ವಾಣಿ ವಿಲಾಸ ಸಾಗರ ಭರ್ತಿಗೆ ಮೂರು ಮೆಟ್ಟಿಲು ಬಾಕಿ

News Desk

ವಾಣಿ ವಿಲಾಸ ಸಾಗರ ಭರ್ತಿಗೆ ಮೂರು ಮೆಟ್ಟಿಲು ಬಾಕಿ
ಮೈಸೂರು ಮಹಾರಾಜರು ಶತಮಾನದ ಹಿಂದೆ ನಿರ್ಮಿಸಿದ ಡ್ಯಾಂ
ವರದಿ-ಹೆಚ್.ಸಿ.ಗಿರೀಶ್, ಹರಿಯಬ್ಬೆ.
ಮಲ್ಲಪ್ಪನಹಳ್ಳಿ ಎಂ.ಎಲ್.ಗಿರಿಧರ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು/ಚಿತ್ರದುರ್ಗ:
ಬಯಲು ಸೀಮೆಯ ಮಧ್ಯ ಕರ್ನಾಟಕದ ಬಹುದೊಡ್ಡ ನೀರು ಸಂಗ್ರಹಣಾ ಜಲಪಾತ್ರೆ ಎಂದೇ ಹೆಸರಾದ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರದ ಜಲಾಶಯ ಭರ್ತಿಗೆ ಕೇವಲ ಮೂರು ಮೆಟ್ಟಿಲು ಮಾತ್ರ ಬಾಕಿ ಇದೆ. ಅಕ್ಟೋಬರ್-30 ರಂದು ಬುಧವಾರ ನೀರಿನ ಮಟ್ಟ 126.95 ಅಡಿ ತಲುಪಿದೆ.

ಪ್ರತಿ ದಿನ ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಸಮೀಪದ ಬೆಟ್ಟದ ತಾವರೆಕೆರೆಯ ಪಂಪ್ ಹೌಸ್ ನಿಂದ ಒಂದು ಪಂಪ್ ಲಿಫ್ಟ್ ಮಾಡಲಾಗುತ್ತಿದ್ದು ಈ ಪಂಪ್ ಹೌಸ್ ನಿಂದ ನೀರನ್ನು ಲಿಫ್ಟ್  ಮಾಡುತ್ತಿರುವುದರಿಂದ ಪ್ರತಿ ದಿನ 550 ಕ್ಯೂಸೆಕ್ ನೀರಿನ ಒಳ ಹರಿವು ವಿವಿ ಸಾಗರದತ್ತ ಹರಿದು ಬರುತ್ತಿದೆ.

ಜೊತೆ ಅಜ್ಜಂಪುರ, ಬಿರೂರು, ತರೀಕೆರೆ, ಚಿಕ್ಕಮಗಳೂರು ಸಮೀಪದ ಕೆರೆ, ಕಟ್ಟೆಗಳು ಭರ್ತಿಯಾಗಿದ್ದು ಅಲ್ಲಿಂದ ಜೋಪು ನೀರು 150 ರಿಂದ 200 ಕ್ಯೂಸೆಕ್ ಹರಿದು ಬರುತ್ತಿದೆ. ಇದರ ಜೊತೆಯಲ್ಲಿ ಎತ್ತಿನಹೊಳೆ ಯೋಜನೆಯಲ್ಲಿ ಒಂದ್ ಪಂಪ್ ರನ್ ಮಾಡುತ್ತಿದ್ದು ಸಕಲೇಶ್ವರ ಸುತ್ತ ಮುತ್ತಲ ಕೆರೆ, ಕಟ್ಟೆಗಳು ಭರ್ತಿಯಾಗಿ 100 ರಿಂದ 150 ಕ್ಯೂಸೆಕ್ ನೀರು ಹರಿದು ವಿವಿ ಸಾಗರ ಸೇರುತ್ತಿದೆ. ಒಟ್ಟಾರೆ ಪ್ರತಿ ನಿತ್ಯ 1040 ಕ್ಯೂಸೆಕ್ ನೀರು ಹರಿದು ವಿವಿ ಸಾಗರ ಸೇರುತ್ತಿರುವುದರಿಂದಾಗಿ 127 ಅಡಿ ದಾಟಿದೆ.

