ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ವಿಜಯೇಂದ್ರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾನ್ಯ ಸಿದ್ದರಾಮಯ್ಯನವರೇ, ನಿಮ್ಮ ಒಂದೂವರೆ ವರ್ಷದ ಆಡಳಿತದಲ್ಲಿ ನಿಮ್ಮ ಕೊಡುಗೆಗಳು ಏನೇನೂ ಇಲ್ಲ, ಅಭಿವೃದ್ಧಿಯ ಹಾದಿಯಲ್ಲಿ ಬರೀ ಶೂನ್ಯ, ಭ್ರಷ್ಟತೆಯ ಸಾಲು, ಸಾಲು ಹಗರಣಗಳು, ಸಾಮಾಜಿಕ ಶೋಷಣೆಗಳು, ಸ್ತ್ರೀ ಕುಲದ ಮೇಲಿನ ದೌರ್ಜನ್ಯಗಳು ಹತ್ತು ಹಲವು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಇಂದಿಗೂ ಕರ್ನಾಟಕದ ಲಕ್ಷಾಂತರ ಜನ ಗುಡಿಸಲು ವಾಸಿಗಳಾಗಿದ್ದಾರೆ, ಸ್ವಂತ ಸೂರಿಲ್ಲದೇ ವಸತಿ ಹೀನರಾಗಿದ್ದಾರೆ. ಇವರಿಗಾಗಿ ನೀವು ಒಂದೇ ಒಂದು ನಿವೇಶವನ್ನು ವಿತರಿಸಲಾಗಿಲ್ಲ. ಆದರೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 5 ಸಾವಿರಕ್ಕೂ ಹೆಚ್ಚು ನಿವೇಶನಗಳ ದರೋಡೆ ನಿಮ್ಮ ಬಲಗೈ ಬಂಟ ಸಚಿವ ಭೈರತಿ ಸುರೇಶ್ ರವರ ನೇತೃತ್ವದಲ್ಲಿ ಹಾಗೂ ನಿಮ್ಮ ಮಾರ್ಗದರ್ಶನದಲ್ಲಿ ನಡೆದಿದೆ ಎಂಬುದಕ್ಕೆ ನೀವೊಬ್ಬರೇ ಉಚಿತವಾಗಿ ಪಡೆದ 14 ನಿವೇಶನಗಳು ಸಾಕ್ಷಿ ಹೇಳುತ್ತಿವೆ.

ಈ ನಿಟ್ಟಿನಲ್ಲಿ ನ್ಯಾಯಾಲಯಗಳು ನಿಮ್ಮ ವಿರುದ್ಧ ತೀರ್ಪಿತ್ತಿವೆ ಎಂದು ಅವರು ವಾಗ್ದಾಳಿ ಮಾಡಿದ್ದಾರೆ.
ಸಿದ್ದರಾಮಯ್ಯ ಅವರೇ ನೀವು ಪ್ರಾಮಾಣಿಕರೇ ಆಗಿದ್ದರೆ ಈಗಲೂ ಇಡಿ
, ಸಿಬಿಐ ತನಿಖೆಗೆ ಏಕೆ ಹೆದರುತ್ತಿದ್ದೀರಿ? ನಿಮ್ಮ ಕೈ ಕೆಳಗಿನ ಅಧಿಕಾರಿಗಳಿರುವ ಲೋಕಾಯುಕ್ತದಿಂದಲೇ ತನಿಖೆ ಆಗುವಂತೆ ನೋಡಿಕೊಳ್ಳುತ್ತಿದ್ದೀರಿ. ನನ್ನ ನಿವೇಶನದ ಬೆಲೆ 62 ಕೋಟಿ ಎಂದು ಘೋಷಿಸಿದ ನೀವು ಬೇಷರತ್ತಾಗಿ ಮುಡಾಗೆ ನಿವೇಶನಗಳನ್ನು  ಹಿಂದಿರುಗಿಸಿದ್ದು ಏಕೆ? ಎಂಬುದನ್ನು ಕರ್ನಾಟಕದ ಜನತೆ ಅರಿಯದಿರುವಷ್ಟು ಮುಗ್ಧರಲ್ಲ ಎಂದು ವಿಜಯೇಂದ್ರ ಚುಚ್ಚಿದ್ದಾರೆ.

ಕಳ್ಳ ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲು ಕುಡಿಯುತ್ತಿದ್ದರೆಅದನ್ನು ನೋಡಿಕೊಂಡು ಸ್ವಾಭಿಮಾನಿ ಕನ್ನಡಿಗರು ಸುಮ್ಮನಾಗಿಬಿಡುತ್ತಾರೆಂದು ನೀವು ಭಾವಿಸಿದ್ದರೆ ಅದು ನಿಮ್ಮ ಮೂರ್ಖತನವಷ್ಟೇ‘.
 ಅಹಿಂದ ಹೆಸರೇಳಿಕೊಂಡು ಬಂದ ನೀವು ಮಾತುಮಾತಿಗೂ ಅಹಿಂದ, ಅಹಿಂದ ಎಂದು ಪಠನೆ ಮಾಡುವ ನೀವು ಹಿಂದವರ್ಗಗಳಿಗೆ ನೀಡಿದ ಕಲ್ಯಾಣ ಕಾರ್ಯಕ್ರಮಗಳೇನು

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ದೇವರಾಜ ಅರಸು ಅಭಿವೃದ್ಧಿ ನಿಗಮ ಹಾಗೂ ಇತರ ಹಿಂದುಳಿದ ಹಾಗೂ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿ ನಿಗಮಗಳಿಗೆ ನೀವು ಅಧಿಕಾರಕ್ಕೆ ಬಂದ ನಂತರ ಎಷ್ಟು ಅನುದಾನ ನೀಡಿದ್ದೀರೆನ್ನುವ ದಾಖಲೆಗಳನ್ನು ಬಿಡುಗಡೆ ಮಾಡಿ ? ಎಂದು ಅವರು ಸಿಎಂಗೆ ಆಗ್ರಹ ಮಾಡಿದ್ದಾರೆ.

ಶೋಷಿತ ವರ್ಗಗಳಿಗೆ ಅನುದಾನ ಬಿಡುಗಡೆ ಮಾಡುವ ಮಾತು ಹಾಗಿರಲಿ, ವಿಶ್ವಕವಿ ಎಂದು ಮಾನ್ಯತೆ ಪಡೆದ ಪೂಜ್ಯ ವಾಲ್ಮೀಕಿ ಅವರ ಹೆಸರಿರುವ ನಿಗಮದಲ್ಲಿ ಪರಿಶಿಷ್ಟ ಪಂಗಡದ, ಆದಿವಾಸಿ ಜನರ ಕಲ್ಯಾಣದ ಕಾರ್ಯಗಳಿಗೆ ಮೀಸಲಾಗಿ ಠೇವಣಿ ಇರಿಸಿದ್ದ ಬ್ಯಾಂಕ್ ಖಾತೆಗೆ ನಿಮ್ಮ ಸಚಿವರ ಮೂಲಕ ಕನ್ನ ಹಾಕಿಸಿದವರು ನೀವಲ್ಲ ಎಂಬುದನ್ನು ನೀವು ಸಾಬೀತು ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

ಕೆಐಡಿಬಿ ಮೂಲಕ ನಿಮ್ಮ ರಾಷ್ಟ್ರೀಯ ಅಧ್ಯಕ್ಷರ ಕುಟುಂಬ ಹಾಗೂ ಇತರ ಸ್ವಜನರಿಗೆ ಕೆಐಡಿಬಿಯಲ್ಲಿ ಮಂಜೂರಾಗಿರುವ ಸಿ.ಎ ನಿವೇಶನ ಹಗರಣವು ಸ್ವತಃ ನಿಮ್ಮ ರಾಷ್ಟ್ರೀಯ ಅಧ್ಯಕ್ಷರ ಕುಟುಂಬಕ್ಕೆ ಅಕ್ರಮವಾಗಿ ಮಂಜೂರಾತಿ ಮಾಡಿರುವ ಕಾರಣ ಅವರೂ ತಮ್ಮ ನಿವೇಶನ ಹಿಂದಿರುಗಿಸುವ ಘೋಷಣೆ ಮಾಡಿದ್ದಾರೆ. ಅಂದ ಮೇಲೆ ಕೆಐಡಿಬಿಯಿಂದ ಮಂಜೂರಾದ ನಿವೇಶನಗಳೂ ಅಕ್ರಮ ಎಂಬುದು ಸಾಬೀತಾದಂತಾಗಿದೆ.

ಕರ್ನಾಟಕ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಪ್ರಧಾನಿಯವರನ್ನು ಉಲ್ಲೇಖಿಸಿ ಕುವೆಂಪುರವರ ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆʼ ಎಂಬ ನಾಡಗೀತೆಯನ್ನು ನೆನಪಿಸಿದ್ದೀರಿ, ಆದರೆ ಕುವೆಂಪು ಅವರು ಬಣ್ಣಿಸಿದʼ ಸರ್ವಜನಾಂಗದ ಶಾಂತಿಯ ತೋಟಕದಡಿ ವಕ್ಫ್ ಹೆಸರಿನಲ್ಲಿ ಈ ನೆಲದ ಮಣ್ಣಿನ ಮಕ್ಕಳ ಹಾಗೂ ಶರಣ ಪರಂಪರೆಯ ಮಠ,ದೇವಸ್ಥಾನಗಳ ಭೂಮಿಯನ್ನು ಕಬಳಿಸಲು ಮೊಘಲ್ ಆಕ್ರಮಣಕಾರರ ರೀತಿಯಲ್ಲಿ ಭೂದಾಖಲೆಗಳಿಗೆ ಕನ್ನ ಹಾಕಿ ವಕ್ಫ್ ಹೆಸರಿನ ಕಪ್ಪು ಚುಕ್ಕೆಗಳನ್ನು ಅಚ್ಚೊತ್ತಿಸುತ್ತಿದ್ದೀರಿ, ಕುವೆಂಪು ಅವರ ಶಾಂತಿಯ ತೋಟ ಕರುನಾಡಿನಲ್ಲಿ ಅಶಾಂತಿ ಹಾಗೂ ಅರಾಜಕತೆಯ ಬೀಜಗಳನ್ನು ಬಿತ್ತಿ, ಅರಾಜಕತೆ ಸೃಷ್ಟಿಸಲು ಹೊರಟಿದ್ದೀರಿ. ಆ ಮೂಲಕ ನಿಮ್ಮ ಭ್ರಷ್ಟ ಮುಖವಾಡ ಮುಚ್ಚಿಕೊಳ್ಳುವ ಷಡ್ಯಂತ್ರ ರೂಪಿಸಿದ್ದೀರಿ. ಇದು ನೀವು ಕರ್ನಾಟಕಕ್ಕೆ ಕೊಡುತ್ತಿರುವ ಕೊಡುಗೆಯೇ? ಎಂದು ಪ್ರಶ್ನಿಸಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಶೇ.40ರಷ್ಟು ಕಮಿಷನ್ ಹೆಸರಿನಲ್ಲಿ ವ್ಯವಸ್ಥಿತ ಅಪಪ್ರಚಾರ ನಡೆಸಿದಿರಿ. ಆದರೆ ಶೇ.80ರಷ್ಟು ಕಮಿಷನ್ ವಸೂಲಾತಿಯ ಕುಖ್ಯಾತಿಯ ಮಾಲೆ ನಿಮಗೆ ತೊಡಿಸಿದವರು ಶೇ 80ರಷ್ಟು ಕಮಿಷನ್ ನೀಡಿದ ಗುತ್ತಿಗೆದಾರರೇ ಅಲ್ಲವೇ? ಪ್ರಧಾನಿಗಳನ್ನು ಟೀಕಿಸುವ ಭರದಲ್ಲಿ ಈ ಅಂಶವನ್ನು ನೀವು ಮರೆತಿರೇನೋ? ನಿಮ್ಮ ಕಾಂಗ್ರೆಸ್ ಗೆ ರಾಷ್ಟ್ರ ಮಟ್ಟದ ಅಸ್ತಿತ್ವವನ್ನು ಗಟ್ಟಿಗೊಳಿಸಲು ಇಂಡಿ ಒಕ್ಕೂಟದಡಿ.ಎಂ.ಕೆ ತೃಪ್ತಿಪಡಿಸಲು ಕಾವೇರಿ ನೀರನ್ನು ತಮಿಳುನಾಡಿಗೆ ಹರಿಯಬಿಟ್ಟು ರೈತರ ಬೆಳೆಯನ್ನು ಒಣಗಿಸಿ ಬರಡು ಮಾಡಿದ್ದು ನೀವೇ ಅಲ್ಲವೇ?

