ಕನ್ನಡ ಭಾಷೆಯ ಸರ್ವತೋಮುಖ ಅಭಿವೃದ್ದಿಗೆ ಸರ್ಕಾರ ಬದ್ಧ: ಶಾಸಕ ರಘುಮೂರ್ತಿ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
೬೯ನೇ ಕನ್ನಡ ರಾಜ್ಯೋತ್ಸವ ಆಚರಣೆ ನಮ್ಮೆಲ್ಲರಿಗೂ ಹೆಮ್ಮೆಯ ಸಂಕೇತ
, ರಾಷ್ಟ್ರದ ಇತಿಹಾಸದಲ್ಲಿ ಕೇವಲ ಕನ್ನಡ ಭಾಷೆಯಲ್ಲಿ ಮಾತ್ರ ಎಂಟು ಜನ ಮಹಾನ್ ಕನ್ನಡ ಶಕ್ತಿಗಳು ಜ್ಞಾನಪೀಠ ಪ್ರಶಸ್ತಿ ಪಡೆಯುವ ಮೂಲಕ ಕನ್ನಡ ಭಾಷೆಯ ಮೌಲ್ಯವನ್ನು ಹೆಚ್ಚಿಸಿದ್ದಾರೆ. ಕನ್ನಡ ಭಾಷೆ ನಮ್ಮೆಲ್ಲರ ಆಡಳಿತ ಭಾಷೆಯಾಗಿದ್ದು, ಕನ್ನಡ ಮತ್ತು ಕನ್ನಡತನವನ್ನು ಬಿಟ್ಟು ನಾವ್ಯಾರು ಬದುಕು ಸಾಧ್ಯವಿಲ್ಲವೆಂದು ಶಾಸಕ, ಸಣ್ಣ ಕೈಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

ನಗರ ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಿ, ಬೆಳೆಸುವ ಎಲ್ಲಾ ರೀತಿಯ ಸೌಲಭ್ಯಗಳನ್ನುಸರ್ಕಾರ ಕಲ್ಪಿಸಿದೆ. ಪ್ರಸ್ತುತ ರಾಜ್ಯದಲ್ಲಿ ಜಾರಿಯಲ್ಲಿರುವ ಐದುಗ್ಯಾರಂಟಿಗಳ ಸಹಕಾರದಿಂದ ರಾಜ್ಯದ ಜನತೆ ಬದುಕು ಕಟ್ಟಿಕೊಂಡಿದ್ಧಾರೆ.

ಕನ್ನಡ ಸಾಹಿತ್ಯಕ್ಕೆ ಚಳ್ಳಕೆರೆ ಕ್ಷೇತ್ರದ ಕೊಡುಗೆ ಎಂದೂ ಮರೆಯಲು ಸಾಧ್ಯವಿಲ್ಲ. ತಳುಕಿನ ತರಾಸು, ವೆಂಕಣಯ್ಯ, ಬೆಳಗೆರೆ ಕೃಷ್ಣಶಾಸ್ತ್ರಿ, ಜಾನಕಮ್ಮ, ಸಿರಿಯಜ್ಜಿ, ಜಾನಪದ ತಜ್ಞ ಮೀರಸಾಬಿಹಳ್ಳಿ ಶಿವಣ್ಣ, ಶಿವಲಿಂಗಪ್ಪ, ತಿಪ್ಪಣ್ಣಮರಿಕುಂಟೆ ಇಂತಹ ಮಹಾನೀಯರ ಪರಿಶ್ರಮದ ಕೊಡುಗೆಯನ್ನು ನಾವೆಂದೂ ಮರೆಯಲು ಸಾಧ್ಯವಿಲ್ಲ. ಕಳೆದ ವರ್ಷ ಇಲ್ಲಿನ ಹಿರಿಯರಂಗಕರ್ಮಿ ಪಿ.ತಿಪ್ಫೇಸ್ವಾಮಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದರೇ, ೨೦೦೬ರಲ್ಲಿ ನೃತ್ಯನಿಕೇತನದ ಸುಧಾಮೂರ್ತಿ ಈ ಪ್ರಶಸ್ತಿ ಪಡೆದಿದ್ದರು.

