ಹಿರಿಯೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ ಬೆಲೆ ದಿಢೀರ ಕುಸಿತ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ ಬೆಲೆ ದಿಢೀರ ಕುಸಿ ತದಿಂದ ರೈತರು ಪರದಾಡಿದರು. ಮನ ನೊಂದ ಕೆಲ ರೈತರು ಮಾರಾಟ ಮಾಡದೇ ಮರಳಿ ಮನೆಗೆ ವಾಪಸ್ ತೆಗೆದು ಕೊಂಡು ತೆರಳಿದರೆ ಮತ್ತೆ ಕೆಲ ರೈತರು ಹೆಚ್ಚಿನ ಹಣಕ್ಕೆ ಬಿಡ್ ಮಾಡುವಂತೆ ಆಗ್ರಹ ಮಾಡಿದರು.

ಖರೀದಿದಾರರು, ಎಪಿಎಂಸಿ ಅಧಿಕಾರಿಗಳ ವಿರುದ್ಧ ಶೇಂಗಾ ಬೆಳೆಗಾರ ರೈತರು ಆಕ್ರೋಶ ವ್ಯಕ್ತ ಪಡಿಸಿ ಧಿಕ್ಕಾರಗಳನ್ನು ಕೂಗಿದರು.
ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿ ಮಾಡಬೇಕೆಂದು ರೈತರು ಹಟ ಮಾಡಿ ಕೂತ ಘಟನೆ ಶನಿವಾರ ಹಿರಿಯೂರು ಕೃಷಿ ಮಾರುಕಟ್ಟೆಯಲ್ಲಿ ನಡೆಯಿತು.

ಪ್ರತಿ ಕ್ವಿಂಟಾಲ್ ಶೇಂಗಾಕ್ಕೆ ಕೇವಲ 3000 ಸಾವಿರದಿಂದ 6500 ಸಾವಿರ ತನಕ ಬಿಡ್ ಮಾಡಿದ್ದಾರೆ. ಶೇಂಗಾ ಫಸಲು ಸರಿಯಾಗಿ ಬಂದಿಲ್ಲ, ಕೊಳತು ಹೋಗಿದೆ. ಹೆಚ್ಚಿನ ಬೆಲೆ ನೀಡಲು ಸಾಧ್ಯವಿಲ್ಲ ಎಂದು ಖರೀದಿದಾರರು ರೈತರ ಕೋರಿಕೆಯನ್ನು ಧಿಕ್ಕರಿಸಿದರು.

ಅತ್ಯಂತ ಕನಿಷ್ಠ ದರಕ್ಕೆ ಟೆಂಡರ್ ಆಗಿರುವುದು ರೈತರಿಗೆ ಮಾಡುವ ಮಹಾ ದ್ರೋಹವಾಗಿದೆ. ಮಾರುಕಟ್ಟೆಗೆ ರೈತರು ಶೇಂಗಾ ತರುವ ಪೂರ್ವದಲ್ಲಿ ಶೇಂಗಾ ದರ ಸಾಕಷ್ಟು ಇತ್ತು. ಈಗ ಶೇಂಗಾ ಮಾರುಕಟ್ಟೆ ಬರುತ್ತಿದ್ದು ಖರೀದಿದಾರರು ಷಡ್ಯಂತ್ರ ಮಾಡುತ್ತಿದ್ದಾರೆಂದು ರೈತರು ಆಕ್ರೋಶ ವ್ಯಕ್ತ ಪಡಿಸಿದರು.

ಶನಿವಾರ ಮಾರುಕಟ್ಟೆಗೆ ರೈತರು ಶೇಂಗಾ ತಂದರೆ ಹಠಾತ್ ಶೇಂಗಾ ದರ ಕುಸಿದಿದೆ. ಜತೆಗೆ ಟೆಂಡರ್ ಹಾಕಲು ಬೇರೆ ಊರುಗಳಿಂದ ವರ್ತಕರನ್ನು ಕರೆಸಬೇಕು. ದುಪ್ಪಟ್ಟು ಹಣವನ್ನು ಶೇಂಗಾ ಬಿತ್ತನೆ ಬೀಜಕ್ಕಾಗಿ ಕೊಟ್ಟಿದ್ದೇವೆ. ಗೊಬ್ಬರ, ಬಿತ್ತನೆಗಾಗಿ ಗಳೆವು ಹೊಡೆಯುವದು, ಕಳೆ ತೆಗೆಯಲು, ಕಟಾವು ಮಾಡುವುದು, ಶೇಂಗಾ ಕೀಳಲು ಸಾಕಷ್ಟು ಖರ್ಚಾಗಿದ್ದು ಕೂಲಿ ಸಹ ಬಾರದ ಸ್ಥಿತಿಯಲ್ಲಿ ರೈತರಿದ್ದಾರೆ. ಹೀಗಾದರೆ ರೈತರು ಬದುಕುವುದು ಹೇಗೆ ಎಂದು  ಅಳಲು ತೊಂಡಿಕೊಂಡರು.

