ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಡಾ.ಲಕ್ಷ್ಮಣ್ ತೆಲಗಾವಿಯವರು ಕರ್ನಾಟಕದ ಖ್ಯಾತ ಸಂಶೋಧಕರಲ್ಲಿ ಅಗ್ರಗಣ ಸ್ಥಾನ ಪಡೆದಿದ್ದಾರೆ. ಸಂಸ್ಕೃತಿ ಶೋಧ, ಜನಪದ, ಪ್ರಾದೇಶಿಕ ಚರಿತ್ರೆಯ ರಚನೆ, ಗ್ರಂಥ ಸಂಪಾದನೆಗಳಲ್ಲಿ ಪರಿಣಿತಿಯನ್ನು ಪಡೆದ ವಿರಳಾತೀತ ಸಂಶೋಧಕರಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದಾರೆ.
ಇತ್ತೀಚಿಗೆ ಸುಹೃದ ಸ್ಛುರಣ ಎಂಬ ಬರೋಬ್ಬರಿ 555 ಪುಟಗಳ ಬೃಹತ್ ಗ್ರಂಥ ಬಿಡುಗಡೆಗೊಳಿಸಿದ್ದಾರೆ. ಇದು ಲಕ್ಷ್ಮಣ್ ತೆಲಗಾವಿಯವರ ಜೀವಮಾನವ ಸಾಂಸ್ಕೃತಿಕ ಒಡನಾಟ, ಸಂಘರ್ಷದ ಬದುಕಿನ ಕಥಾನಕವಾಗಿದೆ.
ಒಂದು ಸಂಗತಿಯ ಸಂಗ್ರಹಣೆ, ವಿಶ್ಲೇಷಣೆ, ಅಲೆದಾಟ, ಕುತೂಹಲ, ಜ್ಞಾನದ ಅಗಾಧತೆ, ಸಂಶೋಧನೆಯ ಭೌಮತ್ವದ ನೆಲೆಯಲ್ಲಿ ಸಹೃದಯಿಯೊಬ್ಬನಿಗೆ ಈ ಕೃತಿಯು ಬೆರಗು ಉಂಟುಮಾಡುತ್ತದೆ. ಕೃತಿಯ ಪರಿಚಯದ ಹಿನ್ನಲೆಯಲ್ಲಿ ಅವರ ಬರವಣಿಗೆಯ ಕರಿಯನ್ನು ಕನ್ನಡಿಯಲ್ಲಿ ತೋರಿಸುವ ವಿನಮ್ರ ಪ್ರಯತ್ವವನ್ನು ಇಲ್ಲಿ ಮಾಡಲಾಗಿದೆ.
ಚಿತ್ರದುರ್ಗದ ಪರಿಸರ, ರಾಜಕೀಯ, ಆಧ್ಯಾತ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಸಂಗತಿಗಳ ಕುರಿತಾಗಿ ಅಪಾರ ಮಾಹಿತಿಯನ್ನು ಕೃತಿ ಒಳಗೊಂಡಿದೆ. ಪ್ರಸ್ತುತ ಕೃತಿಯು ಐವತ್ತೊಂದು ಲೇಖನಗಳನ್ನು ಒಳಗೊಂಡಿದೆ. ನೂರಾರು ಲೇಖನಗಳನ್ನು ಬರೆದಿರುವ ತೆಲಗಾವಿಯವರ ನಡೆಯು ವಿಶೇಷವಾಗಿದೆ. ಮುತ್ತುಗಳ ರಾಶಿಯ ಬಳಿ ನಿಂತ ವ್ಯಕ್ತಿಯು ಅಂತಿಮವಾಗಿ ತನ್ನ ಮನದನ್ನೆಗೆ ಅಪರೂಪವಾಗಿರುವ ಕೆಲವು ಮುತ್ತುಗಳನ್ನು ಮಾತ್ರ ಆರಿಸಿಕೊಡುವಂತೆ, ತೆಲಗಾವಿಯವರು ಲೇಖನಗಳ ರಾಶಿಯೊಳಗೆ ಕೆಲವನ್ನೆ ಆಯ್ದು ಸುಹೃದ ಸ್ಫುರಣದ ಆಲಯವನ್ನು ಕಟ್ಟಿದ್ದಾರೆ. ಲೇಖನಗಳ ಸ್ಪರ್ಶದಲ್ಲಿ ಸಹಜವಾಗಿ ಮಾಧುರ್ಯತೆ, ಕೋಮಲತೆ, ಮಮತೆ, ಆಪ್ತತೆ, ಕಕ್ಕುಲತೆ ತುಂಬಿಕೊಂಡಿವೆ.
