ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೊನ್ನೆ 27-10-2024 ರಂದು ಭಾನುವಾರ ಭಾರತೀಯ ಸೇನೆಯ ನಿವೃತ್ತ ಯೋಧನಾಗಿರುವ ನನ್ನ ಬಾಲ್ಯಮಿತ್ರ ಡಿ.ಆರ್.ನಾಗರಾಜನ ಜೊತೆಯಲ್ಲಿ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಗ್ರಾಮಕ್ಕೆ ಗೆಳೆಯ ಶಿವಕುಮಾರ್ ಅವರ ಮದುವೆಗಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದೆ. ಅದೇ ಮಾರ್ಗದ ಹೊಸದುರ್ಗ ಎಂಬ ಗ್ರಾಮದ ರಸ್ತೆಯಲ್ಲಿ ತೇರು ಅಲಂಕರಿಸಿದಂತೆ ಕಾಣಿಸುತ್ತಿದ್ದ ಟ್ರ್ಯಾಕ್ಟರ್, ಭಗವಾಧ್ವಜ ಎತ್ತಿಹಿಡಿದು ಕೇಸರಿ ಶಾಲುಗಳನ್ನು ಧರಿಸಿದ ಮೆರವಣಿಗೆಯ ಪಡೆಯೊಂದು ನಾವಿದ್ದ ಕಾರಿಗೆ ಅಡ್ಡವಾಯಿತು.
ಪೂರ್ಣ ಕುಂಭ ಮತ್ತು ಆರತಿಗಳನ್ನು ಹೊತ್ತ ಹೆಣ್ಣು ಮಕ್ಕಳ ಉತ್ಸಾಹ ಅಲ್ಲಿತ್ತು. ಇದಾವುದೋ ದೇವರ ಉತ್ಸವ ಇರಬಹುದೆಂದು ಭಾವಿಸಿ ಕಾರಿನ ಹಾರ್ನ್ ಮಾಡುತ್ತಾ ಕಾರನ್ನು ಮುಂದಕ್ಕೆ ಚಲಾಯಿಸಲು ದಾರಿಯನ್ನು ತೆರವುಗೊಳಿಸಲು ನಮ್ಮ ಡ್ರೈವರ್ ರಾಕೇಶ್ ಪ್ರಯತ್ನಿಸುತ್ತಿದ್ದ. ಆಗಲೇ ‘ಜೈ ಶ್ರೀರಾಮ್ – ಜೈ ವಾಲ್ಮೀಕಿ‘ ಘೋಷಣೆಗಳು, ಅರೆ- ತಮಟೆ ವಾಲಗಗಳು ಮೊರೆಯುತ್ತಿದ್ದದ್ದು ನನ್ನ ಕಿವಿಗಳಿಗೆ ಅಪ್ಪಳಿಸಿತು. ಕಾರಿನ ಕಿಟಕಿಯಿಂದ ಆಚೆಗೆ ಇಣುಕಿ ನೋಡಿದೆ. ಉತ್ಸಾಹಿ ಯುವಕರು ಮತ್ತು ಮಕ್ಕಳು ಅರೆ-ತಮಟೆ ವಾಲಗಗಳ ಗಸ್ತಿಗೆ ಕೇಸರಿ ಸಾಲುಗಳನ್ನು ಆಕಾಶದೆತ್ತರ ಹಾರಾಡಿಸಿಕೊಂಡು ಕುಣಿಯುತ್ತಿದ್ದರು.
ನನ್ನ ಸೂಚನೆಯ ಮೇರೆಗೆ ರಾಕೇಶ್ ಕಾರನ್ನು ಬದಿಗೆ ನಿಲ್ಲಿಸಿದ. ಕೆಳಗಿಳಿದು ಹೋಗಿ ನೋಡಿದೆ. ವಾಲ್ಮೀಕಿ ಜಯಂತ್ಯೋತ್ಸವದ ಮೆರವಣಿಗೆ ನಡೆಯುತ್ತಿತ್ತು. 17-10-2024 ರಂದು ಗುರುವಾರ ನಡೆಸಬೇಕಾಗಿದ್ದ ವಾಲ್ಮೀಕಿ ಜಯಂತಿಯನ್ನು ಹೊಸದುರ್ಗ ಗ್ರಾಮದ ವಾಲ್ಮೀಕಿ- ನಾಯಕ ಸಮುದಾಯದವರು 27-10-2024 ರಂದು ಭಾನುವಾರ ಆಯೋಜಿಸಿದ್ದರು.
