ಚಂದ್ರವಳ್ಳಿ ನ್ಯೂಸ್, ದುಬೈ:
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ, ಯುಎಇ ದುಬೈ ಘಟಕ ಮತ್ತು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಜಂಟಿ ಆಶ್ರಯದಲ್ಲಿ ದುಬೈನಲ್ಲಿ ಏರ್ಪಡಿಸಿದ್ದ ದುಬೈ ಗಡಿನಾಡ ಉತ್ಸವ ಸಂಭ್ರಮ ಸಡಗರದಿಂದ ನಡೆಯಿತು.
ಆಕ್ಮೇ ಸಮೂಹ ಸಂಸ್ಥೆಗಳ ಅಧ್ಯಕ್ಷ ಹರೀಶ್ ಶೇರಿಗಾರ್ ಅವರು ಗಡಿನಾಡ ಉತ್ಸವಕ್ಕೆ ಚಾಲನೆ ನೀಡಿದರು. ಶಾರ್ಜಾ ಕನ್ನಡ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ, ಸಮಾಜ ಸೇವಕ ರೊನಾಲ್ಡೊ ಮಾರ್ಟಿಸ್, ಶಿವಶಂಕರ ನೆಕ್ರಾಜೆ, ಲಿತೇಶ್ ನಾಯ್ಕಪುರ ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮರಳುಗಾಡಿನ ದುಬೈನಲ್ಲಿ ಕನ್ನಡದ ಮನಸ್ಸುಗಳು ಒಟ್ಟಾಗಿ ಸೇರಿ ಸಂಭ್ರಮಿಸುವುದೇ ಗಡಿ ಉತ್ಸವದ ಸಾರ್ಥಕ ಕ್ಷಣ ಎಂದು ಹೇಳಿದರು.
ಖರ್ಜೂರ ಹೊರತುಪಡಿಸಿ, ಕೃಷಿ, ಕೈಗಾರಿಕೆ ಸೇರಿದಂತೆ ಯಾವುದೇ ಉತ್ಪನ್ನ ಮಾಡಲು ಸಾಧ್ಯವಾಗುವುದಿಲ್ಲ. ಕಾಡಿನ ಹಸಿರು ಇಲ್ಲದ, ನದಿಗಳು ಕಾಣದ, ಕನಿಷ್ಠ ಯಾವುದೇ ಬೆಳೆ, ತರಕಾರಿ ಬೆಳೆಯಲಾಗದ ಮರಳುಗಾಡಿನ ದುಬೈ ಕೇವಲ ನಾಲ್ಕು ದಶಕಗಳಲ್ಲಿ ವಿಶ್ವವೇ ಬೆರಗಾಗುವ ರೀತಿಯಲ್ಲಿ ಬೆಳೆದು ನಿಂತಿರುವುದು ಅಚ್ಚರಿ ಎಂದರು.
ದುಬೈ ದೇಶದಲ್ಲಿ ಕನ್ನಡಿಗರು ಹೋಟೆಲ್ ಉದ್ಯಮದಿಂದ ಹಿಡಿದು ಅನೇಕ ಉದ್ಯಮದಲ್ಲಿ ತಮ್ಮ ಬದುಕು ಕಟ್ಟಿಕೊಂಡಿರುವುದು ಅನನ್ಯ. ಈ ದೇಶದಲ್ಲಿ ಕನ್ನಡ ಭಾಷೆಯ ಜೊತೆಗೆ ಕನ್ನಡ ಸಂಸ್ಕೃತಿಯ ಅಸ್ಮಿತೆ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕೇರಳದ ಮಂಜೇಶ್ವರ ಶಾಸಕ ಎ. ಕೆ.ಎಂ ಅಶ್ರ್ ಮಾತನಾಡಿ, ದುಬೈ ಕಟ್ಟುವಲ್ಲಿ ಕನ್ನಡಿಗರ ಅದರಲ್ಲೂ ಕರಾವಳಿ ಭಾಗದ ಜನರ ಪಾತ್ರ ಹೆಚ್ಚಿನದು ಎಂದರು.
