ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಕರ್ನಾಟಕದ ಹಿಂಗಾರು ಮಳೆ ಸುರಿಯುತ್ತಿದೆ. ಪಶ್ಚಿಮಘಟ್ಟಗಳ ತಪ್ಪಲು ಅಲ್ಲೋಲ-ಕಲ್ಲೋಲವಾಗಿದೆ. ಚಿಕ್ಕಮಗಳೂರಿನ ದತ್ತಪೀಠದ ರಸ್ತೆಯಲ್ಲಿ 3 ಅಡಿ ಎತ್ತರದಲ್ಲಿ ನೀರು ಹರಿದಿದೆ. ಎಷ್ಟೇ ಮಳೆ ಬಂದರೂ ಪಶ್ಚಿಮ ಘಟ್ಟಕ್ಕೆ ಲೆಕ್ಕವೇ ಅಲ್ಲ, ಸಾವಿರಾರು ಅಡಿ ಆಳ, ಮುಗಿಲೆತ್ತರದ ಬೆಟ್ಟಗುಡ್ಡಗಳ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಕೆರೆಯಂತೆ ನೀರು ಹರಿಯುತ್ತಿದೆ.
ಮಳೆರಾಯನ ಅಬ್ಬರಕ್ಕೆ ಪ್ರವಾಸಿಗರು ತೊಯ್ದು ತೊಪ್ಪೆ ಆಗಿದ್ದಾರೆ. ಮಳೆ ಮಧ್ಯೆ ಸಿಲುಕಿ ಚಿಕ್ಕಮಗಳೂರು ತಾಲ್ಲೂಕಿನ ಮುಳ್ಳಯ್ಯನಗಿರಿ, ದತ್ತಪೀಠ ಸಹವಾಸವೇ ಬೇಡ ಎನ್ನುತ್ತಿದ್ದಾರೆ ಪ್ರವಾಸಿಗರು.
ತರೀಕೆರೆ ತಾಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಗೆ ಹೊಲ-ಗದ್ದೆ, ತೋಟಗಳಿಗೆ ನೀರು ನುಗ್ಗಿದೆ. ಸಣ್ಣಬೋಕಿಕೆರೆ, ಗೊಲ್ಲರಹಳ್ಳಿ ಹೊಲಗಳು ಜಲಾವೃತಗೊಂಡಿದೆ. ಕೋರನಹಳ್ಳಿ, ಚಟ್ಟನಹಳ್ಳಿ, ಶಿವಪುರ ಭಾಗದಲ್ಲಿ ಹಳ್ಳಿ ಹರಿದು ಭಾರೀ ಅನಾಹುತವಾಗಿದೆ. ಗೊಲ್ಲರಹಳ್ಳಿಯಲ್ಲಿ ಹೂವಿನಹೊಲದಲ್ಲಿ ಮಳೆ ನೀರು ನಿಂತಿದೆ.
ಕಾಫಿನಾಡ ಮಹಾಮಳೆಗೆ ಮಲೆನಾಡು ಭಾಗದ ಜನರು ಕಂಗಾಲಾಗಿದ್ದಾರೆ. ಭಾರೀ ಮಳೆಗೆ ಗ್ರಾಮೀಣ ಭಾಗದ ಸೇತುವೆಗಳು ಜಲಾವೃತಗೊಂಡಿದೆ. ಮುತ್ತೋಡಿ ವ್ಯಾಪ್ತಿಯ ಗ್ರಾಮದ ಜನ ಹಳ್ಳ ದಾಟಲು ಪರದಾಡಿದರು.
ವೃದ್ಧೆಯನ್ನ ಹಳ್ಳಿಗರು ಅಂಗೈಲಿ ಹೊತ್ತು ಸಾಗಿದ ಘಟನೆ ಚಿಕ್ಕಮಗಳೂರು ತಾಲೂಕಿನ ಮಲಗಾರು ಗ್ರಾಮದಲ್ಲಿ ನಡೆದಿದೆ. ಮಲಗಾರು ಗ್ರಾಮ ಮುತ್ತೋಡಿ ಅರಣ್ಯ ವ್ಯಾಪ್ತಿಯ ಕುಗ್ರಾಮ ಇದಾಗಿದೆ. ನಿನ್ನೆ ಸಂಜೆ ಸುರಿದ ಭಾರೀ ಮಳೆಯಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದು, ಕಿರು ಸೇತುವೆ ತುಂಬಿ ಹೋಗಿದೆ.
ಇತ್ತ ಕಳೆದ ರಾತ್ರಿಯಿಂದ ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತಗ್ಗು ಪ್ರದೇಶದ ಮನೆಗಳಿಗೆನೀರು ನುಗ್ಗಿದೆ. ಶಿವಮೊಗ್ಗ ನಗರದಲ್ಲಿ ರಾತ್ರಿಯಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಪರಿಣಾಮ ನಗರದ ದೇವರಾಜು ಅರಸು ಬಡಾವಣೆಯ ಮನೆಗಳು ಜಲಾವೃತಗೊಂಡಿದೆ. ರಸ್ತೆ ಮೇಲೆ ನೀರು ಉಕ್ಕಿ ಹರಿಯುತ್ತಿದ್ದು, ಜನರ ಓಡಾಟಕ್ಕೂ ಸಂಕಷ್ಟ ಎದುರಾಗಿದೆ.