ಸುಟ್ಟ ಹುಣಸೆ ಬೀಜದ ನುಚ್ಚಿಗೆ ನೀರು ಉಪ್ಪು, ಒಂದು ಸೆರೆ ನುಚ್ಚಾಕಿ ಮಾಡಿದ ರುಚಿಕಟ್ಟಾದ ತಿನಿಸನ್ನ ಇಲ್ಲಿಯವರೆಗೂ ನಾನೆಂದೂ ತಿಂದಿಲ್ಲ!!

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೆಲದ ಮಾತು-61
 ಸೂರವ್ವ ಗಂಡೋಬಳವ್ವನೇ, ನಾನು ಹೆಚ್ಚೊ, ಬಡತನ ಹೆಚ್ಚೋ ಅಂತಾನೇ ಬದುಕಿ ತೋರಿಸಿದ್ದೇ ಆ ಅವ್ವ. ಗಾರೆಹಟ್ಟಿಯ ಕುಳ್ಳಪ್ಪನ ಮಿಲ್ ಎದುರಿಗಿದ್ದ, ಅಬ್ಬಾಶೆಟ್ಟರ ಹುಣಸೆ ಪಿಕ್ಕದ ಮಿಲ್, ಭಟ್ಟಿಯಲ್ಲಿ ಸುಟ್ಟು, ಯಂತ್ರಕ್ಕೆ ಹಾಕುತ್ತಿದ್ದ ಹುಣಸೆ ಬೀಜಗಳು, ಸಂಪೂರ್ಣ ಸಿಪ್ಪೆ ಕಳೆದುಕೊಂಡು ಬಿಳಿಯಾಗಿ ಬರುತ್ತಿದ್ದವು.

ಅವುಗಳಲ್ಲಿ ಒಂದೊಂದು ಕರಿ ಬೀಜ ಇರುವುದನ್ನ ಆಯುವುದಕ್ಕೆ, ಹತ್ತು ಪೈಸೆಗೆ ಒಂದು ಡಬ್ಬದಂತೆ, ಎಷ್ಟು ಡಬ್ಬ ಆರಿಸಿದರೂ, ಅಷ್ಟು ಡಬ್ಬದ ಲೆಕ್ಕದಲ್ಲಿ ವಾರಕ್ಕೊಮ್ಮೆ ದುಡ್ಡು. ಒಮ್ಮೊಮ್ಮೆ ಮೂವತ್ತು ರೂಪಾಯಿವರೆಗೂ ಹೆಚ್ಚು ಸಂಪಾದನೆಯಾಗುತ್ತಿತ್ತು.

ಅವ್ವನ ಜೊತೆ ಓಬಜ್ಜಿಯೂ ಸೇರಿ, ಶಾಲೆ ರಜೆ ಇದ್ದಾಗ ನನ್ನನ್ನು ಕರೆದೊಯ್ಯುತ್ತಿದ್ರು. ಮಜಾ ಏನಂದ್ರೆ, ಸುಟ್ಟ ಹುಣಸೆ ಬೀಜದ ನುಚ್ಚನ್ನ, ಒಂದು ಗಿಂಡಿಯಲ್ಲಿ ನೀರಾಕಿ, ಸ್ವಲ್ಪ ಉಪ್ಪಾಕಿ, ಒಂದು ಸೆರೆ ನುಚ್ಚು ಸುರಿದು, ಒಂದು ಗಂಟೆ ನೆನೆಯೋಕೆ ಬಿಟ್ರೆ, ಅಂತಹ ರುಚಿಕಟ್ಟಾದ ತಿನಿಸನ್ನ ಇಲ್ಲಿಯವರೆಗೂ ನಾನೆಂದೂ ತಿಂದಿಲ್ಲ.

