ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡ – ಕರ್ನಾಟಕ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಕನ್ನಡ ತಾಯಿ ಭಾಷೆಯ ಜನರಲ್ಲಿ ಒಂದು ಪ್ರೀತಿ ಪೂರ್ವಕ ಮನವಿ……..ಕನ್ನಡಕ್ಕಾಗಿ ಕೈ ಎತ್ತು ಅದೇ ಕಲ್ಪ ವೃಕ್ಷ……..
ನೀವು ಹಿಂದೂ ಆಗಿರಿ, ಮುಸ್ಲಿಂ ಆಗಿರಿ, ಕ್ರಿಶ್ಚಿಯನ್ ಆಗಿರಿ, ಬೌದ್ದರಾಗಿರಿ, ಜೈನರಾಗಿರಿ, ಬಸವ ಧರ್ಮದವರಾಗಿರಿ, ಸಿಖ್ ಆಗಿರಿ, ಪಾರ್ಸಿಯಾಗಿರಿ ಅಥವಾ ಇನ್ಯಾವುದೇ ಧರ್ಮದವರಾಗಿರಿ…..
ನೀವು ಕಾಂಗ್ರೇಸ್ ಆಗಿರಲಿ, ಬಿಜೆಪಿ ಆಗಿರಲಿ, ಜೆಡಿಎಸ್ ಆಗಿರಲಿ, ಕಮ್ಯುನಿಸ್ಟ್ ಆಗಿರಲಿ, ಸಮಾಜವಾದಿ ಪಕ್ಷ ಆಗಿರಲಿ, ಸಂಯುಕ್ತ ಜನತಾದಳ ಆಗಿರಲಿ, ಬಿಎಸ್ಪಿ ಆಗಿರಲಿ, ಎಎಪಿ ಆಗಿರಲಿ, ಕೆ ಆರ್ ಎಸ್ ಆಗಿರಲಿ, ಪ್ರಜಾಕೀಯ ಆಗಿರಲಿ, ಜೆ ಪಿ ಪಕ್ಷದವರಾಗಿರಲಿ ಅಥವಾ ಇನ್ಯಾವುದೇ ಪಕ್ಷದವರಾಗಿರಿ,…..
ನೀವು ಪರಿಶಿಷ್ಟ ಜಾತಿಯವರಾಗಿರಿ, ಪಂಗಡದವರಾಗಿರಿ, ಬ್ರಾಹ್ಮಣರಾಗಿರಿ, ಲಿಂಗಾಯತರಾಗಿರಿ, ಒಕ್ಕಲಿಗರಾಗಿರಿ, ಕುರುಬರಾಗಿರಿ, ವಾಲ್ಮೀಕಿ ಸಮುದಾಯದವರಾಗಿರಿ, ವಿಶ್ವಕರ್ಮದವರಾಗಿರಿ, ತಿಗಳರಾಗಿರಿ, ಯಾದವರಾಗಿರಿ ಅಥವಾ ಯಾವುದೇ ಜಾತಿಯವರಾಗಿರಿ,……
ನೀವು ವೈದ್ಯರಾಗಿರಿ, ಶಿಕ್ಷಕರಾಗಿರಿ, ಭಿಕ್ಷುಕರಾಗಿರಿ, ಕೂಲಿಯಾಗಿರಿ, ವಕೀಲರಾಗಿರಿ, ಆರಕ್ಷಕರಾಗಿರಿ, ಲೆಕ್ಕ ಪರಿಶೋಧಕರಾಗಿರಿ, ರಾಜಕಾರಣಿಯಾಗಿರಿ, ಅಧಿಕಾರಿಯಾಗಿರಿ, ರೈತರಾಗಿರಿ, ಕಾರ್ಮಿಕರಾಗಿರಿ ಅಥವಾ ಯಾರೇ ಆಗಿರಿ……..