ಈ ನಿಟ್ಟಿನ ರೈತ ಹೋರಾಟಗಳನ್ನು ಹತ್ತಿಕ್ಕಲು ಅಮಾಯಕ ರೈತರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಜೈಲಿಗೆ ದಬ್ಬಿದ್ದು ನೀವೇ ಅಲ್ಲವೇ? ಎಂದು ವಿಜಯೇಂದ್ರ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಾರೆ. ಬೆಳಗಾವಿಯಲ್ಲಿ ಹಾಡು ಹಗಲಲ್ಲೇ ನೀವಿದ್ದ ಕೂಗಳತೆಯ ದೂರದಲ್ಲೇ ಅಮಾಯಕ ಹೆಣ್ಣು ಮಗಳನ್ನು ವಿವಸ್ತ್ರಗೊಳಿಸಿ ದೌರ್ಜನ್ಯ ನಡೆಸಿದಾಗ ನಿಮ್ಮ ಸರ್ಕಾರ ಕನಿಷ್ಟ ಸ್ಪಂದನೆಯನ್ನೂ ಮಾಡದೇ ದುಶ್ಯಾಸನ ಸರ್ಕಾರದಂತೆ ವರ್ತಿಸಿದ್ದನ್ನು ಕರ್ನಾಟಕದ ಹೆಣ್ಣುಮಕ್ಕಳು ಹೇಗೆ ಮರೆಯಲು ಸಾಧ್ಯ? ಹುಬ್ಬಳ್ಳಿಯಲ್ಲಿ ನಿಮ್ಮ ಪಕ್ಷದ ಮುಖಂಡರ ಪುತ್ರಿಯನ್ನು ಹಾಡು ಹಗಲಲ್ಲೇ ಕಾಲೇಜು ಆವರಣದಲ್ಲಿ ಇರಿದು ಕೊಂದ ಘಟನೆ ಜನತೆ ಇನ್ನೂ ಮರೆತಿಲ್ಲ.

ನಾಡಿನಲ್ಲಿ ಮಹಿಳೆಯರ ಮೇಲೆ  ನಡೆಯುತ್ತಿರುವ ನಿರಂತರ ದೌರ್ಜನ್ಯ ಶೋಷಣೆ ಹಾಗೂ ಅತ್ಯಾಚಾರ ಪ್ರಕರಣಗಳು ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನೆಲಕಚ್ಚಿರುವುದನ್ನು ಪ್ರತಿಬಿಂಬಿಸುತ್ತಿವೆ. ಶಕ್ತಿ ಯೋಜನೆ ರೂಪಿಸಿರುವುದಾಗಿ ಬೊಬ್ಬೆಹೊಡೆಯುವ ನೀವು ಮಹಿಳೆಯರ ಆತ್ಮವಿಶ್ವಾಸದ ಶಕ್ತಿಯನ್ನೇ ಹುದುಗಿಸಿಬಿಟ್ಟಿದ್ದೀರಿ. ಈಗಾಗಲೇ ಅಸ್ತವ್ಯಸ್ತಗೊಂಡಿರುವ ಭಾಗ್ಯ ಯೋಜನೆಗಳು ಹಳ್ಳಹಿಡಿಯುವುದು ಖಚಿತ ಎಂದು ನಿಮ್ಮ ಉಪಮುಖ್ಯಮಂತ್ರಿಗಳೇ ಹೇಳಿರುವಾಗ ಈ ನಿಟ್ಟಿನಲ್ಲಿ ನಿಮ್ಮ ಪಕ್ಷದಲ್ಲೇ ಗೊಂದಲಗಳ ಗೂಡು ಸೃಷ್ಟಿಯಾಗಿರುವದನ್ನು ಕಂಡು ನಿಮ್ಮ ಪಕ್ಷದ ವರಿಷ್ಠ ಖರ್ಗೆಯವರು ಸಿಡಿಮಿಡಿಗೊಂಡಿರುವುದನ್ನು ರಾಜ್ಯದ ಜನತೆ ಗಮನಿತ್ತಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.

