ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಶೀಘ್ರವಾಗಿ ಪೂರೈಸಿ ಜಿಲ್ಲೆಗೆ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಭದ್ರಾ ಮೇಲ್ದಂಡೆ ಯೋಜನೆಯನ್ನು ತಡ ಮಾಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಬರಪೀಡಿತ ಪ್ರದೇಶ ಚಿತ್ರದುರ್ಗ ಜಿಲ್ಲೆಯ ರೈತರು ಮಳೆಯನ್ನೇ ನೆಚ್ಚಿಕೊಂಡಿದ್ದು, ಅತಿ ವೃಷ್ಠಿ ಅನಾವೃಷ್ಠಿ ಎರಡರಿಂದಲೂ ನಷ್ಟ ಅನುಭವಿಸುತ್ತಿದ್ದಾರೆ. ಹಾಗಾಗಿ ೨೦೨೪ ರೊಳಗಾಗಿ ಕಾಮಗಾರಿಯನ್ನು ಮುಗಿಸಿ ನೀರು ಹರಿಸಬೇಕು. ಇಲ್ಲಿಯವರೆಗೂ ಅಧಿಕಾರ ನಡೆಸಿದ ಎಲ್ಲಾ ಪಕ್ಷಗಳು ರೈತರಿಗೆ ಜನಸಾಮಾನ್ಯರಿಗೆ ಪೊಳ್ಳು ಭರವಸೆಯನ್ನು ನೀಡುವುದರಲ್ಲಿಯೇ ಕಾಳ ಕಳೆಯುತ್ತಿವೆ ವಿನಃ ಕಾಮಗಾರಿ ಮಾತ್ರ ಶೂನ್ಯ.
ಕೇಂದ್ರ ಸರ್ಕಾರ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ಘೋಷಿಸಿರುವುದನ್ನು ಬಿಟ್ಟರೆ ಹಣ ಮಾತ್ರ ಬಿಡುಗಡೆಯಾಗಿಲ್ಲ. ಜಿಲ್ಲೆಯ ಎಲ್ಲಾ ಶಾಸಕರು, ಸಚಿವರು, ಸಂಸದರು ಪಕ್ಷ ಭೇದ ಮರೆತು ಭದ್ರಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸುವತ್ತ ಗಮನ ಕೊಡಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಧ್ಯ ಕರ್ನಾಟಕದ ಉಸ್ತುವಾರಿ ರವಿಕುಮಾರ್‌ನಾಯ್ಕ, ರಾಜ್ಯಾಧ್ಯಕ್ಷ ಅರುಣ್‌ಕುಮಾರ್ ಎನ್. ಸಂಘಟನಾ ಕಾರ್ಯದರ್ಶಿ ಅಶೋಕ್, ಮಹಿಳಾ ಅಧ್ಯಕ್ಷೆ ಆಶಾ, ರೈತ ಘಟಕದ ರಾಜ್ಯಾಧ್ಯಕ್ಷ ಸ್ವಾಮಿ ಟಿ. ಅಶ್ವಿನಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೇಣುಕ ರಾಜಣ್ಣ, ಲಕ್ಷ್ಮಿ, ಗೀತಾಂಜಲಿ
ಸಿ.ಓಬಳೇಶ್‌ಯಾದವ್, ಸಿ.ಸತೀಶ್, ಎನ್.ಓಬಣ್ಣ, ಮುತ್ತಯ್ಯ, ಸೈಯದ್ ಅಲಿ, ಆಶಾ, ಇ.ಎನ್.ಲಕ್ಷ್ಮಿಕಾಂತ, ಏಕಾಂತಪ್ಪ ಇನ್ನು ಅನೇಕರು ಪ್ರತಿಭಟನೆಯಲ್ಲಿದ್ದರು.