ಅಕ್ಟೋಬರ್-31 ರಂದು ಗುರುವಾರ ಸಾವಿರ ಕ್ಯೂಸೆಕ್ ನಷ್ಟು ನೀರು ಹರಿದು ಬರುತ್ತಿದ್ದು ಇಂದಿನ ನೀರಿನ ಮಟ್ಟ 127.05 ಅಡಿಗೆ ತಲುಪಿದೆ. ಹೀಗಾಗಿ ವಿವಿ ಸಾಗರ ಡ್ಯಾಂ ಭರ್ತಿಯಾಗಲು ಕೇವಲ ಮೂರು(3 ಮೆಟ್ಟಿಲು) ಅಡಿ ಮಾತ್ರ ಬಾಕಿ ಇದೆ.

ಸುಮಾರು ಸಾವಿರ ಕ್ಯೂಸೆಕ್ ನಷ್ಟು ನೀರು ನಿತ್ಯ ಹರಿದು ವಿವಿ ಸಾಗರ ಸೇರುತ್ತಿದ್ದರೆ ಪ್ರತಿ ದಿನ 0.05 ಅಡಿಯಿಂದ 0.10 ಅಡಿಯಷ್ಟು ನೀರು ಸಂಗ್ರಹ ಆಗುವ ಮೂಲಕ ಇನ್ನೂ ಒಂದು ತಿಂಗಳೊಳಗೆ ವಿವಿ ಸಾಗರ ಡ್ಯಾಂ ಭರ್ತಿಯಾಗುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಹವಾಮಾನ ವೈಪರೀತ್ಯ ಅಥವಾ ಸೈಕ್ಲೋನ್ ನಿಂದ ಭಾರೀ ಮಳೆ ಸುರಿದರೆ ವಾರದೊಳಗೆ ವಿವಿ ಸಾಗರ ಡ್ಯಾಂ ಭರ್ತಿ ಆಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ವಿವಿ ಸಾಗರ ಜಲಾಶಯದ ಸಂಕ್ಷಿಪ್ತ ಮಾಹಿತಿ-
ಹಿರಿಯೂರು ತಾಲೂಕಿನಾದ್ಯಂತ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ತತ್ವಾರ ಉಂಟಾಗಿದ್ದರಿಂದಾಗಿ ಗುಳೆ ಹೋಗುತ್ತಿದ್ದ ಜನರ ಪರಿಸ್ಥಿತಿ ನೋಡಿದ ಮೈಸೂರು ಮಹಾರಾಜರು ರೈತರ ಬವಣೆ ನಿವಾರಣೆಗಾಗಿ ಹಿರಿಯೂರು ತಾಲೂಕಿನ ವಾಣಿ ವಿಲಾಸಪುರದ ಸಮೀಪ ವೇದಾವತಿ ನದಿಗೆ ಅಡ್ಡಲಾಗಿ ವಾಣಿವಿಲಾಸ ಸಾಗರ ಜಲಾಶಯವನ್ನು ನಿರ್ಮಿಸಲು 1898ರಲ್ಲಿ ಪ್ರಾರಂಭಿಸಿ 1907ರಲ್ಲಿ ಪೂರ್ಣಗೊಳಿಸಿದರು.

        ವಿ.ವಿ ಸಾಗರ ಜಲಾಶಯವು ಒಟ್ಟು 129 ಕಿ.ಮೀ ಉದ್ದದ ಕಾಲುವೆ ಹೊಂದಿದ್ದು, 12,135 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದ ಒಟ್ಟಾರೆ 42 ಹಳ್ಳಿಗಳ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ.

        ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ತಾಯಿ ಮಹಾರಾಣಿ ಕೆಂಪ ನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನ ರಾಜಪ್ರತಿನಿಧಿ ಇವರು ಜಲಾಶಯ ನಿರ್ಮಿಸಿದ್ದಾರೆ.  ಜಲಾಶಯದ ಉದ್ದ 1330 ಅಡಿಗಳು (405.40 ಮೀಟರ್) ಇದ್ದು 30.422 ಟಿಎಂಸಿ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ.