ಕರ್ನಾಟಕದ ಶಾಶ್ವತ ನಿವಾಸಿಗಳಾಗಿದ್ದರೆ, ತಾಯಿ ಭಾಷೆ ಕನ್ನಡದ ವಿಷಯ ಬಂದಾಗ ದಯವಿಟ್ಟು ಕನ್ನಡಿಗರಾಗಿರಿ ಮತ್ತು ಒಕ್ಕೊರಲಿನಿಂದ ಕನ್ನಡ ಪರ ಧ್ವನಿ ಎತ್ತಿ. ಅದು ಹಿಂದಿ ಏರಿಕೆ ಇರಬಹುದು, ಸಂಸ್ಕೃತಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರಬಹುದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡದ ಕಡೆಗಣನೆ ಇರಬಹುದು, ರಾಜಕೀಯ ಕಾರಣಗಳಿಗಾಗಿ ಕರ್ನಾಟಕದ ಹಕ್ಕುಗಳು ಮೇಲಿನ ಹಲ್ಲೆ ಇರಬಹುದು ಅಥವಾ ಯಾವುದೇ ವಿಷಯವಿರಲಿ ಎಲ್ಲಾ ಭಿನ್ನಾಭಿಪ್ರಾಯಗಳ ನಡುವೆ ಕನ್ನಡ ಪರ ಸರ್ವ ಸಮ್ಮತ ಅಭಿಪ್ರಾಯ ಮೂಡುವಂತೆ ಕಾರ್ಯನಿರ್ವಹಿಸಿ.
ಏಕೆಂದರೆ…..
ಕರ್ನಾಟಕ ಎಂಬುದೇನು
ಹೆಸರೇ ಬರಿಯ ಮಣ್ಣಿಗೆ,
ಮಂತ್ರ ಕಣಾ ಶಕ್ತಿ ಕಣಾ
ತಾಯಿ ಕಣಾ ದೇವಿಕಣಾ
ಬೆಂಕಿ ಕಣಾ ಸಿಡಿಲು ಕಣಾ
ಕಾವ ಕೊಲುವ ಒಲವ ಬಲವಾ
ಪಡೆದ ಚೆಲುವ ಚೆಂಡಿ ಕಣಾ
ಋಷಿಯ ಕಾಣ್ಬ ಕಣ್ಣಿಗೆ,
ರಾಷ್ಟ್ರ ಕವಿ ಕುವೆಂಪು….
ತಾಯಿ ಭಾಷೆ ಉಳಿಯದಿದ್ದರೆ ನಮ್ಮ ಬದುಕು ಸಹಜವಾಗಿ ಉಳಿಯುವುದು ಕಷ್ಟ. ಅದು ಅಸಹಜವಾಗಿ ಬೆಳೆಯುತ್ತದೆ. ಉದಾಹರಣೆಗೆ, ಇತ್ತೀಚಿನ ವರ್ಷಗಳಲ್ಲಿ ಕಂಪ್ಯೂಟರ್ ಮತ್ತು ಮೊಬೈಲ್‌ತಂತ್ರಜ್ಞಾನದ ಇಂಟರ್ ನೆಟ್ ಎಂಬ ಮಾಹಿತಿಯ ಭಾಷೆ ಹೆಚ್ಚು ಬೆಳವಣಿಗೆ ಹೊಂದುತ್ತಿರುವ ಸಮಯದಲ್ಲಿ ಸ್ವಲ್ಪ ಹಳೆಯ ಪೀಳಿಗೆಯ ಯಾವುದೇ ಕ್ಷೇತ್ರದ ದೊಡ್ಡ ದೊಡ್ಡ ವಿದ್ವಾಂಸರು, ಚಿಂತಕರು, ಜ್ಞಾನಿಗಳೇ ಈ ತಂತ್ರಜ್ಞಾನದ ಮುಂದೆ ಅನಕ್ಷರಸ್ಥರಂತೆ ಕಾಣುತ್ತಿದ್ದಾರೆ. ಕಾರಣ ಈ ಗ್ಯಾಜೆಟ್ ಭಾಷೆಯಲ್ಲಿ ಸಣ್ಣ ಮಕ್ಕಳೇ ನುರಿತವರಂತೆ ಉಪಯೋಗಿಸುತ್ತಾರೆ.
