ರಾಮ-ಲಕ್ಷ್ಮಣ-ಭರತ-ಶತ್ರುಜ್ಞ-ರಾವಣ-ಸೀತೆ-ಆಂಜನೇಯ-ವಾಲಿ–ಸುಗ್ರೀವ ಈ ದಿನ ಯಾರನ್ನ ಸ್ಮರಿಸೋಣ?

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಾಲ್ಮೀಕಿ ಜಯಂತಿ………ಈ ದಿನ ಯಾರನ್ನು ಸ್ಮರಿಸೋಣ…………
,ರಾಮ – ಲಕ್ಷ್ಮಣ – ಭರತ – ಶತ್ರುಜ್ಞ – ರಾವಣ – ಸೀತೆ – ಆಂಜನೇಯ – ವಾಲಿ – ಸುಗ್ರೀವ – ವಿಭೀಷಣ – ದಶರಥ – ಶಬರಿ – ಶ್ರವಣ ಕುಮಾರ……. ಹೀಗೆ ಸಾಗುವ ಪಾತ್ರಗಳೋ…. ಅಥವಾ, ರಾಮಾಯಣವೆಂಬ ಬೃಹತ್ ಗ್ರಂಥವನ್ನೋ,

ಅಥವಾ, ಅದರ ಕರ್ತೃ ವಾಲ್ಮೀಕಿಯನ್ನೋ, ಅಥವಾ, ವಾಲ್ಮೀಕಿಯ  ನಾಯಕ ಜನಾಂಗವನ್ನೋ, ಅಥವಾ, ಈಗಿನ ಆ ಜಾತಿಯ ರಾಜಕೀಯ ನಾಯಕರನ್ನೋ……..

ಐತಿಹಾಸಿಕ ದಾಖಲೆಗಳ ಪ್ರಕಾರ ವಾಲ್ಮೀಕಿ ಎಂಬ ಹೆಸರಿನ, ಬೇಟೆಯಾಡಿ ಜೀವನ ನಡೆಸುತ್ತಿದ್ದ  ವ್ಯಕ್ತಿ ರಾಮಾಯಣ ಎಂಬ ಗ್ರಂಥವನ್ನು ರಚಿಸುತ್ತಾರೆ….

ರಾಮ ಎಂಬ ಪಾತ್ರವನ್ನು ಆದರ್ಶ ಪುರುಷನಂತೆ ಕೇಂದ್ರ ಸ್ಥಾನದಲ್ಲಿ ನಿಲ್ಲಿಸಿ, ಸೀತೆ ಎಂಬ ಹೆಣ್ಣನ್ನು ಮಹಿಳೆಯರ ಆದರ್ಶದ ಪ್ರತೀಕವಾಗಿ ಚಿತ್ರಿಸಿ, ಲಕ್ಷ್ಮಣ ಭರತ ಶತೃಘ್ಞರಂತ ಆದರ್ಶ ಸಹೋದರರನ್ನು, ರಾವಣನೆಂಬ ಪಾತ್ರವನ್ನು ದುಷ್ಟತನದ ಸಂಕೇತವಾಗಿ ಬಳಸಿ, ಹನುಮಂತನೆಂಬ ಪಟ್ಟ ಶಿಷ್ಯನಂತ ನಂಬುಗೆಯ ವ್ಯಕ್ತಿತ್ವವನ್ನು ಮತ್ತೂ ಹಲವಾರು ಪಾತ್ರಗಳನ್ನು ತುಂಬಾ ಸೂಕ್ಷ್ಮವಾಗಿ ಸೃಷ್ಟಿಸಿರುತ್ತಾರೆ.

ಕೇವಲ ಪಾತ್ರಗಳ ಸೃಷ್ಟಿ ಮಾತ್ರವಲ್ಲದೆ ಆಗಿನ ಕಾಲದ ವ್ಯವಸ್ಥೆಯ ಎಲ್ಲಾ ಮಗ್ಗುಲುಗಳನ್ನು ಮತ್ತು ನಂಬಿಕೆಗಳನ್ನು, ಆಚರಣೆಗಳನ್ನು, ಅಗಸನ ಮಾತು, ರಾಜ ಪುರೋಹಿತರ ಸಲಹೆ, ಶಂಬೂಕನ ಹತ್ಯೆ ಮುಂತಾದ ಅನೇಕ ಅಂಶಗಳನ್ನು ಮತ್ತು ಬಹುಮುಖ್ಯವಾಗಿ ಆಗಿನ ಕಾಲದ ಭೌಗೋಳಿಕ ಪ್ರದೇಶಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ‌.