        ಈ ಜಲಾಶಯದ ನಿರ್ಮಾಣದ ವಿಶೇಷತೆ ಎಂದರೆ ಕೇವಲ ಕಲ್ಲು ಮತ್ತು ಸುಣ್ಣದ ಗಾರೆ ಬಳಸಿ ನಿರ್ಮಾಣ ಮಾಡಲಾಗಿದೆ.         ಜಲಾಶಯದ ನೀರಿನ ಗರಿಷ್ಠ ಶೇಖರಣಾ ಮಟ್ಟ (FRL-Full Reservoir Level) 130 ಅಡಿ, ಗರಿಷ್ಠ ನೀರಿನ ಮಟ್ಟ (MWL) 136 ಅಡಿ ಇದ್ದು, 5374 ಚ.ಕಿ.ಮೀ  ಜಲಾನಯನ ಪ್ರದೇಶ ಹೊಂದಿದೆ.

ಯಾವಾಗ ಕೋಡಿ ಭರ್ತಿ-
1907ರಲ್ಲಿ ವಿವಿ ಸಾಗರ ಡ್ಯಾಂ ನಿರ್ಮಾಣ ಮಾಡಿದ್ದರೂ 26 ವರ್ಷಗಳ ನಂತರ ಅಂದರೆ ಈ ಹಿಂದೆ 1933ರಲ್ಲಿ ಜಲಾಶಯದ ಕೋಡಿ ಬಿದಿದ್ದು ಇತಿಹಾಸ. ಇದಾದ ನಂತರ 89 ವರ್ಷಗಳ ನಂತರ 2ನೇ ಸಲ ಕೋಡಿ ಬಿದ್ದಿದೆ. ಅಂದರೆ ದಿನಾಂಕ-
08.09.2022 ರಂದು ಕೋಡಿಬಿದ್ದು ಅಂದು ನೀರಿನ ಮಟ್ಟ 135.75 ಅಡಿಗಳಷ್ಟು ದಾಖಲಾಗಿರುತ್ತದೆ. ಅಂದರೆ ಸುಮಾರು 89 ವರ್ಷಗಳ ನಂತರ 2022-23ರ ಸಾಲಿನಲ್ಲಿ ನೀರಿನ ಮಟ್ಟ 135 ಅಡಿ ತಲುಪಿದ್ದು ಬಹುದೊಡ್ಡ ಇತಿಹಾಸ.

        ಜಲಾಯಶವು ಒಟ್ಟು 30 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದ್ದು ಪ್ರಸ್ತುತ ದಿನಾಂಕ:30.10.2024 ರಂದು ವಿ.ವಿ.ಸಾಗರ ಜಲಾಶಯದಲ್ಲಿ 126.95 ಅಡಿಗಳಷ್ಟು ನೀರಿನ ಸಂಗ್ರಹವಿದ್ದು, ಈ ದಿನಕ್ಕೆ ನೀರಿನ ಮಟ್ಟದ ಸಂಗ್ರಹಣೆ 27.87 ಟಿ.ಎಂ.ಸಿ. ಗಳಾಗಿದೆ. ಅಕ್ಟೋಬರ್-31ರಂದು ಗುರುವಾರಕ್ಕೆ 127 ಅಡಿಗೂ ಹೆಚ್ಚಿನ ನೀರು ಸಂಗ್ರಹವಾಗಿದೆ. 2.13 ಟಿಎಂಸಿ ಎಷ್ಟು ನೀರು ಸಂಗ್ರಹವಾದರೆ ವಿವಿ ಸಾಗರ ಡ್ಯಾಂ ಭರ್ತಿಯಾಗಲಿದೆ. ಬಾಕಿ 2.13 ಟಿಎಂಸಿ ನೀರು ಡ್ಯಾಂಗೆ ಹರಿದು ಬರಬೇಕಿದೆ.

 ಈ ನೀರಿನ ಪೈಕಿ 1.87 ಟಿ.ಎಂ.ಸಿ ನೀರು ಬಳಕೆಗೆ ಬಾರದ (Dead Storage) ಪ್ರಮಾಣವಾಗಿದೆ.
ಪ್ರಸ್ತುತ ಜಲಾಶಯಕ್ಕೆ ಒಳ ಹರಿವು 1040 ಕ್ಯೂಸೆಕ್ ಇದ್ದು
ಜಲಾಶಯದಿಂದ  ಯಾವುದೇ ಹೊರಹರಿವು ಇರುವುದಿಲ್ಲ.
2024ನೇ ವರ್ಷದಲ್ಲಿ ಮತ್ತೆ ಜಲಾಶಯ ಭರ್ತಿ ಆಗುವ ಸಾಧ್ಯತೆ ಹೆಚ್ಚಿದೆ.