ಲಕ್ಷ್ಮಣ್ ತೆಲಗಾವಿಯವರು ಇದೇ ಪುಸ್ತಕ ೫೪೫ನೇ ಪುಟದಲ್ಲಿ ಬಾಲ್ಯದಲ್ಲಿ ಅವರ ತಂದೆಯ ಚಪ್ಪಲಿ ಅಂಗಡಿಯನ್ನು ನೆನೆಪಿಸಿಕೊಳ್ಳುತ್ತ ದುರ್ಗದ ಜನರ ಪಾದಸೇವೆ ಕೈಗೊಳ್ಳುವ ಭಾಗ್ಯ ಕೆಲವು ವರ್ಷಗಳ ಮಟ್ಟಿಗಾದರೂ ದೊರೆತಿದ್ದಿತೆಂಬ ಸಂತೋಷವಿದೆ ನನ್ನಲ್ಲಿ ಎಂತಹ ನಿರ್ಭಾಹುಕ ಮಾತುಗಳು. ಈ ಭಾಗವನ್ನು ಓದುತ್ತಿದ್ದಾಗ ನನ್ನ ಕಣ್ಣಂಚು ಒದ್ದೆಯಾಯಿತು. ದುರ್ಗದ ಚರಿತ್ರೆಯನ್ನು ಪುನರ್‌ದರ್ಶನ ಮಾಡಿಸುವ ಪ್ರಯತ್ನವಂತೂ ತೆಲಗಾವಿಯರ ಅದೃಷ್ಟವಲ್ಲ, ಅದು ದುರ್ಗದ ಭಾಗ್ಯ ಎಂದರೂ ಅತಿ ಶಯೋಕ್ತಿಯಲ್ಲ.
ಚಿತ್ರದುರ್ಗ ತೆಲಗಾವಿಯವರ ಉಸಿರು, ಮಿಡಿತ, ತಮ್ಮ ಹುಟ್ಟು, ಬಾಲ್ಯ, ಯೌವ್ವನವನ್ನು ಇಲ್ಲಿ ಕಳೆದಿದ್ದಾರೆ. ದುರ್ಗ ಅವರ ಸುಪ್ತಾವಸ್ಥೆಯಲ್ಲಿ ಬೆರೆತುಹೋಗಿದೆ. ಸಂಶೋಧಕನಾದವನು ಭಾವನಾತ್ಮಕವಾಗಿ ಆಲೋಚಿಸಬಾರದೆಂಬ ಮ್ಯಾನಿಫೆಸ್ಟೊ ಇದೆ. ದುರ್ಗದ ವಿಚಾರ ಬಂದಾಗ ಅದನ್ನು ಲಂಘಿಸಿ ಸಂಶೋಧನಾ ನಿಯಮಗಳಿಂದ ದೂರ ಸರಿಯಲು ಸಹ ಅವರು ಯೋಚಿಸುವುದಿಲ್ಲ. ದುರ್ಗ ಅವರ ಪಾಲಿಗೆ ಹೊಂದಿರುವ ಗಾಢ ಪ್ರೀತಿ ಕೃತಿಯ ಹಲವು ಕಡೆ ಮುಕ್ತವಾಗಿ ವ್ಯಕ್ತವಾಗಿದೆ. ಪ್ರಾದೇಶಿಕ ಚರಿತ್ರೆಯನ್ನು ಲಿಖಿತವಾಗಿ ಕಟ್ಟುವ ಪ್ರಯತ್ನ ಮಾಡಿದ ತ.