ಈ ಹುಣಸೆಬೀಜದ ನುಚ್ಚನ್ನ, ನಾವೇ ಅಂತಲ್ಲ ಅಲ್ಲಿ ಕರಿಪಿಕ್ಕ ಆರಿಸೋಕೆ ಬರುತ್ತಿದ್ದ, ಎಲ್ರೂನೂ ನೀರಲ್ಲಿ ನೆನೆಸ್ಕೊಂಡು, ಮಧ್ಯಾಹ್ನದ ಊಟಕ್ಕೆ ಬಹುತೇಕ ಅವೇ. ಬಹಳ ತಿನ್ಬಾರ್ದು ಹೊಟ್ಟೆ ನೋಯುತ್ತೆ ಅನ್ನೋರು, ಆದರೂ ತಿನ್ನೋರು, ಬೇಡ ಅಂದ್ರೆ ಹಸಿವು ಬಿಡಬೇಕಲ್ಲ, ತಿನ್ನಿಸ್ತಿತ್ತು.

ವಾರಕ್ಕೊಮ್ಮೆ ರಜೆ ಭಾನುವಾರ, ಅಪ್ಪ ಕಂಡೋರ ಮನೆಗೆ ನನ್ನ ಸಂಬಳಕ್ಕೇನೋ ಇಟ್ಟಿರಲಿಲ್ಲ, ಆದ್ರೆ ಮನೆಯಲ್ಲಿ ಸಂಬಳಕ್ಕಿಂತ ಹೆಚ್ಚಾಗಿಯೇ ದುಡಿಸ್ಕೊಂಡಿದ್ದ, ದಿನಕ್ಕೊಂದು ಪುಟ್ಟಿ ಸಗಣಿ ತರಲೇಬೇಕು, ನೀನು ಓದ್ತೀಯೊ ಬಿಡ್ತೀಯೋ ಅದು ಗೊತ್ತಿಲ್ಲ, ಭಾನುವಾರ ಕಟ್ಟಿಗೆಗೆ ಹೋಗಲೇಬೇಕು, ಒಮ್ಮೊಮ್ಮೆ ಅಣ್ಣ, ತಳಗಾಳು ತಮ್ಮ,ಅವ್ವನೂ ಸೇರಿ ಕಾಡಿಗೆ ನನ್ನ ಜೊತೆ.

ಅಪ್ಪ ಮಾತ್ರ ಕಾಡಿಂದ ಕಟ್ಟಿಗೆ ಹೊತ್ತಿದ್ದು ನಾನಂತೂ ಕಾಣೆ, ನನ್ನ ಜೊತೆ ಆ ದಿನಗಳಲ್ಲಿ ಕಟ್ಟಿಗೆ ಹೊತ್ತ ಗೆಳೆಯರೆಂದ್ರೆ, ರಡ್ಡೇರ ಸುಭಾಷ್ ಮತ್ತು ಕಲೀಲ್, ಸುಮಾರು ಗೆಳೆಯರು ಬರ್ತಿದ್ರೂ, ನಾವು ಮಾತ್ರ ಯಾವಾಗ್ಲೂ ಜೊತೆ. ಒಮ್ಮೆ ಕಾಡಿಗೆ ಹೋದ ನಾವು ಒಂದು ಹೊರೆ ಯಾಕೆ, ಎರೆಡೆರಡು ಹೊರೆ ತಗೊಂಡೋಗೋಣ ಅಂತ ತೀರ್ಮಾನಿಸಿ ಮೂವರು ಅದೇ ರೀತಿ ಮಾಡ್ಕೊಂಡ್ವಿ.

ಒಂದು ಪರ್ಲಾಂಗ್ ಹೋಗಿ ಇಳಿಸೋದು, ಹಿಂದಕ್ಹೋಗಿ ಮತ್ತೊಂದು ತರೋದು, ಇದು ಕಾಡಿಂದ ಕಟ್ಟಿಗೆ ಹೊತ್ತವರಲ್ಲಿ ನಮ್ಮದೊಂದು ವಿಶೇಷ ಪ್ರಯತ್ನ, ಕೆಲವರು ಬೆಳಗಿನ ಜಾವ ಹೋಗಿ, ಕಟ್ಟಿಗೆ ಕಡಿದು ಬಂದ್ಬಿಡೋರು, ಮರುದಿನ ಹೋಗಿ ತಗೊಂಡು ಬರೋರು, ಅವರದ್ದು ಎರಡು ದಿನಕ್ಕೆ ಒಂದು ಹೊರೆ, ಒಂದೇ ದಿನದಲ್ಲಿ ಎರಡು ಹೊರೆ ತಗೊಂಡು ಹೋಗ್ಬೇಕಂತ ನಾವು. ಈ ಹಠದಿಂದ, ಸಂಜೆಯಾದರೂ ಕಾಡಿಂದ ಕಡೆಗೆ ಬರೋಕೇ ಆಗಿದ್ದಿಲ್ಲ ಆ ದಿನ. ತಂದಿದ್ದ ತಂಗಳು ಮಧ್ಯಾಹ್ನಕ್ಕೇ, ದವಳಪ್ಪನ ಗುಡ್ಡದ ಕಲ್ಲುದೊಣೆ ಹತ್ರ ಮುಗಿದೋಗಿತ್ತು. ಮತ್ತೆ ನೀರು ಬೇಕಂದ್ರೆ ಹುಲೆಗೊಂದಿಗೇ ಬರಬೇಕು.