ಇದ್ದನ್ನೆಲ್ಲಾ ಗಮನಿಸಿದಾಗ ನಾವು ನಿಜವಾಗಲೂ ಸ್ಮರಿಸಬೇಕಾಗಿರುವುದು…..ವಾಲ್ಮೀಕಿ ಎಂಬ ವ್ಯಕ್ತಿಯನ್ನು, ಮತ್ತು ಆತನ ಅತ್ಯದ್ಭುತ ಕ್ರಿಯಾತ್ಮಕ ಬುದ್ದಿ ಶಕ್ತಿಯನ್ನು, ಶತಶತಮಾನಗಳು ಕಳೆದರು ಇಂದಿಗೂ ಹೊಸ ಹೊಸ ಹೊಳಹುಗಳನ್ನು ನೀಡುತ್ತಿರುವ ಆ ಮಹಾನ್ ಗ್ರಂಥವನ್ನು ಸೃಷ್ಟಿಸಿದ ಆತನ ಚಿಂತನಾ ಪ್ರಜ್ಞೆಯನ್ನು……ಆ ಕಾರಣಕ್ಕಾಗಿ ವಾಲ್ಮೀಕಿಯನ್ನು ನೆನೆಯುತ್ತಾ……..

 

ಎಲ್ಲಾ ರೀತಿಯ ಕಲೆಗಾರರಿಗೆ ವಾಲ್ಮೀಕಿ ಕ್ರಿಯಾತ್ಮಕತೆಯಲ್ಲಿ ಮುಗಿಯದ ಅಕ್ಷಯ ಪಾತ್ರೆಯಂತ ಸ್ಪೂರ್ತಿಯ ಚಿಲುಮೆಯಾಗಲಿ ಎಂದು ಆಶಿಸುತ್ತಾ…….ಹಾಗೆಯೇ ಆತನು ಸೃಷ್ಠಿಸಿದ ಶ್ರೀರಾಮರ ಕುರಿತು ಒಂದಷ್ಟು….. ಶ್ರೀರಾಮ………..ಮಹಾತ್ಮ ಗಾಂಧಿಯವರ ಶ್ರೀರಾಮ ಮತ್ತು ರಾಮರಾಜ್ಯ,

ಬಾಬಾ ಸಾಹೇಬರ ಶ್ರೀರಾಮ ಮತ್ತು ಭೀಮ ರಾಜ್ಯ, ವಾಲ್ಮೀಕಿಯವರ ರಾಮಾಯಣದ ಶ್ರೀರಾಮ, ಸ್ವಾಮಿ ವಿವೇಕಾನಂದರ ಭಾರತದ ಸಾಂಸ್ಕೃತಿಕ ಶ್ರೀರಾಮ, ದ್ರಾವಿಡ ಚಳವಳಿಯ ಪೆರಿಯಾರ್ ರಾಮಸ್ವಾಮಿಯವರ ಪೌರಾಣಿಕ ಶ್ರೀರಾಮ, ರಾಜಕೀಯ ಪಕ್ಷಗಳ‌ಶ್ರೀರಾಮ, ಮುಸ್ಲಿಮರ ಶ್ರೀರಾಮ,( ಅಯೋಧ್ಯೆ ಬಾಬರಿ ಮಸೀದಿ ಧ್ವಂಸದ ನಂತರ ಅವರಲ್ಲಿ ರಾಮರ ಬಗೆಗಿನ ಅಭಿಪ್ರಾಯ ) ಅಯೋಧ್ಯೆಯ ಈಗಿನ ಶ್ರೀರಾಮ, ಜನಸಾಮಾನ್ಯರ ಮನಸ್ಸಿನ ಶ್ರೀರಾಮ…..

ಈ ಶ್ರೀರಾಮ ಐತಿಹಾಸಿಕ ಪುರುಷರೇ ಅಥವಾ ಪೌರಾಣಿಕ ಪಾತ್ರವೇ ? ರಾಮಾಯಣ ಐತಿಹಾಸಿಕ ಎನ್ನಲು ಆ ಬೃಹತ್ ಗ್ರಂಥ ಇತಿಹಾಸದ ಮಾನದಂಡಗಳನ್ನು ಪೂರೈಸುತ್ತದೆಯೇ ? ಈ ಪ್ರಶ್ನೆಗೆ ಉತ್ತರ ಸುಲಭವಾದರು ಇಂದಿನ ಮನಸ್ಥಿತಿಯಲ್ಲಿ ತುಂಬಾ ಸಂಕೀರ್ಣ ಸಹ ಆಗಿದೆ. ಮನಸ್ಸನ್ನು ತುಂಬಾ ಮುಕ್ತವಾಗಿ ಇಟ್ಟುಕೊಂಡು ಸತ್ಯದ ಹುಡುಕಾಟ ಮಾತ್ರ ಆದ್ಯತೆಯಾಗಿದ್ದರೆ, ಎಲ್ಲಾ ಭಾವ ಭಕ್ತಿ ಭಯ ಪೂರ್ವಾಗ್ರಹಗಳನ್ನು ಮೀರಿದರೆ ಉತ್ತರ ಸುಲಭವಾಗಬಹುದು….

