ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಈಗಾಗಲೇ ಎಐಸಿಸಿ ನಿರ್ದೇಶನ ಮೇರೆಗೆ ಸೂಕ್ತ ಅಭ್ಯರ್ಥಿಗಳನ್ನು ಗುರುತಿಸಲಾಗಿದೆ. ಮೂರು ಸ್ಥಾನಗಳಲ್ಲೂ ಗೆಲ್ಲುವ ವಿಶ್ವಾಸವನ್ನು ಗುರಿಯನ್ನು ಪಕ್ಷ ಹೊಂದಿದೆ ಎಂದು ಉಪಮುಖ್ಯಮಂತ್ರಿ, ರಾಜ್ಯಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಅವರು, ಶಾಸಕ ರಘುಮೂರ್ತಿಯವರ ಪುತ್ರಿ ವಿವಾಹ ಕಾರ್ಯಕ್ಕೆ ಆಗಮಿಸಿ ವಧುವರರನ್ನು ಆಶೀರ್ವದಿಸಿ ತೆರಳುವ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿ, ಕೆಲವೊಮ್ಮೆ ರಾಜಕೀಯ ಕ್ಷೇತ್ರದಲ್ಲಿ ಅನಿರೀಕ್ಷಿತ ಬದಲಾವಣೆಯನ್ನು ನಾವು ನಿರೀಕ್ಷೆ ಮಾಡಬಹುದಾಗಿದೆ. ಪ್ರಸ್ತುತ ಬಿಜೆಪಿ ಎಂಎಲ್ಸಿ ಸಿ.ಪಿ.ಯೋಗೇಶ್ವರ್‌ರವರನ್ನು ನಾವು ಎಂದೂ ಭೇಟಿಯಾಗಿಲ್ಲ. ಚುನಾವಣೆ ಸ್ಪರ್ಧೆ ಕುರಿತು ಚರ್ಚೆ ನಡೆಸಿಲ್ಲವೆಂದು ಸ್ಪಷ್ಟಪಡಿಸಿದರು.
ಚನ್ನಪಟ್ಟಣ ಉಪಚುನಾವಣೆ ಕುರಿತಂತೆ ನಾವು ನಮ್ಮದೇ ಆದ ಚಿಂತನೆಯಲ್ಲಿದ್ದೇವೆ. ಆದರೆ, ಕೇಂದ್ರ ಸಚಿವರು ಯೋಗೇಶ್ವರ್ ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆಂದು ಏನೇನೋ ಹೇಳುತ್ತಿದ್ದಾರೆ. ರಾಜ್ಯದ ಜನತೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಬಗ್ಗೆ ವಿಶ್ವಾಸ ಹೊಂದಿಲ್ಲವೆಂದರು.
ಈ ಬಾರಿ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಉತ್ತಮ ಮಳೆಯಾಗಿದೆ. ಎಲ್ಲೆಡೆ ಕೆರೆಕಟ್ಟೆಗಳು ತುಂಬಿವೆ. ಕಾವೇರಿ ನೀರಿನ ಒಳಹರಿವು ಹೆಚ್ಚಾಗಿ ತಮಿಳುನಾಡಿಗೆ ಸೇರುತ್ತಿದೆ. ಮೇಕೆದಾಟು ಯೋಜನೆ ಜಾರಿಗೊಳಿಸಿದರೆ ಎಲ್ಲಾ ಸಹಾಯವಾಗುತ್ತದೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಈ ಬಗ್ಗೆ ಮೌನವಹಿಸಿರುವುದು ಸರಿಯಲ್ಲವೆಂದರು.
ಬೆಂಗಳೂರು ಮಹಾನಗರದಲ್ಲಿ ಮಳೆಯಿಂದ ಆದ ಅನಾಹುತಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿರುವೆ. ಅವಶ್ಯವಿರುವ ಕಡೆ ತುರ್ತು ಕಾಮಗಾರಿ ಕೈಗೊಳ್ಳಲು ಮುಖ್ಯಇಂಜಿನಿಯರ್‌ಗೆ ಸೂಚನೆನೀಡಿರುವೆ. ಜನರ ಸಂಕಷ್ಟಗಳಿಗೆ ನೆರವಾಗುವ ಬಗ್ಗೆ ನಾವು ಬೇರೆಯವರಿಂದ ಪಾಠಕಲಿಯಬೇಕಿಲ್ಲ ಎಂದರು.