ಒಳ ಮೀಸಲಾತಿಗಾಗಿ ಜೀವಂತ ವ್ಯಕ್ತಿಯೇ ಶವವಾದ!!!

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಾದಿಗ ಸಮುದಾಯದ ವಿವಿಧ ಸಂಘಟನೆಗಳು, ಜನಪರ ಹೋರಾಟಗಾರರು, ದಲಿತ ಪರ ಸಂಘ ಸಂಸ್ಥೆಗಳು ಚಿತ್ರದುರ್ಗ ನಗರದ ಗಾಂಧಿ ಸರ್ಕಲ್ ನಲ್ಲಿ ಒಳ ಮೀಸಲಾತಿ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಸಾವಿರಾರು ದಲಿತರು ಬೃಹತ್ ಪ್ರತಿಭಟನೆ ಆಯೋಜಿಸಿದ್ದರು.

ನೀಲಿ ಶಾಲುಗಳನ್ನು ಹಿಡಿದುಕೊಂಡು ಜಾರಿಯಾಗಲಿ ಜಾರಿ ಯಾಗಲಿ ಒಳ ಮೀಸಲಾತಿ ಜಾರಿಯಾಗಲಿ ಎಂಬ ಘೋಷವಾಕ್ಯಗಳನ್ನು ಕೂಗುವುದರ ಮೂಲಕ ತಮ್ಮ ಪ್ರತಿಭಟನೆಯನ್ನು ತೀವ್ರ ಗೊಳಿಸಿದರು.

ಅಂಬೇಡ್ಕರ್ ಅವರ ಭಾವಚಿತ್ರವನ್ನು ಹಿಡಿದು ದಲಿತರಿಗೆ ಸಿಗಬೇಕಾದ ಸಾಮಾಜಿಕ ನ್ಯಾಯ ಸರ್ಕಾರಿ ಹುದ್ದೆ ಇತರೆ ಸ್ಥಾನಮಾನಗಳು ದೊರೆಯಬೇಕು ಒಳಮಿಸಲಾತಿಯನ್ನು ಶೀಘ್ರವೇ ಅನುಷ್ಠಾನಗೊಳಿಸ ಬೇಕೆಂದು ಆಗ್ರಹಿಸಿ ಪ್ರತಿಭಟಿಸಿದರು.

ಜೀವಂತ ವ್ಯಕ್ತಿಯಿಂದ ಸಿಎಂ ಮತ್ತು ಕಾಂಗ್ರೆಸ್ ಶವಯಾತ್ರೆ-
ಒಳ ಮೀಸಲಾತಿ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಸಾವಿರಾರು ದಲಿತರು ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಕಾಂಗ್ರೆಸ್ ಪಕ್ಷ ಮತ್ತು ಮುಖ್ಯಮಂತ್ರಿಗಳ ಅಣಕು ಶವ ಯಾತ್ರೆ ಮಾಡಲು ಉದ್ದೇಶಿಸಿದ್ದರು.

ಆದರೆ ಪೊಲೀಸರು ಇದಕ್ಕೆ ಅವಕಾಶ ನೀಡುವುದಿಲ್ಲ ಎನ್ನುವುದನ್ನು ಅರಿತ ದಲಿತ ಮುಖಂಡರು ಜೀವಂತ ವ್ಯಕ್ತಿಯನ್ನು ಚಟ್ಟದ ಮೇಲೆ ಮಲಗಿಸಿ, ಬಿಳಿ ಬಟ್ಟೆ ಹೊದಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ಶವ ಯಾತ್ರೆ ಮಾಡಿದರು.

ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವೃತ್ತದವರೆಗೆ ಬರುವ ತನಕ ಜೀವಂತ ವ್ಯಕ್ತಿಯನ್ನು ಚಟ್ಟದ ಮೇಲೆ ಮಲಗಿಸಿ ನಾಲ್ಕು ಮಂದಿ ಹೊತ್ತುಕೊಂಡು ಬರುತ್ತಿದ್ದರೆ ಮುಂದೆ ಹಲವರು ಬಾಯಿ ಬಡಿದುಕೊಂಡು ಸತ್ನಪ್ಪ ಸತ್ತ ಸಿದ್ದರಾಮಯ್ಯ ಸತ್ತ, ಸತ್ತಿತಪ್ಪ ಸತ್ತಿತು ಕಾಂಗ್ರೆಸ್ ಪಕ್ಷ ಸತ್ತಿತು ಎಂದು ಕಾಂಗ್ರೆಸ್, ಮುಖ್ಯಮಂತ್ರಿ, ಮಲ್ಲಿಕಾರ್ಜುನ ಖರ್ಗೆ, ಹೆಚ್.ಸಿಮಹದೇವಪ್ಪ ಸೇರಿದಂತೆ ಮತ್ತಿತರ ಬಲಗೈ ಸಚಿವರುಗಳ ವಿರುದ್ಧ ಧಿಕ್ಕಾರಗಳನ್ನು ಕೂಗಿ ದಲಿತರು ಆಕ್ರೋಶ ವ್ಯಕ್ತ ಪಡಿಸಿದರು.

