ಚಂದ್ರವಳ್ಳಿ ನ್ಯೂಸ್, ಮೈಸೂರು:
ರೈತರಿಗೆ ನೋಟಿಸ್ ನೀಡಿ ವಕ್ಫ್ ಮಂಡಳಿ ರೈತರ ಜಮೀನು ಕಿತ್ತುಕೊಳ್ಳುತ್ತಿದ್ದು ಕೂಡಲೇ ಸರ್ಕಾರ ವಕ್ಫ್ ಮಂಡಳಿ ನಿಷೇಧಿಸಬೇಕೆಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಕ್ಫ್ ಬೋರ್ಡ್‌ಗೆ ಕಳೆದ 70 ವರ್ಷಗಳಿಂದ ಅಧಿಕಾರ ನೀಡುವ ಮೂಲಕ ಸಮಸ್ಯೆ ಮತ್ತು ಗೊಂದಲ ಸೃಷ್ಟಿಸಲು ಕಾಂಗ್ರೆಸ್ ಪಕ್ಷವೇ ಕಾರಣ. ವಕ್ಫ್ ಬೋರ್ಡ್ 16,000 ಎಕರೆಯಲ್ಲಿ ಮಾಲೀಕತ್ವ ಪಡೆದಿರುವ ರೈತರಿಗೆ ನೋಟಿಸ್ ನೀಡಿದೆ. ಈ ನೋಟಿಸ್ ವಿರೋಧಿಸಿ ದಲಿತರು, ರೈತರು ಮತ್ತು ಕೆಲವು ಮುಸ್ಲಿಮರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ವಕ್ಫ್ ಕುರಿತು ಸಂಸತ್ತಿನ ಸಮಿತಿಯ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಳ್ಳಬೇಕು ಮತ್ತು ವಕ್ಫ್ ಮಂಡಳಿಯನ್ನು ನಿಷೇಧಿಸಬೇಕು ಎಂದು ಚಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರ ದಲಿತರ ಅನ್ನಕ್ಕೆ ಕನ್ನ ಹಾಕಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ 172 ಕೋಟಿ ಲೂಟಿ ಮಾಡಿದೆ ಎಂದು ಆರೋಪಿಸಿದರು. ಯೋಗೇಶ್ವರ್ ಕಾಂಗ್ರೆಸ್ ಪಕ್ಷ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ನಾರಾಯಣಸ್ವಾಮಿ, ಚನ್ನಪಟ್ಟಣ ಕ್ಷೇತ್ರಕ್ಕೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸೂಕ್ತ ಅಭ್ಯರ್ಥಿ ಇಲ್ಲದಿರುವುದು ಸೋಗಜಿ. ಅಭ್ಯರ್ಥಿ ಹುಡುಕುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗಿದೆ. ಹೀಗಾಗಿ ಯೋಗೇಶ್ವರ್ ಅವರನ್ನು ತಮ್ಮ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡಿದೆ. ಆದರೆ, ಈ ಕ್ಷೇತ್ರ ಸೇರಿದಂತೆ ಮೂರು ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವುದು ಖಚಿತ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ 14 ನಿವೇಶನಗಳನ್ನು ಹಿಂದಿರುಗಿಸಿರುವುದರ ಕುರಿತು ಮಾತನಾಡಿದ ಅವರು, ನಿವೇಶನ ವಾಪಸ್ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮುಖ್ಯಮಂತ್ರಿಗಳ ಕುಟುಂಬದ ವಿರುದ್ಧದ ಬಿಜೆಪಿ ಹೋರಾಟ ಮುಂದುವರಿಸಲಿದೆ. ಮುಡಾ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರು ನೇರವಾಗಿ ಭಾಗಿಯಾಗಿದ್ದು, ಶೀಘ್ರದಲ್ಲೇ ಅದು ಸಾಬೀತಾಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ರಾಜ್ಯದ ಹಲವು ಭಾಗಗಳಲ್ಲಿ ಸುರಿದ ಭಾರೀ ಮಳೆಯಿಂದ ಸಾವಿರಾರು ಎಕರೆ ಬೆಳೆ ಹಾನಿಯಾಗಿದೆ. ಸಾಕಷ್ಟು ರಸ್ತೆಗಳು ಸಂಪೂರ್ಣ ಹಾನಿಯಾಗಿವೆ. ರೈತರು, ಜನ ಸಾಮಾನ್ಯರ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿವೆ. ಬೆಳೆ ಕಳೆದುಕೊಂಡಿರುವ ಸಂತ್ರಸ್ತ ರೈತರು ಮತ್ತು ಅವರ ಕುಟುಂಬಗಳಿಗೆ ಪರಿಹಾರ ಬಿಡುಗಡೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಸರ್ಕಾರ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ, ಸಚಿವರು ಭೇಟಿ ನೀಡಿ ಜನರ ಅಹವಾಲು ಆಲಿಸಿಲ್ಲ ಎಂದು ಸರ್ಕಾರದ ವಿರುದ್ಧ ಚಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು.