ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ದೇಶದ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಅಬಿವೃದ್ಧಿಗೆ ಭ್ರಷ್ಟಾಚಾರವು ಅಡಚಣೆಯಾಗಿದ್ದು, ಇವುಗಳ ವಿರುದ್ಧ ಹೋರಾಡಲು ಯುವಜನರು ಸಜ್ಜುಗೊಳ್ಳಬೇಕು ಎಂದು ಸಮಾಜ ವಿಜ್ಙಾನಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಡಿ.ಧರಣೇಂದ್ರಯ್ಯ ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ಹರಿಯಬ್ಬೆ ಗ್ರಾಮದ ದಾವಣಗೆರೆ ವಿಶ್ವವಿದ್ಯಾಲಯ ಘಟಕ ಕಾಲೇಜಿನಲ್ಲಿ ನೆಹರು ಯುವ ಕೇಂದ್ರ, ಚಿತ್ರದುರ್ಗ, ಕಳವಿಭಾಗಿ ಶ್ರೀ ರಂಗನಾಥಸ್ವಾಮಿ ಸಾಂಸ್ಕೃತಿಕ ಕಲಾ ಸಂಘ ಸಕ್ಕರ, ಹಾಗೂ ದಾವಣಗೆರೆ ವಿಶ್ವವಿದ್ಯಾಲಯ ಘಟಕ ಕಾಲೇಜು ಹರಿಯಬ್ಬೆ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭ್ರಷ್ಟಾಚಾರ, ಲಂಚಾವತಾರ, ಕ್ಯಾನ್ಸರ್‌ಗಿಂತ ಬಹು ದೊಡ್ಡ ರೋಗವಾಗಿದ್ದು, ಸಕಾಲದಲ್ಲಿ ಯುವಜನರು ನಿಯಂತ್ರಿಸದೇ ಇದ್ದಲ್ಲಿ ಎಲ್ಲಾ ರಂಗಗಳಲ್ಲೂ ಅಭಿವೃದ್ಧಿ ಶೂನ್ಯವಾಗುತ್ತದೆ. ಲಂಚ ಮುಕ್ತ ಮತ್ತು ಭ್ರಷ್ಟಾಚಾರ ರಹಿತ ದೇಶವನ್ನಾಗಿ ಮಾಡಲು ನಾಗರೀಕರು, ಯುವಕರು, ಯುವತಿಯರು ಹೋರಾಟ ಮಾಡಬೇಕು. ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಾಮಾಣಿಕತೆ ಕಾನೂನು ನಿಯಮಗಳನ್ನು ಅನುಸರಿಸ ಬೇಕು. ಎಲ್ಲಾ ಕಾರ್ಯಗಳಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕ ರೀತಿಯಲ್ಲಿ ನಿರ್ವಹಣೆ ಮಾಡಬೇಕು, ವೈಯಕ್ತಿಕ ನಡವಳಿಕೆಯಲ್ಲಿ ಮತ್ತೊಬ್ಬರಿಗೆ ಮಾದರಿಯಾಗಬೇಕು. ಆಗ ಮಾತ್ರ ಭ್ರಷ್ಟಾಚಾರ ರಹಿತ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಹೇಳಿದರು.
ಹರಿಯಬ್ಬೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬಿ.ಎಸ್.ದತ್ತಾತ್ರೇಯ, ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಯುವ ಜನರ ಪಾತ್ರ ವಿಷಯ ಕುರಿತು ಮಾತನಾಡುತ್ತಾ, ಯಾವುದೇ ಒಬ್ಬ ವ್ಯಕ್ತಿ ನಿಯಮ ಬಾಹಿರವಾದ ತನಗೆ ನ್ಯಾಯಸಮ್ಮತವಲ್ಲದ ಹೆಚ್ಚಿನ ಸೌಲಭ್ಯ ಸ್ಥಾನಮಾನ ಲಾಭ ಪಡೆಯುವುದು ಭ್ರಷ್ಟಾಚಾರವಾಗುತ್ತದೆ. ಲಂಚ, ಕಾಣಿಕೆ, ಕೊಡುಗೆ ತೆಗೆದುಕೊಳ್ಳದೆ ಪ್ರಾಮಾಣಿಕತೆಯ ಬದುಕನ್ನು ಸಾಗಿಸಲು ಮತ್ತು ಇತರರು ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣ ಮಾಡಲು ಸಹಕರಿಸಬೇಕು.
ಇಂದಿನ ಶಿಕ್ಷಣ ಸರ್ವವ್ಯಾಪ್ತಿಯಾಗಿ ಎಲ್ಲರಿಗೂ ದೊರೆಯಬೇಕು. ಬರೀ ಅಂಕ ಗಳಿಕೆ ಅಲ್ಲದೆ ನೈತಿಕ ಮೌಲ್ಯ, ಮಾನವೀಯ ಮೌಲ್ಯ, ಸಾಮಾಜಿಕ ಕಾಳಜಿ, ಸಾಮಾಜಿಕ ಜವಾಬ್ದಾರಿ, ಪ್ರಾಮಾಣೀಕತೆ ಇವುಗಳ ಬಗ್ಗೆ ತಿಳಿಸಬೇಕು. ಇಲ್ಲವಾದರೆ ಹಣ ಗಳಿಕೆಯೇ ಜೀವನ ಎಂಬ ಭ್ರಮೆ ಇಂದಿನ ಯುವ ಜನರಲ್ಲಿ ಬರುತ್ತದೆ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ಘಟಕ ಕಾಲೇಜು ಹರಿಯಬ್ಬೆಯ ಸಹ ಸಂಚಾಲಕ ಎಸ್.ಮಂಜಣ್ಣ, ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಸ್.ಜಿ.ರಂಗಸ್ವಾಮಿ ಸಕ್ಕರ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ.ರಾಮಚಂದ್ರ, ಉಪನ್ಯಾಸಕರಾದ ಹರಿಯಬ್ಬೆ ಗೀತಾ, ಡಾ. ಜಿ.ವಿ.ಜಗದೀಶ್, ಆರ್.ತಿಪ್ಪೇಸ್ವಾಮಿ, ಡಾ. ಎಂ.ರಾಗಿಣಿ, ವಾಣಿಶ್ರೀ, ಯಶೋದಮ್ಮ, ಯಾಸ್ಮೀನ್, ನಾಗರಾಜರಾವ್, ಸುದರ್ಶನ್, ವಸಂತಕುಮಾರ್, ರುಕ್ಮಿಣಿ ಹಾಗೂ ಇತರರು ಉಪಸ್ಥಿತರಿದ್ದರು.