ಬಿ.ತಿಪ್ಪೇರುದ್ರಪ್ಪ ಈ ನೆಲದ ವಿಡಂಬನೆಕಾರ, ನನ್ನೂರು ನನಗೆ ಗುರುತಿಸಲಿಲ್ಲ ಕುಮಾರ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೆಲದ ಮಾತು-
57
 ಸಾಹಿತ್ಯ ಸಮ್ಮೇಳನದ ಕಾರಣದಿಂದಲೋ ಏನೋ, ರಸ್ತೆ, ಚರಂಡಿಗಳು, ವಿದ್ಯುತ್ ದೀಪಗಳು ದುರಸ್ತಿಯಾಗಿ, ಊರು ಯುಗಾದಿಗೆ ಹಾಕಿದ, ಹೊಸ ಬಟ್ಟೆಯುಟ್ಟಂತೇ ಕಂಗೊಳಿಸಿತ್ತು, ಆ ದಿನದ ನಗರಸಭೆ ಆಯುಕ್ತ, ಎಸ್ ಟಿ ಮೋಹನ್ ರಾಜ್, ಹಾಗೂ ವ್ಯವಸ್ಥಾಪಕರಾಗಿದ್ದಂತಹ ಎಲ್ ನಾರಾಯಣಾಚಾರ್, ತುಂಬಾನೇ ಜವಾಬ್ದಾರಿ ವಹಿಸಿ, ಕಾರ್ಯನಿರ್ವಹಿಸಿದ್ದರು. ಊರ ಸ್ವಚ್ಛತೆಗೆ, ಪೌರಕಾರ್ಮಿಕರ ಶ್ರಮವು, ಎದ್ದು ಕಾಣುತ್ತಿತ್ತು.

ರಸ್ತೆಯ ಇಕ್ಕೆಲಗಳಲ್ಲಿ, ರಾಜಕೀಯ ಜಾಹೀರಾತಿನ ಘಮಲು ಸಹ, ಅಷ್ಟೇ ತಾರಕದಲ್ಲಿತ್ತು, ಅಕ್ಷರ ಜಾತ್ರೆಯ ಸಡಗರವೋ ಸಡಗರ. ಆದರೂ ಗೊತ್ತಾಗಿಯೋ, ಗೊತ್ತಿಲ್ಲದೆಯೋ,ತಪ್ಪುಗಳೂ ಸಹ ನಡೆದುಬಿಟ್ಟಿದ್ದವು.
ಎಲ್ಲರಿಗೂ ಖುಷಿ ಕೊಟ್ಟ ಈ ಜಾತ್ರೆ ಕೆಲವರಿಗೆ ಕಣ್ಣೀರೂ ಸಹ ತರಿಸಿತ್ತು.

 ಬೇರೆ ಕಡೆ ನಡೆದ ಸಾಹಿತ್ಯ ಸಮ್ಮೇಳನಗಳಲ್ಲಿ, ಗೋಷ್ಟಿಗಳಿಗೆ ಆಯ್ಕೆಯಾಗಿದ್ದಂತಹ, ಕೆಲವು ಸ್ಥಳೀಯ ಹಿರಿಯ ಬರಹಗಾರರನ್ನ, ಇಲ್ಲಿನ ಸಮ್ಮೇಳನದಲ್ಲಿ ಸಾರಾಸಗಟಾಗಿ ಕಡೆಗಣಿಸಲಾಗಿತ್ತು.
ಉದಾಹರಣೆಗೆ ಬಿ.ತಿಪ್ಪೇರುದ್ರಪ್ಪ(ಬಿ ತಿ)ಈ ನೆಲದ ವಿಡಂಬನೆಕಾರರು
, ಕವಿ, ಕತೆಗಾರ, ಮಕ್ಕಳ ಸಾಹಿತಿ, ಹಾಸ್ಯ ಸಾಹಿತಿ, ರಾಜ್ಯಮಟ್ಟದಲ್ಲಿ ವೇದಿಕೆಗಳನ್ನ ಹಂಚಿಕೊಂಡಂತಹ ಹಿರಿಯ ಮುತ್ಸದ್ದಿ, ಇಲ್ಲಿ ಯಾವ ಗೋಷ್ಠಿಗಳಲ್ಲಿಯೂ ಕಾಣದೇ ಹೋದರಲ್ಲಾ.