ಇನ್ನೂ ಚಂದ್ರವಳ್ಳಿ ಕೆರೆಯಿಲ್ಲದ ದಿನಗಳವು, ಕ್ಯಾದಿಗೆ ಪೆಳೆ ಹಳ್ಳದಲ್ಲಿ, ಒಂದು ಮೊಳ ಗುಂಡಿ ತೋಡಿದರೆ, ಮೇಲೆ ಬಟ್ಟೆ ಹಾಕಿ ಕುಡಿಯೋಕೆ ನೀರು ಸಿಕ್ತಿದ್ವು. ಮಧ್ಯಾಹ್ನ ಮನೆಗೆ ಬರಬೇಕಾದ ಹುಡುಗರು, ಸಂಜೆ ಆದರೂ ಬರಲಿಲ್ಲವಲ್ಲ ಅಂತ, ಹುಲೆಗೊಂದಿ ಸಿದ್ದಪ್ಪನ ಗುಡಿತಾವ ಬಂದು, ಆತಂಕದಿಂದ ಅವ್ವನೇ ಕಾದಿದ್ದು.

ನಮ್ಮನ್ನು ನೋಡಿದ್ದೇ, ಎರಡು ಹೊರೆ ಮಾಡಿಕೊಂಡು ಬಂದಿದ್ದಕ್ಕೆ, ಮೂವರಿಗೂ ಬೈದು, ನಡಿರಿ ನೀವು ಮುಂದೆ ಅಂತ ಸುಭಾಷ್ ಗೂ, ಕಲೀಲ್ ಗೂ ಹೊರೆ ಹೊರಿಸಿ ಕಳಿಸಿದ್ರು. ಇನ್ನೂ ಅವ್ವ ಒಂದ್ಹೊರೆ, ನಾನೊಂದು, ಮನೆ ಬೇಗನೆ ಸೇರಬಹುದು ಅನ್ಕೊಂಡೆ. ಆದರೆ ಅವ್ವನ ಪ್ರಯತ್ನ ಬೇರೆನೆ ಇತ್ತು, ಕಟ್ಟಿಗೆ ಹೊರೆ ಬಿಚ್ಚಿದ್ದೆ ಎರಡನ್ನ ಒಂದಕ್ಹಾಕಿ ಕಟ್ಟುತಿದ್ರು, ಸಾಕಾಗಿದೆ ನನ್ನ ತಲೆ ಮೇಲಿಟ್ರೆ, ಹೇಗಪ್ಪ ಅಂದ್ಕೊಂಡೆ ಮನಸಲ್ಲಿ.

ನನ್ನ ಸಿಂಬೆ ತಗೊಂಡು ತಲೆಗಿಟ್ಕೊಂಡು ಎತ್ತೋ ಹೊರೆನಾ ಅಂದ್ರು, ಹೇಳಿದ್ದೇ ತಡ ಅವ್ವನಿಗೆ ತಲೆ ಮೇಲಿಟ್ಟೆ, ಎರಡು ಹೊರೆಯನ್ನ ಒಂದ್ಮಾಡಿ ಹೊತ್ತು, ಬಿರುಸಾಗಿ ನಡೆದು ಇಬ್ರೂ ಮನೆ ತಲುಪಿದ್ವಿ. ಎರಡು ಹೊರೆ ಕಥೆ ಕೇಳಿ, ಅಪ್ಪ ಅಂದು ಖುಷಿಯಾಗಿ ನಕ್ಕಿದ್ದ.