 ಕನಿಷ್ಠ ಭಾರತದ ನೆಲದಲ್ಲಿ ಅದರ ಬಗ್ಗೆ ವಿಮರ್ಶಿಸುವ ಸ್ವಾತಂತ್ರ್ಯ ಇರುವುದು ಅತ್ಯಂತ ಹೆಮ್ಮೆಯ ವಿಷಯ. ಶ್ರೀರಾಮ ಎಂದರೆ ಯಾರು ರಾಮ ಒಬ್ಬ ದೇವರು, ಅವರು ಐತಿಹಾಸಿಕ ವ್ಯಕ್ತಿ. ದಶರಥ-ಕೌಸಲ್ಯರ ಹಿರಿಯ ಪುತ್ರ. ಅಯೋಧ್ಯೆಯಲ್ಲಿ ಜನಿಸಿದರು. ಅವರ ವ್ಯಕ್ತಿತ್ವ ಮತ್ತು ಆಡಳಿತವೇ ಒಂದು ಆದರ್ಶ. ಆತ ಒಬ್ಬ ಮರ್ಯಾದಾ ಪುರುಷೋತ್ತಮ. ದೇಶ ಕಂಡ ಮಹಾನ್ ಚಿಂತಕ ಮಹಾತ್ಮ ಗಾಂಧಿ ಸಹ ರಾಮ ರಾಜ್ಯದ ಕನಸು ಕಂಡವರು.

ಆದ್ದರಿಂದ. ರಾಮನ ಹುಟ್ಟಿದ ಊರಿನಲ್ಲಿ ರಾಮ ಮಂದಿರವನ್ನು ಬಾಬರ್ ಉರುಳಿಸಿ ಕಟ್ಟಿಸಿದ್ದ ಮಸೀದಿಯನ್ನು ಮತ್ತೆ ಉರುಳಿಸಿ ಈಗ ಭವ್ಯ ರಾಮ ಮಂದಿರ ನಿರ್ಮಿಸಿರುವುದು ಸ್ವಾಭಿಮಾನಿ ಹಿಂದೂಗಳ ಹೆಮ್ಮೆ. ಅಲ್ಲಿ  ಸ್ಥಾಪಿತವಾಗಿರುವ ಮಂದಿರವನ್ನು ನಾವೆಲ್ಲರೂ ಸಂಭ್ರಮಿಸಬೇಕು ಎಂದು ಸಂತೋಷ ಪಡುತ್ತಿರುವ ಎಲ್ಲರಿಗೂ ಅಭಿನಂದನೆಗಳು ಮತ್ತು ಆ ಸ್ವಾತಂತ್ರ್ಯ ನಿಮಗಿದೆ. ನಿಮ್ಮ ಭಕ್ತಿ ನಂಬಿಕೆ ಭಾವನೆಗಳು ನಿಮ್ಮ ಸ್ವಂತ ಚಿಂತನೆಯಿಂದ ರೂಪಗೊಂಡಿರುತ್ತದೆ. ಅದು ನಿಮ್ಮ ಅಭಿಪ್ರಾಯ. ಅದನ್ನು ಗೌರವಿಸುತ್ತಾ………..

 ಅದರ ಜೊತೆಗೆ ರಾಮ ಒಬ್ಬ ಕಾಲ್ಪನಿಕ ವ್ಯಕ್ತಿ. ವಾಲ್ಮೀಕಿ ಎಂಬ ಬರಹಗಾರ ಅಂದಿನ ಸಾಮಾಜಿಕ ವ್ಯವಸ್ಥೆ ಪ್ರತಿಬಿಂಬಿಸುವ ಕಲ್ಪನಾ ಲೋಕವನ್ನು ಅಕ್ಷರಗಳಲ್ಲಿ ಮೂಡಿಸಿದ್ದಾರೆ. ಅದನ್ನೇ ದೇವರೆಂದು ಭ್ರಮಿಸಲಾಗಿದೆ. ಆ ಭ್ರಮಾಲೋಕದ ನಂಬಿಕೆಯನ್ನೇ ರಾಜಕೀಯಗೊಳಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಪಕ್ಷ ಆಡಳಿತ ನಡೆಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುವುದಕ್ಕೂ, ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅದರ ಭವ್ಯತೆಯ ವಿಜೃಂಭಣೆ ಬಗ್ಗೆ ಪ್ರಶ್ನೆ ಮಾಡುವವರನ್ನೂ ಪ್ರಶ್ನಿಸಲು ಬಿಡಿ…….