ಬಿ ತಿ ಅವರೊಂದಿಗೆ ಕನಕಪುರ ಸಾಹಿತ್ಯ ಸಮ್ಮೇಳನಕ್ಕೆ ನಾನು ಸಹ ಹೋಗಿದ್ದೆ, ಅಲ್ಲಿ ಅವರನ್ನ ಗುರುತಿಸಿ ಸನ್ಮಾನಿಸಲಾಗಿತ್ತು. ದುರ್ಗದ ಸಮ್ಮೇಳನದ ನಂತರ, ಬೆಂಗಳೂರಿನ ಸಾಹಿತ್ಯ ಸಮ್ಮೇಳನದಲ್ಲಿ ಗೋಷ್ಠಿಗೆ ಅವಕಾಶ ಸಿಕ್ಕು ಪತ್ರಿಕೆಗಳಲ್ಲಿ ಹೆಸರು ಸಹ ಮುದ್ದಣವಾಗಿತ್ತು. ಆ ದಿನಗಳಲ್ಲಿ ಆಸ್ಪತ್ರೆಗೆ ಸೇರಿದ್ದ ಅವರು, ತಿರುಗಿ ಮನೆಗೆ ಬರಲೇ ಇಲ್ಲ.

ನನ್ನೂರು ನನಗೆ ಗುರುತಿಸಲಿಲ್ಲ ಕುಮಾರ್, ಬೆಂಗಳೂರು ಸಾಹಿತ್ಯ ಸಮ್ಮೇಳನ ಗುರುತಿಸಿದೆ. ಏನ್ಮಾಡೋದು ನನಗೆ ಹೋಗೋಕಾಗಲ್ಲ, ಇಷ್ಟು ಸಾಕು ನನಗೆ ಅಂತ ಕಣ್ಣಂಚಲಿ ನೀರು ತಂದಿದ್ದರು.
ದುರ್ಗದ ಸಮ್ಮೇಳನದ ಮೊದಲ ದಿನ
, ಇವರ ಮನದಾಳದ ನೋವನ್ನು ಪ್ರಕಟಿಸಿದ್ದು, ಕನ್ನಡಪ್ರಭದ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತ್ರ.

ಈ ಊರಲ್ಲಿ ಕೆಲವು(ಮೂರ್ಖಗಳು) ಮುಖಗಳಿವೆ, ಎದುರಾದವರನ್ನು ತುಳಿದೇ, ಮುಂದೋಗುವ ನಿಸ್ಸೀಮರು. ಉಪನ್ಯಾಸದಲ್ಲೇ ಸಾಹಿತ್ಯ ಬರೆಯೋರು, ಯಾವುದೋ ದ್ವೇಷವನ್ನ, ಇನ್ನೆಲ್ಲಿಗೋ ತಂದು, ಖುಷಿ ಪಡುವ ಸಾಹಿತ್ಯವಂತರು. ಸಜ್ಜನಿಕೆಯ ಮುಖವಾಡಗಳು.

ಸಮ್ಮೇಳನದ ಕವನ ಸಂಕಲನಕ್ಕೆ ನನ್ನದೊಂದು ಕವನ ಬರೆದು ಕಳುಹಿಸಿದ್ದೆ, ಅಚ್ಚಾಗಿದೆ ಅಂತ ಹೇಳಿದ ಮಹಾಶಯರೊಬ್ಬರು, ಹಣ ಕೊಟ್ಟು ಕೊಳ್ಳುತ್ತೇನೆಂದರೂ, ಒಂದು ಪ್ರತಿಯನ್ನು ಸಹ ನನಗೆ ತೋರಿಸಲಿಲ್ಲ. ನನಗೂ ಆಸೆ, ರಾಜ್ಯದ ಹೆಸರಾಂತ ಕವಿಗಳ ಜೊತೆಯಲ್ಲಿ ನನ್ನದೊಂದು ಕವನ, ಹೂವುಗಳ ಜೊತೆ ನಾರು ಸ್ವರ್ಗ ಸೇರುವ ಆಸೆ.
ಇವತ್ತಿಗೂ ಸಾಹಿತ್ಯ ಸಮ್ಮೇಳನದ ಆ ಕವನ ಸಂಕಲವನ್ನ ನಾನು ನೋಡಲಾಗಿಲ್ಲ.

ನನ್ನದು ಬಿಡಿ, ಬಿ ತಿ ಅಂತವರಿಗೆ ಕಡೆಗಣಿಸಿದ ಈ ಊರು, ನನ್ನಂತವ ಏನು ಲೆಕ್ಕ, ತಿರುಕನ ಕನಸು ಅಂತ ನಕ್ಕು ಸುಮ್ಮನಾದೆ. ಬರೆಯುವವರಿಗಿಂತ ಸರಾಗವಾಗಿ, ವೇದಿಕೆಗಳಲ್ಲಿ ಮಾತಾಡುವ ಬಾಯಿ ಇದ್ರೆ ಸಾಕು, ಒಂದೆರಡು ಶಾಲಾ ಕಾಲೇಜುಗಳು ಇದ್ರಂತೂ, ಸಾಹಿತ್ಯ, ಸಾಹಿತಿ, ಇವರ ಮನೆ ಸ್ವತ್ತುಗಳೇ.ಇಂತವರಿಗೆ ರಾಜಕೀಯ, ಮಠಗಳ ನೆರಳಿದ್ದರಂತೂ, ಇನ್ನೇನು ಬೇಕು, ಬೆಳಕರಿಯುವುದರಲ್ಲಿ ಅಗ್ರಗಣ್ಯ ಸಾಹಿತಿಗಳಾಗಿ ವೇದಿಕೆ ಹಂಚ್ಕೊಂಡು, ಸಾಹಿತ್ಯಕ್ಕೂ ನಮಗೂ ಒಂದೇ ಗೇಣು ಅನ್ನುವವರಿದ್ದಾರೆ.

