ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಗ್ರಾಮ ಪಂಚಾಯಿತಿಗಳ ಮಧ್ಯಂತರ ಚುನಾವಣೆಯಲ್ಲಿ ಎರಡನೇ ಅವಧಿಗೆ ಮಜರಹೊಸಹಳ್ಳಿ ಗ್ರಾಮ ಪಂಚಾಯತಿ ಚುನಾವಣೆ ನೆಡೆಸಲಾಯಿತು.ಅಧ್ಯಕ್ಷೆಯಾಗಿ ವೀರಾಪುರದ ಸದಸ್ಯೆ ಲೀಲಮ್ಮ ಪಿಳ್ಳೆಗೌಡ, ಉಪಾಧ್ಯಕ್ಷರಾಗಿ ಮಾರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿರಿಯ ಮುಖಂಡ ತಿ.ರಂಗರಾಜು ಹಾಲಿ ಅಧ್ಯಕ್ಷರು ಹಾಗು ಉಪಾಧ್ಯಕ್ಷರಿಗೆ ಶುಭ ಹಾರೈಸಿ ಮಾತನಾಡಿ ಗ್ರಾಮ ಮಟ್ಟದ ಪಂಚಾಯಿತಿ,ಹಾಲಿನ ಡೈರಿ, ಸಹಕಾರಿ ಸಂಘಗಳಲ್ಲಿ ರಾಜಕೀಯ ಮಾಡಬಾರದು ಎಂಬುದಕ್ಕೆ ನಮ್ಮ ಪಂಚಾಯತಿ ಉತ್ತಮ ಉದಾಹರಣೆಯಾಗಿದೆ ಎಲ್ಲಾ ಸ್ಥಳೀಯ ಮುಖಂಡರ ಶ್ರಮದ ಫಲವಾಗಿ ಇಂದು
ಇತರೆ ಪಂಚಾಯತಿಗಳಿಗೆ ನಮ್ಮ ಮಜರಾ ಹೊಸಹಳ್ಳಿ ಪಂಚಾಯತಿ ಮಾದರಿಯಾಗಿದೆ, ಇದೊಂದು ಉತ್ತಮ ಬೆಳವಣಿಗೆಯಾಗಿದ್ದು, ಪಂಚಾಯತಿ ವ್ಯಾಪ್ತಿಯ ಬಡ ವರ್ಗದ ಸಮುದಾಯಗಳಿಗೆ ಧ್ವನಿಯಾಗಿ ಕರ್ತವ್ಯ ನಿರ್ವಹಿಸಲಿ, ಉತ್ತಮ ಸೇವೆ ಸಲ್ಲಿಸುವಲ್ಲಿ ಪಂಚಾಯತಿ ಸಮೃದ್ಧವಾಗಲಿ ಎಂದರು.
ಮಜರಾ ಹೊಸಹಳ್ಳಿ ಪಂಚಾಯಿತಿಯಲ್ಲಿ 18 ಸದಸ್ಯ ಬಲವನ್ನು ಹೊಂದಿದ್ದು ಬುಧವಾರ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ವೀರಾಪುರ ವಾರ್ಡ್ ನ ಸದಸ್ಯೆ ಲೀಲಮ್ಮಪಿಳ್ಳೆಗೌಡ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಾರಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಇಬ್ಬರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಶಶಿಶೇಖರ್ ಘೋಷಿಸಿದರು.
ನೂತನ ಅಧ್ಯಕ್ಷರಾದ ಲೀಲಮ್ಮ ಪಿಳ್ಳೆಗೌಡ ಮಾತನಾಡಿ ಶಾಸಕರಾದ ಧೀರಜ್ ಮುನಿರಾಜು ಹಾಗೂ ಸ್ಥಳೀಯ ಎಲ್ಲಾ ಪಕ್ಷಗಳ ಮುಖಂಡರು, ಪಂಚಾಯತಿ ಸದಸ್ಯರ ಸಹಕಾರದಿಂದ ಗ್ರಾಮಸ್ಥರಿಗೆ ಸೇವೆ ಸಲ್ಲಿಸುವ ಭಾಗ್ಯ ದೊರೆತಿದೆ. ಉತ್ತಮ ಸೇವೆ ಸಲ್ಲಿಸುವ ಮೂಲಕ ಪಂಚಾಯಿತಿ ಅಭಿವೃದ್ಧಿಗೆ ಶ್ರಮಿಸಲಾಗುವುದು, ಮುಖ್ಯವಾಗಿ ನಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಖಾನೆಗಳು ಹೆಚ್ಚಾಗಿದ್ದು,
ಕಾರ್ಖಾನೆಗಳ ರಾಸಾಯನಿಕ ಅಂತರ್ಜಲ ಸೇರಿ ಕುಡಿಯುವ ನೀರು ಸಾಕಷ್ಟು ಹಾಳಾಗಿದೆ , ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಗ್ರಾಮಗಳಿಗೆ ಹಲವು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ತಾಲ್ಲೂಕಿಗೆ ಮಾದರಿ ಪಂಚಾಯತಿಯನ್ನಾಗಿಸುವುದು ನಮ್ಮ ಆಶಯ ಎಂದರು.
