ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾನ್ಯ ಸಿಎಂ ಸಿದ್ದರಾಮಯ್ಯನವರೇ, ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಮಾಡಿದ್ದ ಶೇ.40 ರಷ್ಟು ಕಮಿಷನ್ ಆರೋಪ ಕೇವಲ ಅಪಪ್ರಚಾರ ಎಂದು ಸ್ವತಃ ನಿಮ್ಮ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬಿ.ಶಿವರಾಂ ಅವರೇ ಒಪ್ಪಿಕೊಂಡಿದ್ದಾರೆ. ಸುಳ್ಳು, ಅಪಪ್ರಚಾರ, ಪೊಳ್ಳು ಭರವಸೆಗಳನ್ನು ಮೂಲಕ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರವನ್ನ ಅವರ ಸುಳ್ಳು, ಅಪಪ್ರಚಾರಗಳೇ ಆಪೋಶನ ತೆಗೆದುಕೊಳ್ಳುವುದು ನಿಶ್ಚಿತ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಭವಿಷ್ಯ ನುಡಿದಿದ್ದಾರೆ.
ಅದು ಹಾಗಿರಲಿ, ವಿಪಕ್ಷಗಳ ಟೀಕೆ ಬಿಟ್ಟುಬಿಡಿ. ಗ್ಯಾರೆಂಟಿಗಳಿಂದ ರಾಜ್ಯದ ಖಜಾನೆ ಬರಿದಾಗಿದೆ, ಅಭಿವೃದ್ಧಿಗೆ ಹಣವಿಲ್ಲ ಎಂದು ಸ್ವತಃ ತಮ್ಮ ಹಣಕಾಸು ಸಲಹೆಗಾರರಾದ ಶಾಸಕ ಬಸವರಾಜ ರಾಯರೆಡ್ಡಿ ಅವರೇ ಹೇಳಿಲ್ಲವೇ? ಈ ವರ್ಷ ಅಭಿವೃದ್ದಿ ಸಾಧ್ಯವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಳಿದ್ದು ಸುಳ್ಳಾ?
ಗ್ಯಾರಂಟಿಗಳಿಂದ ರಾಜ್ಯ ಉದ್ಧರವಾಗಿದೆ, ಜನರಿಗೆ ಜೀವನ ಗುಣಮಟ್ಟ ಸುಧಾರಣೆ ಆಗಿದೆ ಎನ್ನುವುದಾದರೆ ಗ್ಯಾರೆಂಟಿ ಯೋಜನೆಗಳ ಪರಿಷ್ಕರಣೆಗೆ ಸಮಿತಿ ಏಕೆ ರಚನೆ ಮಾಡಿದ್ದೀರಿ? ಗ್ಯಾರೆಂಟಿಗಳ ಬಗ್ಗೆ ನಿಮ್ಮದೇ ಪಕ್ಷದ ಸಚಿವರು, ಶಾಸಕರುಗಳು ಪದೇ ಪದೇ ಅಪಸ್ವರ ಎತ್ತುತ್ತಿರುವುದು ಯಾತಕ್ಕಾಗಿ? ಉತ್ತರ ಕೊಡಿ ಸಿಎಂ ಸಿದ್ದರಾಮಯ್ಯನವರೇ ಎಂದು ಅವರು ಆಗ್ರಹಿಸಿದ್ದಾರೆ.
ಇನ್ನು ಸಾಲದ ವಿಷಯಕ್ಕೆ ಬರೋಣ. ಕೇಂದ್ರ ಸರ್ಕಾರ ಮಾಡಿರುವ ಸಾಲಕ್ಕೂ, ತಾವು ಮಾಡಿರುವ ಸಾಲಕ್ಕೂ ಅಜಗಜಾಂತರ ವ್ಯತ್ಯಾಸ ಇದೆ.
ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚಿನ ಗಮನ ಹರಿಸಿದ್ದು, 2024ರ ಮಧ್ಯಂತರ ಬಜೆಟ್ನಲ್ಲಿ ಬಂಡವಾಳ ವೆಚ್ಚವನ್ನು ಸತತ ನಾಲ್ಕನೇ ವರ್ಷವೂ ಶೇ.11.1ರಷ್ಟು ಹೆಚ್ಚಿಸಿದೆ. ಇದರಿಂದ ಬಂಡವಾಳ ವೆಚ್ಚ 11.11 ಲಕ್ಷ ಕೋಟಿ ರೂ.ಗೆ ಏರಿಕೆಯಾಗಲಿದೆ. ಇದು ದೇಶದ ಜಿಡಿಪಿಯ ಶೇ. 3.4ರಷ್ಟು ಆಗಿದೆ.