ನನಗೆ ತಿಳಿದಿರುವ ಹಾಗೆ ಮನೆಯಲ್ಲಿದ್ದ ಹಿತ್ತಾಳೆ ಕೊಡ ಹಾಗೂ ಅವ್ವನ ಕೊರಳ ಕರಿಮಣಿಯ ಜೊತೆಗಿದ್ದ ಮೂರು ಗ್ರಾಂನ ಬಂಗಾರದ ತಾಳಿ, ಇವೆರಡೂ ಮಾರ್ವಾಡಿ ಮನೆಯಲ್ಲಿಯೇ ಬಹು ದಿನ ಗಿರವಿ ಇರ್ತಿದ್ವು, ಇವೆರಡರಿಂದ ನೂರು ರೂಪಾಯಿ ಬಂದ್ರೆ ಹೆಚ್ಚಿನ ಮೊತ್ತವೇ, ತಾಳಿ ಜೇಬಲ್ಲಿ ಇಟ್ಕೊಂಡು, ಕೊಡನ ನನಗೆ ಹೊರಸ್ಕೊಂಡು, ಮಾರ್ವಾಡಿ ಮನೆಗೆ ಕರೆದೊಯ್ತಿದ್ದ ಅಪ್ಪ, ಬರುವಾಗ ರೆಹಮಾನ್ ಕಾಕಾ ಹೋಟೆಲ್ ನ, ಐದು ಪೈಸೆಯ ಸೀಬೋಂಡ ನನಗೆ, ಹದವಾಗಿ ಎಣ್ಣೆಯಲ್ಲಿ ಕರಿದ ಬಿರುಕು ಬಿಟ್ಟಂತಹದ್ದು, ಬಾಯಲ್ಲಿ ನೀರೂರುತ್ತವೆ,

ಒಮ್ಮೊಮ್ಮೆ ಖರ್ಜೂರವವೂ ಸಿಗುತ್ತಿತ್ತು, ಆ ದಿನದ ಅಪರೂಪದ ರುಚಿಯಾದ ತಿನಿಸುಳಿವು, ಈ ಗಿರಿವಿ ವಿಚಾರವಾಗಿ ನನ್ನಪ್ಪನದೂ ತಪ್ಪಲ್ಲ, ಆತ ಬೇರೆ ಯಾವ ಬಾಬತ್ತಿನ ವ್ಯಕ್ತಿಯೂ ಅಲ್ಲ, ಮನೆ ಮಕ್ಕಳ ನಿರ್ವಹಣೆಯೇ ಕಷ್ಟದ ಕೆಲಸ, ಇಬ್ಬರೂ ಸೇರಿ ಚೀಟಿ ಹಾಕ್ಕೊಂಡಿರೋರು, ಅದನ್ನು ನಿಭಾಯಿಸೋಕೆ ಈ ವ್ಯವಸ್ಥೆಗೆ ಇಳಿಯೋರು,

ಅವ್ವನ ಕೊರಳ ಕರಿಮಣಿ ನನ್ನನ್ನು ಬಹುವಾಗಿ ಕಾಡಿದೆ, ನನ್ನವ್ವನ ಕಿವಿ ಮೂಗುಗಳು ಅಷ್ಟೇ, ಎಲ್ಲಾದರೂ ಹೊರಗೆ ಸಂಬಂಧಿಕರ ಮನೆಗೆ ಹೋದರೆ, ಕೊರಳು ಕಾಣದಂತೆ ಮೈತುಂಬ ಸೆರಗೊದ್ದು ಇರುತ್ತಿದ್ದ ಅವ್ವ, ಸಮಾಜಕ್ಕೆ ಪ್ರಶ್ನೆ, ಉತ್ತರಗಳಾಗಬಾರದು ಅಂತಾನೇ ಬದುಕಿದ್ದ ದೇವತೆ, ಅನುಕೂಲ ಸ್ಥಿತಿಗೆ ಹತ್ತಿರವಾದಾಗ ಅನೇಕ ಬಾರಿ ಅವ್ವನ ಕೊರಳು ತುಂಬಬೇಕು ಅಂತ ನನಗಾಸೆ, ಬೇಡಿಕೊಂಡೆ, ಜುಪ್ಪೆಂದರೂ ಒಪ್ಪಿರಲಿಲ್ಲ, ನನ್ನ ಸೊಸೆಯಂದಿರ ಕೊರುಳು, ಹೀಗಿರೊದಿಕ್ಕೆ ಬಿಡಬಾರದೂ ಅಂತ ಮಾತು ತಗೊಂಡು, ಅವರು ಸುಖವಾಗಿದ್ದರೆ, ನಾನೂ ಸುಖವಾಗಿದ್ದಾಗೆ, ಅಂತಾನೇ ಹೇಳುತ್ತಿದ್ದ, ನನ್ನ ಕುಟುಂಬದ ಮಹಾಮಾತೆ.