ಕೆಎಂಎಫ್ ನಿರ್ದೇಶಕ ಬಿಸಿ ಆನಂದ್ ಕುಮಾರ್ ಮಾತನಾಡಿ ತಾಲ್ಲೂಕಿಗೆ ಮಾದರಿ ಪಂಚಾಯತಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಇಂದಿನ ಚುನಾವಣೆ ನೆಡೆದಿದೆ, ಸ್ಥಳೀಯ ಮಟ್ಟದ ಚುನಾವಣೆಗಳಲ್ಲಿ ಸೌಹಾರ್ದ ಭಾವನೆ ಮೂಡಲಿ ಎಂಬುದೇ ನಮ್ಮ ಉದ್ದೇಶ, ಚುನಾವಣೆ ಸೋಲು ಗೆಲುವು ಸಾಮಾನ್ಯ ಗ್ರಾಮಗಳಲ್ಲಿ ವೈರತ್ವದ ಭಾವನೆಯಿಂದ ಜನತೆ ಹೊರಬರಬೇಕಿದ್ದು ಅದಕ್ಕಿಂದು ಮುನ್ನುಡಿ ಬರೆದಿದ್ದೇವೆ,
ಗ್ರಾಮ ಪಂಚಾಯತಿಗಳಲ್ಲಿ ಅಕ್ರಮವೆಸಗಲು ಸಾಧ್ಯವಿಲ್ಲ ಕಾನೂನು ಬಿಗಿಯಾಗಿದ್ದು ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸಲು ಇದೊಂದು ಮಾರ್ಗ ಅಷ್ಟೇ. ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಉತ್ತಮ ಸೇವೆ ಸಲ್ಲಿಸುವ ಮೂಲಕ ಪಂಚಾಯಿತಿ ಅಭಿವೃದ್ದಿ ಮಾಡಬೇಕಿದೆ, ಈ ಚುನಾವಣೆಗೆ ಶ್ರಮಿಸಿದ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಮುಖಂಡರಿಗೆ ಅಭಿನಂದನೆ ತಿಳಿಸಿದರು.
ನೂತನ ಉಪಾಧ್ಯಕ್ಷ ಮಾರಪ್ಪ ಮಾತನಾಡಿ ಸರ್ವ ಸದಸ್ಯರು ಒಮ್ಮತದಿಂದ ನಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದು, ನಮ್ಮಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸಲು ಪ್ರಯತ್ನಿಸುತ್ತೇವೆ, ಗ್ರಾಮಗಳಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ನಮ್ಮ ಕಾರ್ಯ ಆರಂಭವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಆದಿತ್ಯ ನಾಗೇಶ್, ಹೊಸ ಹುಡ್ಯ ಆನಂದ್,ಬಿ ಎಚ್ ಕೆಂಪಣ್ಣ, ಮಾಜಿ ಅಧ್ಯಕ್ಷರಾದ ಎಚ್.ಎ ಆನಂದ್ ಕುಮಾರ್,ಬಿ.ಟಿ.ಶ್ರೀನಿವಾಸ್ ಮೂರ್ತಿ, ಪಿಳ್ಳೇಗೌಡ, ಗಂಗರಾಜು, ಕುಮಾರ್,ಬೈರೇಗೌಡ, ವಿಜಯ್ ಕುಮಾರ್, ಪಿಳ್ಳಾ ಅಂಜನಪ್ಪ, ಶಿವಕುಮಾರ್ ಮತ್ತಿತರು ಉಪಸ್ಥಿತರಿದ್ದರು.