ಸಮಾಜ ಸೇವಕ ಕೆಕೆ ಶೆಟ್ಟಿ , ಅಬುದಾಬಿಯ ಇಂಡಿಯನ್ ಸೋಶಿಯಲ್ ಹಾಗೂ ಕಲ್ಚರಲ್ ಸೆಂಟರಿನ ನೂತನ ಅಧ್ಯಕ್ಷ ಮಿತ್ರಂಪಾಡಿ ಜಯರಾಮ ರೈ, ಎನ್.ಆರ್.ಐ ಪಾರಂ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಸಾಂಸ್ಕೃತಿಕ ಸಂಘಟಕ ಜೇಮ್ಸ್ ಮೆಂಡೋನ್ಸ, ಕುನಿಲ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಫಕ್ರುದ್ಧೀನ್ ಕುನಿಲ್, ಕಲಾಪೋಷಕ ಮಹಾಬಲೇಶ್ವರ ಭಟ್ ಎಡಕ್ಕಾನ, ಯುಎಇ ಅಲ್‌ಬಾಕ್ ಗೋಲ್ಡ್ ಎಂಡ್ ಡೈಮಂಡ್ ಸಂಸ್ಥೆಯ ಆಡಳಿತ ನಿರ್ದೇಶಕ ಯೂಸ್ ಉಪ್ಪಳ, ದುಬೈ ಆಸ್ಟರ್ ಡಿ.ಎಂ ಹೆಲ್ತ್ ಕೇರ್‌ನ ಸಹಾಯಕ ಜನರಲ್ ಮೇನೇಜರ್ ಬಶೀರ್ ಬಂಟ್ವಾಳ್ ಅವರುಗಳಿಗೆ ದುಬೈನ ಬ್ಯುಸಿನೆಸ್ ಗೇಟ್ ಹಾಗೂ ವೂಮನ್ ಸರ್ಕಲ್ ಸಂಸ್ಥಾಪಕಿ ಲೈಲಾ ರಹಲ್ ಅಲ್ ಅತ್ಫಾನಿ, ಇಕ್ಬಾಲ್ ಅಬತೂರು ಮತ್ತು ಮಲಯಾಳಂ ಚಿತ್ರ ನಿರ್ದೇಶಕ ತುಳಸಿದಾಸ್ ಪ್ರಶಸ್ತಿ ಪ್ರದಾನ ಮಾಡಿದರು.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಘಟಕದ ಅಧ್ಯಕ್ಷ ಎನ್.ಚನಿಯಪ್ಪ ನಾಯ್ಕ, ಮಸ್ಕಾತ್ ಘಟಕದ ಅಧ್ಯಕ್ಷ ಅಬೂಬಕ್ಕರ್ ಬೊಳ್ಳಾರ್, ಅಬ್ದುಲ್ ಸಲಾಂ ಚೇವಾರು, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಸಂಚಾಲಕ ಜಡ್. ಎ. ಕಯ್ಯರ್, ಸಮಿತಿಯ ಸದಸ್ಯರಾದ ಮಂಜುನಾಥ ಕಾಸರಗೋಡು, ಸುಗಂದರಾಜ್ ಬೇಕಾಲ್ ಮತ್ತಿತರರು ಉಪಸ್ಥಿತರಿದ್ದರು. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇ ಘಟಕದ ಅಧ್ಯಕ್ಷ ಇಬ್ರಾಹಿಂ ಖಲೀಲ್ ಅರಿಮಲೆ ಅಧ್ಯಕ್ಷತೆ ವಹಿಸಿದ್ದರು.
ನಾನಾ ತಂಡಗಳಿಂದ ಜಾನಪದ ನೃತ್ಯ, ಭರತನಾಟ್ಯ, ತಿರುವಾದಿರಕಳಿ, ಕೊಲ್ ಕ್ಕಲಿ, ಒಪ್ಪನ, ದ್ ಮುಟ್ಟು, ಯಕ್ಷಗಾನ ಭಾಗವತಿಕೆ, ಗಾಯಕಿ ಪುಷ್ಪ ಆರಾದ್ಯ ಅವರಿಂದ ಕಾರ್ಯಕ್ರಮ ನಡೆಯಿತು.