ರಾ.ಸು, ಹುಲ್ಲೂರು ಶ್ರೀನಿವಾಸ ಜೋಯಿಸರಂತಹ ಮಹನೀಯರ ಸಾಲಿಗೆ ತೆಲಗಾವಿಯವರು ಸೇರುತ್ತಾರೆ. ಚಂದ್ರಶೇಖರ ಕಂಬಾರರ ಬೋಳೆ ಶಂಕರ ನಾಟಕದಲ್ಲಿ ಬೋಳೆ ಶಂಕರರಿಗೆ ತನ್ನ ಶಿವಪುರದ ಹೊಲಸು ಕೂಡ ಚೆಂದವಾಗಿ ಕಾಣುತ್ತದೆ ಎಂಬ ತುಂಬು ಅಭಿಮಾನದ ಸಾಲುಗಳು ಕಂಡು ಬರುತ್ತವೆ. ಅದೇ ರೀತಿಯಲ್ಲಿ ಇಲ್ಲಿನ ಜನರ ನಿರ್ಲಕ್ಷ್ಯದ ಕೊರತೆಗಳು ಮರೆಯಾಗಿ ಸಮೃದ್ಧ ಚಿತ್ರದುರ್ಗವು ತೆಲಗಾವಿಯವರ ಬರವಣಿಗೆಯಲ್ಲಿ ಮಿಂಚಿ ಶಾಶ್ವತವಾಗಿ ಉಳಿಯುತ್ತದೆ.
ಕೃತಿಯೊಂದರ ಭಾಷೆ ಓದುಗರನ್ನು ಪ್ರಧಾನವಾಗಿ ಸೆಳೆಯುತ್ತದೆ. ಅದರ ಸಫಲತೆ, ವಿಫಲತೆಯನ್ನು ಅದು ನಿರ್ಧರಿಸುತ್ತದೆ. ಅನುಭವಾಮೃತದ ಕರ್ತೃ ಮಹಲಿಂಗರಂಗ ಕನ್ನಡದ ಸ್ವರೂಪದ ಬಗ್ಗೆ ಹೇಳುವಾಗ ಸುಲಿದ ಬಾಳೆಯ ಹಣ್ಣಿನಂದದಿ, ಕಳೆದ ಸಿಗುರಿನ ಕಬ್ಬಿನಂದದಿ ಎಂಬಂತೆ ತೆಲಗಾವಿಯವರ ಬರವಣೆಗೆಯಲ್ಲ್ಲಿ, ಪದಗಳ ಮೆರವಣಿಗೆಯಿಲ್ಲ. ಸುಲಲಿತವಾದ ಭಾಷೆಯಾಗಿದೆ. ಇಂತಹ ಬರವಣೆಗೆಯನ್ನು ನಾನು ಮಧುಗನ್ನಡ (ಜೇನುಕನ್ನಡ) ಎಂದೆ ಕರೆಯುವೆ, ಸಂಕೀರ್ಣ ಬರಹಗಳಲ್ಲಿ ಇಂತಹ ಸಿದ್ದಿಯಲ್ಲಿ ಪರಿಣಿತರಾದ ತೆಲಗಾವಿಯವರು ಅಭಿನಂದಾರ್ಹವಾದ ಸ್ಥಾನದಲ್ಲಿ ನಿಲ್ಲುತ್ತಾರೆ. ತೆಲಗಾವಿಯವರ ಭಾಷೆ ಆಡಂಬರ, ಪದಗಳ ವಿಜೃಂಭಣೆ ರಹಿತ ಶೈಲಿ, ಸುಲಲಿತ ಬಾಳೆಹಣ್ಣಿನಂತಹ, ಬೇಸಿಗೆ ಕಾಲದಲಿ ಶಬ್ದ ಮಾಡದೆ ಹರಿಯುವ ಮೈಲಾರದ ತಣ್ಣನೆಯ ಹೊಳೆಯಂತಹ ತಂಪನೆಯ, ಹೃದಯಕ್ಕೆ ಆಪ್ತವಾದ ಅನುಭವ ನೀಡುತ್ತದೆ. ಬೇಸರ, ಜಿಜ್ಞಾಸೆ, ತೂಕಡಿಗೆ ಆಸ್ವದವಿಲ್ಲದ ನೇರವಾದ ಶೈಲಿಯನ್ನು ಹೊಂದಿದೆ. ಚಿತ್ರದುರ್ಗ ಇತಿಹಾಸ ಕುರಿತು ಆಸಕ್ತಿ ಇರುವವರಿಗೆ ಪ್ರೇರಣೆಯನ್ನು ಒದಗಿಸುತ್ತದೆ. ಇದು ಕೃತಿಯೊಂದು ಓದುಗನಲ್ಲಿ ಸಾಧಿಸಬಹುದಾದ ಸಫಲತೆಗೆ ಅತ್ಯುತ್ತಮ ನಿದರ್ಶನ ಎನಿಸುತ್ತದೆ.
ಪರ್ಜನ್ಯಯಾಗ : ಮಳೆ ಬರೆಸುವ ವೈದಿಕಾಚರಣೆ ತೆಲಗಾವಿಯವರ ಮಹತ್ವಕಾಂಕ್ಷೆಯ ಲೇಖನವಾಗಿದೆ. ಬಹುತೇಕ ಕಡಿಮೆ ಮಳೆ ಬೀಳುವ ಪ್ರದೇಶವಾಗಿರುವ ಚಿತ್ರದುರ್ಗದ ಪ್ರಕೃತಿ ಲೇಖಕರಿಗೆ ಈ ಲೇಖನವನ್ನು ಬರೆಯಲು ಪ್ರೇರಣೆ ಒದಗಿಸಬೇಕು. ಪರ್ಜನ್ಯಯಾಗದ ಮೂಲ. ಅರ್ಥ ವಿವರಣೆ, ಆಚರಣೆಗಳ ಕುರಿತಾಗಿ ವಿಸ್ತೃತವಾಗಿ ಚರ್ಚಿಸಿದ್ದಾರೆ. ವೈದಿಕ ಹಾಗೂ ಜಾನಪದೀಯ ನೆಲೆಯಲ್ಲಿ ತೌಲನಿಕವಾಗಿ ವಿಶ್ಲೇಷಿಸಿದ್ದಾರೆ. ಸಂಶೋಧಕ ಸಂತನು ಆಗಿ ಆಧ್ಯಾತ್ಮಿಕ ಲೋಕದ ಯಾನ ಮಾಡಬಹುದೆಂಬುದಕ್ಕೆ ಈ ಲೇಖನ ಉಲ್ಲೇಖಾರ್ಹವೆನಿಸುತ್ತದೆ.