ಇಷ್ಟಾಗಿಯೂ ಕೇಂದ್ರವನ್ನು ಪದೇಪದೇ ಉಲ್ಲೇಖಿಸುತ್ತಲೇ ಇರುತ್ತೀರಿ, ಕನ್ನಡ ನಾಡಿನ ಕಾನೂನು ಸುವ್ಯವಸ್ಥೆಗೆ ಭಂಗ ತಂದ ದೇಶದ್ರೋಹಿ ಶಕ್ತಿಗಳನ್ನು ಬಿಜೆಪಿ ಸರ್ಕಾರದಲ್ಲಿ ಬಂಧಿಸಿ ಸೆರೆಮನೆಗೆ ಕಳುಹಿಸಿದ್ದರೆ, ಅವರನ್ನು ಆರೋಪ ಮುಕ್ತಗೊಳಿಸಲು ಕೇಸುಗಳನ್ನು ವಾಪಾಸು ಪಡೆದುಕೊಳ್ಳುವ ನಿರ್ಧಾರ ಕೈಗೊಳ್ಳುತ್ತೀರಿ, ನಾಡು ನುಡಿಯ ಕಾಳಜಿಯ ಕುರಿತು ಡೋಂಗಿ ಮಾತುಗಳನ್ನಾಡುತ್ತೀರಿ.

ಈ ರಾಜ್ಯದಲ್ಲಿ ನೀವು ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಎಂಬ ಪದ ಸಂಪೂರ್ಣವಾಗಿ ಮಾಸಿ ಹೋಗಿದೆ. ಅಭಿವೃದ್ಧಿಯ ವಿಚಾರ ಬಂದಾಗಲೆಲ್ಲ ರಾಜ್ಯದ ಸಂಪನ್ಮೂಲವನ್ನು ಬರಿದು ಮಾಡಿ ಸರ್ಕಾರದ ಖಜಾನೆಯನ್ನು ಖಾಲಿ ಮಾಡಿಕೊಂಡು ಕುಳಿತಿರುವ ನೀವು ಆಧಾರವಿಲ್ಲದೇ ಕೇಂದ್ರದ ಅನುದಾನಗಳು ಹರಿದು ಬರುತ್ತಿಲ್ಲವೆಂದು ಸುಳ್ಳು ಆರೋಪ ಮಾಡುತ್ತೀರಿ. ಆ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸುತ್ತಿದ್ದೀರಿ, ಈ ಕುತಂತ್ರದ ಜಾಣ್ಮೆಯ ಆಟ ಹೆಚ್ಚು ದಿನ ನಡೆಯುವುದಿಲ್ಲ.

ನಿಮ್ಮ ಪಕ್ಷದ ಶಾಸಕರೇ ನಿಮ್ಮ ಮೇಲೆ ಮುಗಿಬೀಳಲು ಸಮಯ ಕಾಯುತ್ತಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ ರೂ. 52,903 ಕೋಟಿ ಅನುದಾನ ಬಳಸಲಾಗುತ್ತಿದೆ ಎಂದು ಹೇಳಿಕೊಂಡಿದ್ದೀರಿ ಅದು ನಿಜವೇ ಆಗಿದ್ದರೆಕರ್ನಾಟಕದ 224 ಶಾಸಕರ ಕ್ಷೇತ್ರಗಳಿಗೆ ನೀವು ಬಿಡುಗಡೆ ಮಾಡಿರುವ ಅನುದಾನಗಳ ಮಾಹಿತಿ ಬಹಿರಂಗಗೊಳಿಸಿ, ಇದಾಗದಿದ್ದರೆ ಕನಿಷ್ಟ ನಿಮ್ಮ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಬಿಡುಗಡೆ ಮಾಡಿರುವ ಅನುದಾನಗಳ ವಿವರವನ್ನಾದರೂ ಜನತೆಯ ಮುಂದಿಡಿ. ಅದೇ ರೀತಿ ನೀವು ಕೈಗೆತ್ತಿಕೊಂಡಿರುವ ನೀರಾವರಿ ಯೋಜನೆಗಳಾವುದು? ಅದಕ್ಕೆ ಖರ್ಚು ಮಾಡಿರುವ ಅನುದಾನದ ವಿವರ ಕೊಡಿ.