 ಸನಾತನ ಧರ್ಮ ಇತರ ಧರ್ಮಗಳಂತೆ ತನ್ನದೇ ಶ್ರೇಷ್ಠ ಎಂದು ಹೇಳುವುದಿಲ್ಲ. ಪ್ರಶ್ನಿಸುವುದನ್ನು ಪ್ರೋತ್ಸಾಹಿಸುತ್ತದೆ. ಹಿಂದೂ ಧರ್ಮದ ಮೂಲ ವೇದ ಉಪನಿಷತ್ತುಗಳು ಸೃಷ್ಟಿಯಾಗಿರುವುದೇ ಪ್ರಶ್ನೆಗಳ ಮೂಲಕವೇ, ಭಗವದ್ಗೀತೆ ರೂಪ ತಳೆದಿರುವುದೇ ಪ್ರಶ್ನೆಗಳ ಮೂಲಕ, ಬೌದ್ಧ, ಜೈನ, ಸಿಖ್ ಧರ್ಮಗಳು ಜನ್ಮ ತಳೆದಿರುವುದೇ ಪ್ರಶ್ನೆಗಳ ಮುಖಾಂತರ, ಬಸವ, ವಿವೇಕಾನಂದ, ರಮಣ ಮಹರ್ಷಿ, ಗಾಂಧಿ, ಅಂಬೇಡ್ಕರ್, ಲೋಹಿಯಾ ಎಲ್ಲರೂ ಪ್ರಶ್ನಿಸುವ ಮುಖಾಂತರವೇ ತಮ್ಮ ಚಿಂತನೆಗಳನ್ನು ಬೆಳೆಸಿಕೊಂಡವರು….

 ಪ್ರಶ್ನೆಗಳೇ ಒಂದು ಜೀವಂತ ಸಮಾಜದ, ಅಭಿವೃದ್ಧಿ ದೇಶದ ಮಾನದಂಡಗಳು. ರಾಮಾಯಣ ಎಂಬುದು ವಾಲ್ಮೀಕಿ ಎಂಬ ಐತಿಹಾಸಿಕ ವ್ಯಕ್ತಿ ಮತ್ತು ವಿಶ್ವ ಮಟ್ಟದ ಪ್ರಖ್ಯಾತ ಸಾಹಿತಿ ಬರೆದ ಒಂದು ಬೃಹತ್ ಗ್ರಂಥ. ಅಂದಿನ ಸಾಮಾಜಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಇಲ್ಲಿನ ಧಾರ್ಮಿಕ ನಂಬಿಕೆಗಳ ಆಧಾರದಲ್ಲಿ ಭೌಗೋಳಿಕ ಸನ್ನಿವೇಶಗಳನ್ನು ತನ್ನ ಜ್ಞಾನದ ಮಿತಿಯಲ್ಲಿ ಗ್ರಹಿಸಿ ರಚಿಸಿದ ಸಾಹಿತ್ಯಿಕವಾಗಿ ಅತ್ಯಂತ ಪ್ರಭಾವಶಾಲಿ ಕೃತಿ.

ಶ್ರೀರಾಮನೆಂಬ ಪಾತ್ರವನ್ನು ಮುಖ್ಯವಾಗಿ ಚಿತ್ರಿಸಿ ಆತನನ್ನು ಪ್ರಭುತ್ವದ ಮತ್ತು ಕೌಟುಂಬಿಕ ಮೌಲ್ಯಗಳ ಆದರ್ಶ ಪುರುಷನನ್ನಾಗಿ ಚಿತ್ರಿಸಿದರು.

