ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೌಶಲ್ಯಾಧಾರಿತ ಉದ್ಯೋಗ ಸೃಷ್ಟಿಗೆ ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡುತ್ತಿದ್ದು, ಕಳೆದ ಬಜೆಟ್ ಯುವಜನರಲ್ಲಿ ಕುಶಲತೆ ವೃದ್ಧಿಸುವ ನಿಟ್ಟಿನಲ್ಲಿ ರೂ 3 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಮೀಸಲಿಡಲಾಗಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.
ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾರತೀಯ ಅಂಚೆ ಇಲಾಖೆ ಹಾಗೂ ಕೇಂದ್ರ ಸರ್ಕಾರ ಇಲಾಖೆಗಳು ಸಹಭಾಗಿತ್ವದೊಂದಿಗೆ “ಉದ್ಯೋಗ ಮೇಳ” ನೇಮಕಾತಿ ಅಭಿಯಾನದ ರಾಷ್ಟ್ರೀಯ ಸಮಾರಂಭದಲ್ಲಿ ಪ್ರಧಾನಮಂತ್ರಿ ಉದ್ಯೋಗ ಮೇಳ (ರೋಜ್‍ಗಾರ್ ಮೇಳ)ದಲ್ಲಿ ಭಾಗವಹಿಸಿ ಮಾತನಾಡಿದರು.
ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ್ ಭಾರತ್ ಪರಿಕಲ್ಪನೆಗಳ ಅಡಿಯಲ್ಲಿ ಪ್ರಧಾನ ಮಂತ್ರಿಗಳು ಉದ್ಯೋಗ ಸೃಷ್ಟಿಗೆ ದೊಡ್ಡ ಪ್ರಮಾಣದಲ್ಲಿ ಉತ್ತೇಜನ ಕೊಡುತ್ತಿದ್ದಾರೆ. ಉತ್ಪಾದನಾ ಸಂಪರ್ಕ ಉತ್ತೇಜನ ಯೋಜನೆ ಮೂಲಕವೂ ಉದ್ಯೋಗ ಕ್ಷೇತ್ರದಲ್ಲಿ ದೊಡ್ಡ ಮುನ್ನಡೆ ಸಾಧಿಸಲಾಗುತ್ತಿದೆ. ಭಾರತವು 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಬೇಕು ಎಂದು ತಿಳಿಸಿದರು.
ಮೊದಲ ಹಂತದ ಉದ್ಯೋಗ ಮೇಳದಲ್ಲಿ ಇಲಾಖೆಯು 30,000 ಯುವ ಜನರಿಗೆ ಉದ್ಯೋಗ ನೀಡಿದೆ. ಎರಡನೇ ಹಂತದಲ್ಲಿ 20,000 ಮಂದಿಗೆ ಉದ್ಯೋಗ ನೀಡಿದೆ ಎಂದು ಕೇಂದ್ರ ಸಚಿವರು ಅಂಚೆ ಇಲಾಖೆಯನ್ನು ಶ್ಲಾಘಿಸಿದರು.
2ನೇ ಹಂತದಲ್ಲಿ ದೇಶದಾದ್ಯಂತ ವಿವಿಧ ಕೇಂದ್ರ ಸರಕಾರಿ ಇಲಾಖೆಗಳಲ್ಲಿ ಉದ್ಯೋಗಕ್ಕೆ ಆಯ್ಕೆಯಾದ 51,000 ಯುವಜನರಿಗೆ ದೇಶದ 40 ಸ್ಥಳಗಳಲ್ಲಿ ನೇರ ನೇಮಕಾತಿ ಪತ್ರ ನೀಡುವ ಕಾರ್ಯಕ್ರಮ ನಡೆಯಿತು. ಆನ್‍ಲೈನ್ ವೇದಿಕೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಧಾನಿಗಳು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಇಪ್ಪತೈದು ಯುವ ಜನರಿಗೆ ನೇಮಕಾತಿ ಪತ್ರ ವಿತರಿಸಲಾಯಿತು.
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್, ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ಅವರು ಉಪಸ್ಥಿತರಿದ್ದರು.