ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮದ್ಯವರ್ಜನ ಶಿಬಿರಗಳ ಮೂಲಕ ರಾಜ್ಯದಲ್ಲಿ ಕುಡುಕರ ಹಾವಳಿಯನ್ನು ಬಹಳಷ್ಟು ಮಟ್ಟಿಗೆ ತಗ್ಗಿಸಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆವರು ಮಹಿಳೆಯರ ಬಾಳಿಗೆ ದಾರಿದೀಪವಾಗಿದ್ದಾರೆಂದು ಕಬೀರಾನಂದಾಶ್ರಮದ ಶಿವಲಿಂಗಾನಂದಸ್ವಾಮಿ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ತಾಲ್ಲೂಕು ನಗರ ಸಿ.ವಲಯ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸಿ ವಲಯದ ಸಂಯುಕ್ತಾಶ್ರಯದಲ್ಲಿ ಕಬೀರಾನಂದಾಶ್ರಮದಲ್ಲಿ ಶನಿವಾರ ನಡೆದ ಸಾಮೂಹಿಕ ಲಕ್ಷ್ಮಿಪೂಜೆ ಹಾಗೂ ಒಕ್ಕೂಟಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅಧಿಕಾರದಲ್ಲಿದ್ದಾಗ ಎಲ್ಲರೂ ಗೌರವಿಸುತ್ತಾರೆ. ಹೆಣ್ಣುಮಕ್ಕಳಿಗೆ ಸುಮಂಗಲಿತನ ಶೋಭೆ. ದುಡ್ಡನ್ನು ಸದ್ಬಳಕೆಗೆ ಖರ್ಚು ಮಾಡಬೇಕೆ ವಿನಃ ದುಂದು ವೆಚ್ಚವಾಗಬಾರದು.
ಹಣ ಇರಬೇಕು. ಮತ್ತೊಬ್ಬರಿಗೆ ಖರ್ಚು ಮಾಡದಷ್ಟು ಜಿಪುಣತನವಿರಬಾರದು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರಹೆಗಡೆರವರು ತಮ್ಮಲ್ಲಿರುವ ಅಧಿಕಾರ ಹಾಗೂ ಹಣವನ್ನು ಸಾರ್ವಜನಿಕರ ಒಳಿತಿಗೆ ವಿತರಿಸುತ್ತಿರುವುದರಿಂದ ಇಂದಿಗೂ ಪೂಜ್ಯರೆನಿಸಿಕೊಂಡಿದ್ದಾರೆಂದು ಶ್ಲಾಘಿಸಿದರು.
ರೋಗಿಗಳಿಗೆ ಆರೋಗ್ಯ ಭಾಗ್ಯ ಒದಗಿಸುವಲ್ಲಿ ವೀರೇಂದ್ರಹಗಡೆರವರ ಪಾತ್ರ ಹಿರಿದು. ಮದ್ಯಪಾನ ಸೇವಿಸುವವರ ಹಾವಳಿ ಕಡಿಮೆಗೊಳಿಸುವ ಮೂಲಕ ಗಾಂಧಿ ಕನಸು
ನನಸು ಮಾಡುತ್ತಿದ್ದಾರೆ. ಗಿಡಗಳನ್ನು ನೆಡುವ ಮೂಲಕ ಹಸಿರುಕ್ರಾಂತಿ ಆರಂಭಿಸಿದ್ದಾರೆ. ಆರೋಗ್ಯ ಕೇಂದ್ರಗಳನ್ನು ತೆರೆದು ಬಡವರಿಗೆ ಚಿಕಿತ್ಸೆ ಸಿಗುವಂತ ವ್ಯವಸ್ಥೆ ಕಲ್ಪಿಸುತ್ತಿರುವುದು ಸುಲಭದ ಕೆಲಸವಲ್ಲ ಎಂದು ಪ್ರಶಂಶಿಸಿದರು.
ಧರ್ಮಸ್ಥಳದಲ್ಲಿ ಯಾವುದೇ ಜಾತಿ ಬೇದವಿಲ್ಲ. ಎಲ್ಲರನ್ನು ಒಳ್ಳೆ ಮಾರ್ಗದಲ್ಲಿ ಕರೆದುಕೊಂಡು ಹೋಗುತ್ತಿರುವ ಕಾರ್ಯಕರ್ತರ ಸೇವೆಯೂ ಅನನ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಸದಸ್ಯೆ ಶ್ರೀಮತಿ ರೂಪ ಜನಾರ್ಧನ್ ಮಾತನಾಡಿ ಎಲ್ಲದಕ್ಕು ಹಣವೇ ಮಾನದಂಡವಾಗಬಾರದು. ಒಳ್ಳೆಯ ಕುಟುಂಬ ನೆಮ್ಮದಿಯಿದ್ದರೆ ಅದಕ್ಕಿಂತ ದೊಡ್ಡ ಸಂಪತ್ತು ಆರೋಗ್ಯ ಬೇರೊಂದಿಲ್ಲ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರಹೆಗಡೆರವರು ಎಲ್ಲಾ ಜಾತಿಯವರನ್ನು ಸಮಾನವಾಗಿ ಕಾಣುವ ವಿಶಾಲ ಮನೋಭಾವವಿಟ್ಟುಕೊಂಡಿದ್ದಾರೆಂದು ಗುಣಗಾನ ಮಾಡಿದರು.
ನಗರಸಭಾ ಸದಸ್ಯೆ ಪೂಜಾ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಬಿ.ಸಿ. ಟ್ರಸ್ಟ್ ಪ್ರಾದೇಶಿಕ ನಿರ್ದೇಶಕಿ ಗೀತಾ ಬಿ., ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ವೇದಿಕೆಯಲ್ಲಿದ್ದರು.
ತಾಲ್ಲೂಕು ಯೋಜನಾಧಿಕಾರಿ ಬಿ.ಅಶೋಕ್, ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಸಿ.ವಲಯದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.