ವಾಲ್ಮೀಕಿಯವರ ಮೂಲ ಉದ್ದೇಶವೇ ರಾಮನನ್ನು ಸನಾತನ ಧರ್ಮದ ಬಹುಮುಖ್ಯ ನಂಬಿಕೆಯಾದ ಏಕ ಪತ್ನಿತ್ವ ಮತ್ತು ಸರ್ವಗುಣ ಸಂಪನ್ನ ಎಂದು ಚಿತ್ರಿಸಿರುವ ಕಾರಣ ಇದು ಒಬ್ಬ ಬರಹಗಾರನ ಕಲ್ಪನೆಯಲ್ಲಿ ಮೂಡಿದ ಪಾತ್ರವಾದ್ದರಿಂದ ಅದರಲ್ಲಿ ನಾವು ಏನೇನೋ ಹುಡುಕುವ ಬದಲು ಇಷ್ಟವಾದರೆ ಓದಿ ಅಳವಡಿಸಿಕೊಳ್ಳೋಣ, ಇಲ್ಲದಿದ್ದರೆ ನಿರ್ಲಕ್ಷಿಸೋಣ ಅಥವಾ ಶಕ್ತಿ ಇದ್ದರೆ ಬುದ್ದಿ ಇದ್ದರೆ ಸಾಮರ್ಥ್ಯವಿದ್ದರೆ ಅದಕ್ಕಿಂತ ಉತ್ತಮ ಕೃತಿ ರಚಿಸೋಣ. ತೀರಾ ಅಸಂಭಧ್ಧ ಹೇಳಿಕೆ ಅಥವಾ ಅನರ್ಥ ನೀಡಬಾರದು…..

 ಒಂದು ಕೃತಿಯನ್ನು ವಿಮರ್ಶಿಸಿ ಅದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಅವರಿಗೆ ರಾಮ ಕೆಟ್ಟದಾಗಿ ಕಂಡರೆ ಅದು ಅವರ ಗ್ರಹಿಕೆ. ಒಳ್ಳೆಯದಾಗಿ ಕಂಡರೆ ಅದು ನಿಮ್ಮ ಗ್ರಹಿಕೆ. ಅದಕ್ಕಿಂತ ಹೆಚ್ಚಿನ ಚರ್ಚೆ ಮತ್ತು ಕೂಗಾಟ ಅನಾವಶ್ಯಕವೆನಿಸುತ್ತದೆ. ನಿಮ್ಮ ರಾಮ ನಿಮಗ ಆದರ್ಶ ಎಂಬ ಬಲವಾದ ನಂಬಿಕೆ ನಿಮ್ಮದಾದಾರೆ ಅದನ್ನು ಹೋಗಲಾಡಿಸಲು ಮೂರನೆಯ ವ್ಯಕ್ತಿಗೆ ಹೇಗೆ ಸಾಧ್ಯ. ಹಾಗೇ ದೇಶದ್ರೋಹಿ, ಧರ್ಮದ್ರೋಹಿ ಎಂಬುದೂ ಅಷ್ಟೇ ಮೂರ್ಖತನವಾಗುತ್ತದೆ.

ಇನ್ನೊಂದು, ಶಂಬೂಕ ಎಂಬ ಕೆಳ ಜಾತಿಯವನು ವಿಧ್ಯೆ ಕಲಿತನೆಂದು ರಾಮ ಅವನನ್ನು ಕೊಲ್ಲಿಸಿದ ಎಂಬುದು. ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಆಗಿನ ದಿನಗಳಲ್ಲಿ ಅಸ್ಪೃಶ್ಯರ ನೆರಳನ್ನು ಸಹ ಸೋಕಿಸಿಕೊಳ್ಳುವುದು ಪಾಪ ಎಂಬ ಭಾವನೆಯಿದ್ದಾಗ ವಾಲ್ಮೀಕಿ ಆ ವಾಸ್ತವವನ್ನು ತಮ್ಮ ಗ್ರಂಥದಲ್ಲಿ ಚಿತ್ರಿಸಿರಬಹುದು. ಅದು ಆಗಿನ ಸಾಮಾಜಿಕ ವ್ಯವಸ್ಥೆಯನ್ನು ತಿಳಿಸುತ್ತದೆ. 2024 ರಲ್ಲಿಯೂ ಅಸ್ಪೃಶ್ಯತೆ ಇರುವಾಗ ಇದೇನು !!!! ಆದರೆ ಅದು ಆದರ್ಶವಲ್ಲ, ಅನಾಗರಿಕತೆ ಮತ್ತು ಅಮಾನವೀಯತೆ.