ನನ್ನವ್ವ ಧರಿಸಿದ್ದ ಆಭರಣಗಳೇ ಬೇರೆ. ಸರೀಕರ ಜೊತೆ ಮಕ್ಕಳು, ವರ್ಷಕ್ಕೊಮ್ಮೆ  ಯುಗಾದಿಗಾದ್ರೂ ಹೊಸ ಬಟ್ಟೆ ಉಡಬೇಕು, ಒಂದೊತ್ತೊ, ಎರಡುತ್ತೋ ಒಳ್ಳೆ ಊಟ ಕೊಡಬೇಕು, ಶಾಲೆಗೆ ಕಳಿಸಬೇಕು, ನನ್ನ ಮಕ್ಕಳು ಬೆಳೆದು ದೊಡ್ಡವರಾಗಬೇಕು, ಇಂತಹ ಹತ್ತಾರು ಆಭರಣಗಳನ್ನೇ ನನ್ನವ್ವ ಧರಿಸಿದ್ದು, ನನ್ನವ್ವನ ಯಾವ ಮಕ್ಕಳಿಗೆ ಇದು ಕಂಡಿದೆಯೋ, ಇಲ್ಲವೋ ಗೊತ್ತಿಲ್ಲ, ನನಗಂತೂ ಅದ್ಭುತವಾಗಿ ಕಂಡಿವೆ, ಕಣ್ಣು ಬಿಡಲಾರದಷ್ಟು ಆಳಕ್ಕಿಳಿದು ಕುಕ್ಕಿವೆ, ನಿರಾಭರಣೆಯಲ್ಲ ನನ್ನವ್ವ, ಆಭರಣೆಯೇ ಅನ್ನುವುದ ಮನದಟ್ಟು ಮಾಡಿವೆ, ಬಾದೆ ಹುಲ್ಲಿನ ಬೆಚ್ಚನೆ ಮನೆಯ, ಕಾವು ಪಡೆದ ಮರಿ ಹಕ್ಕಿಗಳು,

ರೆಕ್ಕೆ ಪುಕ್ಕ ಬಂದ ಮೇಲೆ ನನಗೇನು ಗೊತ್ತಿಲ್ಲವೆಂಬಂತೆ ಹಾರಿವೆ, ಒಗ್ಗಟ್ಟು ಕಗ್ಗಂಟಾಗಿವೆ, ಹತಾಶೆಯಿಂದ ಮರುಗಿದ್ದ ಅವ್ವನದೊಂದೇ ಮಾತು, ಎಲ್ಲಾದ್ರೂ ಇರಿ ಸುಖವಾಗಿರಿ ಎಂದು ಆಶೀರ್ವದಿಸುತ್ತಲೇ, ನಮ್ಮಿಂದಲೂ ಅಂದೊಂದು ದಿನ, ಬಾರದ ಊರಿಗೆ ಹಾರಿದ ನನ್ನವ್ವ ಬಳ್ಳಿಯಲ್ಲಿ ಬಳಸಿಕೊಂಡವರಿಗೆ ಬಳಕೆಯಾಗಿ ಆಶೀರ್ವದಿಸಿದ್ದಾಳೆ, ನನ್ನೊಳಗೆ ಮಾತ್ರ ಅಪ್ಪನಿಗಿಂತ ಅವ್ವನೇ ಹೆಚ್ಚಾಗಿ ಕೂತಿದ್ದಾಳೆ.

