ಚಂದ್ರವಳ್ಳಿ ನ್ಯೂಸ್, ಚನ್ನಗಿರಿ:
ಚನ್ನಗಿರಿ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಭಾನುವಾರ ಬಿರುಸಿನ ಮಳೆಯಾಗಿದೆ. ಮಳೆಗೆ ಹಳ್ಳಕೊಳ್ಳ ಹಾಗೂ ರಸ್ತೆ, ಚರಂಡಿಗಳಲ್ಲಿ ಯಥೇಚ್ಛ ಪ್ರಮಾಣದಲ್ಲಿ ಮಳೆಯ ನೀರು ತುಂಬಿ ಹರಿಯಿತು.
ತಾಲ್ಲೂಕಿನ ನುಗ್ಗಿಹಳ್ಳಿ, ಕಾಕನೂರು, ದೇವರಹಳ್ಳಿ, ಗರಗ, ಗುಳ್ಳೇಹಳ್ಳಿ, ದಿಗ್ಗೇನಹಳ್ಳಿ, ನಲ್ಲೂರು, ಹಿರೇಉಡ, ನಾರಶೆಟ್ಟಿಹಳ್ಳಿ, ಹೊದಿಗೆರೆ, ಹಿರೇಮಳಲಿ, ಮಾವಿನಕಟ್ಟೆ, ಮಾಡಾಳ್, ಅಜ್ಜಿಹಳ್ಳಿ, ಚಿಕ್ಕೂಲಿಕೆರೆ, ಜೋಳದಹಾಳ್, ತಾವರೆಕೆರೆ, ಪಾಂಡೋಮಟ್ಟಿ, ಗೊಪ್ಪೇನಹಳ್ಳಿ ಮುಂತಾದ ಗ್ರಾಮಗಳಲ್ಲಿ ಏಕ ಕಾಲದಲ್ಲಿ ಬಿರುಸಿನ ಮಳೆಯಾಗಿದೆ.
ಚನ್ನಗಿರಿ ಪಟ್ಟಣದ ಹೊರ ವಲಯದಲ್ಲಿರುವ ಹರಿದ್ರಾವತಿ ಹಳ್ಳ ಹಾಗೂ ಕಾಕನೂರು ಗ್ರಾಮದ ಬಳಿಯ ಹಿರೇಹಳ್ಳ ಮೈ ದುಂಬಿ ಹರಿಯತ್ತಿದೆ. ಈ ಹಳ್ಳಗಳ ನೀರು ಸೂಳೆಕೆರೆಯ ಒಡಲು ಸೇರಲಿವೆ. ಅಡಿಕೆ ತೋಟಗಳಲ್ಲಿ ಮಳೆಯ ನೀರು ನಿಂತಿದೆ.
ಚಂದ್ರವಳ್ಳಿ ನ್ಯೂಸ್, ಸಾಸ್ವೆಹಳ್ಳಿ:
ಸಾಸ್ವೆಹಳ್ಳಿ ಸುತ್ತ ಮುತ್ತ ಸುರಿದ ಮಳೆಗೆ ಸಮೀಪದ ಹನುಮನಹಳ್ಳಿ, ಕುಳಗಟ್ಟೆ, ಸಾಸ್ವೆಹಳ್ಳಿ, ಬೈರನಹಳ್ಳಿ ಗ್ರಾಮಗಳ ಹಳ್ಳಗಳು ಮೈದುಂಬಿ ಹರಿಯುತ್ತಿವೆ. ಕೆರೆಗಳು ಬಹುತೇಕ ತುಂಬುವ ಹಂತದಲ್ಲಿವೆ.
ಅಡಿಕೆ, ತೆಂಗು, ಬಾಳೆತೋಟಗಳಿಗೆ ನೀರು ನುಗ್ಗಿದೆ. ಕೆಲ ಅಡಿಕೆ ಮರಗಳು ಮುರಿದು ಬಿದ್ದಿವೆ. ಮೆಕ್ಕೆಜೋಳ ಕಟಾವಿಗೆ ಬಂದಿದ್ದು, ರೈತರು ಬೆಳೆ ನಷ್ಟದ ಭೀತಿಯಲ್ಲಿದ್ದಾರೆ.
