ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದೇಶದ ಪ್ರಗತಿಗೆ ಭ್ರಷ್ಟಾಚಾರವು ಮಾರಕವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರೋಣ್ ವಾಸುದೇವ್ ಹೇಳಿದರು.
ನಗರದ ಎಸ್ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ ಕರ್ನಾಟಕ ಲೋಕಾಯುಕ್ತ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಎಸ್ಐಎಂ ತಾಂತ್ರಿಕ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಾಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಆರ್ಥಿಕ ಪ್ರಗತಿಯಲ್ಲಿ ಯಾವುದೇ ಅಡ್ಡಿ ಇಲ್ಲದೆ ಬೆಳವಣಿಗೆಯಾಗಬೇಕಾದರೆ ಭ್ರಷ್ಟಾಚಾರ ನಿರ್ಮೂಲನೆ ಅವಶ್ಯಕ. ಇಂದಿನ ವಿದ್ಯಾರ್ಥಿಗಳು ದೇಶದ ಮುಂದಿನ ಪ್ರಜೆಗಳು, ನಿಮ್ಮ ಪಾತ್ರ ಬಹುಮುಖ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕರ್ನಾಟಕ ಲೋಕಾಯುಕ್ತ ಚಿತ್ರದುರ್ಗ ಪೊಲೀಸ್ ಅಧೀಕ್ಷಕ ಎನ್.ವಾಸುದೇವರಾಮ್ ಮಾತನಾಡಿ, ಭ್ರಷ್ಟಾಚಾರ ಎಲ್ಲಾ ಕ್ಷೇತ್ರಗಳಲ್ಲೂ ನೆಲೆಸಿದೆ. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರವು ಭ್ರಷ್ಟಾಚಾರದಲ್ಲಿ ಜಾಗತಿಕ ಮಟ್ಟದಲ್ಲಿ 93ನೇ ಸ್ಥಾನ ಪಡೆದುಕೊಂಡಿದೆ. ದೇಶದ ಅಭಿವೃದ್ಧಿಗೆ ಭ್ರಷ್ಟಾಚಾರ ಒಂದು ಮಾರಕ. ಆದ್ದರಿಂದ ತಾವುಗಳು ಭ್ರಷ್ಟಾಚಾರದ ಬಗ್ಗೆ ದೂರುಗಳಿದ್ದಲ್ಲಿ ನಮ್ಮ ಲೋಕಾಯುಕ್ತ ಸಂಸ್ಥೆಗೆ ತಿಳಿಸಿ ನಾವು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವಿಶೇಷ ಲೋಕಾಯುಕ್ತ ಅಭಿಯೋಜಕ ಬಿ.ಮಲ್ಲೇಶಪ್ಪ ಮಾತನಾಡಿ, ಭ್ರಷ್ಟಾಚಾರ ವೊಂದು ಸಾಮಾಜಿಕ ಪಿಡುಗು. ಯಾವುದೇ ಸಾರ್ವಜನಿಕ ಸೇವಕ ತನ್ನ ನ್ಯಾಯಬದ್ಧ ಸೇವೆಯನ್ನು ಸಾರ್ವಜನಿಕರಿಗೆ ನೀಡಲು ವಿಳಂಬ ಮಾಡಿದರೂ ಅದು ಭ್ರಷ್ಟಾಚಾರವೇ ಆಗಿರುತ್ತದೆ ಎಂದು ತಿಳಿಸಿದರು.
ಎಸ್ಜೆಎಂ ತಾಂತ್ರಿಕ ಮಹಾವಿದ್ಯಾಲಯ ಪ್ರಾಚಾರ್ಯ ಪಿ.ಬಿ.ಭರತ್ ಮಾತನಾಡಿ, ಭ್ರಷ್ಟಾಚಾರ ವ್ಯಕ್ತಿಯ ಜೀವನದ ವಾಹನದ ಚಾಲನೆಗೆ ಬೇಕಾಗುವ ತೈಲವೆಂದು ಕೆಲವರು ಭಾವಿಸಿದ್ದಾರೆ. ಅದರ ನಿರ್ಮೂಲನೆ ಮತ್ತು ತಡೆಗಟ್ಟುವಿಕೆಯಲ್ಲಿ ಯುವಕರ ಪಾತ್ರ ಅತಿಮುಖ್ಯ ಎಂದು ತಿಳಿಸಿದರು.
ಇದೇ ಸಂದಭದಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಎನ್.ಮೃತ್ಯುಂಜಯ ಅವರು ಲೋಕಾಯುಕ್ತ ಕಾಯ್ದೆ ಹಾಗೂ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ಕರ್ನಾಟಕ ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ಬಿ.ಮಂಜುನಾಥ್, ಸಂಗಮನಾಥ್ ಎಸ್ ಹೊಸಮನಿ ಸೇರಿದಂತೆ ಎಸ್ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.