ಭದ್ರಾ ನೀರು, ಮಳೆ ನೀರು ಹಾಗೂ ಎತ್ತಿನಹೊಳೆ ನೀರು ಹರಿದು ಬರುತ್ತಿದೆ. ಜಲಾಶಯ ಒಟ್ಟು 136 ಅಡಿ ಎತ್ತರ ಇದ್ದು,‌130 ಅಡಿಗೆ ಡ್ಯಾಂ ಕೋಡಿ ಬೀಳಲಿದೆ. ಮುಂಗಾರು ಹಂಗಾಮಿನಲ್ಲಿ ವಿವಿ ಸಾಗರಕ್ಕೆ ಹೆಚ್ಚಿನ ನೀರು ಹರಿದಿರುವುದು ಬಹಳ ಕಡಿಮೆ. ಹಿಂಗಾರು ಹಂಗಾಮಿ ಸೇರಿದಂತೆ ಸೈಕ್ಲೋನ್ ಬಂದಾಗ ಮಳೆ ಹೆಚ್ಚು ಸುರಿದು ವಿವಿ ಸಾಗರಕ್ಕೆ ಸಾಕಷ್ಟು ಸಲ ಹೆಚ್ಚಿನ ನೀರು ಬಂದಿದೆ.

ನೀರಿನ ಮೂಲ-
ಚಿಕ್ಕಮಗಳೂರು ಜಿಲ್ಲೆಯ ಬಾಬು ಬುಡನ್ ಗಿರಿಯಲ್ಲಿ ಜನಿಸುವ ವೇದಾ ನದಿಯು ಮುಂದೆ ಸಾಗಿ ಕಡೂರಿನ ಬಳಿ ಅವತಿ ಎಂಬ ನದಿಗೆ ಕೂಡುತ್ತದೆ. ಅಲ್ಲಿಂದ  ವೇದಾವತಿ
ನದಿಯಾಗಿ ಹರಿದು ವಿವಿ ಸಾಗರ ಡ್ಯಾಂ ಸೇರುತ್ತದೆ.

ಹೆಚ್ಚಿನ ನೀರು ಸಂಗ್ರಹವಾದ ವರ್ಷ-
ವಿವಿ ಸಾಗರ ಜಲಾಶಯದಲ್ಲಿ ಹೆಚ್ಚಿನ ನೀರು ಹಲವು ವರ್ಷ ಸಂಗ್ರಹವಾಗಿದೆ. ಹೆಚ್ಚು ನೀರು ಸಂಗ್ರಹವಾದ ವರ್ಷಗಳು ಈ ರೀತಿ ಇವೆ.


1917 ರಲ್ಲಿ 120.60 ಅಡಿ
, 1918ರಲ್ಲಿ 121.30 ಅಡಿ, 1919ರಲ್ಲಿ 128.30, 1920ರಲ್ಲಿ 125.50, 1932ರಲ್ಲಿ 125.50, ಅಡಿ, 1933ರಲ್ಲಿ 135.25 ಅಡಿ, 1934ರಲ್ಲಿ 130.24 ಅಡಿ, 1935ರಲ್ಲಿ 123,22 ಅಡಿ, 1956ರಲ್ಲಿ 125 ಅಡಿ, 1957ರಲ್ಲಿ 125.05 ಅಡಿ, 1958ರಲ್ಲಿ 124.50 ಅಡಿ, 2000ರಲ್ಲಿ 122.50ಅಡಿ, 2021ರಲ್ಲಿ 125.50 ಅಡಿ, 2022ರಲ್ಲಿ 135.75 ಅಡಿ, 2024ರ ಅಕ್ಟೋಬರ್-31ನೇ ಗುರುವಾರಕ್ಕೆ 127.05 ಅಡಿ ನೀರು ಸಂಗ್ರಹವಾಗಿದೆ.

- Advertisement -  - Advertisement -  - Advertisement - 
Share This Article
error: Content is protected !!
";