ಮೆಕ್ಕೆಜೋಳ ಬೆಳೆಯ ತೆನೆಗಳು ನೆಲಕಚ್ಚಿದ್ದು, ಕಾಳುಗಳು ಮೊಳಕೆ ಒಡೆಯುತ್ತಿವೆ. ಭತ್ತದ ಬೆಳೆ ಚೆನ್ನಾಗಿದೆ. ಹೀಗೆ ಮಳೆ ಸುರಿದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುತ್ತದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಬಸವಾಪಟ್ಟಣ ವರದಿ: ಈ ಬಾರಿ ನಿರಂತರವಾಗಿ ಸುರಿದ ಮಳೆಯಿಂದ ಟೊಮೆಟೊ ಫಸಲಿಗೆ ಕೊಳೆ ರೋಗ ತಗುಲಿದ್ದು, ಇಳುವರಿ ಕಡಿಮೆಯಾಗಿರುವುದರಿಂದ ರೈತರು ಆತಂಕಗೊಂಡಿದ್ದಾರೆ.
ಒಂದು ಎಕರೆಯಲ್ಲಿ ಟೊಮೆಟೊ ಬೆಳೆಯಲು ಕನಿಷ್ಠ ರೂ. 1 ಲಕ್ಷ ವೆಚ್ಚವಾಗುತ್ತದೆ. ದಿನನಿತ್ಯದ ಈ ತರಕಾರಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಸಾಕಷ್ಟು ಬಂಡವಾಳ ತೊಡಗಿಸಿ ಬೆಳೆದಿದ್ದೆವು. ಆದರೆ, ಸತತ ಸುರಿಯುತ್ತಿರುವ ಮಳೆಯಿಂದ ಕೊಳೆರೋಗ ತಗುಲಿ ಬೆಳೆ ನಾಶವಾಗುತ್ತಿದೆ. ಉತ್ಪಾದನೆ ಕಡಿಮೆಯಾಗಿ ಪೂರೈಕೆಯೂ ಇಲ್ಲದೇ 25 ಕೆ.ಜಿ. ತೂಗುವ ಒಂದು ಕ್ರೇಟ್‌ಟೊಮೆಟೊ ಬೆಲೆ ಈಗ 800 ರಿಂದ 1000ಕ್ಕೆ ಏರಿಕೆಯಾಗಿದೆ ಎಂದು ಇಲ್ಲಿನ ಟೊಮೆಟೊ ಬೆಳೆಗಾರ ಜಫ್ರುಲ್ಲಾ ಸಾಹೇಬ್‌ತಿಳಿಸಿದ್ದಾರೆ.
ಟೊಮೆಟೊ ಮೂರು ತಿಂಗಳ ಬೆಳೆಯಾಗಿದ್ದು, ನರ್ಸರಿಗಳಿಂದ ಸಸಿಗಳನ್ನು ತಂದು ನಾಟಿ ಮಾಡಿದ್ದೆವು. ಗೊಬ್ಬರ ಹಾಕಿ, ಔಷಧ ಸಿಂಪಡಿಸಿ ಚೆನ್ನಾಗಿ ಆರೈಕೆ ಮಾಡಿದ್ದೆವು. ಆದರೆ, ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಉತ್ತಮ ಆದಾಯದ ನಿರೀಕ್ಷೆ ಹುಸಿಗೊಳಿಸಿದೆ ಎಂದು ರೈತರು ನೋವು ತೋಡಿಕೊಂಡಿದ್ದಾರೆ.
ನಮಗೆ ಸ್ವಂತ ಜಮೀನಿಲ್ಲ. ಜಮೀನು ಗುತ್ತಿಗೆ ಪಡೆದು ಇಡೀ ವರ್ಷ ನಿರಂತರವಾಗಿ ಟೊಮೆಟೊ ಬೆಳೆಯುತ್ತೇವೆ. ಆದರೆ, ಮಳೆಗೆ ಬೆಳೆ ಆಹುತಿಯಾಗಿದೆ ಎನ್ನುತ್ತಾರೆ ಗುತ್ತಿಗೆ ಪಡೆದ ರೈತರು.
ಟೊಮೆಟೊ ಕೆ.ಜಿ.ಗೆ ರೂ 50 ರಿಂದ ರೂ 60ಕ್ಕೆ ಮಾರಾಟವಾಗುತ್ತಿದೆ. ಕೊಳೆ ರೋಗದಿಂದ ಫಸಲು ಕಡಿಮೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಕೆ.ಜಿ. ಬೆಲೆ ರೂ. 100ರವರೆಗೂ ಏರುವ ಸಾಧ್ಯತೆ ಇದೆ ಎಂದು ತರಕಾರಿ ವ್ಯಾಪಾರಿ ಶೌಕತ್‌ಮಾಹಿತಿ ನೀಡಿದ್ದಾರೆ.