Ad imageAd image

ನೀರಾವರಿ ಪದ್ಧತಿಗಳ ಅಳವಡಿಕೆಯಿಂದ ನೀರಿನ ಸದ್ಬಳಕೆ ಆಗಲಿದೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವೈಜ್ಞಾನಿಕವಾಗಿ ತುಂತುರು ಮತ್ತು ಹನಿ ನೀರಾವರಿ ಪದ್ದತಿಗಳ ಅಳವಡಿಕೆಯಿಂದ ಕೃಷಿಯಲ್ಲಿ ಶೇ.30-40ರಷ್ಟು ನೀರಿನ ಉಳಿತಾಯವಾಗುತ್ತದೆ. ಇದರಿಂದ ನೀರಿನ ಸದ್ಬಳಕೆ ಮಾಡಿಕೊಳ್ಳಬಹುದು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ರಜನೀಕಾಂತ ಹೇಳಿದರು.

ಹಿರಿಯೂರು ಬಬ್ಬೂರು ಫಾರಂನಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಮಂಗಳವಾರ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ದೇವಸಮುದ್ರ ಹೋಬಳಿ ರೈತರಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ತುಂತುರು ಮತ್ತು ಹನಿ ನೀರಾವರಿ ಘಟಕಗಳ ಅಳವಡಿಕೆ ಮತ್ತು ನಿರ್ವಹಣೆ ಕುರಿತು ಆಯೋಜಿಸಲಾದ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತುಂತುರು ಹಾಗೂ ಹನಿ ನಿರಾವರಿ ಅಳಡಿಕೆಯಿಂದ ವಿದ್ಯುಚ್ಚಕ್ತಿಯ ಉಳಿತಾಯ, ಕೂಲಿ ಆಳುಗಳ ಉಳಿತಾಯ, ಸಮಯದ ಉಳಿತಾಯ, ಕಳೆಗಳ ನಿರ್ವಹಣೆ ಮತ್ತು ರೋಗಗಳ ಹರಡುವಿಕೆಯನ್ನು ತಡೆಗಟ್ಟಬಹುದು. ಹನಿ ನೀರಾವರಿ ಪದ್ದತಿಯಲ್ಲಿ ರಸಾವರಿ ಬಳಸಿ ರಸಗೊಬ್ಬರ ನೀಡುವುದರಿಂದ ರಸಗೊಬ್ಬರದ ಸಮರ್ಪಕ ಬಳಕೆಯಿಂದ ವ್ಯವಯಸಾಯದ ಖರ್ಚು ಕಡಿಮೆಯಾಗಿ ಶೇ.20 ರಿಂದ 30 ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವೆಂದರು.

ಮಳೆಯಾಶ್ರಿತ ಪ್ರದೇಶದಲ್ಲಿ ರೈತರು ಬಿದ್ದ ನೀರನ್ನು ಇಂಗಿಸಲು ಕಂದಕ ಬದುಗಳ ನಿರ್ಮಾಣ ಮಾಡಬೇಕು ಮತ್ತು ಕೃಷಿ ಹೊಂಡದಲ್ಲಿ ನೀರು ಸಂಗ್ರಹಣೆ ಮಾಡಿ ಬೆಳೆಯ ಸಂದಿಗ್ದ ಹಂತದಲ್ಲಿ ನೀರು ಹಾಯಿಸಲು ಅನೂಕೂಲವಾಗುತ್ತದೆ. ಕೃಷಿ ಇಲಾಖೆಯಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೆ ಶೇ 90 ಸಹಾಯಧನದಲ್ಲಿ ಸ್ಪಿಂಕ್ಲರ್ ಸೆಟ್ ಪಡೆಯಲು ಸಂಬಂಧಪಟ್ಟ ರೈತಸಂಪರ್ಕ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಿ ಸದರಿ ಯೋಜನೆಯ ಅನುಕೂಲ ಪಡೆದು ಕೊಳ್ಳಬಹುದೆಂದರು ಎಂದರು.

ತೋಟಗಾರಿಕೆ ಮಹಾ ವಿದ್ಯಾಲಯದ ಇಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಪಕ ಡಾ. ರಾಜಶೇಖರ ಡಿ ಭಾರಕೇರ ಮಾತನಾಡಿ, ಭೂಮಿಯ ಮೇಲೆ ಶೇ 70 ರಷ್ಟು ನೀರಿದ್ದರೂ ಶೇ 2% ಮಾತ್ರ ಕೃಷಿ,ಕೈಗಾರಿಕೆ ಮತ್ತು ದಿನ ನಿತ್ಯ ಬಳಕೆಗೆ ಯೋಗ್ಯವಾಗಿದ್ದು ವೈಜ್ಞಾನಿಕವಾಗಿ ಶುದ್ದ ನೀರಿನ ಮಿತ ಹಾಗೂ ಸಮರ್ಥ ಬಳಕೆ ತಮ್ಮಲ್ಲೇರ ಜವಬ್ದಾರಿಯಾಗಿದೆಂದರು, ಹನಿ ನೀರಾವರಿ ಮತ್ತು ಸ್ಪಿಂಕ್ಲರ್ ಘಟಕಗಳ ಉಪಯೋಗದಿಂದ ಇದು ಸಾಧ್ಯವೆಂದರು ಹಾಗೂ ರೈತರು ನೀರು ಮತ್ತು ಮಣ್ಣಿನ ಸಂರಕ್ಷಣೆಗೆ ಕೃಷಿ ತ್ಯಾಜ್ಯಗಳ ಹೊದಿಕೆ, ಹಸಿರೆಲೆ ಗೊಬ್ಬರಗಳ ಬಳಕೆಗೆ ಒತ್ತು ನೀಡಬೇಕೆಂದರು.