ಅದೇ ನಿಮ್ಮ ಕಾರ್ಯವೈಖರಿ ನೋಡಿ. 2023-24 ರಲ್ಲಿ ತಾವು ಮಂಡಿಸಿದ ಬಜೆಟ್ ಗಾತ್ರ 3.27 ಲಕ್ಷ ಕೋಟಿ. ಅದರಲ್ಲಿ ಬಂಡವಾಳ ವೆಚ್ಚಕ್ಕೆ ತಾವು ಮೀಸಲಿಟ್ಟಿದ್ದು 54,000 ಕೋಟಿ.
ಅದೇ 2024-2025ರ ಆರ್ಥಿಕ ಸಾಲಿಗೆ ತಾವು ಮಂಡಿಸಿರುವ ಕರ್ನಾಟಕದ ಬಜೆಟ್ ಗಾತ್ರ 3,71,383 ಕೋಟಿ. ಅಂದರೆ 2023-24 ರಲ್ಲಿ ತಾವು ಮಂಡಿಸಿದ 3.27 ಲಕ್ಷ ಕೋಟಿಗಿಂತ ದೊಡ್ಡದು. ಜೊತೆಗೆ ಕಳೆದ ವರ್ಷಕ್ಕಿಂತ ಸುಮಾರು 25 ಸಾವಿರ ಕೋಟಿರೂ. ಹೆಚ್ಚಿನ ಸಾಲ ಕೂಡ ಮಾಡಿದ್ದೀರಿ.
ಆದರೆ ಬಂಡವಾಳ ವೆಚ್ಚಕ್ಕೆ ತಾವು ಮೀಸಲಿಟ್ಟಿದ್ದು ಕೇವಲ 55,000 ಕೋಟಿ, ಅಂದರೆ ಕಳೆದ ವರ್ಷಕ್ಕಿಂತ ಹೆಚ್ಚಾದ ಮೊತ್ತ ಎಷ್ಟು? ಕೇವಲ 1,000 ಕೋಟಿ. ಅಂದರೆ ಬಂಡವಾಳ ವೆಚ್ಚ ಹೆಚ್ಚಳವಾಗಿದ್ದು ಕೇವಲ ಶೇ 1.85.
ಬಜೆಟ್ ಗಾತ್ರ ಹೆಚ್ಚಾದರೂ, ಸಾಲ ಹೆಚ್ಚಾದರೂ, ಬಂಡವಾಳ ವೆಚ್ಚ ಮಾತ್ರ ಯಾಕೆ ಅದೇ ಪ್ರಮಾಣದಲ್ಲಿ ಹೆಚ್ಚಾಗುತ್ತಿಲ್ಲ ಸಿಎಂಸಿದ್ದರಾಮಯ್ಯನವರೇ? ಸಾಲದ ದುಡ್ಡೆಲ್ಲಾ ಎಲ್ಲಿ ಹೋಗುತ್ತಿದೆ? ಹೆಚ್ಚಾದ ಬಜೆಟ್ ಗಾತ್ರವೆಲ್ಲಾ ಎಲ್ಲಿ ಹೋಯ್ತು? ನಿಮ್ಮ ಬಳಿ ಇದಕ್ಕೆಲ್ಲಾ ಉತ್ತರ ಇದೆಯೇ ಸಿದ್ದರಾಮಯ್ಯನವರೇ? ಎಂದು ಅವರು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯಾಗಿ, ಒಬ್ಬ ಪುಡಿ ರಾಜಕಾರಿಣಿ ರೀತಿ ಹಾರಿಕೆ ಉತ್ತರ, ಉಡಾಫೆ ಉತ್ತರ ಕೊಡುವ ಬದಲು ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಿ. ತಮ್ಮ ಸರ್ಕಾರದ ಕಾರ್ಯವೈಖರಿ ಬಗ್ಗೆ ಮತದಾರರಿಗೆ ರಿಪೋರ್ಟ್ ಕಾರ್ಡ್ ನೀಡಿ ಎಂದು ಆರ್.ಅಶೋಕ ಒತ್ತಾಯಿಸಿದ್ದಾರೆ.