ಜಾರಿಯಾಗಲಿ ಜಾರಿಯಾಗಲಿ ಒಳ ಮೀಸಲಾತಿ ಜಾರಿಯಾಗಲಿ ಎಂಬ ಘೋಷವಾಕ್ಯಗಳನ್ನು ಕೂಗುವುದರ ಮೂಲಕ ತಮ್ಮ ಪ್ರತಿಭಟನೆ ನಡೆಸಿದ ದಲಿತ ಮುಖಂಡರು ಡಿಸಿ ಸರ್ಕಲ್ ಬಳಿ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ಅಣುಕು ಶವಯಾತ್ರೆಯ ಪ್ರದರ್ಶನ ಮಾಡಿದರು.

ಜಿಲ್ಲಾಧಿಕಾರಿಗಳ ವೃತ್ತವನ್ನು ಮೂರು ಸಲ ಜೀವಂತ ವ್ಯಕ್ತಿ ಮಲಗಿದ್ದ ಚಟ್ಟವನ್ನು ಹೊತ್ತು ಸುತ್ತಿದರು. ರಾಜ್ಯ ಸರ್ಕಾರವನ್ನು ಎಚ್ಚರಿಸಲು ಪರಿಶಿಷ್ಟ ಜಾತಿಗಳ ಮೀಸಲಾತಿ ಜಾರಿ ಹೋರಾಟ ಸಮಿತಿಗಳ ಒಕ್ಕೂಟವು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಂತೆ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಮಾಡಲು ಆಯಾಯ ರಾಜ್ಯಗಳ ಪರಮಾಧಿಕಾರವಿದೆ.

ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಅದರಂತೆ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಬೇಕು. ಸರ್ಕಾರ ಯಾರ ಒತ್ತಡಕ್ಕೂ ಮಣಿಯಬಾರದು.

ಮಾದಿಗ ಸಮುದಾಯದವರು 30 ವರ್ಷಗಳಿಂದ ಒಳ ಮೀಸಲಾತಿಗಾಗಿ ಹೋರಾಟ ಮಾಡಿಕೊಂಡು ಬರಲಾಗಿದ್ದು, ಮುಖ್ಯಮಂತ್ರಿಗಳು ದ್ವಂದ್ವ ನೀತಿ ತಾಳದೆ ಮುಂದಿನ ಸಚಿವ ಸಂಪುಟದಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಅಂಗೀಕರಿಸಿ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಕೆಲ ದಲಿತ ಹೋರಾಟಗಾರರು ಅರೆ ಬೆತ್ತಲಾಗಿ ಸರ್ಕಾರದ ದ್ವಂದ್ವವನ್ನು ಖಂಡಿಸಿದರು. ದಲಿತ ಸಮುದಾಯದ ತಾಳ್ಮೆ ಪರೀಕ್ಷಿಸಬೇಡಿ, ಬಹುದೊಡ್ಡ ಸಂಖ್ಯೆಯಲ್ಲಿರುವ ಮಾದಿಗ ಜಾತಿಯವರು ಯಾವುದೇ ಇತರೆ ದಲಿತ ಸಮುದಾಯದ ಅನ್ನಕ್ಕೆ ಕೈ ಹಾಕುತ್ತಿಲ್ಲ.

ಮಾದಿಗರಿಗೆ ಆಗಿರುವ ಅನ್ಯಾಯದ ವಿರುದ್ಧ ಸಾಮಾಜಿಕ ನ್ಯಾಯ ನೀಡಿ ಎಂದು ಕೇಳುತ್ತಿದ್ದೇವೆ. ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತನ್ನ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಜಾರಿ ಮಾಡಿಯೇ ತೀರುತ್ತೇವೆಂದು ಭರವಸೆ ನೀಡಿತ್ತು. ಈಗ ಮೀನಾಮೇಷ ಎಣಿಸುತ್ತಿರುವ ಉದ್ದೇಶ ಏನು ಎಂದು ಹೋರಾಟಗಾರರು ಪ್ರಶ್ನಿಸಿದರು.

ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಹೊರಟ ಪ್ರತಿಭಟನಾ ಮೆರವಣಿಗೆಯಿಂದಾಗಿ ಅರ್ಧ ಗಂಟೆಗೂ ಹೆಚ್ಚಿನ ಕಾಲ ಮುಖ್ಯ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತ ಆಗಿತ್ತು.

ಜಿಲ್ಲಾಧಿಕಾರಿಗೆ ಪ್ರವೇಶ ನೀಡುವಂತ ಐದಾರು ಮಾರ್ಗಗಳನ್ನು ಪೊಲೀಸರು ಬಂದ್ ಮಾಡಿದ್ದರು. ಯಾವುದೇ ರೀತಿಯಾದ ಅಹಿತಕರ ಘಟನೆಗಳು ನಡೆಯಬಾರದೆಂದು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಬೃಹತ್ ಪ್ರತಿಭಟನೆಯಲ್ಲಿ ಮಹಿಳೆಯರು, ಮಕ್ಕಳು, ಸಮುದಾಯದ ಮುಖಂಡರು ವಕೀಲರು, ಯುವಕರು, ವಿವಿಧ ದಲಿತ ಪರ ಸಂಘ ಸಂಸ್ಥೆ ಪದಾಧಿಕಾರಿಗಳು, ಸಮುದಾಯ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ನಂತರ ಜಿಲ್ಲಾಧಿಕಾರಿಗಳು ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿದರು.

 

 

- Advertisement -  - Advertisement -  - Advertisement - 
Share This Article
error: Content is protected !!
";