ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ :
ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಲು ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ. ಜನ ಸೇರಿಸಿ ಯಶಸ್ವಿಗೊಳಿಸುವುದು ನಿಮ್ಮ ಜವಾಬ್ದಾರಿ ಎಂದು ಕನ್ನಡಪರ ಸಂಘಟನೆಗಳಿಗೆ ಶಾಸಕ ಡಾ.ಎಂ.ಚಂದ್ರಪ್ಪ ಕರೆ ನೀಡಿದರು.
ನ.೧ ಕನ್ನಡ ರಾಜ್ಯೋತ್ಸವ ಹಾಗೂ ೨೩ ರಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಕುರಿತು ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದರು.
ಯಾವುದೇ ಒಂದು ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು. ಅಧಿಕಾರಿಗಳು ನಿಯಮದ ಪ್ರಕಾರ ರಾಜ್ಯೋತ್ಸವದಲ್ಲಿ ಭಾಗವಹಿಸುತ್ತಾರೆ. ಕನ್ನಡದ ಬಗ್ಗೆ ಆಸಕ್ತಿಯಿರುವ ಸಂಘಟನೆಗಳು ಜವಾಬ್ದಾರಿ ತೆಗೆದುಕೊಳ್ಳಬೇಕು. ಕನ್ನಡ ಭುವನೇಶ್ವರಿ ಹಾಗೂ ಕಲಾ ತಂಡಗಳ ಮೆರವಣಿಗೆ ಎಲ್ಲಿಂದ ಹೊರಟು ಎಲ್ಲಿಗೆ ತಲುಪಬೇಕು ಎನ್ನುವುದನ್ನು ನೀವುಗಳು ತೀರ್ಮಾನಿಸಬೇಕು. ಸರ್ಕಾರ ಮೂಲಸೌಕರ್ಯ ಒದಗಿಸುತ್ತದೆ. ಉಳಿದಂತೆ ನಿಮ್ಮ ಪಾತ್ರ ಮುಖ್ಯ ಎಂದು ಹೇಳಿದರು.
ಆಲೂರು ವೆಂಕಟರಾಯರು, ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರು ಕನ್ನಡದ ಏಕೀಕರಣಕ್ಕಾಗಿ ಹೋರಾಟ ಮಾಡಿ ಹರಿದು ಹಂಚಿ ಹೋಗಿದ್ದ ಕನ್ನಡನಾಡನ್ನು ಒಗ್ಗೂಡಿಸಿದರು. ಡಿ.ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಮೈಸೂರನ್ನು ಕರ್ನಾಟಕವೆಂದು ನಾಮಕರಣ ಮಾಡಿದರು.
ಹಾಗಾಗಿ ನಾಡ ಹಬ್ಬ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಬೇಕು. ಅದೇ ರೀತಿ ನ.೨೩ ರಂದು ನಡೆಯುವ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ವೀರ ಮಹಿಳೆ ರಾಣಿ ಚೆನ್ನಮ್ಮನ ತ್ಯಾಗ, ಹೋರಾಟ ಯಾವ ಪುರುಷನಿಗಿಂತಲೂ ಕಮ್ಮಿಯಿರಲಿಲ್ಲ ಎಂದರು.
ಹೊಳಲ್ಕೆರೆ ತಹಶೀಲ್ದಾರ್ ಬೀಬಿ ಫಾತಿಮಾ, ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ರಾಧಾ, ಸದಸ್ಯರುಗಳಾದ ಮುರುಗೇಶ್, ಮಲ್ಲಿಕಾರ್ಜುನಸ್ವಾಮಿ, ಕರ್ನಾಟಕ ರಕ್ಷಣಾ ವೇದಿಕೆ ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷ ಹನುಮಂತಪ್ಪ, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.