ರಂಗ ಮಂದಿರಕ್ಕೇಕೆ ತರಾಸು ಹೆಸರು?, ಕೋಟೆ ನಾಡು ರಂಗ ಕರ್ಮಿಗಳನ್ನ ಮರೆತಿದೆಯಾ?

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೆಲದ ಮಾತು-56
ದುರ್ಗದ ರಂಗಮಂದಿರಕ್ಕೆ ತರಾತುರಿಯಲ್ಲಿ ರಾತ್ರೋ ರಾತ್ರಿ,ಬರೆಸಿದ ಹೆಸರು, ದುರ್ಗದ ಜನತೆಗೆ ಖುಷಿ ತಂದಿದೆಯೋ ಹೇಗೇ?

ಯಾಕೋ ಗೊತ್ತಿಲ್ಲ?ಎಲ್ಲರ ಧ್ವನಿಗಳು ಸೇರಿ, ಒಬ್ಬ ಜಿಲ್ಲಾಧಿಕಾರಿಯ ತೀರ್ಮಾನಕ್ಕೆ ಊರೇ ಸ್ತಬ್ಧವಾಗಿತ್ತು.
ಭಾರತದ ಯಾವುದೋ ಒಂದು ರಾಜ್ಯದ ಭಾಷೆ
,ಇತಿಹಾಸ, ಗೊತ್ತಿಲ್ಲದವರು ಇಲ್ಲಿನ ಪ್ರಜಾಪ್ರಭುತ್ವದ ಜಿಲ್ಲಾ ದೊರೆಗಳಾಗಿ ಬಂದಾಗ, ಸ್ಥಳೀಯವಾಗಿ ಸಂಬಂಧಪಟ್ಟವರು, ಅವರಿಗೆ ಮಾಹಿತಿ ಕೊಡಬಹುದಿತ್ತಲ್ವಾ ಅಥವಾ ಜಾತಿಯ ಅಡ್ಡಗೋಡೆಗಳಿಂದ ಮಾಹಿತಿ ಕೊರೆತೆಯಾಯಿತೋ? ಇಲ್ಲಾ ಜಿಲ್ಲಾಡಳಿತವೇ ನಿರ್ಲಕ್ಷಿಸಿತೋ ಹೇಗೆ?

ಸ್ಥಳೀಯ ಸಾಹಿತಿಗಳು, ಚಿಂತಕರ ಗಮನಕ್ಕೂ ತರದೆ, ದುರ್ಗದ ರಂಗ ವೈಭವಕ್ಕೆ ಮಸಿ ಬಳಿದಿದ್ದು ಯಾರು? ದುರ್ಗಕ್ಕೆ ಇಷ್ಟೆಲ್ಲಾ ಕೊಟ್ಟಿರುವ ತ ರಾ ಸು ಅವರನ್ನು, ನಾನು ವಿರೋಧಿಸುತ್ತಿರುವುದಾದರೂ ಏಕೆ?

ಮೊದಲಿಗೆ ನಾನೊಬ್ಬ, ತ ರಾ ಸು ಅವರ ಅಪ್ಪಟ ಅಭಿಮಾನಿ. ಹಾಗಂತ ಸಂಬಂಧವಿಲ್ಲದ ಕಡೆ, ಹೆಸರು ಬರೆಸಿ ನೋಡುವುದೆಂದರೆ ಹೇಗೆ?

 ರಂಗಭೂಮಿಯ ವಿಚಾರವಾಗಿ, ದುರ್ಗದ ನೆಲದಲ್ಲಿ ಕೊರತೆ ಕಾಣುತ್ತಿದೆಯೇ!
ಚಿತ್ರದುರ್ಗ ಜಿಲ್ಲೆಯಿಂದ “ಓಂಕಾರೇಶ್ವರ ನಾಟಕ ಮಂಡಳಿ”ಎಂಬ ಹೆಸರಿನ ವೃತ್ತಿ ರಂಗಭೂಮಿಯನ್ನು ಕಟ್ಟಿ, ನಾಡಿನ ಉದ್ದಗಲಕ್ಕೂ ರಂಗ ಹಬ್ಬವನ್ನು ಉಣಬಡಿಸಿ, ರಂಗಭೂಮಿಯ ತವರು, ಉತ್ತರ ಕರ್ನಾಟಕದಲ್ಲಿ ವಿಜೃಂಭಿಸಿ ಸ್ವತಃ ಖಾದಿಸೀರೆ, ಮುಂಡೇಮಗ, ಅಡುಗೆಬಟ್ಟ, ಗೌಡ್ರಗದ್ಲ, ತಳವಾರನ ತಕರಾರು, ಇನ್ನೂ ಮುಂತಾದ ನಾಟಕಗಳನ್ನು ಬರೆದು, ರಂಗಕ್ಕೆ ಅಳವಡಿಸಿ ತಾವೇ ಅಭಿನಯಿಸುತ್ತಿದ್ದ, ಬಿದರಿಕೆರೆ ಓಬಳೇಶ್ವರ್ ಅವರನ್ನು ಈ ಊರು ಮರೆಯಿತೆ!

ಪ್ರಾಯೋಗಿಕ ರಂಗಗಳಲ್ಲಿ ಹೊಸ ಅವಿಷ್ಕಾರವನ್ನೇ ಹುಟ್ಟು ಹಾಕಿ, ನಿರ್ದೇಶನ ಮಾಡುತ್ತಿದ್ದ ರಂಗ ತಜ್ಞ, ಸಾಂಸ್ಕೃತಿಕ ದಿವಾಳಿತನದ ವಿರುದ್ಧ ಸೆಟದೆದ್ದ, ದಲಿತ ರಂಗಕರ್ಮಿ, ಸಾಣೆಹಳ್ಳಿಯ ಶಿವ ಸಂಚಾರದ ಸ್ಪೂರ್ತಿ, ಚಳ್ಳಕೆರೆ ಭಾಗದ ನಾಯಕನಹಟ್ಟಿಯ ಸಿ.ಜೆ. ಕೃಷ್ಣಮೂರ್ತಿಯವರನ್ನ ಈ ದುರ್ಗ ಮರತೇ ಬಿಟ್ಟಿತೆ.

 ಪುರಾಣ, ಇತಿಹಾಸ, ನಾಟಕಗಳ ರಚನೆಕಾರ, ರಂಗಭೂಮಿಯ ವಿಚಾರವಾಗಿ ಜಿಲ್ಲೆಯಲ್ಲಿಯೇ ಮನೆ ಮಾತಾಗಿದ್ದ, ದೊಡ್ಡಗಡಿಯ ನವ ಭಾರತ ತರುಣ ಕಲಾಸಂಘದ ಕಲಾವಿದರು ಅಭಿನಯಿಸುತ್ತಿದ್ದ ರಾಜ ವೀರ ಮದಕರಿ ನಾಯಕ ಕೃತಿಯನ್ನ ರಚಿಸಿದ್ದಂತಹ, ರಂಗ ಧೀಮಂತ ಮರಡಿಹಳ್ಳಿ ಸೀತಾರಾಮ ರೆಡ್ಡಿ ಅವರನ್ನ, ಈ ದುರ್ಗ ನೆನಪಿಸಿಕೊಳ್ಳಲೇ ಇಲ್ಲ.

ಈ ನೆಲದ ಶಾಸಕರು, ಇಲ್ಲಿನ ಸಚಿವರು, ಸಂಬಂಧಪಟ್ಟ ಇಲಾಖೆಗಳು, ಇವರ್ಯಾರಿಗೂ, ಇಲ್ಲಿನ ಸಾಂಸ್ಕೃತಿಕ ನೆಲೆಗಟ್ಟುಗಳ ಮೇಲೆ ಆಸಕ್ತಿಯೇ ಬರಲಿಲ್ಲವೇ. ಈ ಊರಲ್ಲಿ,ತರಾಸು ಅವರ ಹೆಸರಲ್ಲಿ ನಗರವಿದೆ, ಬೀದಿಯಿದೆ, ವೃತ್ತವಿದೆ, ನಾಡಿನ, ದೇಶದ, ಉದ್ದಗಲಕ್ಕೂ ಅವರ ಹೆಸರು ಹರಡಿಕೊಂಡಿದೆ, ಇನ್ನೇನು ಬೇಕಾಗಿತ್ತು.

ತಮ್ಮ ಜೀವಿತಾವಧಿಯ ಸಂಪೂರ್ಣ  ಬದುಕನ್ನ, ರಂಗಭೂಮಿಗೆ ಮೀಸಲಿರಿಸಿ, ಬದುಕಿದ ಯಾರೊಬ್ಬರಿಗಾದರೂ, ಈ ರಂಗಮಂದಿರದ ಮೇಲೆ ಹೆಸರು ಬರೆಸಬಹುದಿತ್ತಲ್ವಾ.

 ಯಾವ ಮಂತ್ರಿಗಳು, ಅಧಿಕಾರಿಗಳು, ಬಂದರೂ ಮೊದಲಿಗೆ ಪರಿಚಯಿಸಿಕೊಂಡು, ವೇದಿಕೆಗಳಲ್ಲಿ ಭಾಷಣ ಸಾಹಿತಿಯಾಗಿ, ನಿರೂಪಣೆ ಮಾಡುತ್ತಾ, ರಾಜ, ಮಹಾರಾಜ, ದೊರೆಗಳು, ಬುದ್ಧಿಗಳು ಅಂತ ಹೊಗಳುತ್ತಿದ್ದ, ಬಟ್ಟಂಗಿಯೊಬ್ಬನ ಅವಿವೇಕತನಕ್ಕೆ, ಈ ನೆಲದಲ್ಲಿ ದುಡಿದ ರಂಗ ಚೇತನಗಳ ಆತ್ಮಗಳಿಗೆ, ಖಂಡಿತವಾಗಿಯೂ ನೋವಾಗಿರಬೇಕು.