 ಒಟ್ಟಿನಲ್ಲಿ ಒಂದು ಕಾಲ್ಪನಿಕ ಪಾತ್ರವನ್ನು ಕೃತಿಕಾರನ ಮೂಲ ಆಶಯವನ್ನು ಸರಿಯಾಗಿ ಗ್ರಹಿಸಿ ಪ್ರತಿಕ್ರಿಯಿಸುವುದು ಉತ್ತಮ. ಹಾಗೇ ಭಿನ್ನ ರೀತಿಯ ಆಲೋಚನೆಗಳಿದ್ದಲ್ಲಿ ಅದು ಸಹ ಆ ವ್ಯಕ್ತಿಯ ವೈಯಕ್ತಿಕ ಗ್ರಹಿಕೆ. ಅದನ್ನು ಒಪ್ಪುವ ಅಥವಾ ನಿರ್ಲಕ್ಷಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಅದು ನಮ್ಮ ನಂಬಿಕೆಗಳ ಮೇಲೆ ಹಲ್ಲೆ ಎನ್ನುವುದು ಸರಿಯಲ್ಲ. ನಮ್ಮ ನಂಬಿಕೆ ನಮ್ಮ ಸ್ವಂತದ್ದು. ಅದನ್ನು ಆಂತರಿಕವಾಗಿ ಗಟ್ಟಿ ಮಾಡಿಕೊಳ್ಳುವುದು ನಮಗೆ ಸೇರಿದ್ದು.

ಆದರೂ ಒಂದು ಕಾಲ್ಪನಿಕ ಪಾತ್ರಕ್ಕಿಂತ ಐತಿಹಾಸಿಕ ಮಹಾನ್ ವ್ಯಕ್ತಿಗಳಾದ ಬುದ್ದ ಬಸವ ವಿವೇಕಾನಂದ ಗಾಂಧಿ ಅಂಬೇಡ್ಕರ್ ಮುಂತಾದವರ ಬಗ್ಗೆ ಹೆಚ್ಚಿನ ಚರ್ಚೆ ಉತ್ತಮವೆನಿಸುತ್ತದೆ.

ಆ ನಿಟ್ಟಿನಲ್ಲಿ ಮತ್ತಷ್ಟು ಯೋಚಿಸುವ ಆಶಯದೊಂದಿಗೆ….
ಭಾವನೆ, ಭಕ್ತಿ, ನಂಬಿಕೆ, ರಾಜಕೀಯ, ಪ್ರಚಾರ ಮುಂತಾದ ಸಮೂಹ ಸನ್ನಿಯಲ್ಲಿ ನಿಮ್ಮ ಸ್ವತಂತ್ರ ಚಿಂತನೆಯನ್ನು ಮರೆಯಬೇಡಿ. ಅದಕ್ಕೂ ಮನದ ಮೂಲೆಯಲ್ಲಿ ಸ್ವಲ್ಪ ಅವಕಾಶ ಇರಲಿ. ಇನ್ನೂ ಭೂಕಂಪ, ಪ್ರವಾಹ, ಯುದ್ಧಗಳು ಅದರ ಪರಿಣಾಮಗಳ ಭೀಕರತೆ ಸಾಕಷ್ಟು ಪ್ರಮಾಣದಲ್ಲಿ ಹಾನಿ ಮಾಡುತ್ತಿದೆ.  ಯಾವ ರಾಮ ಲಕ್ಷ್ಮಣ ಅಲ್ಲಾ ಜೀಸಸ್ ಗಳು ಏನೂ  ಮಾಡುತ್ತಿಲ್ಲ. ಯಾರೂ ಬೆವರು ಸುರಿಸದೆ ಅಕ್ಕಿ ಗೋದಿ ಬೆಳೆಯಲಾಗುತ್ತಿಲ್ಲ, ಯಾವ ಮಾಧ್ಯಮಗಳು  ರಕ್ಷಣೆ ಮಾಡುತ್ತಿಲ್ಲ….

