಕಳ್ಳೀನರಸಪ್ಪನೇ.ಯುದ್ಧ ಸಂದರ್ಭದಲ್ಲಿ ಹೈದರಾಲಿಗೆ, ಬೇಹುಗಾರರು ತಿಳಿಸಿದ ವಿಚಾರಕ್ಕೆ,ಹೈದರನೇ ನಡುಗಿದ್ದನಂತೆ.
ಮದಕರಿ ಮಹಾ ಯುದ್ಧ ಚತುರ,ಆತನ ಅಭೇದ್ಯವಾದ ಕೋಟೆ,ವರ್ಷಾನುಗಟ್ಟಲೆ ಯುದ್ಧವಾದರೂ, ಸವಿಯದಷ್ಟು ಆಹಾರ ಸಾಮಗ್ರಿಗಳು,ರಣರಂಗಕ್ಕಕಾಗಿಯೇ ಸದಾ ಸಿದ್ದವಿರುವ ಖಾಸ ಬೇಡರ ಪಡೆ, ಬೇಹಗಾರರ ಪ್ರಕಾರ,ಅದು ಪಡೆಯಲ್ಲ ರಾಕ್ಷಸರ ದಂಡು, ಮುಟ್ಟಿದರೆ ರಣ ಸ್ಮಶಾನವೇ.
ಯುದ್ಧ ಸಂದರ್ಭದಲ್ಲಿ ನೆಚ್ಚಿನ ಬಂಟ ಗುದುಗತ್ತಿ, ಹಾಗು ಖಾಸ ಬೇಡರ ಪಡೆಗಳು ಕಡಿದು ತರುತ್ತಿದ್ದ ಶತ್ರು ಸೈನಿಕರ ರುಂಡಗಳನ್ನ, ಮದಕರಿ ಏಕನಾಥೆಯ ಗುಡಿ ಮುಂದೆ ರಾಶಿ ಹಾಕಿ, ಅವುಗಳ ಮೇಲೆ ರಣದೀಪ ಹಚ್ಚುತ್ತಿದ್ದನಂತೆ.ಮದಕರಿಯ ಸಾಹಸಗಳಲ್ಲಿ ಇದೊಂದು ರೋಚಕ ಇತಿಹಾಸ.ಆದರೂ ಕಳ್ಳೀನರಸಪ್ಪ,ದಿವಾನ್ ಪೂರ್ಣಯ್ಯನ ಕುತಂತ್ರಗಳ ಮುಂದೆ,ಶಕ್ತಿ,ಯುಕ್ತಿಗಳು ನಡೆಯದಾದವು.
ಯುದ್ಧಕಾಲದಲ್ಲಿ ಮರಾಠರ ಸಹಾಯವನ್ನು ಕೇಳಿದ್ದ ಮದಕರಿ,ಈ ಇಬ್ಬರು ಕುತಂತ್ರಗಳಿಗೆ ಆ ವಿಷಯ ತಿಳಿದು,ಸಹಾಯಕ್ಕೆ ಬಂದ ಮರಾಠರ ಪೌಜನ್ನು, ಬೇಹುಗಾರರ ಸಹಾಯದಿಂದ, ಅರ್ಧದಿಂದಲೇ ವಾಪಸ್ಸು ಕಳುಹಿಸಿ,ಮದಕರಿಯನ್ನು ಏಕಾಂಗಿಯಾಗಿಸಿ, ಯುದ್ಧದಲ್ಲಿ ಸೆರೆಹಿಡಿದು ಶ್ರೀರಂಗಪಟ್ಟಣದಲ್ಲಿ ಸೆರೆಮನೆಗೆ ಹಾಕಿ,ಅಲ್ಲಿಯೂ ಕುತಂತ್ರದಿಂದ ವಿಷಪ್ರಾಶನ ಮಾಡಿಸಿ,ಚಿತ್ರಹಿಂಸೆ ಕೊಟ್ಟು ಕೊಂದರೆಂದು ಹೇಳಲಾಗುತ್ತದೆ. ಇತಿಹಾಸದಲ್ಲಿ,ದುರ್ಗದ ನೆಲದ ಒಬ್ಬ ಮಹಾವೀರನ ಅಂತ್ಯ,ಹೀಗಾದುದೇ ಬೇಸರದ ಸಂಗತಿ. ಇಂದು ರಣಕಲಿ,ರಾಜ ವೀರ ಮದಕರಿ ನಾಯಕರ ಜಯಂತಿ. ನನ್ನ ಅಕ್ಷರಗಳು ಅವರಿಗೆ ಹೂಮಾಲೆಯಾಗಿ ಅರ್ಪಿತ ಮುಂದುವರೆಯುವುದು……
ಲೇಖನ-ಕುಮಾರ್ ಬಡಪ್ಪ, ಚಿತ್ರದುರ್ಗ.