ಒಳ ಮೀಸಲಾತಿ ಅನುಷ್ಠಾನಕ್ಕೆ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚನೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸುಪ್ರೀಂ ಕೋರ್ಟ್ ಒಳ ಮೀಸಲಾತಿ ನೀಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿದ್ದು ಅದರನ್ವಯ ರಾಜ್ಯ ಸರ್ಕಾರವು ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಲು ತೀರ್ಮಾನಿಸಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚನೆ ಮಾಡಲು ಸಂಪುಟಸಭೆ ತೀರ್ಮಾನ ಕೈಗೊಂಡಿದೆ ಎಂದು
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರು ತಿಳಿಸಿದರು.

ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಮಾಡಲು ಏಕಸದಸ್ಯ ಆಯೋಗ ರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ನಿರ್ಧರಿಸಿದೆ.

 ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸರ್ಕಾರವು ಆಯೋಗವೊಂದನ್ನು ರಚನೆ ಮಾಡಲಿದ್ದು, ಈ ಆಯೋಗವು ಮೂರು ತಿಂಗಳಲ್ಲಿ ತನ್ನ ವರದಿಯನ್ನು ಸಲ್ಲಿಕೆ ಮಾಡುವಂತೆ ಸೂಚನೆ ನೀಡಲು ಇಂದಿನ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ.

ಕರ್ನಾಟಕದ ಪ್ರವಾಸೋದ್ಯಮವನ್ನು ವೈವಿಧ್ಯಮಯ ಹಾಗೂ ಶ್ರೇಷ್ಠ ಗುಣಮಟ್ಟದ ಪ್ರವಾಸೋದ್ಯಮ ಉತ್ಪನ್ನಗಳು ಮತ್ತು ಸೇವೆಗಳ ಮೂಲಕ ಪ್ರವಾಸಿಗರಿಗೆ ವಿಶ್ವದರ್ಜೆಯ ಅನುಭವ ಒದಗಿಸಿ, ಕರ್ನಾಟಕವನ್ನು ಜಾಗತಿಕವಾಗಿ ಮತ್ತು ದೇಶದ ಆಕರ್ಷಣೀಯ ಪ್ರವಾಸಿ ತಾಣವನ್ನಾಗಿ ಉತ್ತೇಜಿಸುವುದು ನೂತನ ಪ್ರವಾಸೋದ್ಯಮ ನೀತಿಯ ಮುಖ್ಯ ಉದ್ದೇಶವಾಗಿದೆ.

ಅವರು ಸಂಪುಟ ಸಭೆಯ ಬಳಿಕ ಎಚ್.ಕೆ.ಪಾಟೀಲ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿ ಮಾತನಾಡಿ, ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಜಾರಿ ಮಾಡಲು ಈ ಆಯೋಗವು ಮುಂದಿನ 3 ತಿಂಗಳಲ್ಲಿ ವರದಿ ನೀಡಬೇಕು. ಆಯೋಗ ನೀಡುವ ವರದಿ ಆಧರಿಸಿ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿ ಮಾಡಲಿದೆ ಎಂದು ಅವರು ತಿಳಿಸಿದರು.

ಇಂದಿನಿಂದ ಆಯೋಗವು ವರದಿ ನೀಡುವವರೆಗೂ ಸರ್ಕಾರ ಯಾವುದೇ ರೀತಿಯ ಹೊಸ ನೇಮಕಾತಿಗಳನ್ನು ಮಾಡುವುದಿಲ್ಲ. ಈಗಾಗಲೇ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿ ಇದ್ದರೆ ಅಂತಹ ಹುದ್ದೆಗಳಿಗೆ ನೇಮಕಾತಿ ಮುಂದುವರೆಯಲಿದೆ ಎಂದು ಪಾಟೀಲ್ ತಿಳಿಸಿದರು.

ಒಳ ಮೀಸಲಾತಿಗೆ ಪರಿಶೀಲನಾರ್ಹ ದತ್ತಾಂಶಗಳನ್ನು ಎಲ್ಲಿಂದ ಹೇಗೆ ಸಂಗ್ರಹ ಮಾಡಬೇಕು ಎನ್ನುವ ಮಾಹಿತಿಯನ್ನು ಆಯೋಗ ರಚನೆ ನಂತರ ನೀಡುವ ಆದೇಶದಲ್ಲಿನ ಷರತ್ತುಗಳು ಮತ್ತು ನಿಯಮಗಳಲ್ಲಿ ತಿಳಿಸಲಾಗುವುದು ಎಂದು ಸಚಿವರು ತಿಳಿಸಿದರು.

ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ನ್ಯಾ. ಎ.ಜೆ.ಸದಾಶಿವ ಆಯೋಗದ ವರದಿಯನ್ನು 2022ರಲ್ಲಿ ಬಿಜೆಪಿ ಸರ್ಕಾರ ತಿರಸ್ಕರಿಸಿದೆ. 2015ರಲ್ಲಿ ನಡೆಸಲಾಗಿದ್ದ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ಇನ್ನೂ ಅಂಗೀಕರಿಸಿಲ್ಲ. ಅದರಲ್ಲಿನ ದತ್ತಾಂಶ ಏನೊಂದು ಗೊತ್ತಾಗಿಲ್ಲ.

ಹೀಗಾಗಿ ದತ್ತಾಂಶ ಪಡೆಯುವ ವಿಚಾರವನ್ನು ಆಯೋಗಕ್ಕೆ ಒಪ್ಪಿಸಲಾಗುವುದು ಎಂದು ತಿಳಿಸಿದರು.ಹಾಸನ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು ಸಂಪುಟಸಭೆ ಒಪ್ಪಿಗೆ ನೀಡಿದೆ. ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಎಂದು ಪುನರ್ನಾಮಕರಣ ಮಾಡಲು ಸಂಪುಟ ಸಭೆ ಅನುಮೋದನೆ ನೀಡಿದೆ.

ಸಮಾಜ ಕಲ್ಯಾಣ ಇಲಾಖೆ ಅಧೀನದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ 33 ಘಟಕಗಳನ್ನು ವಿಶೇಷ ಪೊಲೀಸ್ ಠಾಣೆಯಾಗಿ ಪರಿವರ್ತಿಸಲು ಮತ್ತು ಇದಕ್ಕೆ 450 ಸಿಬ್ಬಂದಿ ನೇಮಕಕ್ಕಾಗಿ ಅಧಿಸೂಚನೆ ಹೊರಡಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಹೆಚ್.ಕೆ. ಪಾಟೀಲ್ ತಿಳಿಸಿದರು.

ಕೇಂದ್ರ ಸರ್ಕಾರದ ನೆರವಿನೊಂದಿಗೆ ಅನುಷ್ಠಾನಗೊಳಿಸಲಾಗುವ ದೇವನಹಳ್ಳಿ, ವಿಜಯಪುರ, ವೇಮಗಲ್, ಮಾಲೂರು, ಹೊಸಕೋಟೆ ಮಾರ್ಗದ ಮೂಲಕ ತಮಿಳುನಾಡು ಗಡಿ ಸಂಪರ್ಕಿಸುವ 110.4 ಕಿ.ಮೀ ಉದ್ದದ ರಸ್ತೆಗೆ ಸಂಪುಟ ಸಭೆಯ ಒಪ್ಪಿಗೆ ನೀಡಿದ್ದು 3,190 ಕೋ ಟಿ ವಚ್ಚವಾಗಲಿದೆ ಎಂದು ಅವರು ಹೇಳಿದರು.

ಕೃಷಿ ಇಲಾಖೆ ಅಧೀನದ ರೈತ ಸಂಪರ್ಕ ಕೇಂದ್ರಗಳು, ಕೃಷಿ ತರಬೇತಿ ಕೇಂದ್ರಗಳು, ಜೈವಿಕ ನಿಯಂತ್ರಣ ಘಟಕಗಳು ಸೇರಿದಂತೆ  ಮುಂತಾದವುಗಳನ್ನು ಒಂದೇ ಸೂರಿನಡಿ ತರಲು ಕೃಷಿ ಅಭಿವೃದ್ಧಿ ಏಜೆನ್ಸಿ ಸ್ಥಾಪನೆ ಸಂಪುಟ ಸಭೆ ಒಪ್ಪಿಗೆ ನೀಡಿದ್ದು ಈ ತೀರ್ಮಾನವು ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನ ನಡೆಸುವ ಸಂಬಂಧ ದಿನಾಂಕ ತೀರ್ಮಾನಿಸುವ ಅಧಿಕಾರ ಮುಖ್ಯಮಂತ್ರಿಯವರಿಗೆ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

- Advertisement -  - Advertisement -  - Advertisement - 
Share This Article
error: Content is protected !!
";