ಇಬ್ಬರು ಈ ನೆಲದ ಕನ್ನಡ ಕಟ್ಟಾಳುಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಹಿರಿಯ ರಾಜಕಾರಣಿ ದಿವಂಗತ ಚಿತ್ರದುರ್ಗದ ಎಸ್.ನಿಜಲಿಂಗಪ್ಪನವರು ಸಹ ಕರ್ನಾಟಕ ಏಕೀಕರಣ ಸಮಿತಿಯ ಸದಸ್ಯರಾಗಿ ಹೋರಾಟ ನಡೆಸಿದವರು. ಕನ್ನಡ ನಾಡುನುಡಿಯ ಸೇವೆಗೆ ನಾವೆಲ್ಲರೂ ಬದ್ದರಾಗೋಣವೆಂದರು.

ದ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವ ಸಂದೇಶ ವಾಚನ ಮಾಡಿದ ತಹಶೀಲ್ಧಾರ್ ರೇಹಾನ್‌ಪಾಷ, ರಾಜ್ಯ ಸರ್ಕಾರ ಕನ್ನಡ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡುವ ಮೂಲಕ ಕನ್ನಡಿಗರ ಸ್ವಾಭಿಮಾನ ಹೆಚ್ಚಿಸಿದೆ. ರಾಜ್ಯ ಸರ್ಕಾರ ಸದಾಕಾಲ ಕನ್ನಡಿಗರ ಹಿತ ಕಾಪಾಡುವಲ್ಲಿ ಬದ್ದವಾಗಿದೆ. ನಾವೆಲ್ಲರೂ ಕನ್ನಡ ಉಳಿವಿಗಾಗಿ ಶ್ರಮೀಸೋಣವೆಂದರು.   

ಪ್ರಧಾನಭಾಷಣ ಮಾಡಿದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ಕರ್ನಾಟಕದಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಎಂದೂ ಅಡ್ಡಿಬಾರದು ಎಂಬ ವಿಶ್ವಾಸ ನಮಗಿದೆ. ಅದರೂ ಸಹ ಇತ್ತೀಚೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಐಟಿಬಿಟಿ ಕಂಪನಿಗಳು ಅಸ್ಥಿತ್ವಕ್ಕೆ ಬಂದಿದ್ದು, ಅಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಲು ನಿರಾಕರಣೆಯಾಗುತ್ತಿದೆ.

ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಕನ್ನಡ ನೆಲದಲ್ಲೇ ಎಲ್ಲಾ ಆರ್ಹತೆ ಇದ್ದರೂ ಕನ್ನಡಿಗರು ಉದ್ಯೋಗ ವಂಚಿತರಾಗುತ್ತಿರುವುದು ನೋವಿನಸಂಗತಿ. ನ್ಯಾಯಾಲಯವೂ ಸೇರಿದಂತೆ ಎಲ್ಲಾ ಯೋಜನೆಗಳನ್ನು ಮಾತೃಭಾಷೆ ಕನ್ನಡದಲ್ಲೇ ಜಾರಿಗೊಳಿಸಬೇಕು ಎಂದರು.