 ಅಂದು, ರಾಜ ಮಹಾರಾಜರುಗಳ ಆಡಳಿತದಲ್ಲಿ ಒಬ್ಬರಿಗೊಬ್ಬರು ಕೊಂದುಕೊಳ್ಳುವಾಗ ಯಾರ ಯಾವ ಶ್ರೀರಾಮರು ರಕ್ಷಿಸಲಿಲ್ಲಅರಬ್ ಪರ್ಶಿಯನ್ ಮೊಘಲರು ಮುಂತಾದ ಮುಸ್ಲಿಂ ದಾಳಿಕೋರರು ಭಾರತದ ಮೇಲೆ ದಾಳಿ ಮಾಡಿ ವಶಪಡಿಸಿಕೊಂಡಾಗಲು ಯಾವ ರಾಮರೂ ದೇಶ ಕಾಪಾಡಲಿಲ್ಲ, ಬ್ರಿಟಿಷ್ ಫ್ರೆಂಚ್ ಡಚ್ ಮುಂತಾದ ವಿದೇಶಿ ವ್ಯಾಪಾರಿಗಳು ದೇಶವನ್ನು ಆಕ್ರಮಿಸಿ ಕೊಳ್ಳೆ ಹೊಡೆಯುವಾಗಲು ಯಾರ ಶ್ರೀರಾಮರು ನೆರವಿಗೆ ಬರಲಿಲ್ಲ, ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕರು ಗಲ್ಲಿಗೇರುವಾಗ ಶ್ರೀರಾಮ ಸಹಾಯ ಮಾಡಲಿಲ್ಲಭಾರತದ ವಿಭಜನೆಯ ಸಮಯದಲ್ಲಿ ನಡೆದ ಹತ್ಯಾಕಾಂಡ ನಿಲ್ಲಿಸಲಿಲ್ಲಕಾಶ್ಮೀರಿ ಪಂಡಿತರ ಮಾರಣಹೋಮದಲ್ಲಿ ಶ್ರೀರಾಮ ನೆರವಾಗಲಿಲ್ಲಕನಿಷ್ಠ ಕೊರೋನಾ ಸಂದರ್ಭದಲ್ಲಿ ಜನರ ಪ್ರಾಣ ಉಳಿಸಲಿಲ್ಲಹೋಗಲಿ ಈ ದೇಶದ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಿ ಸಮ ಸಮಾಜ ನಿರ್ಮಾಣ ಮಾಡಲು ಶ್ರೀರಾಮರಿಗೆ ಸಾಧ್ಯವಾಗಲಿಲ್ಲ,

ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಆಗಲಿಲ್ಲ…..ಹಾಗೆಯೇ ಮಧ್ಯಪ್ರಾಚ್ಯದ ಹಿಂಸೆಯನ್ನು ತಡೆಯಲು ಅಲ್ಲಾ ಜೀಸಸ್ ಗಳಿಗೆ ಸಾಧ್ಯವಾಗುತ್ತಿಲ್ಲ……

 ಈಗ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಿಸಿದ ಮಾತ್ರಕ್ಕೆ ಏನೂ ವ್ಯತ್ಯಾಸ ಆಗುವುದಿಲ್ಲ. ಕೇವಲ ಜನರ ಭಾವನೆ ಮತ್ತು ಭಕ್ತಿಯ ಸಮಾಧಾನ ಆಗಬಹುದು.

 ಆದ್ದರಿಂದ ನಮ್ಮೆಲ್ಲರ ಪ್ರಯತ್ನ ರಾಮ ಮಂದಿರ ನಿರ್ಮಾಣಕ್ಕಿಂತ ರಾಮ ರಾಜ್ಯದ ನಿರ್ಮಾಣಕ್ಕೆ, ರಾಮನಂತ ಆದರ್ಶ ವ್ಯಕ್ತಿಯ ವ್ಯಕ್ತಿತ್ವ ಹೊಂದಲು ಪ್ರಯತ್ನಿಸಬೇಕಿದೆ. ಮಂದಿರ ಒಂದು ಸಾಂಕೇತಿಕ ಮಾತ್ರ.

 ಸರಿಯೋ ತಪ್ಪೋ, ಒಳ್ಳೆಯದೋ ಕೆಟ್ಟದ್ದೋ ಇತಿಹಾಸ ಏನೇ ಇರಲಿ ಈ ದೇಶದಲ್ಲಿ ಈಗಲೂ ಸುಮಾರು 20 ಕೋಟಿ ಮುಸ್ಲಿಂ ಸಮುದಾಯದ ಜನರು ನಮ್ಮ ನಡುವೆ ಭಾರತೀಯ ಪ್ರಜೆಗಳಾಗಿ ಸಮಾನ ಹಕ್ಕು ಮತ್ತು ಕರ್ತವ್ಯಗಳೊಂದಿಗೆ ವಾಸಿಸುತ್ತಿದ್ದಾರೆ. ಅವರ ಭಾವನೆಗಳನ್ನು ಗೌರವಿಸುವುದು ಸಹ ದೇಶದ ಶಾಂತಿ, ಅಭಿವೃದ್ಧಿ ಮತ್ತು ಒಟ್ಟು ಹಿತಾಸಕ್ತಿಯಿಂದ ಮುಖ್ಯ ಎಂಬ ಅರಿವು ಸಹ ಇರಬೇಕು.