ದಾವಣಗೆರೆ ವೆಂಕಟೇಶ್ವರ ಅಗ್ರಿ ಮತ್ತು ಹಾರ್ಟಿ ಸಲೂಷನ್ಸ್ ಬಕಂಪನಿ ಪ್ರತಿನಿಧಿಯಾದ ಅನಿಲ್ ಕುಮಾರ್ ಕ್ಷೇತ್ರ ಮಟ್ಟದಲ್ಲಿ ಸ್ಪಿಂಕ್ಲರ್ಸೆಟ್ ಘಟಕ ಅಳವಡಿಕೆ ವಿಧಾನ ಮತ್ತು ಅವುಗಳ ಸಮರ್ಪಕ ನಿರ್ವಹಣೆ ಕುರಿತು ಮಾಹಿತಿ ಮತ್ತು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಟ್ಟರು.

ದಾವಣಗೆರೆ ಪ್ರೀಮಿಯರ್ ಇರಿಗೇಶನ್ ಅಡ್ರಿಟೆಕ್ ಕಂಪನಿಯ ಏರಿಯಾ ಮ್ಯಾನೇಜರ್ ಆದ ಶ್ರೀ ರವಿಕುಮಾರ್ ರವರು ಹನಿ ನೀರಾವರಿ ಘಟಕಗಳನ್ನು ಕ್ಷೇತ್ರ ಮಟ್ಟದಲ್ಲಿ ಅಳವಡಿಸುವ ವಿನ್ಯಾಸ ಹಾಗೂ ನಿರ್ವಹಣೆಯ ವಿಧಾನವನ್ನು ತಿಳಿಸಿದರು. ಹನಿ ನೀರಾವರಿ ಪದ್ದತಿಯಲ್ಲಿ ವಿವಿಧ ಫಿಲ್ಟರ್ಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡುತ್ತಾ, ದೈನಂದಿನ ಫಿಲ್ಟರ್ಗಳಲ್ಲಿ ಡ್ರಂಮ್ ಕವಾಟಗಳನ್ನು ತೆರೆಯುವುದು, ವಾರಕ್ಕೊಮ್ಮೆ ಮೆಶ್ ಮತ್ತು ಡಿಶ್ ಫಿಲ್ಟರ್ ಗಾಗಿ ಫಿಲ್ಟರ್ ಎಲಿಮೆಂಟ್ ತೆರೆಯುವಿಕೆ ಹಾಗೂ ತಿಂಗಳಿಗೊಮ್ಮೆ ಹೈಡ್ರೋಸೈಕ್ಲೋನ್ ಫಿಲ್ಟರ್ ಸಂಗ್ರಹ ಕೊಠಡಿಯಲ್ಲಿ ಸೈಡ್ ಕ್ಯಾಪ್ ತೆರೆಯುವುದು ಬಹಳ ಮುಖ್ಯವೆಂದರು.

ಎಲ್ಲಾ ಡ್ರಿಪ್ ಲ್ಯಾಟರಲ್ಗಳ ಫ್ಲಶಿಂಗ್ನ್ನು ಪ್ರತಿ 15 ದಿನಗಳಿಗೊಮ್ಮೆ ಮಾಡಬೇಕು. ಹನಿ ನೀರಾವರಿ ಘಟಕದ ನಿರ್ದಿಷ್ಟ ಅವಧಿಯ ಕಾರ್ಯಾಚರಣೆಯ ನಂತರ ಉಪ್ಪು ಶೇಖರಣೆ ಸಂಭವಿಸುತ್ತದೆ. ಸಾಧನದ ಹೊರ ಮೇಲ್ಮೈಯಲ್ಲಿ ಉಪ್ಪು ಶೇಖರಣೆಯನ್ನು ನಾವು ಗಮನಿಸಿದಾಗ ಆಮ್ಲ ಚಿಕಿತ್ಸೆಯನ್ನು ಮಾಡಬೇಕಾಗುತ್ತದೆ. ಆಸಿಡ್ ಚಿಕಿತ್ಸೆಗಾಗಿ 35% ಕೇಂದ್ರೀಕೃತ ಹೈಡ್ರೋಕ್ಲೋರಿಕ್ ಆಮ್ಲವನ್ನು ಬಳಸಬೇಕು. ಆಸಿಡ್ ಚಿಕಿತ್ಸೆಯನ್ನು ಕೈಗೊಳ್ಳುವಾಗ ಕಣ್ಣುಗಳು ಮತ್ತು ಚರ್ಮದೊಂದಿಗೆ ಆಮ್ಲದ ಸಂಪರ್ಕವು ಅಪಾಯಕಾರಿಯಾದ್ದರಿಂದ ದಯವಿಟ್ಟು ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂದರು.