ತೆಲಗಾವಿಯವರು ಚಿತ್ರದುರ್ಗದ ಸಂಪಿಗೆ ಸಿದ್ದೇಶ್ವರ ದೇವಾಲಯದ ಬಳಿ ರೇವಣಸಿದ್ಧರು ಹಾಗೂ ಮರುಳಸಿದ್ಧರ ಭೇಟಿಯಂತಹ ಕುತೂಹಲಕಾರಿಯಾದ ಸಂಗತಿಯ ಕುರಿತಾಗಿ ಬೆಳಕು ಚೆಲ್ಲುತ್ತಾರೆ. ರಸಸಿದ್ಧರ ಮೂಲ, ಚೂಲಗಳ ಬಗ್ಗೆ ನಂಬಲಾಹವಾದ ದಾಖಲೆಗಳನ್ನು ಒದಗಿಸಿದ್ದಾರೆ. ತೆಲಗಾವಿಯಂತಹ ಕೆಲವರಿಗೆ ಸಿದ್ಧಿಸಿರುವ ವಿಶಿಷ್ಟ ಕೌಶಲ್ಯವೆಂದರೆ ಶಾಸ್ತ್ರವನ್ನು ಕಥನಾತ್ಮಕ ಶೈಲಿಗೆ ಒಗ್ಗಿಸುವ ಕಲೆ. ಇದು ಅನುಭವ, ಅಪಾರ ಓದಿನ ಕಸುವನ್ನು ಬಯಸುತ್ತದೆ.. ಪ್ರಸ್ತುತ ಕೃತಿಯ ಅನೇಕ ಲೇಖನಗಳಲ್ಲಿ ಈ ಗುಣವು ಪ್ರಧಾನವಾಗಿ ವ್ಯಕ್ತವಾಗಿದೆ. ಉದಾ:- ಆಯಿತೋಳು ಕರೇ ಉಡುಸಲವ್ವನ ಸ್ಮಾರಕ ಎಂಬ ಲೇಖನವಂತೂ ಕಥೆ, ಶಾಸ್ತ್ರ, ವೈಚಾರಿಕತೆ, ಸಂಶೋಧನೆಯ ದಿಗ್ಧರ್ಶನವನ್ನು ಮಾಡಿಸುತ್ತದೆ. ಎಂದೋ ಇತಿಹಾಸದ ಕಾಲಗರ್ಭದಲ್ಲಿ ಹುದುಗಿ ಹೋಗಿದ್ದ ಕರೇ ಉಡಸಲವ್ವನ ಸಾವನ್ನು ಮನುಷ್ಯತ್ವದ ನೆಲೆಯಲ್ಲಿ ಕಾಣುತ್ತಾರೆ. ಭಾವನಾತ್ಮಕವಾಗಿ ಚರ್ಚಿಸುತ್ತಾರೆ. ತೆಲಗಾವಿಯವರ ಸ್ವಭಾವವನ್ನು ಕೂಡ ಲೇಖನದ ಹಿನ್ನಲೆಯಲ್ಲಿ ಗ್ರಹಿಸಬಹುದಾಗಿದೆ.
ರಣರೋಚಕ ಯುದ್ಧಗಳಲ್ಲಿ ಬಳಸುವ ಫಿರಂಗಿಗಳ ಕುರಿತಾಗಿ ಕುತೂಹಲಕಾಗಿಯಾಗಿ ಬರೆಯುತ್ತಾರೆ. ಪಾಳೆಯಗಾರರು, ಬೇಡರ ಕಟ್ಟಿಮನೆಗಳು, ಹೊಸದುರ್ಗ ಇತಿಹಾಸ, ಮುರುಘಾಮಠ, ಚಿತ್ರದುರ್ಗದ ಜಿಲ್ಲಾ ಗ್ರಂಥಾಲಯ, ಮತ್ತೊಡು ಪಾಳೇಯಗಾರರ ಕುರಿತಾಗಿ ಸಂಶೋಧನಾತ್ಮಕವಾಗಿ ವಿವರಿಸುತ್ತಾರೆ. ತೆಲಗಾವಿಯವರ ಲೇಖನಗಳ ವೈಶಿಷ್ಟ್ಯವೆಂದರೆ ಸಂಕೀರ್ಣವಾದ ವಿಚಾರಗಳ ಸಂದರ್ಭದಲ್ಲಿ ತಾನು ಹೇಳಿದ್ದೆ ಅಂತಿಮ ಎಂಬ ನಿರ್ಣಯಕ್ಕೆ ಬರುವುದಿಲ್ಲ. ಓದುಗರಿಗೆ ತಮ್ಮ ಅಭಿಪ್ರಾಯಗಳನ್ನು ವರ್ಗಾಯಿಸುವ ವಿನಮ್ರತೆ ಮೆರೆಯುತ್ತಾರೆ. ವ್ಯಕ್ತಿ, ಸ್ಥಳವೊಂದರ ಚರ್ಚೆಯ ಸಂದರ್ಭದಲ್ಲಿ ಆ ವಿಷಯಕ್ಕೆ ಮಾತ್ರ ಲೇಖವನ್ನು ಸೀಮಿತಗೊಳಿಸದೆ ಭಾರತ, ಪ್ರಪಂಚದ ಚರಿತ್ರೆಯ ಹಿನ್ನಲೆಯಲ್ಲಿ ಸುತ್ತಾಡಿಸಿಕೊಂಡು ಬರುತ್ತಾರೆ. ಓದುಗರಲ್ಲಿ ಆ ಬಗ್ಗೆ ಆಸಕ್ತಿ ಕೆರಳುವಂತೆ ಮಾಡುತ್ತಾರೆ. ತೆಲಗಾವಿಯವರು ಕರ್ನಾಟಕ ಚರಿತ್ರೆಗೆ ಸಂಬಂಧಿಸಿದಂತೆ ಆಕರಗಳು ಸಿಗುವ ಬಗೆಗೆ ಪರಿಚಯತ್ಮಾಕ ಲೇಖನಗಳನ್ನು ಈ ಕೃತಿಯಲ್ಲಿ ಬರೆದಿದ್ದಾರೆ. ಇವುಗಳು ಸಂಶೋಧನಾರ್ಥಿಗಳಿಗೆ, ಅಧ್ಯಯನಾಸಕ್ತರಿಗೆ ಅಮೂಲ್ಯವಾದ ಮಾಹಿತಿಗಳನ್ನು ಒದಗಿಸುತ್ತವೆ.
ಕೃತಿಯನ್ನು ಸ್ಥೂಲವಾಗಿ ಗಮನಿಸಿದಾಗ ಸಂಶೋಧನಾತ್ಮಕ ಲೇಖನಗಳು ಜನಪದೀಯ ಲೇಖನಗಳು, ಆಕರಸಂಬಂಧಿ ಲೇಖನಗಳು, ವ್ಯಕ್ತಿ ಚಿತ್ರಗಳು, ಕೃತಿ ವಿಮರ್ಶೆ ಒಳಗೊಂಡಿವೆ. ವಿಶೇಷತೆಯೆಂದರೆ ಬಹುತೇಕ ಲೇಖನಗಳು ಚಿತ್ರದುರ್ಗವನ್ನು ಕುರಿತವುಗಳಾಗಿವೆ. ಕೃತಿಯ ಭಿತ್ತರಿಸುವಂತೆ ಸುಹೃದ ಸ್ಫುರಣ ಅಂದರೆ ಒಳ್ಳೆಯ ಹೃದಯದ ಅರಿವು, ಹೊಳೆವು ಎಂಬ ಅರ್ಥವಿದೆ. ಎಷ್ಟು ಚಂದದ ಹೆಸರು ಕೃತಿಯ ಲೇಖನಗಳಿಗೆ ಶೀರ್ಷಿಕೆಯ ಅರ್ಥಪೂರ್ಣತೆಯನ್ನು ಒದಗಿಸಿದೆ ಎಂದು ಮಹೇಶ್ ಕುಂಚಿಗನಾಳು, ಉಪನ್ಯಾಸಕರು, ಸ.ಪ.ಪೂ ಕಾಲೇಜು
ಚಿಕ್ಕಗೊಂಡನಹಳ್ಳಿ ಇವರು ತಿಳಿಸಿದ್ದಾರೆ.