ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಹಾಗೂ ಚಳ್ಳಕೆರೆ ನಗರಸಭೆ ಮತ್ತು ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯಲ್ಲಿ ವಿವಿಧ ಕಾರಣಗಳಿಂದ ತೆರವಾದ ಖಾಲಿ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ.
ಚಿತ್ರದುರ್ಗ ನಗರಸಭೆಯ 15ನೇ ವಾರ್ಡ್–ಹಿಂದುಳಿದ ವರ್ಗ-(ಎ), ಚಳ್ಳಕೆರೆ ನಗರಸಭೆಯ 4ನೇ ವಾರ್ಡ್–ಸಾಮಾನ್ಯ ಹಾಗೂ ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯ ಜಾಗನೂರುಹಟ್ಟಿಯ 1ನೇ ವಾರ್ಡ್–ಪರಿಶಿಷ್ಟ ಜಾತಿಗೆ ಮೀಸಲಾತಿ ನಿಗಧಿಯಾಗಿದೆ.
2024ರ ನ.4 ಸೋಮವಾರದಂದು ಚುನಾವಣೆ ಅಧಿಸೂಚನೆ ಹೊರಡಿಸಲಾಗಿದ್ದು, ನ.11 ಸೋಮವಾರ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ. ನ.12 ಮಂಗಳವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನ.14 ಗುರುವಾರ ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ.
ನ.23 ಶನಿವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಒಂದು ವೇಳೆ ಮರು ಮತದಾನದ ಅವಶ್ಯಕತೆ ಬಿದ್ದಲ್ಲಿ ನ.25 ಸೋಮವಾರ ಮರು ಮತದಾನ ನಡೆಸಲಾಗುವುದು. ನ.26 ಮಂಗಳವಾರ ಸಂಬಂಧಪಟ್ಟ ತಾಲ್ಲೂಕು ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಸಲಾಗುವುದು.
ವಿಜೇತ ಅಭ್ಯರ್ಥಿಯ ಘೋಷಣೆ ತರುವಾಯ ಚುನಾವಣೆ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಲಾಗುವುದು. ನ.04 ರಿಂದ 26 ರವರೆಗೆ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ಗಳ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.