 ಈ ಅಕ್ಷರಗಳ ಜೊತೆ ಮತ್ತೊಂದಿಷ್ಟು ಅಕ್ಷರಗಳು. ಯಾರು ನೋಡದ ನೀವೇ ಅನುಭವಿಸುವಂತಹ ಶ್ರೀಮಂತಿಕೆಗೆ ಒತ್ತು ಕೊಡಿ, ಅದು ಸರಳತೆ ಇರಬಹುದು, ಸಹಾಯ ಇರಬಹುದು, ಸಂಬಂಧಗಳಿರಬಹುದು, ಸ್ನೇಹಗಳಿರಬಹುದು, ವಿವೇಚನೆಗಳಿರಬಹುದು, ಈ ಶ್ರೀಮಂತಿಕೆ ಹೆಚ್ಚಾಗಬೇಕಾಗಿದೆ. ಉಪವಾಸವಿದ್ದೂ, ಉಳಿಸಿ ಆಭರಣ ಮಾಡಿಸಿ, ಧರಿಸುವ, ಶ್ರೀಮಂತಿಕೆ ಪ್ರದರ್ಶನ ಯಾರಿಗೆ ಬೇಕು. ಇತ್ತೀಚೆಗೆ ಬಂಗಾರದಿಂದ ಬದುಕನ್ನ ಅಳೆಯುವ, ಮೂರ್ಖ ಪದ್ಧತಿ ಸಮಾಜಕ್ಕೆ ಕಂಟಕವಾಗಿದೆ. ಗರಿಷ್ಠ, ಕನಿಷ್ಠ ಮಾನದಂಡಗಳು ಬಂಗಾರದಿಂದಲೇ ಅಳೆಯಲಾಗುತ್ತಿದೆ. ಆತ್ಮೀಯತೆ, ಅನುಬಂಧಗಳನ್ನೂ ಸಹ ಬೆಳ್ಳಿ,ಬಂಗಾರಗಳು ಕಸಿಯುತ್ತಿವೆ.

ಅಂಬಾನಿ, ರತನ್ ಟಾಟಾ ಇಬ್ಬರೂ ಶ್ರೀಮಂತರೇ, ಒಬ್ಬ ಪ್ರದರ್ಶನಕ್ಕಿಟ್ಟುಕೊಂಡ ಶ್ರೀಮಂತರಾದರೆ, ಇನ್ನೊಬ್ಬರು ಸರಳತೆಯ ಶ್ರೀಮಂತ, ಹಸಿದವರ ಆಶ್ರಯಕ್ಕೆ ಬಂದು,ದೇಶವೇ ಅಭಿಮಾನಿಸುವಂತಹ ಸಜ್ಜನಿಕೆಯ ಶ್ರೀಮಂತ, ಈ ವಿಚಾರವಾಗಿ ರತನ್ ಟಾಟಾ ಅವರು ಸಂತರಲ್ಲವೇ.

ನನ್ನವ್ವ ಅಪ್ಪ ಒಂದೊತ್ತೊ ಎರಡೊತ್ತೋ,ನಮಗೇ ಊಟವಿಲ್ಲದಿದ್ದರೂ, ಒಬ್ಬ ಅನಾಥ ಹಡಪದ ರಾಮಣ್ಣ ಅನ್ನುವಾತನಿಗೂ ನಮ್ಮ ಜೊತೆ ಊಟ ಕೊಟ್ಟು ಸಾಕಿದ್ರು, ಆ ದೇವತೆಗಳ ಹೆಸರಿಗೆ ನಾನೊಬ್ಬ ಬಂದದ್ದು  ಸಾರ್ಥಕವಲ್ಲದೆ ಇನ್ನೇನು. ಮುಂದೆವರೆಯುವುದು…….
ಲೇಖನ-ಕುಮಾರ್ ಬಡಪ್ಪ, ಚಿತ್ರದುರ್ಗ.

 

 

- Advertisement -  - Advertisement - 
Share This Article
error: Content is protected !!
";