 ಒಮ್ಮೆ ಜೋಗಿಮಟ್ಟಿ ಬಂಗ್ಲೆಯಲ್ಲಿ ನಟ ಲೋಹಿತಾಶ್ವರನ್ನು ಕಾಣಲು ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖರ ಜೊತೆ ನಾನು ಹೋಗಿದ್ದೆ, ಲೋಹಿತಾಶ್ವರೊಂದಿಗೆ ಆ ದಿನ, ನಾಡಿನ ಪ್ರಸಿದ್ದ ಕವಿ, ಸಾಹಿತಿಯೊಬ್ಬ ಬಂದಿದ್ದ. ಷಣ್ಮುಖರಿಗೂ ಬಹಳ ಆಪ್ತ, ಎಲ್ಲರೊಂದಿಗೆ ಆ ಸಂಜೆ, ನನಗೂ ಸಹ ತೃಪ್ತಿ ತಂದಿತ್ತು.

ಸಂಬಂಧಪಟ್ಟ ಸಾಹಿತ್ಯ ವಿಚಾರಗಳನ್ನು ಮಾತಾಡ್ತಾ, ಬಿ ತಿ ಅವರನ್ನು ನನ್ನ ಪಾಲಿಗೆ ನಡೆದಾಡುವ ಗ್ರಂಥ ಅಂದೆ, ಅಷ್ಟೇ, ನಾನು ಮಾತಾಡಿದ್ದು. ಅದಕ್ಕೆ ಆ ಮಹಾನ್ ಸಾಹಿತಿ, ಕೆಂಡಮಂಡಲವಾಗಿ ಹೇಗೆ ಬೇಕೋ ಹಾಗೆ ನನಗೂ ಮೊದಲಿಸಿದ. ದಿಕ್ಕೇ ತೋಚಲಿಲ್ಲ, ನಾನು ಷಣ್ಮುಖರಿಗೆ ಕೇಳಿದೆ, ಯಾಕೀಗೆ ಅಂತ, ಒಂದೇ ಕಾಲೇಜಲ್ಲಿ ಇಬ್ಬರೂ ಉಪನ್ಯಾಸಕರಾಗಿದ್ದಂತವರು, ಒಬ್ಬರು ಕಂಡ್ರೆ ಒಬ್ರಿಗೆ ಹಾಗಲ್ಲ, ಇಬ್ಬರೂ ಬದ್ಧ ವೈರಿಗಳು ಅಂದ, ಈ ಸಂದರ್ಭಕ್ಕೆ ಬಿ ತಿ ನಮ್ಮನ್ನೆಲ್ಲಾ ಅಗಲಿ ತುಂಬಾ ದಿನಗಳೇ ಆಗಿ ಹೋಗಿದ್ವು.

ಮರಣದ ನಂತರವೂ ದ್ವೇಷಿಸುವ ಒಬ್ಬ ಮಹಾನ್ ಮೂರ್ಖನನ್ನ ಕಂಡಿದ್ದು ನಾನು ಆ ದಿನವೇ.ಇದೇನು ತುಂಬಿದ ಕೊಡವೋ, ಕಾಲಿ ಕೊಡವೋ ತಿಳಿಯದೆ ಮೌನವಾದೆ. ಒಮ್ಮೆ ಯಾವುದೋ ವೇದಿಕೆಯಲ್ಲಿ ಮತ್ತೆ ಎದುರಾದ, ಗುರುತಿಸಿ ಏನು ಕತ್ತೆಗಾರರು ಅಂತ ನಕ್ಕ,

ಅವನ ಬಗ್ಗೆ ಈಗಲೂ ನನಗೆ ಅನುಕಂಪವಿದೆ. ಕಾಯುತ್ತಿದ್ದೇನೆ, ಅವಕಾಶ ಸಿಕ್ಕರೆ ಮತ್ತೊಮ್ಮೆ ಭೇಟಿಯಾಗಿ, ನನ್ನ ಕಥಾಗುಚ್ಛ ಕೊಟ್ಟು”ಕತ್ತೆಗಾರ ಅಲ್ಲ ಕತೆಗಾರ” ಅಂತ ಹೇಳ್ತೆನೆ.
ಮುಂದುವರೆಯುವುದು……
ಲೇಖನ:ಕುಮಾರ್ ಬಡಪ್ಪ, ಚಿತ್ರದುರ್ಗ.

 

- Advertisement -  - Advertisement -  - Advertisement - 
Share This Article
error: Content is protected !!
";