ಹನಿ ನೀರಾವರಿ ವ್ಯವಸ್ಥೆಯಲ್ಲಿ ಕೀಟ, ಅಳಿಲು ಮತ್ತು ಇಲಿಗಳ ಹಾನಿಯನ್ನು ತಡೆಗಟ್ಟಲು ನೀರಾವರಿ ಮುಗಿದಾಗ ಅಥವಾ ಬೆಳೆ ಮುಗಿದಾಗ ಅಥವಾ ಕೊಯ್ಲು ಮಾಡುವಾಗ ಹನಿನೀರಾವರಿ ಕೊಳವೆಗಳನ್ನು ಹೊಲದಲ್ಲಿ ಬೀಡದೆ ಅವುಗಳನ್ನು ಸರಿಯಾಗಿ ನೆರಳಿನಲ್ಲಿ ಸಂಗ್ರಹಿಸಿ ಮುನ್ನೇಚ್ಚರಿಕೆಯನ್ನು ತೆಗೆದುಕೊಳ್ಳಬೇಕೆಂದರು.

ಹನಿ ನೀರಾವರಿ ವ್ಯವಸ್ಥೆಯಲ್ಲಿ ನೀರಿನ ಗುಣಮಟ್ಟದ ಮಾನದಂಡಗಳು ಮತ್ತು ಹನಿ ನೀರಾವರಿ ವ್ಯವಸ್ಥೆಯಲ್ಲಿ ಸೂಕ್ತವಾದ ನೀರಿನಲ್ಲಿ ಕರಗುವ ರಸಗೊಬ್ಬರಗಳ ಕುರಿತು ಮಾಹಿತಿ ನೀಡಿದರು.

ನಂತರ ಸ್ಪಿಂಕ್ಲರ್ ನೀರಾವರಿ ವ್ಯವಸ್ಥೆಗಳ ನಿರ್ವಹಣೆ ಮತ್ತು ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡುತ್ತಾ, ಪೈಪ್ಗಳು ಒಂದು ವಾರಕ್ಕಿಂತ ಹೆಚ್ಚು ಕಾಲ ಬಳಕೆಯಲ್ಲಿಲ್ಲದಿದ್ದಾಗ, ರಬ್ಬರ್ ಸೀಲಿಂಗ್ ರಿಂಗ್ ಗಳನ್ನು ಹೊರತೆಗೆದು ಅವುಗಳನ್ನು ತೊಳೆಯಬೇಕು ಮತ್ತು ಅವುಗಳನ್ನು ಸುರಕ್ಷಿತ ಸ್ಥಳದಲ್ಲಿ ನೇತಾಡುವ ಚೀಲದಲ್ಲಿ ಇರಿಸಬೇಕು.

ಪೈಪ್ಲೈನ್ಗಳಲ್ಲಿ ತಿರುವು ಇದ್ದಲ್ಲಿ, ಯಾವಾಗಲೂ ಬೆಂಡ್, ಟೀ ಮುಂತಾದ ಫಿಟ್ಟಿಂಗ್ಗಳನ್ನು ಬಳಸಿ. ಸರಿಯಾದ ಮತ್ತು ಏಕರೂಪದ ನೀರಾವರಿಗಾಗಿ, ನೀರಾವರಿ ಶಿಪ್ಟ್ ಪೂರ್ಣಗೊಂಡನಂತರ ಎಂಡ್ಕ್ಯಾಪ್ ಅನ್ನು ತೆರೆಯಿರಿ. ಇದರಿಂದ ಪೈಪ್ಲೈನ್ನಲ್ಲಿರುವ ನೀರನ್ನು ಹೊರ ಹಾಕಲು ಸಹಕಾರಿಯಾಗುತ್ತದೆ.

ಸ್ಪಿಂಕ್ಲರ್ ವ್ಯವಸ್ಥೆಯ ಕಾರ್ಯಾಚರಣೆಯ ಸಮಯವು ಮಣ್ಣಿನ ಪ್ರಕಾರ ಮತ್ತು ಬೆಳೆಯ ಬೆಳವಣಿಗೆಯ ಹಂತವನ್ನು ಅವಲಂಬಿಸಿರುತ್ತದೆ. ಬೆಳೆಗಳ ಹೂ ಬಿಡುವ ಹಂತದಲ್ಲಿ ಸ್ಪಿಂಕ್ಲರ್ ವ್ಯವಸ್ಥೆಯನ್ನು ಬಳಸಬಾರದು ಎಂದು ರೈತರಿಗೆ ಮಾಹಿತಿ ನೀಡಿದರು.
ತರಬೇತಿಯಲ್ಲಿ ಮೊಳಕಾಲ್ಮೂರು ತಾಲ್ಲೂಕಿನ ಆಸಕ್ತ 85 ಜನ ರೈತಬಾಂಧವರು ಭಾಗವಹಿಸಿದ್ದರು.

- Advertisement -  - Advertisement - 
Share This Article
error: Content is protected !!
";