ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನಾದ್ಯಂತ ಚಿತ್ತಮಳೆ ಪ್ರಾರಂಭವಾಗಿ ಕೇವಲ ಹತ್ತು ದಿನಗಳಾಗಿವೆ. ಕಳೆದ ಅ.10 ರಿಂದ ಮಳೆ ಪ್ರಾರಂಭವಾಗಿ ತಾಲ್ಲೂಕಿನ ಯಾವುದೇ ಪ್ರದೇಶ ಒಣಗದಂತೆ ಎಲ್ಲೆಡೆ ಸರಾಗವಾಗಿ ಸಮೃದ್ದಿಯಾಗಿ ನೀರು ನಿಂತು ಚಿತ್ತಮಳೆಯ ವೈಭವವನ್ನು ಜನರು ಸವಿಯುತ್ತಿದ್ದಾರೆ.
ತಾಲ್ಲೂಕಿನ ನಾಯಕನಹಟ್ಟಿ, ತಳಕು, ಕಸಬಾ ಹೋಬಳಿ ಸೇರಿದಂತೆ ಎಲ್ಲೆಡೆ ನಿರೀಕ್ಷೆಗೂ ಮೀರಿದ ಮಳೆಯಾಗಿದೆ. ವಿಶೇಷವಾಗಿ ನಾಯಕನಹಟ್ಟಿ ಹೋಬಳಿಯ ಬಹುತೇಕ ಎಲ್ಲಾ ಕೆರೆ ತುಂಬಿದರೆ, ಕೆಲವು ಕೆರೆಗಳು ಕೋಡಿ ಬಿದ್ದಿವೆ.
ತಳಕು ಹೋಬಳಿ ಮಟ್ಟದಲ್ಲೂ ಚಿತ್ತಮಳೆಯ ಆರ್ಭಟ ಜೋರಾಗಿದೆ. ಈ ಭಾಗದಲ್ಲೂ ಸಹ ಹಲವಾರು ಕೆರೆಗಳು ತುಂಬಿವೆ. ಕಸಬಾ ಹೋಬಳಿ ಮಟ್ಟದಲ್ಲೂ ಸಹ ಮಳೆಯ ಪ್ರಮಾಣ ಗಣನೀಯವಾಗಿ ಏರಿದೆ. ರೈತರ ಬೆಳೆಗಳಿಗೆ ನೀರು ನುಗ್ಗಿನಷ್ಟವಾದರೆ, ಕೆಲವೆಡೆ ಮನೆಗಳು ಕುಸಿದು ಬಿದ್ದಿವೆ. ಜಾನುವಾರುಗಳು ಸಹ ನೀರಿನಲ್ಲಿ ತೇಲಿಹೋಗಿವೆ.
ಈ ವರ್ಷದ ಚಿತ್ತಮಳೆಯ ವಿಶೇಷವೆಂದರೆ ನಗರ ವ್ಯಾಪ್ತಿಯ ಅಜ್ಜಯ್ಯನಗುಡಿ ಕೆರೆತುಂಬಿ ಕೋಡಿ ಬಿದ್ದಿದೆ. ಇದಕ್ಕೆ ಹೊಂದಿಕೊಂಡಿರುವ ಕರೇಕಲ್ ಕೆರೆಯೂ ಸಹ ತುಂಬಿದ್ದು ಇನ್ನೂ ಕೆಲವೇ ದಿನಗಳಲ್ಲಿ ಕೋಡಿ ಬೀಳುವ ಸಂಭವವಿದೆ. ನಾಯಕನಹಟ್ಟಿ ಹೋಬಳಿಯ ಭೀಮನಕೆರೆ ಗ್ರಾಮದ ಕೆರೆ ಬಹಳ ವರ್ಷಗಳ ನಂತರ ಕೋಡಿ ಬಿದಿದ್ದು, ಕೋಡಿ ನೀರಿನಲ್ಲಿ 7 ಕುರಿಗಳು ಕೊಚ್ಚಿ ಹೋಗಿವೆ.
ನೀರಿನಲ್ಲಿ ಸಿಲುಕಿದ ಬಸ್:
ಖಾಸಗಿ ಶಾಲೆಗೆ ಮಕ್ಕಳನ್ನು ಕರೆತರುತ್ತಿದ್ದ ಕಾಲೇಜು ಬಸ್ ತಳಕು ಗ್ರಾಮದ ತಳಕು ಗ್ರಾಮದ ರೈಲ್ವೆ ಬ್ರಿಡ್ಜ್ ಕೆಳಗೆ ಸಾಗುವಾಗ ನಿಂತಿದ್ದು ಗ್ರಾಮಸ್ಥರು ಬಸನ್ನು ದಡಕ್ಕೆ ತಂದಿದ್ದಾರೆ. ಕೆಲಕಾಲ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾದರು.