ಭವ್ಯವಾಗಿ ಅಲಂಕಾರಗೊಂಡ ಟ್ರ್ಯಾಕ್ಟರಿಯಲ್ಲಿ ಶೋಭಾಯಮಾನವಾದ ವಾಲ್ಮೀಕಿಯ ಚಿತ್ರಪಟವಿತ್ತು. ಎಲ್ಲರ ಹೆಗಲುಗಳ ಮೇಲೆ ಕೇಸರಿ ಶಾಲುಗಳು. ಶೋಷಿತ ಬಹುಜನರ ಮತ್ತು ಅಂಬೇಡ್ಕರ್ ಅವರ ಅಸ್ಮಿತೆಯಾದ ಕನಿಷ್ಠ ಒಂದೇ ಒಂದಾದರೂ ಜೈ ಭೀಮ್ ಮಂತ್ರದ ನೀಲಿ ಬಾವುಟಕ್ಕಾಗಲೀ ಅಥವಾ ಅಂಬೇಡ್ಕರ್ ಅವರ ಭಾವಚಿತ್ರಕ್ಕಾಗಲೀ ಅಲ್ಲಿ ಸ್ಥಾನವೇ ಇರಲಿಲ್ಲ. ‘ಜೈ ಶ್ರೀರಾಮ್ – ಜೈ ವಾಲ್ಮೀಕಿ‘ ಎಂಬ ಘೋಷಣೆಗಳ ನಡುವೆ ಒಮ್ಮೆಯೂ ‘ಜೈ ಭೀಮ್‘ ಘೋಷಣೆ ಕೇಳಿಸಲಿಲ್ಲ.
ನನ್ನ ಆತ್ಮೀಯ ಗೆಳೆಯ ನಿವೃತ್ತ ಯೋಧ ಡಿ.ಆರ್.ನಾಗರಾಜ್ ನ ನೇತೃತ್ವದಲ್ಲಿ ವೈ.ಎನ್.ಹೊಸಕೋಟೆ ಗ್ರಾಮದಲ್ಲಿ ನಡೆಯುತ್ತಿದ್ದ ಗೆಳೆಯ ಶಿವಕುಮಾರನ ಮದುವೆಗೆ ಬೇಗನೆ ಹೋಗಲು ಹೋಗಲು ಗೆಳೆಯರು ತವಕಪಡುತ್ತಾ ನನ್ನನ್ನು ಕಾರಿಗೆ ಬಲವಂತವಾಗಿ ಎಳೆದೊಯ್ದರು.
ನಾನು ಆ ವಾಲ್ಮೀಕಿ – ನಾಯಕ ಬಂಧುಗಳ ಮೆರವಣಿಗೆ ತಡೆದು ನಿಲ್ಲಿಸಿ ಅಂಬೇಡ್ಕರ್ ಅವರ ಮಹತ್ವದ ಬಗ್ಗೆ, ಸಂವಿಧಾನದ ಬಗ್ಗೆ, ಜೈ ಭೀಮ್ ಮತ್ತು ನೀಲಿ ಬಾವುಟದ ಅಗತ್ಯದ ಬಗ್ಗೆ , ವಾಲ್ಮೀಕಿ- ನಾಯಕ ಸಮುದಾಯದವರಿಗೆ ಪರಿಶಿಷ್ಟ ಪಂಗಡದ (ST) ಮೀಸಲಾತಿ ಸೌಲಭ್ಯ ಯಾರ ಹೋರಾಟದಿಂದ ದೊರೆಯಿತೆಂಬುದನ್ನು ಕುರಿತು ಏನೆಲ್ಲಾ ಹೇಳಬೇಕೆಂಬ ಆಸೆ ಮತ್ತು ಆ ಜನರ ಅರಿವುಗೇಡಿತನದ ವಿರುದ್ಧ ಆಕ್ರೋಶ ಒಮ್ಮೆಲೇ ಮೂಡಿತು. ಮುಂದೆ ಸಾಗಿ ಹೋಗುತ್ತಿದ್ದ ಮೆರವಣಿಗೆ ಅದಾಗಿತ್ತು. ನಾನು ತಿಳಿವಳಿಕೆ ಹೇಳಲು ಪ್ರಯತ್ನಿಸಿದರೂ ನನ್ನ ಮಾತು ಅವರ ಯಾರ ಕಿವಿಗಳ ಮೇಲೂ ಬೀಳಲಿಲ್ಲ. ನಾನು ಅಲ್ಲಿಂದ ಅನಿವಾರ್ಯವಾಗಿ ತೆರಳಲೇಬೇಕಾಯಿತು.