ಸುಬ್ಬರಾಯರೇ ಬದುಕಿದ್ದಿದ್ದರೆ, ಬಹುಶಃ ರಂಗಭೂಮಿಗೆ ದುಡಿದವರ, ಹೆಸರು ಬರೆಸಿ ಅಂತ ಅನ್ನುತ್ತಿದ್ದರೇನೋ?ಎಲ್ಲಾ ಕಾಲಕ್ಕೂ ಸಲ್ಲುವಂತಹ, ನೆಲಹೀನ ಕಳ್ಳಿ ನರಸಪ್ಪನಂತವರು ಇದ್ದೇ ಇರುತ್ತಾರಲ್ಲಾ, ಜಾತ್ಯಾತೀತ ಮುಖವಾಡ ಧರಿಸಿ ಜಾತಿ ಚೌಕಟ್ಟಿನೊಳಗೆ ಬದುಕುವಂಥವರು, ಅವರುಗಳಿಂದಲೇ ಇಂತಹ ಅನಾಹುತಗಳು, ನಡೆಯುತ್ತಲೇ ಇರುತ್ತವೆ.

ತ ರಾ ಸು ಹೆಸರಿನಿಂದ, ದುರ್ಗದ ರಂಗಮಂದಿರವೇನೋ ಶ್ರೀಮಂತವಾಗಿ ಕಾಣುತ್ತಿದೆ, ಇಲ್ಲಿಯೇ ರಂಗಸೇವೆ ಮಾಡಿ ಮಣ್ಣಾದಂತವರಿಗೆ, ಒಂದು ಗಲ್ಲಿಗೂ ಹೆಸರಿಲ್ಲದೆ ಕಳೆದು ಹೋದರಲ್ಲ, ಇವರ ಬಗ್ಗೆ ಯಾರು ಮಾತಾಡ್ತಾರೆ.

ತಳ ಸಮುದಾಯದವರ ಸಾಧನೆ ಶ್ರೇಷ್ಠತೆಗಳು ಕಸುಬರಿಕೆಯಲ್ಲಿ ಗುಡಿಸುವ ಕಸವಾಗಿಬಿಟ್ಟಿವೆ. ಬರೀ ಗಂಧಗಳ ಬಗ್ಗೆನೇ ಮಾತಾಡ್ತಿದ್ರೆ, ತೇಗ, ಹೊನ್ನೆ, ಮತ್ತಿ, ಮುಂತಾದವುಗಳನ್ನು ಮರೆತೇ ಬಿಡಬೇಕೇ.ಅವು ಸಹ ಇರುವವರೊಂದಿಗೆ, ಬರುವವರೊಂದಿಗೆ ಜೀವಿಸಬೇಕಲ್ಲವೇ, ಆದರೆ  ಕಳ್ಳಿ ನರಸಪ್ಪನ ಕುಲ, ಇಂತದ್ದನ್ನ ಅರ್ಥೈಸಿಕೊಳ್ಳಲೇ ಇಲ್ಲ.

 75ನೇ ಕನ್ನಡ ಸಾಹಿತ್ಯ ಸಮ್ಮೇಳನ 2009 ರಲ್ಲಿ, ಕವಿಗಳು, ಸಾಹಿತಿಗಳು ಆದಂತಹ ಎಲ್.ಬಸವರಾಜು ಅವರ ಅಧ್ಯಕ್ಷತೆಯಲ್ಲಿ, ಚಿತ್ರದುರ್ಗದಲ್ಲಿ ನಡೆದು, ಈ ನೆಲದ ಸಾಹಿತ್ಯ ಸಂಭ್ರಮಕ್ಕೆ ಮುನ್ನುಡಿ ಬರೆದಿತ್ತು.
ಊರು ಸಾಹಿತ್ಯ ಜಾತ್ರೆಯಲ್ಲಿ ಸಮ್ಮೇಳನ ಅಧ್ಯಕ್ಷರನ್ನು
, ನಾಡ ಸಾಹಿತ್ಯ ಸಿಂಹಾಸದಲ್ಲಿ ಕೂರಿಸಿ ಗೌರವಿಸಿತ್ತು. ಅಕ್ಷರ ಪಂಡಿತರು, ವಿದ್ವಾಂಸರು, ನಾಡಿನ ಹೆಸರಾಂತ ಕವಿಗಳು, ಕಥೆ ಕಮ್ಮಟಗಳು,ಕವಿ ಗೋಷ್ಠಿಗಳು,ಚರ್ಚೆಗಳು ವೇದಿಕೆಗಳಲ್ಲಿ ವಿಜೃಂಬಿಸಿದ್ದವು.
ಮುಂದುವರೆಯುವುದು…..
ಲೇಖನ-ಕುಮಾರ್ ಬಡಪ್ಪ, ಚಿತ್ರದುರ್ಗ.

- Advertisement -  - Advertisement -  - Advertisement - 
Share This Article
error: Content is protected !!
";