ಚಂದ್ರವಳ್ಳಿ ನ್ಯೂಸ್, ಮೈಸೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಕೆಯಾಗಲಿದೆ.
ಮೈಸೂರಿನ ಕೈಗಾರಿಕಾ ಪ್ರದೇಶದಲ್ಲಿ 2023ರ ನವೆಂಬರ್‌ನಲ್ಲಿ 1.84 ಕೋಟಿ ರೂ. ಹಣ ನೀಡಿ ಖರೀದಿಸಿರುವ 20 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಹಣದ ಮೂಲ ಪತ್ತೆ ಹಚ್ಚಿ ಎಂದು ಆರ್‌ಟಿಐ ಕಾರ್ಯಕರ್ತ ಗಂಗರಾಜು ಎಂಬುವವರು ಜಾರಿ ನಿರ್ದೇಶನಾಲಯಕ್ಕೆ ಮನವಿ ಮಾಡಿದ್ದು, ಈ ಸಂಬಂಧ ದೂರು ಕೂಡ ನೀಡಲಿದ್ದಾರೆ ಎನ್ನಲಾಗಿದೆ.
ಖಾಸಗಿ ಸುದ್ದಿವಾಹಿನಿಯೊಂದಿಗೆ ಈ ಕುರಿತು ಮಾತನಾಡಿರುವ ಆರ್ ಟಿಐ ಕಾರ್ಯಕರ್ತ ಗಂಗರಾಜು, ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಓರ್ವ ಗೃಹಿಣಿಯಾಗಿದ್ದು, ಅವರಿಗೆ ಯಾವುದೇ ಬಾಹ್ಯ ಆದಾಯಗಳಿಲ್ಲ. ಆದಾಗ್ಯೂ ಅವರಿಗೆ ಇಷ್ಟು ಹಣ ಎಲ್ಲಿಂದ ಬಂತು ಎನ್ನುವ ಪ್ರಶ್ನೆಯನ್ನು ಅವರು ಎತ್ತಿದ್ದಾರೆ.
1.84 ಕೋಟಿ ರೂ. ಪ್ರಕರಣ ಕುರಿತು ಇ.ಡಿ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ಅಧಿಕಾರಿಗಳು ನನ್ನ ಜೊತೆ ಚರ್ಚೆಗೆ ಒಪ್ಪಿದರೆ ಮತ್ತು ಈಗ ತನಿಖೆ ನಡೆಸುತ್ತಿರುವ ಪ್ರಕರಣದ ಜೊತೆಗೆ ಇದನ್ನೂ ತೆಗೆದುಕೊಳ್ಳುತ್ತೇವೆ ಎನ್ನುವುದಾದರೆ ಸಂಪೂರ್ಣ ದಾಖಲಾತಿ ನೀಡುವುದಾಗಿ ಅವರು ತಿಳಿಸಿದ್ದಾರೆ.
ಅಂತೆಯೇ ಅಧಿಕಾರಿಗಳು ಒಂದು ವೇಳೆ ಇದು ನಮಗೆ ಸಂಬಂಧಪಟ್ಟಿದ್ದಲ್ಲ. ಬೇಕಾದರೆ ನೀವು ಪ್ರತ್ಯೇಕವಾಗಿ ದೂರು ನೀಡಿ ಎಂದರೆ ಇ.ಡಿಗೆ ದೂರು ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ತನಿಖೆ ಆರಂಭಿಸಿದ್ದು, ಇದರ ಭಾಗವಾಗಿ ಆರ್‌ಟಿಐ ಕಾರ್ಯಕರ್ತ ಗಂಗರಾಜ್ ಅವರನ್ನು ಸೋಮವಾರ ವಿಚಾರಣೆಗೆ ಬರುವಂತೆ ಕರೆದಿದೆ ಎನ್ನಲಾಗಿದೆ.
ವಿಚಾರಣೆ ವೇಳೆ ಗಂಗರಾಜ್ ಒಟ್ಟು 1,400 ಸೈಟ್‌ಗಳ ದಾಖಲೆಗಳನ್ನು ಇ.ಡಿಗೆ ಹಸ್ತಾಂತರಿಸುವುದುರ ಜೊತೆಯಲ್ಲಿ ಸಿದ್ದರಾಮಯ್ಯನವರ ಪತ್ನಿಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಹುಮುಖ್ಯ ದಾಖಲೆಗಳನ್ನು ಇ.ಡಿಗೆ ನೀಡಲಿದ್ದಾರೆ ಎನ್ನಲಾಗಿದ್ದು ಸಿಎಂ ಕುಟುಂಬಕ್ಕೆ ಸಂಕಷ್ಟ ಎದುರಾಗಲಿದೆ ಎನ್ನಲಾಗುತ್ತಿದೆ.