ವಾಲ್ಮೀಕಿ – ನಾಯಕ ಸಮುದಾಯದ ಸಹೋದರರು ಇನ್ನೂಸಾಮಾಜಿಕ ವಾಸ್ತವಗಳನ್ನು ಅರಿತುಕೊಳ್ಳುವ ಅಗತ್ಯವಿದೆ. ಕರ್ನಾಟಕದ ಮಟ್ಟಿಗೆ ನಾಯಕ ಸಮುದಾಯದ ಸಾಮಾಜಿಕ ಮನೋವರ್ತನೆ ಬಹುತೇಕ ದಾರ್ಶನಿಕ ಕವಿ ವಾಲ್ಮೀಕಿ ಮತ್ತು ಶ್ರೀರಾಮನ ಕಡೆಗಿದೆಯೇ ಹೊರತು ಅಂಬೇಡ್ಕರ್ ಕಡೆಗಿಲ್ಲ.ಭಗವಾಧ್ವಜ- ಕೇಸರಿ ಶಾಲಿನ ಕಡೆಗಿದೆಯೇ ಹೊರತು ನೀಲಿ ಬಾವುಟದ ಕಡೆಗಿಲ್ಲ. ದಾರ್ಶನಿಕ ಕವಿ ವಾಲ್ಮೀಕಿ ಒಬ್ಬ ಪುರಾಣಿಮ ಸಾಂಸ್ಕೃತಿಕ ನಾಯಕ. ನಮಗೆ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯ ಸಿಗುತ್ತಿರುವುದು ವಾಲ್ಮೀಕಿಯ ರಾಮಾಯಣದಿಂದಲ್ಲ , ಅಂಬೇಡ್ಕರ್ ಅವರ ಸಂವಿಧಾನದಿಂದ.
ಮೊನ್ನೆ ಹೊಸದುರ್ಗ ಗ್ರಾಮದಲ್ಲಿ ನಡೆಯುತ್ತಿದ್ದ ವಾಲ್ಮೀಕಿ ಜಯಂತಿಯ ಮೆರವಣಿಗೆಯಲ್ಲಿ ಎಲ್ಲೆಡೆ ನೂರಾರು ಕೇಸರಿ ಶಾಲುಗಳು ಮತ್ತು ಭಗವಾಧ್ವಜಗಳು ರಾರಾಜಿಸುತ್ತಿದ್ದವು. ಇದು ಏನನ್ನು ತೋರಿಸುತ್ತದೆ? ಇಷ್ಟರಮಟ್ಟಿಗೆ ವಾಲ್ಮೀಕಿ- ನಾಯಕ ಸಮುದಾಯದ ಜನ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸುವುದಿಲ್ಲ ಯಾಕೆ? ದಲಿತ ಚಳವಳಿಗಳಲ್ಲಿ ಇಂತಹ ಭಗವಾಧ್ವಜ- ಕೇಸರಿ ಬಾವುಟಗಳ ಪ್ರದರ್ಶನವನ್ನು ನೀವು ನೋಡಿದ್ದೀರಾ?
ಲೇಖನ-ಡಾ.ವಡ್ಡಗೆರೆ ನಾಗರಾಜಯ್ಯ, 8722724174