ಇದೇ ಹೋಬಳಿಯ ವರವು ಗ್ರಾಮದಲ್ಲಿ ಪುರಿಚೆನ್ನಯ್ಯನಹಟ್ಟಿಯ ಗಗ್ಗಬೋರಯ್ಯ ಎಂಬುವವರ ಜಮೀನಿನಲ್ಲಿದ್ದ ಈರುಳ್ಳಿ, ಮೆಕ್ಕೆಜೋಳ, ರಾಗಿ ಬೆಳೆನೀರಿನಲ್ಲಿ ಕೊಚ್ಚಿಹೋಗಿ ಸುಮಾರು ಎರಡು ಲಕ್ಷ ನಷ್ಟ ಸಂಭವಿಸಿದೆ. ಗಂಪಲೋಬಯ್ಯನ ಕಪ್ಪಿಲೆಯಲ್ಲಿದ್ದ ಸುಮಾರು ೧೦ ಮನೆಗಳಿಗೆ ನೀರು ನುಗ್ಗಿದ್ದು ಮನೆಯಲ್ಲಿನ ಎಲ್ಲಾ ವಸ್ತುಗಳು ನೀರಿನಲ್ಲಿ ತೇಲಿವೆ.
ಮನೆಗೆ ನೀರು ನುಗ್ಗಿದ ಸಂದರ್ಭದಲ್ಲಿ ಮನೆಯಲ್ಲಿದ್ದ ಪುಟ್ಟಮಕ್ಕಳು, ಮಹಿಳೆಯರು ಪ್ರಾಣ ರಕ್ಷಿಸಿಕೊಳ್ಳಲು ಪ್ರಯಾಸಪಟ್ಟಿದ್ಧಾರೆ. ಕುದಾಪುರ ಗ್ರಾಮದ ಸರ್ವೆ ನಂ ೩೭ರಲ್ಲಿದ್ದ ಶೇಂಗಾ ಬೆಳೆ ನೀರಿನಲ್ಲಿ ಕೊಚ್ಚಿಹೋಗಿ ಲಕ್ಷಾಂತರ ನಷ್ಟ ಸಂಭವಿಸಿದೆ. ಇದೇ ಗ್ರಾಮದ ಪಾರ್ವತಿಬಾಯಿ ಎಂಬುವವರ ಜಮೀನಿನಲ್ಲಿದ್ದ ರಾಗಿ, ತೊಗರಿ ಬೆಳೆ ನೀರಿನಲ್ಲಿ ಮುಳುಗಿ ಸಂಪೂರ್ಣ ನಷ್ಟವಾಗಿದೆ. ರಾಮಾನಾಯ್ಕ ಎಂಬುವವರ ಎರಡು ಎಕರೆ ಶೇಂಗಾ ಬೆಳೆ ನೀರಿನಲ್ಲಿ ಕೊಚ್ಚಿಹೋಗಿ ೫೦ ಸಾವಿರ ನಷ್ಟವಾಗಿದೆ.
ಮನೆಗಳಿಗೆ ಹಾನಿ: ಏಕಾಏಕಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮವಾಗಿ ಹಲವಾರು ಮನೆಗಳು ಕುಸಿದು ಬಿದ್ದಿವೆ. ಘಟಪರ್ತಿ ಗ್ರಾಮದ ತಿಪ್ಪಮ್ಮ ಎಂಬುವವರ ಮನೆಗೆ ನೀರು ನುಗ್ಗಿ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಹಾಳಾಗಿ ೪೦ ಸಾವಿರ ನಷ್ಟ ಸಂಭವಿಸಿದೆ. ಎನ್.ಗೌರಿಪುರ ಗ್ರಾಮದ ಶಿವಮ್ಮ, ರಾಮಾಂಜನೇಯರವರ ಮನೆಗಳು ಕುಸಿದುಬಿದ್ದು ೯೦ ಸಾವಿರ ನಷ್ಟವಾಗಿದೆ. ಇದೇ ಗ್ರಾಮದ ಪಾರ್ವತಿಬಾಯಿ ಎಂಬುವವರ ಮನೆ ಕುಸಿದು ೪೫ ಸಾವಿರ ನಷ್ಟಸಂಭವಿಸಿದೆ. ಗೌಡಗೆರೆ ಗ್ರಾಮದ ತಿಪ್ಪಮ್ಮ ಎಂಬುವವರ ಮನೆಕುಸಿದು ಬಿದ್ದು ೨೫ ಸಾವಿರ ನಷ್ಟ ಸಂಭವಿಸಿದೆ.