ಸಾಂಸ್ಕೃತಿಕ ಕ್ಷೇತ್ರದಲ್ಲಿ ಪಿ.ಬೋರಯ್ಯ, ವಿ.ಶಿವನಪ್ಪ, ಕ್ರೀಡಾಕ್ಷೇತ್ರದಲ್ಲಿ ಪಿ.ಪದ್ಮಾವತಿ, ಸಾಹಿತ್ಯ ಕ್ಷೇತ್ರದಲ್ಲಿ ನಿವೃತ್ತ ಶಿಕ್ಷಕ ಮೀರಸಾಬಿಹಳ್ಳಿ ಗುರುಮೂರ್ತಿ, ಕೃಷಿಕ್ಷೇತ್ರದಲ್ಲಿ ವಿಡಪನಕುಂಟೆಯ ಸಿದ್ದೇಶ್ವರರೆಡ್ಡಿ, ಮಾಧ್ಯಮ ಕ್ಷೇತ್ರದಲ್ಲಿ ಸಿ.ವೈ.ಗಂಗಾಧರ, ಕಂದಾಯ ಇಲಾಖೆಯ ರಾಜ್ವನಿರೀಕ್ಷಕ ಚೇತನ್‌ಕುಮಾರ್, ವೈದ್ಯ ಅಮೀತ್‌ಗುಪ್ತ, ಪಶುವೈದ್ಯ ಡಾ.ರೇವಣ್ಣ, ಸಿಡಿಪಿಒ ಇಲಾಖೆಯ ಅನ್ನಪೂರ್ಣಮ್ಮ, ಶಿಕ್ಷಣ ಇಲಾಖೆಯ ಆರ್.ಸದಾಶಿವಯ್ಯ ಇವರನ್ನು ಸನ್ಮಾನಿಸಲಾಯಿತು. ವಿವಿಧ ಶಾಲೆಗಳ ಮಕ್ಕಳು ಮನೋರಂಜನಾ ಕಾರ್ಯಕ್ರಮ ನಡೆಸಿದರು. ಆದರ್ಶ, ವಿದ್ಯಾಭಾರತಿ, ಲಿಟ್ಲಪ್ಲವರ್ ಶಾಲೆ, ಎನ್.ದೇವರಹಳ್ಳಿಶಾಲೆಯ ಮಕ್ಕಳು ಕನ್ನಡ ಹಾಡುಗಳಿಗೆ ಆಕರ್ಷಣಿಯ ನೃತ್ಯ ಪ್ರದರ್ಶಿಸಿದರು. 

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಸುಜಾತಸದಸ್ಯರಾದ  ಎಂ.ಜೆ.ರಾಘವೇಂದ್ರ, ಬಿ.ಟಿ.ರಮೇಶ್‌ಗೌಡ, ಸಿ.ಶ್ರೀನಿವಾಸ್, ಕೆ.ವೀರಭದ್ರಪ್ಪ, ಎಸ್.ಜಯಣ್ಣ, ವೆಂಕಟೇಶ್, ಸುಮ, ಕವಿತಾ, ನಾಮಿನಿ ಸದಸ್ಯರಾದ ಕೆ.ನಟರಾಜು, ಅನ್ವರ್‌ಮಾಸ್ಟರ್, ಬಡಗಿಪಾಪಣ್ಣ, ವೀರಭದ್ರಿ, ವೃತ್ತ ನಿರೀಕ್ಷಕ ರಾಜಫಕೃದ್ದೀನ್ ದೇಸಾಯಿ, ಸಮಾಜ ಕಲ್ಯಾಣಾಧಿಕಾರಿ ದೇವ್ಲಾನಾಯ್ಕ ಬಿಸಿಎಂ ಅಧಿಕಾರಿ ರಮೇಶ್, ಎಸ್ಟಿ ಅಧಿಕಾರಿ ಶಿವರಾಜು, ಕೃಷಿ ಇಲಾಖೆ ಅಧಿಕಾರಿ ಅಶೋಕ್, ಬಿಇಒ ಕೆ.ಎಸ್.ಸುರೇಶ್, ಪೌರಾಯುಕ್ತ ಜಗರೆಡ್ಡಿ, ಕಂದಾಯಾಧಿಕಾರಿ ಆರ್.ತಿಪ್ಪೇಸ್ವಾಮಿ, ಡಿ.ಶ್ರೀನಿವಾಸ್  ಮುಂತಾದವರು ಪಾಲ್ಗೊಂಡಿದ್ದರು.

 

- Advertisement -  - Advertisement - 
Share This Article
error: Content is protected !!
";