ಪಕ್ಕದ ಮನೆ ಆಂಟಿ ನಾನು ಕೋತಿಮರಿ ತರಾ ಇದೇನೇ ಅಂದಳು!!

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನನ್ನನ್ನು ನಾನು ಹುಡುಕುತ್ತಾ ಈ ಬದುಕಿನ ಪಯಣದಲ್ಲಿ ಸಮಾಜದೊಂದಿಗೆ…….ನಾನು ಚಿಕ್ಕ ಮಗುವಾಗಿರುವಾಗ ಅಮ್ಮ ಎಲ್ಲರಿಗೂ ಹೇಳುತ್ತಿದ್ದಳು, ನನ್ನ ಮಗು ಸುರಸುಂದರಾಂಗ – ರಾಜಕುಮಾರ ಎಂದು……

ಆದರೆ, ಪಕ್ಕದ ಮನೆ ಆಂಟಿ ನಾನು ಕೋತಿಮರಿ ತರಾ ಇದೇನೇ ಅಂತ ಯಾರಿಗೋ ಹೇಳುತ್ತಿದ್ದುದು ಕೇಳಿಸಿತು,…..  ಶಾಲೆಗೆ ಹೋಗುವಾಗ ಅಪ್ಪ ಎಲ್ಲರಿಗೂ ಹೇಳುತ್ತಿದ್ದರು, ನನ್ನ ಮಗ ತುಂಬಾ ಬುದ್ದಿವಂತ – ಚಾಣಾಕ್ಷ ಎಂದು,…… ಆದರೆ, ಶಾಲೆಯಲ್ಲಿ ಟೀಚರುಗಳು ಹೇಳುತ್ತಿದ್ದರು,  ನೀನು ದಡ್ಡ – ಅಯೋಗ್ಯ, ಎದೆ ಸೀಳಿದರೂ ನಾಲ್ಕಕ್ಷರ ಬರೆಯಲು ಸರಿಯಾಗಿ ಬರುವುದಿಲ್ಲ,……

 ಮನೆಯಲ್ಲಿ ನಾನು ಆಗಾಗ ಸಿನಿಮಾ ಹಾಡುಗಳನ್ನು ಹಾಡುತ್ತಿದ್ದರೆ, ನನ್ನ ಅಜ್ಜಿ

ನನ್ನ ಮೊಮ್ಮಗ ಥೇಟ್  ಎಸ್. ಪಿ. ಬಾಲಸುಬ್ರಮಣ್ಯಂರಂತೆ ಹಾಡುತ್ತಾನೆ ಎನ್ನುತ್ತಿದ್ದರು,….

ಆದರೆ, ಅದೇ ಹಾಡನ್ನು ಸ್ನೇಹಿತರ ಮುಂದೆ ಹಾಡಿದರೆ ಏಯ್ ನಿಲ್ಸೋ, ಕತ್ತೆ ಕೂಗಿದರೂ ಇದಕ್ಕಿಂತ ಮಧುರವಾಗಿರುತ್ತದೆ ಎನ್ನುತ್ತಿದ್ದರು,……

 ಮನೆಯಲ್ಲಿ ನಡೆದ ಘಟನೆಗಳನ್ನು ನಾನು ನೋಡಿದ ರೀತಿಯಲ್ಲಿಯೇ ಸತ್ಯವಾಗಿ ಹೇಳಿದಾಗ  ಅಜ್ಜ ನನ್ನ ಮೊಮ್ಮಗ ಸತ್ಯ ಹರಿಶ್ಚಂದ್ರ ಎನ್ನುತ್ತಿದ್ದರು,…….

ಆದರೆ, ಅದೇ ರೀತಿ ಆಟದ ಮೈದಾನದಲ್ಲಿ ನಡೆದ ಹೊಡೆದಾಟಗಳನ್ನು ಪ್ರಿನ್ಸಿಪಾಲರ ಬಳಿ ಅಷ್ಟು ಸತ್ಯವಾಗಿ ಹೇಳಿದಾಗ ನನ್ನ ಜೊತೆಗಾರರು ಇವನೊಬ್ಬ ದಗಲ್ಬಾಜಿ – ನಂ‌ಬಿಕೆ ದ್ರೋಹಿ – ಪಿಂಪ್ ನನ್ಮಗ ಗುರು ಎನ್ನುತ್ತಿದ್ದರು,…….

ಕಾಲೇಜಿನ ನಾಟಕದಲ್ಲಿ ಹೆಣ್ಣು ಪಾತ್ರ ಮಾಡಿ ಪ್ರಥಮ ಬಹುಮಾನ ಗಳಿಸಿದಾಗ ತೀರ್ಪುಗಾರರು ಅದ್ಭುತ ನಟ ಎಂದರು,……

ಆದರೆ, ನನ್ನ ಸಹಪಾಠಿಗಳು ಇವನೊಬ್ಬ ಚಕ್ಕಾ – ಹೆಣ್ಣಿಗ – ದ್ವಿಲಿಂಗಿ ಎಂದು ಜರಿದರು,…….

ಲಂಚಕೊಟ್ಟು ಕೆಲಸಕ್ಕೆ ಸೇರುವುದಿಲ್ಲ ಎಂದು ಪ್ರಾಮಾಣಿಕವಾಗಿ ವರ್ಷಗಟ್ಟಲೆ ಅಲೆಯುವಾಗ ನನ್ನ ಸುತ್ತಲಿನವರು ಬಫೂನ್ ನಂತೆ ನೋಡಿದರು,……..

ಆದರೆ, ಲಂಚಕೊಟ್ಟು ಒಳ್ಳೆಯ ಕೆಲಸಕ್ಕೆ ಸೇರಿದಾಗ ಅದೇ ಜನ ಶಹಬಾಸ್ ಎಂದರು……..

ವರದಕ್ಷಿಣೆ ಇಲ್ಲದೆ ಮದುವೆಯಾಗುತ್ತೇನೆ ಎಂದಾಗ ಸಂಬಂಧಿಕರು ಇವನಿಗೇನೋ ಐಬು ಎಂದು ಹೆಣ್ಷುಕೊಡಲು ನಿರಾಕರಿಸಿದರು,…….

ಆದರೆ, ಇಷ್ಟಿಷ್ಟು ಹಣ, ಒಡವೆ, ಸೈಟು ಬೇಕು ಎಂದು ಬೇಡಿಕೆ ಇಟ್ಟಾಗ ಅದನ್ನೆಲ್ಲಾ ನೀಡಿ ಭರ್ಜರಿಯಾಗಿ ಮದುವೆಮಾಡಿಕೊಟ್ಟರು……

ಆಫೀಸಿನಲ್ಲಿ ಎಲ್ಲರೂ ನನ್ನನ್ನು ಬುದ್ದಿವಂತ – ಶ್ರಮಜೀವಿ ಎಂದು ಹೊಗಳುವರು,…..

ಆದರೆ, ನನ್ನ ಪತ್ನಿ ಮನೆಯಲ್ಲಿ ನನ್ನನ್ನು ಸಾಮಾನ್ಯ ಜ್ಞಾನ ಇಲ್ಲದ ಪೆದ್ದ – ಸೋಂಬೇರಿ ಎಂದು ಹಿಯಾಳಿಸುವಳು,…….

ನಿನ್ನನ್ನು ಕಟ್ಟಿಕೊಂಡ ನಾನು ದುರಾದೃಷ್ಟವಂತಳು. ಒಂದು ಸ್ವಲ್ಪವೂ ರಸಿಕತೆಯಿಲ್ಲ ಎಂದು ಮನೆಯಲ್ಲಿ ಪತ್ನಿ ಕೊರಗುವಳು,…..

ಆದರೆ, ನನ್ನ ಮಾತಿನ ಮೋಡಿ, ಜೋಕ್ ಗಳಿಗೆ ಸಂತೋಷಪಡುವ ನನ್ನ ಸಹೋದ್ಯೋಗಿಗಳು ನಿನ್ನನ್ನು ಪಡೆದ ನಿನ್ನ ಹೆಂಡತಿ ಅದೃಷ್ಟವಂತಳು ಎನ್ನುವರು,……

ಒಂದು ಸಣ್ಣ ಸಹಾಯಕ್ಕಾಗಿ ಪಕ್ಕದ ಮನೆಯವರು ನನ್ನನ್ನು ದೇವರಂತಾ ಮನುಷ್ಯ ಎನ್ನುವರು…..ಆದರೆ, ಒಂದು ಸಣ್ಣ ಜಗಳದಿಂದ ಎದುರು ಮನೆಯವರು ಇವನೊಬ್ಬ ಖದೀಮ, ನಯ ವಂಚಕ ಎನ್ನುವರು……ಯಪ್ಪಾ, ………….ಇವುಗಳ ಮಧ್ಯೆ ನನಗೆ ನಾನು ಯಾರೆಂದು ನನಗೇ ಅರಿವಾಗುತ್ತಿಲ್ಲ. ಅದರ ನಿರಂತರ ಹುಡುಕಾಟದಲ್ಲಿ ನಾನು…………….
ಲೇಖನ:ವಿವೇಕಾನಂದ. ಎಚ್. ಕೆ.9844013068……..

 

 

 

- Advertisement -  - Advertisement -  - Advertisement - 
Share This Article
error: Content is protected !!
";