 ಯಾರು ಏನೇ ಹೇಳಿದರು ಧರ್ಮ ಎಂಬುದು ಒಂದು ಅಫೀಮು. ಧಾರ್ಮಿಕ ಮೂಲಭೂತವಾದ ತುಂಬಾ ಅಪಾಯಕಾರಿ. ದೇವರು ಧರ್ಮದ ಹೆಸರಿನಲ್ಲಿ ಕೆಟ್ಟ ಕೆಲಸ ಮಾಡಲು ಎಲ್ಲಾ ಧರ್ಮಗಳಲ್ಲಿ ತುಂಬಾ ಜನ ಬೇಕಾಗಿಲ್ಲ. ಕೆಲವೇ ನರ ರಾಕ್ಷಸರು ಸಾಕಷ್ಟು ಪ್ರಾಣ ಹಾನಿ ಮಾಡಬಹುದು. ಪರಿಸ್ಥಿತಿಯ ಲಾಭ ಪಡೆಯಲು ದುಷ್ಟ ಜನ ಕಾಯುತ್ತಿರುತ್ತಾರೆ. ಅವರನ್ನು ಪ್ರಚೋದಿಸುವುದು ಕೂಡಾ ನಾವು ಮಾಡಬಹುದಾದ ದೊಡ್ಡ ತಪ್ಪಾಗಬಹುದು….

 ಮಂದಿರ ನಿರ್ಮಾಣ ಒಂದು ಸಣ್ಣ ಪ್ರಕ್ರಿಯೆ. ಇದರ ಹಿಂದೆ ಸ್ವಾತಂತ್ರ್ಯ ನಂತರ ಮಸೀದಿ ಕೆಡವಿದ ಅಪರಾಧವೂ ಅಡಗಿದೆ ಜೊತೆಗೆ ಕಾನೂನಿನ ಮಾನ್ಯತೆಯೂ ಇದೆ. ಅದನ್ನು ಇಷ್ಟೊಂದು ವಿಜೃಂಭಿಸುವ ಅವಶ್ಯಕತೆ ಇಲ್ಲ. ಎಲ್ಲಾ ಅತಿರೇಕಗಳ ಪರಿಣಾಮ ಅಪಾಯಕಾರಿಯಾಗಬಹುದು ಎಂಬ ಎಚ್ಚರಿಕೆ ಇರಬೇಕು. ಜನರಿಗೆ ಹುಚ್ಚು ಹಿಡಿಸುವುದು ಸುಲಭ. ಅದನ್ನು ನಿಯಂತ್ರಿಸುವುದು ಕಷ್ಟ.

 ಜೀವ ಮತ್ತು ಜೀವನ ಮುಖ್ಯ ಎಂಬುದನ್ನು ಸ್ವಾಗತಿಸುತ್ತಾ, ಮಂದಿರ – ಮಸೀದಿ – ಚರ್ಚುಗಳು ಮುಖ್ಯವೇ ಎಂಬುದನ್ನು ಪ್ರಶ್ನಿಸುತ್ತಾ…….

 ಸನಾತನ ಧರ್ಮದಲ್ಲಿ ನೀವು ನಂಬಿಕೆಯುಳ್ಳವರಾದರೆ ಈ ರೀತಿಯ ಪ್ರಶ್ನೆಗಳಿಗೂ ಅವಕಾಶ ನೀಡಿ, ಇಲ್ಲದಿದ್ದರೆ ನೀವು ಆ ಧರ್ಮದಲ್ಲಿ ಇರಲು ಅರ್ಹರಲ್ಲ ಎಂದು ನೆನಪಿಸುತ್ತಾ…..

 ಇಲ್ಲಿಯವರೆಗೂ ನಾನು ಪಡೆದ ಅನುಭವ ಮತ್ತು ಅರಿವಿನಿಂದ ನಿಮಗೆ ಸತ್ಯವನ್ನು ಹೇಳುತ್ತಿದ್ದೇನೆ. ಮುಂದೆ ಇದಕ್ಕಿಂತ ಉತ್ತಮ ಸತ್ಯ ನಿಮಗೆ ಅರಿವಾದರೆ ಅದನ್ನು ಅಳವಡಿಸಿಕೊಳ್ಳಿ ” ಎಂಬ ಗೌತಮ ಬುದ್ಧನ ಜ್ಞಾನೋದಯದ ಸಂದೇಶವನ್ನು ಒಪ್ಪಿಕೊಳ್ಳುತ್ತಾ……..

ರಾಮ ಮಂದಿರ ಒಂದು ಆದರ್ಶ ಸಮಾಜದ ಮತ್ತು ಸರ್ವ ಧರ್ಮ ಸಮನ್ವಯದ ಸಂಕೇತವಾಗಲಿ ಎಂದು ಹಾರೈಸುತ್ತಾ……..
ಲೇಖನ:ವಿವೇಕಾನಂದ. ಎಚ್. ಕೆ. 9844013068………….

- Advertisement -  - Advertisement -  - Advertisement - 
Share This Article
error: Content is protected !!
";