ನಿರುದ್ಯೋಗ ನಿರ್ಮೂಲನೆಗಾಗಿ ಉದ್ಯೋಗ ಸೃಷ್ಟಿಸಲು ರೂಪಿಸಿರುವ ಕಾರ್ಯಕ್ರಮ ಯಾವುದು? ನೀವು ಬಿಡುಗಡೆ ಮಾಡಿರುವ ಅನುದಾನವೆಷ್ಟು? ಸಣ್ಣ ಕೈಗಾರಿಕೆ, ಅತಿಸಣ್ಣ, ಕೈಗಾರಿಕೆ, ಗುಡಿ ಕೈಗಾರಿಕೆ, ಗೃಹ ಕೈಗಾರಿಕೆ, ಗ್ರಾಮೀಣ ಕೈಗಾರಿಕೆಗಳಿಗೆ ನೀವು ಬಿಡುಗಡೆ ಮಾಡಿರುವ ಅನುದಾನ, ರೂಪಿಸಿರುವ ಯೋಜನೆಗಳ ವಿವರ ಕೊಡಿ.
ಈ ರಾಜ್ಯದಲ್ಲಿ ಸೂರುರಹಿತರಿಗೆ ನೀವು ಅಧಿಕಾರಕ್ಕೆ ಬಂದ ಮೇಲೆ ಎಷ್ಟು ನಿವೇಶನ ನೀಡಿದ್ದೀರಿ ಎಷ್ಟು ಮನೆ ಕಟ್ಟಿಕೊಟ್ಟಿದ್ದೀರಿ
? ಪಟ್ಟಿ ಬಿಡುಗಡೆ ಮಾಡಲು ಸಾಧ್ಯವೇ?

ಶಿಕ್ಷಣ ಕ್ಷೇತ್ರದಲ್ಲಿ ಬಡಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲು ನೀವು ಹಾಕಿಕೊಂಡಿರುವ ಯೋಜನೆಗಳೇನು? ಸರ್ಕಾರಿ ಶಾಲೆಯ ಶಿಕ್ಷಣದ ಗುಣಮಟ್ಟ ಅಭಿವೃದ್ಧಿ ಪಡಿಸಲು ನೀವು ಬಿಡುಗಡೆ ಮಾಡಿರುವ ಅನುದಾನವೆಷ್ಟು? ನಿತ್ಯವೂ ಮಾಧ್ಯಮಗಳಲ್ಲಿ ಬಹಿರಂಗವಾಗುವ  ಶಾಲಾ ಕಟ್ಟಡಗಳ ದುಸ್ಥಿತಿಯ ವರದಿಗಳು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ? ಬಡಮಕ್ಕಳ ಶಿಕ್ಷಣವನ್ನು ಮರೆತಿರುವ ನಿಮಗೆ ಶಿಕ್ಷಣದ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕಿದೆ?

ಅತಿವೃಷ್ಟಿ, ಅನಾವೃಷ್ಟಿ ಎರಡೂ ಸಂದರ್ಭವನ್ನು ನಿಭಾಯಿಸುವಲ್ಲಿ ನಿಮ್ಮ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಭಾರಿಯ ವರುಣನ ಆರ್ಭಟದಲ್ಲಿ ಬೆಂಗಳೂರು ಇತಿಹಾಸದಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ನಲುಗಿದೆ,

ಪ್ರಾಣ ಹಾನಿಗಳೂ ಸಂಭವಿಸಿವೆ. ಅನೇಕರು ವಸತಿಗಳನ್ನು  ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ,ಬ್ರ್ಯಾಂಡ್ ಬೆಂಗಳೂರು ಮಾಡಲು ಹೊರಟು ಬ್ಯಾಡ್ ಬೆಂಗಳೂರುಮಾಡಿದ್ದೀರಿ ಇಷ್ಟಾಗಿಯೂ ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳುತ್ತಿದ್ದೀರಿ.

ಪ್ರಧಾನಿ ನರೇಂದ್ರ ಮೋದಿಯವರ ಸ್ವಾವಲಂಬಿ ಭಾರತದ ನಿರ್ಮಾಣದ ಅಡಿಯಲ್ಲಿ ರಾಜ್ಯದಲ್ಲಿ ಕೈಗೊಂಡಿರುವ ಮೂಲಭೂತ ಸೌಕರ್ಯಗಳು ಸಾಲುಸಾಲು. ಅತ್ಯುತ್ತಮ ರೈಲ್ವೇ ವ್ಯವಸ್ಥೆ, ನೂರಾರು ಹೊಸ ಸುಸಜ್ಜಿತ ರೈಲುಗಳ  ಸಮರ್ಪಣೆ, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ, ವಿಮಾನ ನಿಲ್ದಾಣಗಳ ವಿಸ್ತಾರ,

