ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
2024-25 ನೇ ಸಾಲಿನಲ್ಲಿ ಒಟ್ಟು ರೂ.38,525 ಕೋಟಿ ಅಬಕಾರಿ ತೆರಿಗೆ ಸಂಗ್ರಹ ಗುರಿ ಹೊಂದಲಾಗಿದೆ. ಅಕ್ಟೋಬರ್28ರವರೆಗೆ ರೂ. 20,237 ಕೋಟಿ ಸಂಗ್ರಹವಾಗಿದೆ.
ಇದುವರೆಗೆ ಶೇ.52.53 ಗುರಿ ಸಾಧನೆ ಮಾಡಲಾಗಿದ್ದು, ಮಾರ್ಚ್ ಒಳಗಾಗಿ ನಿಗದಿತ ಗುರಿಯನ್ನು ಸಾಧಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದರು.
ಅಬಕಾರಿ ಇಲಾಖೆಗಳ ತೆರಿಗೆ ಸಂಗ್ರಹದ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕೆಲವು ಸಲಹೆ ಸೂಚನೆಗಳನ್ನು ನೀಡಿ ಮುಖ್ಯಮಂತ್ರಿಗಳು ಮಾತನಾಡಿದರು.
ಕಳೆದ ವರ್ಷಕ್ಕಿಂತ ಈ ಅವಧಿಯಲ್ಲಿ 1301.15ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹಿಸಲಾಗಿದೆ. ಗೋವಾದಿಂದ ಅಕ್ರಮ ಮದ್ಯ ಸಾಗಾಟವನ್ನು ಸಂಪೂರ್ಣವಾಗಿ ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು.
ಇಲಾಖೆಯಲ್ಲಿ ಭ್ರಷ್ಟಾಚಾರದ ಬಗ್ಗೆ ದೂರುಗಳು ಬಂದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದರು.
ಸಚಿವರಾದ ಆರ್.ಬಿ.ತಿಮ್ಮಾಪುರ್,
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಕಾರ್ಯದರ್ಶಿ ಜಾಫರ್, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾದ ಸಿ.ಇ.ಶಿಖಾ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಅಬಕಾರಿ ಇಲಾಖೆ ಆಯುಕ್ತರಾದ ರವಿಶಂಕರ್ ಸೇರಿ ಇಲಾಖೆಯ ಇನ್ನಿತರೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.