ನಾನು ಕಂಡಂತೆ ಮೊಬೈಲಿನಲ್ಲಿ ಎರಡು/ಮೂರು ವರ್ಷದ ಮಗು ಯೂಟ್ಯೂಬ್ ತಾನೇ ತೆಗೆದು ನೋಡುತ್ತದೆ. ಐದು ವರ್ಷದ ಮಗು ಸ್ವಿಗ್ಗಿ ಜೊಮೋಟೋ ಸ್ಲಿಪ್ ಕಾರ್ಟ್ ಅಮೆಜಾನ್ ಉಪಯೋಗಿಸಿಕೊಂಡು ಊಟ ತರಿಸಿಕೊಳ್ಳುತ್ತದೆ. ಕೆಲವರು ಅವರ ಅಪ್ಪ ಅಮ್ಮ ಅಜ್ಜ ಅಜ್ಜಿಗೆ ರೈಲ್ವೆ ಟಿಕೆಟ್, ಔಷಧಿ ಮತ್ತು ಇತರ ಅವಶ್ಯಕ ವಸ್ತುಗಳನ್ನು ಖರೀದಿಸಿ ಕೊಡುತ್ತಾರೆ. ಇನ್ನೂ ಹೆಚ್ಚಿನ ಮಾಹಿತಿ ನೀಡುತ್ತಾರೆ. ಸಾಮಾಜಿಕ ಜಾಲತಾಣಗಳನ್ನು ಸುಲಭವಾಗಿ ಉಪಯೋಗಿಸುತ್ತಾರೆ. ಅಂದರೆ ಹೊಸ ಭಾಷೆ ಅಥವಾ ನಮ್ಮದಲ್ಲದ ಭಾಷೆ ಸೃಷ್ಟಿಯಾದಾಗ ಅದು ನಮ್ಮನ್ನು ಅನಾಥ ಪ್ರಜ್ಞೆಗೆ ದೂಡುತ್ತದೆ.
ಒಂದು ವೇಳೆ ನೀವು ಹೊಸ ಭಾಷೆಯನ್ನು ನಿಧಾನವಾಗಿ ಕಲಿಯಬಹುದು ಎಂದೇ ಭಾವಿಸಿ. ಆಗಲೂ ಸಹ ಸಂಪರ್ಕ ಸುಲಭವಾಗಬಹುದು. ಆದರೆ ಸ್ವಾಭಾವಿಕ ಸಂಸ್ಕೃತಿ ನಮ್ಮಿಂದ ಮರೆಯಾಗುತ್ತದೆ. ಬದುಕು ಅಸಹಜವೆನಿಸಿ ಭಾರವಾಗುತ್ತದೆ.
ಆದ್ದರಿಂದ ನಮ್ಮಗಳ ನಡುವೆ ಎಷ್ಟೇ ಸೈದ್ದಾಂತಿಕ ಭಿನ್ನಾಭಿಪ್ರಾಯ ಅಥವಾ ಇನ್ನೇನೆ ಅಭಿಪ್ರಾಯ ಭೇದಗಳು ಇದ್ದರೂ ದಯವಿಟ್ಟು ಕನ್ನಡ ತಾಯಿ ಭಾಷೆಯನ್ನು ಉಳಿಸೋಣ, ಬೆಳೆಸೋಣ ಮತ್ತು ಬದುಕಿನ ಭಾಗವಾಗಿ ಅಳವಡಿಸಿಕೊಳ್ಳೋಣ. ದಕ್ಷಿಣದ ಭಾಷೆಗಳಲ್ಲಿ ಕನ್ಬಡವೇ ಸ್ವಲ್ಪ ನಮ್ಮವರಿಂದಲೇ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಏಕೆಂದರೆ…….
ನಾನು ನಕ್ಕಾಗ ನಗಿಸಿದ್ದು ಕನ್ನಡ,
ನಾನು ಅತ್ತಾಗ ಅಳಿಸಿದ್ದು ಕನ್ನಡ,
ನಾನು ಪ್ರೀತಿಸಿದಾಗ ಮೂಡಿದ್ದು ಕನ್ನಡ,
ನಾನು ಪ್ರೇಮಿಸಿದಾಗ ಅರಳಿದ್ದು ಕನ್ನಡ,
ನಾನು ಕಾಮಿಸಿದಾಗ ಕನಲಿದ್ದು ಕನ್ನಡ,
ನನ್ನ ಖುಷಿಗೆ ಜೊತೆಯಾಗಿದ್ದು ಕನ್ನಡ,
ನನ್ನ ಕೋಪಕ್ಕೆ ಸೇರಿಕೊಂಡಿದ್ದು ಕನ್ನಡ,
ನನ್ನ ಖಿನ್ನತೆ ವ್ಯಕ್ತಪಡಿಸಿದ್ದು ಕನ್ನಡ,
ನನ್ನ ಭಕ್ತಿಯೂ ಕನ್ನಡ,
ನನ್ನ ಶಕ್ತಿಯೂ ಕನ್ನಡ
ನನ್ನ ಮುಕ್ತಿಯೂ ಕನ್ನಡ,
ನನ್ನಲ್ಲಿ ಅರಿವು ಮೂಡಿಸಿದ್ದು ಕನ್ನಡ,
ನನ್ನಲ್ಲಿ ಅಹಂಕಾರ ಬೆಳೆಸಿದ್ದೂ ಕನ್ನಡ,
ನನ್ನಲ್ಲಿ ಹೆಮ್ಮೆ ಬೆಳಗಿಸಿದ್ದೂ ಕನ್ನಡ,
ನನ್ನಲ್ಲಿ ಕೀಳರಿಮೆ ತಂದದ್ದೂ ಕನ್ನಡ,
ನನ್ನಲ್ಲಿ ಅಭಿಮಾನ ಸೇರಿಸಿದ್ದು ಕನ್ನಡ,
ನನಗೆ ದೃಷ್ಟಿಯಾಗಿ ಕಂಡದ್ದು ಕನ್ನಡ,
ನನಗೆ ಧ್ವನಿಯಾಗಿ ಕೇಳಿದ್ದು ಕನ್ನಡ,
ನನಗೆ ವಾಸನೆಯಾಗಿ ಗ್ರಹಿಸಿದ್ದು ಕನ್ನಡ,
ನನಗೆ ರುಚಿಯಾಗಿ ಸವಿದದ್ದು ಕನ್ನಡ,
ನನಗೆ ಸ್ಪರ್ಶವಾಗಿ ಮುಟ್ಟಿದ್ದು ಕನ್ನಡ,
ಮಾತು ಕಲಿಸಿದ್ದು ಕನ್ನಡ,
ವಿದ್ಯೆ ನೀಡಿದ್ದು ಕನ್ನಡ ,
ಉದ್ಯೋಗ ದೊರಕಿಸಿದ್ದು ಕನ್ನಡ,
ಬದುಕು ದಯಪಾಲಿಸಿದ್ದು ಕನ್ನಡ,
ನಮ್ಮ ನಿಮ್ಮ ಗೆಳೆತನಕ್ಕೆ ಸಾಕ್ಷಿಯಾದದ್ದು ಕನ್ನಡ,
ನಾನು ಕನ್ನಡ – ನೀವೂ ಕನ್ನಡ,
ಅವನೂ ಕನ್ನಡ – ಅವಳೂ ಕನ್ನಡ,
ಎಲ್ಲವೂ ಕನ್ನಡ – ಎಲ್ಲರೂ ಕನ್ನಡ,
ಎಲ್ಲೆಲ್ಲೂ ಕನ್ನಡ – ಎಂದೆಂದೂ ಕನ್ನಡ,
ನಮ್ಮೆಲ್ಲರ ಜೀವನವೇ, ಕನ್ನಡ ಕನ್ನಡ ಕನ್ನಡ……..
ಲೇಖನ-ವಿವೇಕಾನಂದ. ಎಚ್. ಕೆ. 9844013068……