ಬೃಹತ್ ಕೈಗಾರಿಕೆಗಳ ಉತ್ತೇಜನ, ರೈತ ಬೆಳೆದ ಬೆಳೆ ರಕ್ಷಿಸಲು ಫಸಲ್ ವಿಮಾ ಯೋಜನೆ, 70 ವರ್ಷ ದಾಟಿದ ಜನರಿಗೆ ಉಚಿತ ಆರೋಗ್ಯ ಸುರಕ್ಷತೆ, ಮುದ್ರಾ, ವಿಶ್ವಕರ್ಮ ಯೋಜನೆಗಳ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಲಕ್ಷಾಂತರ ಜನರಿಗೆ ಆರ್ಥಿಕ ನೆರವು, ಅಧಿಕಾರಕ್ಕೆ ಬಂದ ಮೊದಲ ದಿನವೇ ವಸತಿ ರಹಿತರಿಗಾಗಿ ಮೂರು ಕೋಟಿ ವಸತಿ ನಿರ್ಮಾಣಕ್ಕೆ ನಿರ್ಧಾರ ಕೈಗೊಂಡಿದ್ದು, ಅಂತರಾಷ್ಟ್ರೀಯ ಗಡಿಯಲ್ಲಿ ಚೀನಾ, ಪಾಕಿಸ್ಥಾನ ಸೇರಿದಂತೆ ಶತ್ರು ರಾಷ್ಟ್ರಗಳು ಶಸ್ತ್ರಾಸ್ತ್ರಗಳ ತ್ಯಾಗ ಮಾಡಿ ಹೆಜ್ಜೆ ಹಿಂದಿಕ್ಕಿರುವುದು ಮೋದಿಯವರ ಸಾಧನೆಯಲ್ಲವೇ? ಇವೆಲ್ಲವೂ ಮೇಕ್ ಇನ್ ಇಂಡಿಯಾ ಹಾಗೂ ಕೌಶಲ ಭಾರತದ ಹೆಜ್ಜೆ ಗುರುತುಗಳಲ್ಲವೇ?

 ನೀವು ಬಹಿರಂಗ ಚರ್ಚೆಗೆ ಬರುವುದಾದರೆ ಬನ್ನಿ ನಿಮಗೆ ಖಂಡಿತ ಸ್ವಾಗತವಿದೆ. ಮೋದಿ ಸರ್ಕಾರದ ಕೊಡುಗೆಗಳು, ಹಿಂದಿನ ನಮ್ಮ ಬಿಜೆಪಿ ಸರ್ಕಾರದ ಯೋಜನೆಗಳ  ಪಟ್ಟಿಯನ್ನಿಡಿದು ನಿಮ್ಮ ಮುಂದೆ ಬರುತ್ತೇವೆ. ನಿಮ್ಮ ಸರ್ಕಾರದ ಭ್ರಷ್ಟ ಅಭಿವೃದ್ಧಿ ಶೂನ್ಯ ಆಡಳಿತದ ಇಂಚಿಂಚೂ ಕಟುಸತ್ಯವನ್ನು ಅನಾವರಣ ಮಾಡಲು ಪ್ರಧಾನಿಗಳೇಕೆ? ನಮ್ಮ ಸಾಮಾನ್ಯ ಕಾರ್ಯಕರ್ತನೊಬ್ಬನೇ ಸಮರ್ಥನಿದ್ದಾನೆ. ಈ ಸವಾಲು ಸ್ವೀಕರಿಸಲು ಸಿದ್ಧರಿದ್ದರೆ ಎಂದು? ಎಲ್ಲಿ ? ಎಂದು ಹೇಳಿ ನಾವೂ ಸಿದ್ಧರಿದ್ದೇವೆ.

ಚರ್ಚೆ, ಹೋರಾಟಗಳಿಗೆ ಅಂಜುವ ಪದ ನಮ್ಮ ಪಕ್ಷದ ಸಿದ್ಧಾಂತದ ಪಟ್ಟಿಯಲ್ಲಿ ಇಲ್ಲವೇ ಇಲ್ಲ. ಅದೇನಿದ್ದರೂ ನಿಮ್ಮ ಕಾಂಗ್ರೆಸ್ ಹಾಗೂ ನಿಮ್ಮಲ್ಲಿದೆ. ಇದಕ್ಕೆ ಉದಾಹರಣೆ ನೀವು 14 ನಿವೇಶನ ಹಿಂದಿರುಗಿಸಿ 62 ಕೋಟಿ ಪಡೆಯುವ ಘೋಷಣೆಯ ಸವಾಲಿನಿಂದ ಪಲಾಯನವಾದ ಮಾಡಿದ್ದು ಎಂದು ವಿಜಯೇಂದ್ರ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ.

 

- Advertisement -  - Advertisement -  - Advertisement - 
Share This Article
error: Content is protected !!
";