ಕಿಲಾರಿ ಜೋಗಯ್ಯಗೆ ವಾಲ್ಮೀಕಿ ಪ್ರಶಸ್ತಿ: ಸರ್ಕಾರ ನನ್ನ ಸೇವೆ ಗುರುತಿಸಿದೆ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಪ್ರಸ್ತುತ ೨೦೨೪ರ ಮಹರ್ಷಿಶ್ರೀವಾಲ್ಮೀಕಿ ಪ್ರಶಸ್ತಿಯನ್ನು ತಾಲ್ಲೂಕಿನ ನನ್ನಿವಾಳ ಪಂಚಾಯಿತಿಯ ಗಡ್ಡದಾರಹಟ್ಟಿಯ ಕಿಲಾರಿ ಜೋಗಯ್ಯನವರಿಗೆ ದೊರಕಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

- Advertisement - 

ಕಿಲಾರಿ ಜೋಗಯ್ಯ ಚಿಕ್ಕವಯಸ್ಸಿನಿಂದಲೇ ತಮ್ಮ ಆರಾಧ್ಯ ದೈವ ಎಂದೇ ನಂಬಿರುವ ನೂರಾರು ದೇವರ ಎತ್ತುಗಳ ಪಾಲನೆ, ಪೋಷಣೆ ಮಾಡುವ ಮೂಲಕ ತಮ್ಮ ಮೂಲ ಸಂಸ್ಕೃತಿ, ಜಾನುವಾರು ರಕ್ಷಣೆಯ ಕಾರ್ಯವನ್ನು ಅನೇಕ ದಶಕಗಳಿಂದ ಮಾಡುತ್ತಾ ಬಂದಿದ್ದಾರೆ.

- Advertisement - 

ಬಿಸಿಲು, ನೆರಳು, ಮಳೆ ಎನ್ನದೆ ದಿನದ ೨೪ ಗಂಟೆಗಳ ಕಾಲ ದೇವರ ಎತ್ತುಗಳ ಜೊತೆಯಲ್ಲೇ ಇದ್ದು ಅವುಗಳಿಗೆ ಅಪಾಯವಾಗದಂತೆ ಜಾಗ್ರತೆ ವಹಿಸಿದ್ದಾರೆ. 

ಕಿಲಾರಿ ಜೋಗಯ್ಯನವರ ಜಾನುವಾರುಗಳ ಸಂರಕ್ಷಣೆ ಕಾರ್ಯವನ್ನು ರಾಜ್ಯವಾಲ್ಮೀಕಿ ಅಭಿವೃದ್ದಿ ನಿಗಮ ಗುರುತಿಸಿ ಅವರಿಗೆ ಪ್ರತಿಷ್ಠಿತ ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಿದೆ. ೫ ಲಕ್ಷ ನಗದು ಹಣ, ಚಿನ್ನದ ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.

- Advertisement - 

ಸಚಿವರಾದ ಸತೀಶ್‌ ಜಾರಕಿಹೋಳಿ, ಎಚ್.ಕೆ.ಪಾಟೀಲ್, ಮಾಜಿ ಸಚಿವ ಎಚ್.ಆಂಜನೇಯ, ವಿ.ಎಸ್.ಉಗ್ರಪ್ಪ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಿಲಾರಿಜೋಗಯ್ಯ, ರಾಜ್ಯದ ಪ್ರತಿಷ್ಠಿತ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ದೊರಕಿರುವುದು ಸಂತಸ ತಂದಿದೆ. ಎರಡನೇ ಬಾರಿ ಚಳ್ಳಕೆರೆ ತಾಲ್ಲೂಕಿಗೆ ಈ ಗೌರವ ಸಲ್ಲಿಕೆಯಾಗುತ್ತಿದೆ.

ಈ ಹಿಂದೆಮಾಜಿ ಸಚಿವ ತಿಪ್ಪೇಸ್ವಾಮಿ ಅವರು ಈ ಪ್ರಶಸ್ತಿ ಪಡೆದಿದ್ದರು. ನನ್ನ ಸೇವೆಯನ್ನು ಸರ್ಕಾರ ಗುರುತಿಸಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲೂ ಜಾನುವಾರುಗಳ ಸಂರಕ್ಷಣೆ ಕಾರ್ಯ ಮುಂದುವರೆಸುವುದಾಗಿ ತಿಳಿಸಿದರು.

 

 

Share This Article
error: Content is protected !!
";