ಹಣ ಅವಶ್ಯಕತೆ ಹೆಚ್ಚಾಗಿರುವ ಕೆಲ ಬಡ ರೈತರು ದೊರೆತ ದರಕ್ಕೆ ಮಾರಾಟ ಮಾಡಿ ವ್ಯವಸ್ಥೆ ವಿರುದ್ಧ ಗೊಣಗುತ್ತ ತೆರಳಿದರು. ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬಾರದಿರುವುದು ರೈತರ ಮುಖದಲ್ಲಿ ನಿರಾಶೆ ಮೂಡಿಸಿದೆ.
ಶೇಂಗಾ ಖರೀದಿಗೆ ಕೇಂದ್ರ ಸರ್ಕಾರದಿಂದ ಎರಡು ಹಾಗೂ ರಾಜ್ಯ ಸರ್ಕಾರ ದಿಂದ ನಾಲ್ಕು ಏಜೆನ್ಸಿಗಳನ್ನು ಗುರುತಿಸಲಾಗಿದ್ದು ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವಂತೆ ರೈತರು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ರಾಜೇಶ್ ಕುಮಾರ್, ಖರೀದಿ ಪ್ರಕ್ರಿಯೆಯಲ್ಲಿ ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಹೆಚ್ಚಿನ ದರಕ್ಕೆ ಖರೀದಿ ಮಾಡಬೇಕು ಎಂದು ಸೂಚಿಸಿದರು. ಅದಕ್ಕೆ ಖರೀದಿದಾರರು ಒಪ್ಪಲಿಲ್ಲ.

ಕೊನೆಗೆ 5500 ರೂ.ಗಳಿಗಿಂತ ಕಡಿಮೆ ಟೆಂಡರ್ ಆಗಿರುವಂತ ರೈತರಿಗೆ ಹೆಚ್ಚುವರಿಯಾಗಿ ಪ್ರತಿ ಕ್ವಿಂಟಾಲ್ ಗೆ 150 ರೂ.ಗಳನ್ನು ಖರೀದಿದಾರರು ನೀಡಬೇಕೆಂದು ತಹಶೀಲ್ದಾರ್ ಸೂಚನೆ ನೀಡಿದರು. ಈಗ ಶೇಂಗಾವನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಆಗುವುದಿಲ್ಲ, ಇನ್ನೂ ಸರ್ಕಾರದಿಂದ ಆದೇಶ ಬಂದಿಲ್ಲ. ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ದಿನಗಳಲ್ಲಿ ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಹಶೀಲ್ದಾರ್ ರೈತರಿಗೆ ಭರವಸೆ ನೀಡಿದರು.

ಶೇಂಗಾ ಬೆಳೆಗಾರರಾದ ಕೆ.ಜಯರಾಜ್, ಮಹಂತೇಶ್, ವೀರೇಶ್, ತಿಪ್ಪೇಸ್ವಾಮಿ, ಸೇರಿದಂತೆ ಪಿಲಾಜನಹಳ್ಳಿ, ಸಾಲಹುಣಸೆ, ಹರಿಯಬ್ಬೆ, ವೇಣುಕಲ್ಲು ಗುಡ್ಡ, ತವಂದಿ ಸೇರಿದಂತೆ ಹಿರಿಯೂರು ತಾಲೂಕಿನಾದ್ಯಂತ ಮತ್ತಿತರ ಗ್ರಾಮಗಳಿಂದ ಸಾವಿರಾರು ರೈತರು ಶೇಂಗಾ ಕಾಯಿಯನ್ನು ಮಾರಾಟ ಮಾಡಲು ಆಗಮಿಸಿದ್ದರು.

- Advertisement -  - Advertisement - 
Share This Article
error: Content is protected !!
";